Tuesday, July 25, 2023

ವಿಐಎಸ್ಎಲ್ ಕಾರ್ಖಾನೆಯಲ್ಲಿ ಚಿರತೆ ಪ್ರತ್ಯಕ್ಷ: ಎಚ್ಚರಿಕೆಯಿಂದಿರಲು ಸೂಚನೆ

ಭದ್ರಾವತಿ  ವಿಐಎಸ್ಎಲ್ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದೆ.
    ಭದ್ರಾವತಿ, ಜು. ೨೫: ನಗರದ ವಿಐಎಸ್ಎಲ್ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
    ಕಾರ್ಖಾನೆ ಒಳಭಾಗದ ಬಿಜಿ ವೇಯಿಂಗ್ ಬ್ರಿಡ್ಜ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸನಿಹದಲ್ಲೇ ಇದ್ದ ಸಿಬ್ಬಂದಿಯೊಬ್ಬರು ಇದರ ಫೋಟೋ ತೆಗೆದಿದ್ದಾರೆ.
    ಈ ಕುರಿತಂತೆ ಮಾಹಿತಿ ಪ್ರಕಟಿಸಿರುವ ವಿಐಎಸ್'ಎಲ್ ಕಾರ್ಖಾನೆಯ ಹಿರಿಯ ಅಧಿಕಾರಿ ಪ್ರವೀಣ್ ಕುಮಾರ್ ಅವರು, ಕಾರ್ಖಾನೆಯ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿದೆ. ಹೀಗಾಗಿ, ಸಿಬ್ಬಂದಿಗಳು ಎಚ್ಚರಿಕೆಯಿಂದ ಇರಬೇಕು. ರಾತ್ರಿ ವೇಳೆಯಲ್ಲಿ ಯಾರೂ ಸಹ ಒಬ್ಬರೇ ಓಡಾಡಬಾರದು ಎಂದು ತಿಳಿಸಿದ್ದಾರೆ.
    ಒಂದು ವೇಳೆ ಚಿರತೆ ಮತ್ತೆ ಕಾಣಸಿಕೊಂಡರೆ ತತಕ್ಷಣವೇ ಭದ್ರತಾ ವಿಭಾಗವನ್ನು ಸಂಪರ್ಕಿಸಿ ಮೊ: ೯೪೮೦೮೨೯೧೯೦ಎಂದು ಎಚ್ಚರಿಕೆ ನೀಡಿದ್ದಾರೆ.


        ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ :
    ಕಾರ್ಖಾನೆಯಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ರಾತ್ರಿ ವಲಯ ಅರಣ್ಯಾಧಿಕಾರಿ ಕೆ.ಆರ್‌ ರಾಕೇಶ್‌ ಮತ್ತು ಉಪ ವಲಯ ಅರಣ್ಯಾಧಿಕಾರಿ ಬಿ.ಆರ್‌ ದಿನೇಶ್‌ ಕುಮಾರ್‌ ಮತ್ತು ಕಾರ್ಖಾನೆ ಭದ್ರತಾ ಸಿಬ್ಬಂದಿಗಳು ಸ್ಥಳದಲ್ಲಿ ಬೀಡುಬಿಟ್ಟು ಪರಿಶೀಲನೆ ನಡೆಸಿದರು.  ಚಿರತೆ ಪತ್ತೆಯಾದ ಸ್ಥಳಕ್ಕೆ ಶ್ವಾನ ಕರೆ ತರಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.
    ಸುಮಾರು ಒಂದು ವರ್ಷದ ಹಿಂದೆ ನ್ಯೂಟೌನ್‌ ಶ್ರೀ ಸತ್ಯಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆ ಸಮೀಪದ ಕಾರ್ಖಾನೆಯ ವಸತಿ ಗೃಹದಲ್ಲಿ ಚಿರತೆ ಪತ್ತೆಯಾಗಿತ್ತು. ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಸುಮಾರು ೮ ಗಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಮುಜ್ಜು ಹತ್ಯೆ ಪ್ರಕರಣ : ೫ ಮಂದಿ ಬಂಧನ

