Friday, February 10, 2023

ಅಕ್ರಮ ಮದ್ಯ ಮಾರಾಟ : ದಾಳಿ


    ಭದ್ರಾವತಿ, ಫೆ. ೧೦: ನಗರದ ಹೊಸ ಸಿದ್ದಾಪುರದ-ನಂಜಾಪುರ ರಸ್ತೆಯಲ್ಲಿರುವ ಹೋಟೆಲ್ ಮೇಲೆ ನ್ಯೂಟೌನ್ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಈ ವ್ಯಾಪ್ತಿಯಲ್ಲಿ ಬೀಟ್ ಗಸ್ತಿನಲ್ಲಿದ್ದ  ಸಿ.ಎಚ್.ಸಿ ಗಂಗಾಧರ್‌ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಗುರುವಾರ ಮಧ್ಯಾಹ್ನ ಠಾಣಾಧಿಕಾರಿ ರಂಗನಾಥ ಅಂತರಗಟ್ಟಿರವರ ಮಾರ್ಗದರ್ಶನದಲ್ಲಿ ಪೊಲೀಸರು ಶಿವಕುಮಾರ್ ಎಂಬುವರ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಒಟ್ಟು ಸುಮಾರು ರು.೭೦೨ ರು. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗೋ ಮಾಂಸ ಸಾಗಾಟ ಆರೋಪ : ಓರ್ವನ ಮೇಲೆ ಹಲ್ಲೆ

    ಭದ್ರಾವತಿ, ಫೆ. ೧೦: ನಗರದ ಕಂಚಿಬಾಗಿಲು ವೃತ್ತದಲ್ಲಿ ಓರ್ವನ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಸಂಬಂಧ ಹಳೇನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
    ಅನ್ವರ್ ಕಾಲೋನಿ ಖಲಂದರ್ ನಗರದ ನಿವಾಸಿ ರಹಮಾನ್ ಎಂಬಾತ ಗೋ ಮಾಂಸ ತೆಗೆದುಕೊಂಡು ಹೋಗುತ್ತಿದ್ದಾನೆಂದು ಆರೋಪಿಸಿ ಆತನ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ನಡುವೆ ರಹಮಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾಗಿರುವ ರಹಮಾನ್ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈತನ ಹೇಳಿಕೆ ಆಧರಿಸಿ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಬೇಕಿದೆ ಎನ್ನಲಾಗಿದೆ.

ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರಾಗಿ ಅಮೋಸ್

 


   ಭದ್ರಾವತಿ, ಫೆ. ೧೦: ಕ್ರೈಸ್ತ ಸಮಾಜದ ಯುವ ಮುಖಂಡ, ಅಂಜನೇಯ ಅಗ್ರಹಾರ ನಿವಾಸಿ ಅಮೋಸ್‌ರನ್ನು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರಾಗಿ ನೇಮಕಗೊಳಿಸಲಾಗಿದೆ. 

   ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ನೇಮಕ ಆದೇಶ ಹೊರಡಿಸಿದ್ದು, ಜೆಡಿಎಸ್ ಪಕ್ಷದ ಸರ್ಕಾರದ ಸಾಧನೆಗಳು ಹಾಗು ಪಕ್ಷದ ಕಾರ್ಯಕ್ರಮಗಳ ಕುರಿತು ಸುದ್ದಿ ಮಾಧ್ಯಮಗಳಲ್ಲಿ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ. 
ಅಮೋಸ್‌ರವರು ಈ ಹಿಂದೆ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾಗಿ ಸಹ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದರು.  ಇವರನ್ನು ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು, ಕ್ರೈಸ್ತ ಸಮಾಜದ ಪ್ರಮುಖರು, ಸ್ನೇಹಿತರು ಅಭಿನಂದಿಸಿದ್ದಾರೆ. 

