Thursday, February 9, 2023

ಜೂಜಾಟ ನೋಡುತ್ತಿದ್ದವನ ಮೇಲೆ ಹಲ್ಲೆನಡೆಸಿ ಹತ್ಯೆ

ಹತ್ಯೆಯಾದ ವೆಂಕಟೇಶ್
    ಭದ್ರಾವತಿ, ಫೆ. ೯ : ಜೂಜಾಟ ನೋಡುತ್ತಿದ್ದ ಕೂಲಿ ಕಾರ್ಮಿಕನೋರ್ವ ತೀವ್ರ ಹಲ್ಲೆಗೊಳಗಾಗಿ ಹತ್ಯೆಯಾಗಿರುವ ಘಟನೆ ತಾಲೂಕಿನ ರಂಗನಾಥಪುರದಲ್ಲಿ ನಡೆದಿದೆ.
    ಗ್ರಾಮದ ನಿವಾಸಿ ವೆಂಕಟೇಶ್( ೩೫ ) ಹತ್ಯೆಯಾಗಿದ್ದು, ಈತನಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಪತ್ನಿ ಹೋಟೆಲ್ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಬುಧವಾರ ಗ್ರಾಮದ ಗಣಪತಿ ಪೆಂಡಾಲ್ ಬಳಿ ಚೌಕಾಬಾರ ಆಡುತ್ತಿದ್ದ ವೇಳೆ ಆಟವನ್ನು ನೋಡುತ್ತಿದ್ದ ವೆಂಟಕೇಶ್ ಮೇಲೆ ಅದೇ ಗ್ರಾಮದ ಪ್ರದೀಪ್ ಕಳೆದ ೧೫ ದಿನಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ನಡೆದ ಗಲಾಟೆ ವಿಚಾರವನ್ನು ಪ್ರಸ್ತಾಪಿಸಿ ಹಲ್ಲೆಗೆ ಯತ್ನಿಸಿದ್ದು, ಈ ಸಂದರ್ಭದಲ್ಲಿ ಅಲ್ಲಿದ್ದವರು ಇಬ್ಬರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿದ್ದಾರೆ.
    ವೆಂಕಟೇಶ್ ಮನೆ ಬಳಿ ಫೋನ್‌ನಲ್ಲಿ ಮಾತಾಡುತ್ತಿದ್ದ ವೇಳೆ ಪ್ರದೀಪ್ ಹಾಗು ಈತನ ತಂದೆ ಚಂದ್ರಣ್ಣ ಮತ್ತು ತಾಯಿ ಪ್ರೇಮ ದೊಣ್ಣೆ ತೆಗೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
    ವೆಂಕಟೇಶ್ ತಲೆಗೆ ಹೆಚ್ಚಿನ ಗಾಯವಾಗಿದ್ದು, ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ತಕ್ಷಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಹಾಗು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಕೊನೆಗೆ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಗುರುವಾರ ಮೃತಪಟ್ಟಿದ್ದಾನೆ.
ಗ್ರಾಮದಲ್ಲಿ ಜೂಜಾಟ ಹೆಚ್ಚಾಗಿದ್ದು, ಕೊಲೆಗೆ ಜೂಜಾಟವೇ ಕಾರಣವಾಗಿದೆ. ಗ್ರಾಮದಲ್ಲಿರುವ ಮದ್ಯದಂಗಡಿ ತೆರವುಗೊಳಿಸಿ ಜೂಜಾಟ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಪೊಲೀಸರು ಪ್ರದೀಪ್‌ನನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

No comments:

Post a Comment