ಹಳೇದ್ವೇಷದ ಹಿನ್ನಲೆಯಲ್ಲಿ ಹತ್ಯೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಇತ್ತೀಚೆಗೆ ಭೀಕರವಾಗಿ ಹತ್ಯೆಯಾದ ರೌಡಿ ಶೀಟರ್ ಮೊಹಮದ್ ಮುಜಾಯಿದ್ದೀನ್ ಅಲಿಯಾಸ್ ಮುಜ್ಜು (೩೨) ಪ್ರಕರಣಕ್ಕೆ ಸಂಬಂಧಿಸಿದಂತೆ  ಪೇಪರ್ ಟೌನ್ ಪೊಲೀಸರು ೫ ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಇತ್ತೀಚೆಗೆ ಭೀಕರವಾಗಿ ಹತ್ಯೆಯಾದ ರೌಡಿ ಶೀಟರ್ ಮೊಹಮದ್ ಮುಜಾಯಿದ್ದೀನ್ ಅಲಿಯಾಸ್ ಮುಜ್ಜು (೩೨) ಪ್ರಕರಣಕ್ಕೆ ಸಂಬಂಧಿಸಿದಂತೆ  ಪೇಪರ್ ಟೌನ್ ಪೊಲೀಸರು ೫ ಮಂದಿ ಬಂಧಿಸಿದ್ದು, ವಿಚಾರಣೆ ವೇಳೆ  ಹಳೇದ್ವೇಷದ ಹಿನ್ನಲೆಯಲ್ಲಿ ಹತ್ಯೆ ಮಾಡಿರುವುದು ತಿಳಿದು ಬಂದಿದೆ.
    ಹತ್ಯೆಗೆ ಸಂಬಂಧಿಸಿದಂತೆ ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾಮಾಂತರ ಠಾಣೆ ಪೊಲೀಸ್‌ ನಿರೀಕ್ಷಕ ಗುರುರಾಜ ಮೈಲಾರ್ (ಪೇಪರ್‌ ಟೌನ್ ಪೊಲೀಸ್‌ ಠಾಣೆ ಪ್ರಭಾರ) ಮತ್ತು ನಗರ ವೃತ್ತ ಪೊಲೀಸ್‌ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ, ಪೇಪರ್ ಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಕವಿತಾ, ಸಹಾಯಕ ನಿರೀಕ್ಷಕ ರತ್ನಾಕರ್ ಮತ್ತು ಸಿಬ್ಬಂದಿಗಳಾದ ವೆಂಕಟೇಶ, ವಾಸುದೇವ, ಅರುಣ, ನಾಗರಾಜ, ಎಂ. ಚಿನ್ನಾನಾಯ, ಚನ್ನಕೇಶವ, ಹಾಲಪ್ಪ, ಮಂಜುನಾಥ್‌,  ಹಣಮಂತ ಅವಟಿ, ಆದರ್ಶ ಶೆಟ್ಟಿ, ವಿಕ್ರಮ್, ಶಿವಪ್ಪ, ಮಂಜುನಾಥ ಮಳೆ, ಮೌನೇಶ, ಈರಯ್ಯ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ಸಿಬ್ಬಂದಿಗಳಾದ ಇಂದ್ರೇಶ್, ಗುರುರಾಜ್, ವಿಜಯ್ ಕುಮಾರ್ ರವರುಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು
    ತನಿಖಾ ತಂಡ  ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯೂರಿನ ಸಂತೋಷ ಕುಮಾರ್ ಅಲಿಯಾಸ್ ಗುಂಡ ಅಲಿಯಾಸ್ ಕರಿಯಾ (೩೩), ಹೊಸಮನೆ ಸುರೇಂದ್ರ ಅಲಿಯಾಸ್ ಆಟೋ ಸೂರಿ (೩೬),  ಮಂಜುನಾಥ ಅಲಿಯಾಸ್ ಬಿಡ್ಡಾ(೩೩), ಭೂತನಗುಡಿ ವಿಜಯ್ ಕುಮಾರ್ ಅಲಿಯಾಸ್ ಪವರ್ (೨೫) ಮತ್ತು ಬಾರಂದೂರು ಹಳ್ಳಿಕೆರೆಯ ವೆಂಕಟೇಶ ಅಲಿಯಾಸ್ ಲೂಸ್ (೨೩) ರನ್ನು ಬಂಧಿಸಿದ್ದಾರೆ.