Thursday, February 9, 2023

ಜೂಜಾಟ ನೋಡುತ್ತಿದ್ದವನ ಮೇಲೆ ಹಲ್ಲೆನಡೆಸಿ ಹತ್ಯೆ

ಹತ್ಯೆಯಾದ ವೆಂಕಟೇಶ್
    ಭದ್ರಾವತಿ, ಫೆ. ೯ : ಜೂಜಾಟ ನೋಡುತ್ತಿದ್ದ ಕೂಲಿ ಕಾರ್ಮಿಕನೋರ್ವ ತೀವ್ರ ಹಲ್ಲೆಗೊಳಗಾಗಿ ಹತ್ಯೆಯಾಗಿರುವ ಘಟನೆ ತಾಲೂಕಿನ ರಂಗನಾಥಪುರದಲ್ಲಿ ನಡೆದಿದೆ.
    ಗ್ರಾಮದ ನಿವಾಸಿ ವೆಂಕಟೇಶ್( ೩೫ ) ಹತ್ಯೆಯಾಗಿದ್ದು, ಈತನಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಪತ್ನಿ ಹೋಟೆಲ್ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಬುಧವಾರ ಗ್ರಾಮದ ಗಣಪತಿ ಪೆಂಡಾಲ್ ಬಳಿ ಚೌಕಾಬಾರ ಆಡುತ್ತಿದ್ದ ವೇಳೆ ಆಟವನ್ನು ನೋಡುತ್ತಿದ್ದ ವೆಂಟಕೇಶ್ ಮೇಲೆ ಅದೇ ಗ್ರಾಮದ ಪ್ರದೀಪ್ ಕಳೆದ ೧೫ ದಿನಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ನಡೆದ ಗಲಾಟೆ ವಿಚಾರವನ್ನು ಪ್ರಸ್ತಾಪಿಸಿ ಹಲ್ಲೆಗೆ ಯತ್ನಿಸಿದ್ದು, ಈ ಸಂದರ್ಭದಲ್ಲಿ ಅಲ್ಲಿದ್ದವರು ಇಬ್ಬರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿದ್ದಾರೆ.
    ವೆಂಕಟೇಶ್ ಮನೆ ಬಳಿ ಫೋನ್‌ನಲ್ಲಿ ಮಾತಾಡುತ್ತಿದ್ದ ವೇಳೆ ಪ್ರದೀಪ್ ಹಾಗು ಈತನ ತಂದೆ ಚಂದ್ರಣ್ಣ ಮತ್ತು ತಾಯಿ ಪ್ರೇಮ ದೊಣ್ಣೆ ತೆಗೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
    ವೆಂಕಟೇಶ್ ತಲೆಗೆ ಹೆಚ್ಚಿನ ಗಾಯವಾಗಿದ್ದು, ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ತಕ್ಷಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಹಾಗು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಕೊನೆಗೆ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಗುರುವಾರ ಮೃತಪಟ್ಟಿದ್ದಾನೆ.
ಗ್ರಾಮದಲ್ಲಿ ಜೂಜಾಟ ಹೆಚ್ಚಾಗಿದ್ದು, ಕೊಲೆಗೆ ಜೂಜಾಟವೇ ಕಾರಣವಾಗಿದೆ. ಗ್ರಾಮದಲ್ಲಿರುವ ಮದ್ಯದಂಗಡಿ ತೆರವುಗೊಳಿಸಿ ಜೂಜಾಟ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಪೊಲೀಸರು ಪ್ರದೀಪ್‌ನನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

