Sunday, April 23, 2023

ರಸ್ತೆ ಅಪಘಾತ : ದ್ವಿಚಕ್ರ ವಾಹನ ಸವಾರ ಸಾವು

    ಭದ್ರಾವತಿ, ಏ. ೨೩ : ದ್ವಿಚಕ್ರ ವಾಹನ ಸವಾರನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಏ.೨೨ರ ಶನಿವಾರ ಮಧ್ಯಾಹ್ನ ನಗರದ ಸೀಗೆಬಾಗಿಯಲ್ಲಿ ನಡೆದಿದೆ.
    ಪವನು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರು ಹೋಂಡಾ ಎಕ್ಟಿವಾ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಉಲ್ಲಾಸ್ ಎಂಬುವರನ್ನು ಕೂರಿಸಿಕೊಂಡು ಸೀಗೆಬಾಗಿ ಕಡೆ ಹೋಗುತ್ತಿದ್ದು, ಈ ಸಂದರ್ಭದಲ್ಲಿ ಇನ್ನೋವಾ ಕಾರು  ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಹಿನ್ನಲೆಯಲ್ಲಿ ಪವನು ಮತ್ತು ಉಲ್ಲಾಸ್ ಇಬ್ಬರು ಗಾಯಗೊಂಡಿದ್ದು, ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪವನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಇವರ ಸಹೋದರ ಹೊಸಮನೆ ನಿವಾಸಿ ಸಚಿನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.   

Saturday, April 22, 2023

ಮುಸ್ಲಿಂ ಸಮುದಾಯದವರಿಂದ ಪವಿತ್ರ ರಂಜಾನ್ ಹಬ್ಬ ಆಚರಣೆ : ಸಾಮೂಹಿಕ ಪ್ರಾರ್ಥನೆ

ಕ್ರೈಸ್ತ ಸಮಾಜದವರು ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಹಬ್ಬದ ಶುಭಾಶಯ ಕೋರುವ ಮೂಲಕ ಗಮನ ಸೆಳೆದರು
    ಭದ್ರಾವತಿ, ಏ. ೨೨: ಮುಸ್ಲಿಂ ಸಮುದಾಯದವರು ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬದ ಸಂಭ್ರಮ ಹಂಚಿಕೆ ಕೊಂಡರು.
    ತರೀಕೆರೆ ರಸ್ತೆಯಲ್ಲಿರುವ ಹಜರತ್ ಸೈಯದ್ ಸಾದಾತ್ ಈದ್ಗಾ ಮೈದಾನದಲ್ಲಿ ಬೆಳಿಗ್ಗೆಯೇ ಮುಸ್ಲಿಂ ಸಮುದಾಯದ ಧರ್ಮ ಗುರುಗಳು, ವಿವಿಧ ಮಸೀದಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಿಶೇಷವಾಗಿ ಈ ಬಾರಿ ಕ್ರೈಸ್ತ ಸಮಾಜದವರು ಈದ್ಗಾ ಮೈದಾನಕ್ಕೆ ತೆರಳಿ ಹಬ್ಬದ ಶುಭಾಶಯ ಕೋರುವ ಮೂಲಕ ಗಮನ ಸೆಳೆದರು. ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮಗುರು ಫಾದರ್ ಸಾಜಿಶ್, ಅಂತೋನಿ ವಿಲ್ಸನ್, ಎನ್.ಪಿ ಡೇವಿಸ್, ಎನ್.ಪಿ ಜೋಸೆಫ್, ಆಂತೋಣಿ, ಟಿ.ವಿ ಜೋಸೆಫ್ ಸೇರಿದಂತೆ ಇನ್ನಿತರ ಕ್ರೈಸ್ತ ಮುಖಂಡರು ಉಪಸ್ಥಿತರಿದ್ದರು.
    ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸಹ ಈದ್ಗಾ ಮೈದಾನಕ್ಕೆ ತೆರಳಿ ಹಬ್ಬದ ಶುಭಾಶಯ ಕೋರಿದರು.