    ಬಂಧಿತರನ್ನು ವಿಚಾರಣೆ ಮಾಡಲಾಗಿ ಹತ್ಯೆಯಾದ ಮೊಹಮದ್ ಮುಜಾಯಿದ್ದೀನ್ ಅಲಿಯಾಸ್ ಮುಜ್ಜು 2019ನೇ ಸಾಲಿನಲ್ಲಿ ರಮೇಶ ಎಂಬುವರನ್ನು ಕೊಲೆಮಾಡಿ ಮೇಲ್ಕಂಡ ಆರೋಪಿತರಾದ ಸಂತೋಷ್ ಮತ್ತು ಸುರೇಂದ್ರ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಈ ಹಳೆ ದ್ವೇಷದ ಹಿನ್ನೆಲೆಯಲ್ಲಿ ಆರೋಪಿತರು ಮುಜ್ಜುನನ್ನು ಕೊಲೆ ಮಾಡಿರುವುದು ತಿಳಿದು ಬಂದಿದೆ ಎನ್ನಲಾಗಿದೆ. ತನಿಖಾ ತಂಡದ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ ಕುಮಾರ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರೋಟರಿ ಇಂಟರಾಕ್ಟ್‌ ಕ್ಲಬ್‌ ಉದ್ಘಾಟನೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ  ಶ್ರೀ ಹರಿಹರೇಶ್ವರ ಪ್ರೌಢ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್‌ ಗ್ರಾಮದ ಮುಖಂಡರಾದ  ಕೂಡ್ಲಿಗೆರೆ ಹಾಲೇಶ್ ಉದ್ಘಾಟಿಸಿದರು.
    ಭದ್ರಾವತಿ, ಜು. ೨೫: ತಾಲೂಕಿನ ಕೂಡ್ಲಿಗೆರೆ  ಶ್ರೀ ಹರಿಹರೇಶ್ವರ ಪ್ರೌಢ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್‌ ಗ್ರಾಮದ ಮುಖಂಡರಾದ  ಕೂಡ್ಲಿಗೆರೆ ಹಾಲೇಶ್ ಉದ್ಘಾಟಿಸಿದರು.
    ಇತ್ತೀಚಿನ ವರ್ಷಗಳಲ್ಲಿ ರೋಟರಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮತ್ತಷ್ಟು ಕ್ರಿಯಾಶೀಲವಾಗಿದ್ದು, ಇಂಟರಾಕ್ಟ್‌ ಕ್ಲಬ್‌ ಮೂಲಕ ಹೆಚ್ಚಿನ ಸೇವಾಕಾರ್ಯಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೂಡ್ಲಿಗೆರೆ ಗ್ರಾಮದಲ್ಲಿ ಇಂಟರಾಕ್ಟ್ ಕ್ಲಬ್‌ ಅಸ್ತಿತ್ವಕ್ಕೆ ಬಂದಿದೆ.
    ರೊಟರಿ ಕ್ಲಬ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಉಪಾಧ್ಯಾಯ, ಟಿ.ಎಸ್ ದುಷ್ಯಂತ ರಾಜ್, ಶಾಲಾ ಮುಖ್ಯೋಪಾಧ್ಯಾಯರು ಹಾಗು ಶಿಕ್ಷಕರು ಉಪಸ್ಥಿತರಿದ್ದರು.  