೨೨ದಿನ ಪೂರೈಸಿದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ : ಕರಪತ್ರ ವಿತರಿಸಿ ಹೋರಾಟ ಬೆಂಬಲಿಸಲು ಮನವಿ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಗುರುವಾರ ೨೨ನೇ ದಿನ ಪೂರೈಸಿತು. ಈ ನಡುವೆ ಗುತ್ತಿಗೆ ಕಾರ್ಮಿಕರು ಹೋರಾಟ ತೀವ್ರಗೊಳಿಸಿದ್ದು, ಸಂಜೆ ಜನ್ನಾಪುರ, ಹುತ್ತಾಕಾಲೋನಿ ಸೇರಿದಂತೆ ವಿವಿಧೆಡೆ ಜಾಥಾ ನಡೆಸಿ ಕರಪತ್ರಗಳನ್ನು ವಿತರಿಸಿದರು. 
    ಭದ್ರಾವತಿ, ಫೆ. ೯ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಗುರುವಾರ ೨೨ನೇ ದಿನ ಪೂರೈಸಿತು. ಈ ನಡುವೆ ಗುತ್ತಿಗೆ ಕಾರ್ಮಿಕರು ಹೋರಾಟ ತೀವ್ರಗೊಳಿಸಿದ್ದು, ಸಂಜೆ ಜನ್ನಾಪುರ, ಹುತ್ತಾಕಾಲೋನಿ ಸೇರಿದಂತೆ ವಿವಿಧೆಡೆ ಜಾಥಾ ನಡೆಸಿ ಕರಪತ್ರಗಳನ್ನು ವಿತರಿಸಿದರು.
    ಮೈಸೂರು ಮಹಾರಾಜರು ಹಾಗು ಸರ್.ಎಂ ವಿಶ್ವೇಶ್ವರಾಯನವರ ಪರಿಶ್ರಮದ ಫಲವಾಗಿ ನಿರ್ಮಾಣಗೊಂಡು ಶತಮಾನ ಪೂರೈಸಿರುವ ಕಾರ್ಖಾನೆಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ನಮ್ಮ ಹೋರಾಟಕ್ಕೆ ನಾಗರೀಕರು ಸಹ ಬೆಂಬಲಿಸುವಂತೆ ಕರಪತ್ರಗಳನ್ನು ವಿತರಿಸಿ ಮನವಿ ಮಾಡಲಾಯಿತು.
ಹೋರಾಟ ಸ್ಥಳದಿಂದ ಆರಂಭಗೊಂಡ ಜಾಥಾ ಜಯಶ್ರೀ ವೃತ್ತ ಮೂಲಕ ನಂದಿನಿ ವೃತ್ತ ತಲುಪಿ ವಾಣಿಜ್ಯ ರಸ್ತೆಯಲ್ಲಿ ಸಾಗಿ, ಹುತ್ತಾ ಕಾಲೋನಿಯಲ್ಲಿ ಸಂಚರಿಸಿತು. ಲೋಯರ್ ಹುತ್ತಾ ಮೂಲಕ ಬಿ.ಎಚ್ ರಸ್ತೆಯಲ್ಲಿ ಸಾಗಿ ಡಬ್ಬಲ್ ರಸ್ತೆ ಮೂಲಕ ಪುನಃ ಹೋರಾಟ ಸ್ಥಳಕ್ಕೆ ಬಂದು ತಲುಪಿತು. ಗುತ್ತಿಗೆ ಕಾರ್ಮಿಕ ಸಂಘಟನೆಗಳ ಪ್ರಮುಖರು, ಗುತ್ತಿಗೆ ಕಾರ್ಮಿಕರು, ಮಹಿಳೆಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.
    ಫೆ.೧೧ರಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಆಗಮನ:
    ೨೨ನೇ ದಿನದ ಹೋರಾಟಕ್ಕೆ ಆಮ್ ಆದ್ಮಿ ಪಾರ್ಟಿ ಬೆಂಬಲ ಸೂಚಿಸಿದ್ದು, ಹೋರಾಟ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಪ್ರಮುಖರು ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇವೆ. ಫೆ.೧೧ರಂದು ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿರೆಡ್ಡಿ ಆಗಮಿಸಲಿದ್ದಾರೆ ಎಂದರು.

ಫೆ.೧೨ರಂದು ಅವಧೂತರು-ಒಂದು ಅವಲೋಕನ

    ಭದ್ರಾವತಿ, ಫೆ. ೯ : ಸಿದ್ದಾರೂಢನಗರದ ಸಂಸ್ಕೃತಿ ಸೌರಭ ವತಿಯಿಂದ ಫೆ.೧೨ರಂದು ಸಂಜೆ ೬ ಗಂಟೆಗೆ ನ್ಯೂಟೌನ್ ಶ್ರೀ ದತ್ತಮಂದಿರದಲ್ಲಿ ಆಧ್ಯಾತ್ಮ ಸೌರಭ ಅವಧೂತರು-ಒಂದು ಅವಲೋಕನ(ಅವಧೂತ ಸ್ಥಿತಿ ಮತ್ತು ಅಜ್ಞಾನ ಅವಧೂತರು ಕುರಿತ ಚಿಂತನ ಕಾರ್ಯಕ್ರಮ) ಹಮ್ಮಿಕೊಳ್ಳಲಾಗಿದೆ.
    ಚಿತ್ರದುರ್ಗ ಹಿರಿಯೂರಿನ ಸಾಹಿತಿ, ಶ್ರೀ ದತ್ತ ಆರಾಧಕರಾದ ಕಣಜನಹಳ್ಳಿ ನಾಗರಾಜ್ ಉಪನ್ಯಾಸ ನೀಡಲಿದ್ದು, ಸಂಸ್ಕೃತಿ ಸೌರಭ ಅಧ್ಯಕ್ಷ ಎಚ್.ಎನ್ ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.