ಮೊಬೈಲ್ ಮಾರಾಟ ಹಿನ್ನಲೆಯಲ್ಲಿ ಹಣಕಾಸಿನ ಸಂಘರ್ಷ : ಯುವಕನ ಕೊಲೆ

ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ೪ ಜನರ ಬಂಧನ

    ಭದ್ರಾವತಿ, ಏ. ೨೨: ಹೊಸಮನೆ ಸತ್ಯಸಾಯಿ ನಗರದಲ್ಲಿ ಮೊಬೈಲ್ ಮಾರಾಟ ಹಿನ್ನಲೆಯಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ಉಂಟಾಗಿ ನವೀನ್(೨೮) ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಈ ಸಂಬಂಧ ಪೊಲೀಸರು ೪ ಜನರನ್ನು ಬಂಧಿಸಿದ್ದಾರೆ.
    ಕೋಡಿಹಳ್ಳಿ ನಿವಾಸಿ ನವೀನ್ ಮತ್ತು ಅರುಣ್ ಅಲಿಯಾಸ್ ಕೊಕ್ಕು ಇಬ್ಬರು ಸ್ನೇಹಿತರಾಗಿದ್ದು, ಸುಹೇಲ್ ಅಲಿಯಾಸ್ ಕೊಲವೇರಿ ಎಂಬಾತನಿಗೆ ಮೊಬೈಲ್ ಮಾರಾಟ ಮಾಡಿದ್ದಾರೆ. ಸುಹೇಲ್ ಹಣ ಬಾಕಿ ಉಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ನವೀನ್ ಮತ್ತು ಅರುಣ್ ಇಬ್ಬರು ಬಾಕಿ ಹಣ ಕೇಳಲು ಸತ್ಯಸಾಯಿ ನಗರಕ್ಕೆ ತೆರಳಿದ್ದಾರೆ. ಮೊಬೈಲ್ ಕೊಡು ಇಲ್ಲವಾದಲ್ಲಿ ಬಾಕಿ ಹಣ ನೀಡು ಎಂದು ಪಟ್ಟು ಹಿಡಿದಿದ್ದು, ಈ ಸಂದರ್ಭದಲ್ಲಿ ಸಂಘರ್ಷ ಉಂಟಾಗಿ ನವೀನ್‌ಗೆ ಚಾಕುವಿನಿಂದ ಇರಿಯಲಾಗಿದೆ ಎನ್ನಲಾಗಿದೆ.
    ಸಂಘರ್ಷ ಉಂಟಾದ ಸಂದರ್ಭದಲ್ಲಿ ಅರುಣ್ ಸ್ಥಳದಿಂದ ಓಡಿ ಹೋಗಿದ್ದು, ಪುನಃ ಹಿಂದಿರುಗಿ ಬಂದು ನೋಡಿದಾಗ ನವೀನ್ ಕೆಳಗೆ ಬಿದ್ದಿರುವುದು ಕಂಡು ಬಂದಿದೆ. ಈತನನ್ನು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆದರೆ ಈತ ಮಾರ್ಗ ಮದ್ಯದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
    ಆಸ್ಪತ್ರೆ ಬಳಿ ಗುಂಪು ಸೇರಿದ ಜನ :
    ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಜನರು ಜಮಾಯಿಸಿದ್ದು, ಅಲ್ಲದೆ ಒಂದು ಹಂತದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ನಡುವೆ ಪೊಲೀಸ್ ಠಾಣೆ ಮುಂಭಾಗ ಸಹ ಜನರು ಜಮಾಯಿಸಿದ್ದರು. ಜನರಲ್ಲಿ ಒಂದೆಡೆ ಗೊಂದಲ, ಮತ್ತೊಂದೆಡೆ ಭಯದ ಆತಂಕ ಮೂಡಿರುವುದು ಕಂಡು ಬಂದಿತು. ರಾತ್ರಿಯೇ ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
    ಕ್ಷಿಪ್ರ ಕಾರ್ಯಾಚರಣೆ : ೪ ಜನರ ಬಂಧನ
    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಸುಹೇಲ್, ಸಾದತ್ ಸೇರಿದಂತೆ ೫ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪೈಕಿ ೪ ಜನರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
    ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರಕುಮಾರ್ ದಯಾಮ ಮತ್ತು ನಗರ ಪೊಲೀಸ್ ವೃತ್ತ ನಿರೀಕ್ಷಕ ಶಾಂತಿನಾಥ್ ಮಾರ್ಗದರ್ಶನದಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