ಕೆ.ಎಸ್‌ಪ್ರಮೋದ್‌ಕುಮಾರ್‌ಗೆ ಡಾಕ್ಟರೇಟ್‌ಪದವಿ

ಕೆ.ಎಸ್‌ಪ್ರಮೋದ್‌ಕುಮಾರ್‌

    ಭದ್ರಾವತಿ, ಜು. ೨೫ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ಜಿಲ್ಲಾ ಸಂಚಾಲಕ  ನಗರದ ನಿವಾಸಿ ಕೆ.ಎಸ್ ಪ್ರಮೋದ್ ಕುಮಾರ್ ರವರು ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್‌ಪದವಿ ಪಡೆದುಕೊಂಡಿದ್ದಾರೆ.

    ಪ್ರಮೋದ್‌ಕುಮಾರ್‌ರವರು ʻʻಸೆಲ್ಫ್‌ಎಕ್ಸ್‌ಪ್ರೆಸನ್‌, ಸೋಸಿಯಲ್‌ಕಾಂಪೆಟೆನ್ಸ್‌, ಅಡ್ಜಸ್ಟ್‌ಮೆಂಟ್‌ ಅಂಡ್‌ ಅಕಾಡೆ ಮಿಕ್‌ ಆಚೀವ್‌ಮೆಂಟ್‌ ಆಸ್‌ ಪ್ರೆಡಿಕ್ಟರ್ಸ್‌ ಆಫ್‌ ಒಬೆಡಿಯನ್ಸ್‌-ಡಿಸ್‌ಒಬೆಡಿಯನ್ಸ್‌ಟೆನ್‌ಡೆನ್ಸಿ ಅಮಾಂಗ್‌ ಅಡೋಲ್‌ ಸೆಂಟ್ಸ್‌ʼʼ  (Self Expression, Social Competence, Adjustment and Academic Achievement as Predictors of Obedience -Disobedience Tendency among Adolescents) ಮಹಾಪ್ರಬಂಧ ವಿಶ್ವ ವಿದ್ಯಾಲಯದ ಶಿಕ್ಷಣ ನಿಕಾಯದ ಡೀನರು ಪ್ರೊ. ಸಿ. ಗೀತಾರವರ ಮಾರ್ಗದರ್ಶನದಲ್ಲಿ ಮಂಡಿಸಿದ್ದರು.
    ಪ್ರಮೋದ್‌ಕುಮಾರ್‌ವಿಶ್ವ ವಿದ್ಯಾಲಯದ ೩೩ನೇ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ. ಇವರು ಈ ಹಿಂದೆ ಹೊಸಸೇತುವೆ ರಸ್ತೆಯ ಹೆಬ್ಬೂರು ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.  ಅಲ್ಲದೆ ಕುವೆಂಪು ವಿಶ್ವ ವಿದ್ಯಾಲಯದ ಸಿಂಡಿಕೇಟ್‌ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.  
ಇವರನ್ನು ಎಬಿವಿಪಿ ಪ್ರಮುಖರು, ಪ್ರಾಧ್ಯಾಪಕ ವೃಂದದವರು ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.

Monday, July 24, 2023

ಸುಜ್ಞಾನನಿಧಿ ವಿದ್ಯಾರ್ಥಿ ವೇತನ : ವೃತ್ತಿಪರ ವಿದ್ಯಾರ್ಥಿಗಳಿಗೆ ಆಶಾಕಿರಣ

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಶಂಸೆ  

ಭದ್ರಾವತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ -೨ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿದರು.
    ಭದ್ರಾವತಿ, ಜು. ೨೪:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಜ್ಞಾನನಿಧಿ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ಪಾಲಿಗೆ ಆಶಾ ಕಿರಣವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಶಂಸೆ ವ್ಯಕ್ತಪಡಿಸಿದರು.
    ಅವರು ಸೋಮವಾರ  ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ -೨ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಯೋಜನೆ ವತಿಯಿಂದ ವಿದ್ಯಾರ್ಥಿಗಳ ನೆರವಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವುದು ಸಮಾಜದಲ್ಲಿ ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗಪಡೆದುಕೊಂಡು ಉತ್ತಮ ಸಾಧನೆ ಮಾಡಬೇಕೆಂದರು.
    ಯೋಜನಾಧಿಕಾರಿ ಮಾಧವಗೌಡ ಮಾತನಾಡಿ, ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ಜಾರಿಗೆ ತರಲಾಗಿದೆ.  ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ ವೀರೇಂದ್ರ ಹೆಗಡೆಯವರು ಯೋಜನೆಯ ಪ್ರಸಕ್ತ ಸಾಲಿನ ಮಾಸಿಕ ವಿದ್ಯಾರ್ಥಿ ವೇತನ  ಮಂಜೂರಾತಿ ಮಾಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಿದರು.  
    ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್‌ ಶ್ರೀಹರ್ಷ, ಜಿಲ್ಲಾ ಜನಜಾಗೃತಿ ವೇದಿಕೆ  ಅಧ್ಯಕ್ಷ ಜಿ. ಆನಂದ ಕುಮಾರ್‌, ಸದಸ್ಯ ಆರ್. ಕರುಣಾಮೂರ್ತಿ, ಸ್ಥಳೀಯ ಒಕ್ಕೂಟದ ಅಧ್ಯಕ್ಷೆ ಕೌಸರ್‌ ಬಾನು, ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
    ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸೌಮ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಜಲಪಾತದಲ್ಲಿ ಕೊಚ್ಚಿ ಹೋದ ಯುವಕ : ವಿಡಿಯೋ ವೈರಲ್‌

