Saturday, April 22, 2023

ಮೊಬೈಲ್ ಮಾರಾಟ ಹಿನ್ನಲೆಯಲ್ಲಿ ಹಣಕಾಸಿನ ಸಂಘರ್ಷ : ಯುವಕನ ಕೊಲೆ

ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ೪ ಜನರ ಬಂಧನ

    ಭದ್ರಾವತಿ, ಏ. ೨೨: ಹೊಸಮನೆ ಸತ್ಯಸಾಯಿ ನಗರದಲ್ಲಿ ಮೊಬೈಲ್ ಮಾರಾಟ ಹಿನ್ನಲೆಯಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ಉಂಟಾಗಿ ನವೀನ್(೨೮) ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಈ ಸಂಬಂಧ ಪೊಲೀಸರು ೪ ಜನರನ್ನು ಬಂಧಿಸಿದ್ದಾರೆ.
    ಕೋಡಿಹಳ್ಳಿ ನಿವಾಸಿ ನವೀನ್ ಮತ್ತು ಅರುಣ್ ಅಲಿಯಾಸ್ ಕೊಕ್ಕು ಇಬ್ಬರು ಸ್ನೇಹಿತರಾಗಿದ್ದು, ಸುಹೇಲ್ ಅಲಿಯಾಸ್ ಕೊಲವೇರಿ ಎಂಬಾತನಿಗೆ ಮೊಬೈಲ್ ಮಾರಾಟ ಮಾಡಿದ್ದಾರೆ. ಸುಹೇಲ್ ಹಣ ಬಾಕಿ ಉಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ನವೀನ್ ಮತ್ತು ಅರುಣ್ ಇಬ್ಬರು ಬಾಕಿ ಹಣ ಕೇಳಲು ಸತ್ಯಸಾಯಿ ನಗರಕ್ಕೆ ತೆರಳಿದ್ದಾರೆ. ಮೊಬೈಲ್ ಕೊಡು ಇಲ್ಲವಾದಲ್ಲಿ ಬಾಕಿ ಹಣ ನೀಡು ಎಂದು ಪಟ್ಟು ಹಿಡಿದಿದ್ದು, ಈ ಸಂದರ್ಭದಲ್ಲಿ ಸಂಘರ್ಷ ಉಂಟಾಗಿ ನವೀನ್‌ಗೆ ಚಾಕುವಿನಿಂದ ಇರಿಯಲಾಗಿದೆ ಎನ್ನಲಾಗಿದೆ.
    ಸಂಘರ್ಷ ಉಂಟಾದ ಸಂದರ್ಭದಲ್ಲಿ ಅರುಣ್ ಸ್ಥಳದಿಂದ ಓಡಿ ಹೋಗಿದ್ದು, ಪುನಃ ಹಿಂದಿರುಗಿ ಬಂದು ನೋಡಿದಾಗ ನವೀನ್ ಕೆಳಗೆ ಬಿದ್ದಿರುವುದು ಕಂಡು ಬಂದಿದೆ. ಈತನನ್ನು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆದರೆ ಈತ ಮಾರ್ಗ ಮದ್ಯದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
    ಆಸ್ಪತ್ರೆ ಬಳಿ ಗುಂಪು ಸೇರಿದ ಜನ :
    ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಜನರು ಜಮಾಯಿಸಿದ್ದು, ಅಲ್ಲದೆ ಒಂದು ಹಂತದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ನಡುವೆ ಪೊಲೀಸ್ ಠಾಣೆ ಮುಂಭಾಗ ಸಹ ಜನರು ಜಮಾಯಿಸಿದ್ದರು. ಜನರಲ್ಲಿ ಒಂದೆಡೆ ಗೊಂದಲ, ಮತ್ತೊಂದೆಡೆ ಭಯದ ಆತಂಕ ಮೂಡಿರುವುದು ಕಂಡು ಬಂದಿತು. ರಾತ್ರಿಯೇ ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
    ಕ್ಷಿಪ್ರ ಕಾರ್ಯಾಚರಣೆ : ೪ ಜನರ ಬಂಧನ
    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಸುಹೇಲ್, ಸಾದತ್ ಸೇರಿದಂತೆ ೫ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪೈಕಿ ೪ ಜನರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
    ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರಕುಮಾರ್ ದಯಾಮ ಮತ್ತು ನಗರ ಪೊಲೀಸ್ ವೃತ್ತ ನಿರೀಕ್ಷಕ ಶಾಂತಿನಾಥ್ ಮಾರ್ಗದರ್ಶನದಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

No comments:

Post a Comment