Friday, April 21, 2023

ಹೊಸಮನೆ ಸಾಯಿನಗರದಲ್ಲಿ ಯುವಕನ ಕೊಲೆ

    ಭದ್ರಾವತಿ, ಏ. ೨೧: ಹೊಸಮನೆ ಸಾಯಿನಗರದಲ್ಲಿ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಈ ಸಂಬಂಧ ಪೊಲೀಸರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ.
    ಕೊಲೆಯಾದ ಯುವಕ ಕೋಡಿಹಳ್ಳಿ ನಿವಾಸಿ ನವೀನ್(೨೮) ಎಂದು ಗುರುತಿಸಲಾಗಿದೆ. ಕೊಲೆ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹರಡಿದ್ದು, ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಹಾಗು ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರವಾದ ಮಾಹಿತಿ ತಿಳಿದು ಬರಬೇಕಾಗಿದೆ.
    ಕ್ಷೇತ್ರದಲ್ಲಿ ಚುನಾವಣೆ ಸಂದರ್ಭದಲ್ಲಿ ಗುಂಪು ಘರ್ಷಣೆ, ಹಲ್ಲೆ, ಬೆದರಿಕೆ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಕೃತ್ಯಗಳು ಸಾಮಾನ್ಯವಾಗಿ ಬಿಟ್ಟಿವೆ. ಈ ನಡುವೆ ಮಕ್ಕಳು, ಮಹಿಳೆಯರು, ಪೋಷಕರು ಆತಂಕದಲ್ಲಿ ಬದುಕುವಂತಾಗಿದೆ.

ಹಿರಿಯ ನ್ಯಾಯವಾದಿ ಸುಬ್ಬರಾವ್ ನಿಧನ : ಸಂತಾಪ

ನ್ಯಾಯವಾದಿ ಕೆ. ಸುಬ್ಬರಾವ್ 

    ಭದ್ರಾವತಿ, ಏ. ೨೧ : ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಪರವಾಗಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ವಾದ ಮಂಡಿಸುವ ಮೂಲಕ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಹೆಚ್ಚಿನ ಕಾಳಜಿವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ಸುಬ್ಬರಾವ್ ನಿಧನ ಹೊಂದಿದ್ದಾರೆ.
    ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಸುಬ್ಬರಾವ್ ಹೆಚ್ಚಿನ ಯಶಸ್ಸು ಸಾಧಿಸಿದ್ದರು. ಇವರ ನಿಧನಕ್ಕೆ ಎಂಪಿಎಂ ಎಂಪ್ಲಾಯಿಸ್ ಅಸೋಸಿಯೇಷನ್ ಸಂತಾಪ ಸೂಚಿಸಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುಂದುವರೆದು ನ್ಯಾಯಾಲಯದಲ್ಲಿ ಯಶಸ್ಸು ಕಂಡುಕೊಳ್ಳುವ ಮೂಲಕ ಅವರ ಆತ್ಮಕ್ಕೆ ಶಾಂತಿ ಲಭಿಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಧರ್ಮಲಿಂಗಸ್ವಾಮಿ ತಿಳಿಸಿದ್ದಾರೆ.