ಪಕ್ಷವಿರಲಿ, ಸಂಘಟನೆ ಇರಲಿ, ಕುಟುಂಬವಿರಲಿ ಶಿಸ್ತು ಬಹಳ ಮುಖ್ಯ : ಡಿ.ಕೆ ಶಿವಕುಮಾರ್

ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸಂಗಮೇಶ್ವರ್‌ಗೆ ಮಾತಿನ ಚಾಟಿ, ಕೇವಲ ಸ್ವಾಗತ ಭಾಷಣಕ್ಕೆ ಸೀಮಿತ

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದರು.
    ಭದ್ರಾವತಿ, ಫೆ. ೯ : ಯಾವುದೇ ಪಕ್ಷವಿರಲಿ, ಸಂಘಟನೆ ಇರಲಿ, ಕುಟುಂಬವಿರಲಿ ಶಿಸ್ತು ಬಹಳ ಮುಖ್ಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳುವ ಮೂಲಕ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮಾತಿನ ಚಾಟಿ ಬೀಸಿದರು.
    ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತು ಆರಂಭಿಸಿದ ಡಿ.ಕೆ ಶಿವಕುಮಾರ್, ಇಲ್ಲಿನ ಶಾಸಕ ಸಂಗಮೇಶ್ವರ್ ಒಂದು ರೀತಿ ಹಸು ಇದ್ದ ಹಾಗೆ ಒದೆಯುವುದಿಲ್ಲ, ಆಯುವುದಿಲ್ಲ. ವೇದಿಕೆಯಲ್ಲಿ ಯಾರೋ ಗಲಾಟೆ ಮಾಡುತ್ತಿದ್ದಾರೆ ಅಲ್ಲಿ ಸ್ವಲ್ಪ ನೋಡಪ್ಪ ಎಂದರೆ ಇಲ್ಲಾ ಅಣ್ಣ ಅವರು ಕೋಪ ಮಾಡಿಕೊಂಡಿದ್ದಾರೆ ಎನ್ನುತ್ತಾರೆ. ಈ ರೀತಿ ಉತ್ತರ ಸರಿಯಲ್ಲ ಎಂದರು.
    ಯಾವುದೇ ಪಕ್ಷವಿರಲಿ, ಸಂಘಟನೆ ಇರಲಿ, ಕುಟುಂಬವಿರಲಿ ಶಿಸ್ತು ಬಹಳ ಮುಖ್ಯ. ನಮ್ಮ ಮನೆಗಳಲ್ಲಿ ಮಕ್ಕಳಿಗೆ ಹಿರಿಯರು ಶಿಸ್ತಿನ ಪಾಠ ಕಲಿಸುತ್ತಾರೆ. ಶಾಲೆಗಳಲ್ಲಿ ಶಿಕ್ಷಕರು ನಮಗೆ ಶಿಸ್ತಿನ ಪಾಠ ಕಲಿಸುತ್ತಾರೆ. ಇದೆ ರೀತಿ ಪಕ್ಷದ ಕಾರ್ಯಕರ್ತರಿಗೂ ಶಿಸ್ತಿನ ಪಾಠ ಕಲಿಸಬೇಕು. ಆಗ ಮಾತ್ರ ಪಕ್ಷಕ್ಕೆ ಒಂದು ಗೌರವವಿರುತ್ತದೆ ಎಂದು ಸಂಗಮೇಶ್ವರ್‌ಗೆ ಮಾತಿನ ಚಾಟಿ ಬೀಸಿದರು.
    ಸಂಗಮೇಶ್ವರ್ ಕೇವಲ ಸ್ವಾಗತ ಭಾಷಣಕ್ಕೆ ಸೀಮಿತ :
    ಡಿ.ಕೆ ಶಿವಕುಮಾರ್‌ರವರು ಬಿ.ಕೆ ಸಂಗಮೇಶ್ವರ್‌ಗೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಲು ಸಹ ಅವಕಾಶ ನೀಡಲಿಲ್ಲ. ಅವರು ಆಯ್ಕೆ ಮಾಡಿದ ವ್ಯಕ್ತಿಗಳು ಮಾತ್ರ ಜ್ಯೋತಿ ಬೆಳಗಿಸಿದರು. ಉಳಿದಂತೆ ಸಂಗಮೇಶ್ವರ್‌ಗೆ ಸ್ವಾಗತ ಕೋರಲು ಮಾತ್ರ ಅವಕಾಶ ನೀಡಲಾಗಿತ್ತು.  ವಿಐಎಸ್‌ಎಲ್ ಕಾರ್ಖಾನೆ ಮುಂಭಾಗ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲೂ ಸಹ ಸಂಗಮೇಶ್ವರ್‌ಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದರಿಂದಾಗಿ ಶಾಸಕರ ಬೆಂಬಲಿಗರು, ಅಭಿಮಾನಿಗಳಲ್ಲಿ ಸ್ವಲ್ಪಮಟ್ಟಿಗೆ ನಿರಾಸೆಯನ್ನುಂಟು ಮಾಡಿತು.
    ಯುವ ಕಾಂಗ್ರೆಸ್‌ಗೂ ಭದ್ರಾವತಿಗೂ ಒಂದು ರೀತಿಯ ನಂಟು : ನಲಪಾಡ್
    ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್, ಯುವ ಕಾಂಗ್ರೆಸ್‌ಗೂ ಭದ್ರಾವತಿಗೂ ಒಂದು ರೀತಿಯ ನಂಟು ಬೆಳೆದಿದೆ. ರಾಷ್ಟ್ರೀಯ ಅಧ್ಯಕ್ಷರು ಇದೆ ಊರಿನವರು, ನಾನು ಸಹ ಇದೆ ಊರಿನವನು. ೧೯೬೮ ರಿಂದ ೭೮ರವರೆಗೆ ನಮ್ಮ ತಾತ ಎಂ.ಎ ಮಹಮದ್‌ರವರು ಅಂದಿನ ಪುರಸಭೆ ಅಧ್ಯಕ್ಷರಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದರು. ನಮ್ಮ ತಂದೆ ಹ್ಯಾರಿಸ್‌ರವರು ಪ್ರಸ್ತುತ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ೨೦೦೪ರಲ್ಲಿ ಎಂಪಿಎಂ ಕಾರ್ಖಾನೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಅವರು ಕಾರ್ಖಾನೆ ಉಳಿವಿಗಾಗಿ ಹೆಚ್ಚಿನ ಕಾಳಜಿ ವಹಿಸಿದ್ದರು.  ಇವರ ನಂತರ ಬಂದ ಅರಗಜ್ಞಾನೇಂದ್ರರವರು ಕಾರ್ಖಾನೆಯನ್ನು ಅರ್ಧ ಮುಳುಗಿಸಿದರು. ಪ್ರಸ್ತುತ ಕೇಂದ್ರ ಹಾಗು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿವೆ. ಇದನ್ನು ಕ್ಷೇತ್ರದ ಜನರು ಅರ್ಥ ಮಾಡಿಕೊಂಡು ಯಾವುದೇ ಕಾರಣಕ್ಕೂ ಮುಚ್ಚಲು ಅವಕಾಶನೀಡಬಾರದು. ಕಾರ್ಖಾನೆಗಳ ಉಳಿವಿಗಾಗಿ ಎಲ್ಲರೂ ಹೋರಾಟಕ್ಕೆ ಸಿದ್ದರಾಗಬೇಕೆಂದು ಮನವಿ ಮಾಡಿದರು.
    ಬಿಜೆಪಿ ನಾಯಕರ ಪ್ಯಾಂಟ್ ಕೆಳಗೆ ಬೀಳದಂತೆ ಎಚ್ಚರ ವಹಿಸಲು ಉಚಿತವಾಗಿ ಬೆಲ್ಟ್ ನೀಡುತ್ತೇವೆ: ಬಿ.ವಿ ಶ್ರೀನಿವಾಸ್  
    ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮಾತನಾಡಿ, ಬಿಜೆಪಿ ನಾಯಕರು ನಮ್ಮ ಪಕ್ಷದ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಬಿಜೆಪಿ ನಾಯಕರ ಪ್ಯಾಂಟ್ ಆಗಾಗ ಕೆಳಗೆ ಬೀಳುತ್ತಿರುತ್ತದೆ. ನಲಪಾಡ್‌ರವರು ಅವರಿಗೆ ಉಚಿತವಾಗಿ ಬೆಲ್ಟ್‌ಗಳನ್ನು ತಲುಪಿಸಲಿದ್ದಾರೆ. ನಾವುಗಳು ಕೈಗಳಿಗೆ ಬಳೆ ತೊಟ್ಟುಕೊಂಡು ಕುಳಿತ್ತಿಲ್ಲ. ನಮ್ಮ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
    ವೇದಿಕೆಯಲ್ಲಿ ಪ್ರಮುಖರಾದ ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಸಂಸದರಾದ ಕೆ.ಎಚ್ ಮುನಿಯಪ್ಪ, ಉಗ್ರಪ್ಪ, ಮಾಜಿ ಸಚಿವರಾದ ರೇವಣ್ಣ, ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಜಿ.ಎಚ್ ಶ್ರೀನಿವಾಸ್, ಕೆ.ಬಿ ಪ್ರಸನ್ನಕುಮಾರ್,  ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್,  ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಟಿ. ಚಂದ್ರೇಗೌಡ, ಎಚ್.ಎಲ್ ಷಡಾಕ್ಷರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.