ಜಲಪಾತದಲ್ಲಿ ಕೊಚ್ಚಿ ಹೋದ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಎಚ್‌ ನಗರದ ಯುವಕ ಶರತ್‌ ಕುಮಾರ್‌.
    ಭದ್ರಾವತಿ, ಜು. ೨೪:  ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಎಚ್‌ ನಗರದ ಯುವಕನೋರ್ವ ಜಲಪಾತದಲ್ಲಿ ಕೊಚ್ಚಿ ಹೋಗಿದ್ದು, ಈ ದುರ್ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅಲ್ಲದೆ ಇತರರಿಗೆ ಎಚ್ಚರಿಕೆ ಗಂಟೆಯಾಗಿ ಕಂಡು ಬರುತ್ತಿದೆ.
    ಕೆ.ಎಚ್‌ ನಗರದ ಮೇಸ್ತ್ರಿ ಮುನಿಸ್ವಾಮಿ ಅವರ ಪುತ್ರ ಶರತ್‌ ಕುಮಾರ್‌(೨೩) ಭಾನುವಾರ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನ ಸಮೀಪದ ಅರಶಿನಗುಂಡಿ ಜಲಪಾತ ವೀಕ್ಷಣೆಗೆ ತೆರಳಿದ್ದು, ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಜಲಪಾತದಲ್ಲಿ ಕೊಚ್ಚಿ ಹೋಗಿದ್ದು, ಈ ದೃಶ್ಯ ಮತ್ತೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸೋಮವಾರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
    ಶರತ್‌ಕುಮಾರ್‌ ತಂದೆಯ ಅಡಕೆ ತಟ್ಟೆ ತಯಾರಿಕ ಘಟಕ ನೋಡಿಕೊಳ್ಳುತ್ತಿದ್ದನು. ಕಳೆದ ೨-೩ ದಿನಗಳ ಹಿಂದೆ ಸ್ವಂತ ಕಾರಿನಲ್ಲಿ ತೆರಳಿದ್ದನು ಎನ್ನಲಾಗಿದೆ. ಈ ನಡುವೆ ಕೆ.ಎಚ್‌ ನಗರದಲ್ಲಿ ಶೋಕ  ಮನೆ ಮಾಡಿದ್ದು, ಶರತ್‌ ಕುಮಾರ್‌ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಘಟನೆ ಸಂಬಂಧ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹದ ಶೋಧಕಾರ್ಯ ಮುಂದುವರೆದಿದೆ ಎನ್ನಲಾಗಿದೆ.


ಜಲಪಾತದ ಬಳಿ ಅಪಕಾರಿ ಸ್ಥಳದಲ್ಲಿ ನಿಂತಕೊಂಡು ವೀಕ್ಷಣೆ ಮಾಡುತ್ತಿರುವ ಶರತ್‌ಕುಮಾರ್‌

ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಅಭಿನಂದನೆ

ಭದ್ರಾವತಿ ನ್ಯೂಟೌನ್, ಅಮಲೋದ್ಭವಿ ಮಾತೆ ದೇವಾಲಯದಲ್ಲಿ 2022-2023ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ  ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜು. ೨೪ :  ನಗರದ ನ್ಯೂಟೌನ್, ಅಮಲೋದ್ಭವಿ ಮಾತೆ ದೇವಾಲಯದಲ್ಲಿ 2022-2023ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ  ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಧರ್ಮಕೇಂದ್ರದ ಗುರು ಫಾದರ್ ಲ್ಯಾನ್ಸಿ ಡಿಸೋಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪಾಲನಾ ಪರಿಷತ್ತಿನ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಕಾರ್ಯಕ್ರಮದ ಮಹತ್ವದ ತಿಳಿಸಿದರು.  
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ  ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ಮಕ್ಕಳಿಗೂ ಉಡುಗೊರೆ ನೀಡಿ
    ಪ್ರೋತ್ಸಾಹಿಸಲಾಯಿತು. ವಿಮಲಾ ಕಾರ್ಯಕ್ರಮ ನಿರೂಪಿಸಿದರು.  ಫಾದರ್ ಲ್ಯಾನ್ಸಿ ಡಿಸೋಜಾ ವಂದಿಸಿದರು.