ಕಾಂಗ್ರೆಸ್ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ

ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆಗೆ ೬ನೇ ಬಾರಿಗೆ ಸ್ಪರ್ಧಿಸಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಪರ ವ್ಯಾಪಕ ಪ್ರಚಾರಕ್ಕೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮುಂದಾಗಿದ್ದು, ಪ್ರಚಾರ ಕಾರ್ಯಕ್ಕೆ ಬಳಸುತ್ತಿರುವ ವಾಹನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಏ. ೨೧ : ವಿಧಾನಸಭಾ ಚುನಾವಣೆಗೆ ೬ನೇ ಬಾರಿಗೆ ಸ್ಪರ್ಧಿಸಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಪರ ವ್ಯಾಪಕ ಪ್ರಚಾರಕ್ಕೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮುಂದಾಗಿದ್ದು, ಪ್ರಚಾರ ಕಾರ್ಯಕ್ಕೆ ಬಳಸುತ್ತಿರುವ ವಾಹನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
    ಸಂಗಮೇಶ್ವರ್ ನಿವಾಸದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ಚಾಲನೆ ನೀಡುವ ಮೂಲಕ ಚುನಾವಣೆ ಪ್ರಚಾರ ಕಾರ್ಯ ಯಶಸ್ವಿಯಾಗಿ ಕೈಗೊಳ್ಳುವಂತೆ ಕರೆ ನೀಡಲಾಯಿತು.
    ಎಸ್. ಅರುಣ್‌ಕುಮಾರ್ ಮತ್ತು ಎಂ. ರಾಜೇಂದ್ರ ನೇತೃತ್ವದಲ್ಲಿ ಪ್ರಚಾರ ಕಾರ್ಯ ಆರಂಭಿಸಲಾಗಿದ್ದು, ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಪ್ರಮುಖರಾದ ಎಚ್. ರವಿಕುಮಾರ್, ಅಂತೋಣಿ ವಿಲ್ಸನ್, ರಾಜೇಂದ್ರ, ರವಿಕುಮಾರ್, ವರುಣ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಕ್ಷ ಸಂಘಟನೆ ಜೊತೆಗೆ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ : ಶಾರದ ಅಪ್ಪಾಜಿ

ಭದ್ರಾವತಿ ಶುಕ್ರವಾರ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಮುಖರನ್ನು ಸ್ವಾಗತಿಸಿ ಅಭಿನಂದಿಸುವ ಮೂಲಕ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಏ. ೨೧ : ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಕ್ಷ ಸಂಘಟನೆ ಜೊತೆಗೆ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು ಶಾರದ ಅಪ್ಪಾಜಿ ಮನವಿ ಮಾಡಿದರು.
    ಅವರು ಶುಕ್ರವಾರ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಮುಖರನ್ನು ಸ್ವಾಗತಿಸಿ ಅಭಿನಂದಿಸುವ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಗಳು, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ವಿವಿಧ ಪಕ್ಷಗಳಿಂದ ಸೇರ್ಪಡೆಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.  ಸಂಘಟನೆಗೆ ಹೆಚ್ಚಿನ ಗಮನ ನೀಡಬೇಕು. ಈ ಬಾರಿ ಗೆಲುವಿಗೆ ಎಲ್ಲರೂ ಒಗ್ಗಟ್ಟಿಗಾಗಿ ಶಕ್ತಿ ಮೀರಿ ಶ್ರಮಿಸಬೇಕೆಂದರು.
    ಪಕ್ಷಕ್ಕೆ ಸೇರ್ಪಡೆಗೊಂಡ ಮಹಮದ್ ಸನ್ನಾವುಲ್ಲಾ, ಇಬ್ರಾಹಿಂ ಖಾನ್ ಮತ್ತು ಎನ್. ಕೃಷ್ಣಪ್ಪರವರನ್ನು ಅಭಿನಂದಿಸಲಾಯಿತು. ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಸೂಧನ್, ಪ್ರಮುಖರಾದ ಡಿ.ಟಿ ಶ್ರೀಧರ್, ಮುರ್ತುಜಾಖಾನ್, ಸೈಯದ್ ಅಜ್ಮಲ್, ಎ. ಮಸ್ತಾನ್, ಮುಕ್ರಮ್ ಖಾನ್, ತರುಣ್‌ಕುಮಾರ್, ಲೋಕೇಶ್ವರ್‌ರಾವ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.