Tuesday, July 25, 2023

ವಿಐಎಸ್ಎಲ್ ಕಾರ್ಖಾನೆಯಲ್ಲಿ ಚಿರತೆ ಪ್ರತ್ಯಕ್ಷ: ಎಚ್ಚರಿಕೆಯಿಂದಿರಲು ಸೂಚನೆ

ಭದ್ರಾವತಿ  ವಿಐಎಸ್ಎಲ್ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದೆ.
    ಭದ್ರಾವತಿ, ಜು. ೨೫: ನಗರದ ವಿಐಎಸ್ಎಲ್ ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
    ಕಾರ್ಖಾನೆ ಒಳಭಾಗದ ಬಿಜಿ ವೇಯಿಂಗ್ ಬ್ರಿಡ್ಜ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸನಿಹದಲ್ಲೇ ಇದ್ದ ಸಿಬ್ಬಂದಿಯೊಬ್ಬರು ಇದರ ಫೋಟೋ ತೆಗೆದಿದ್ದಾರೆ.
    ಈ ಕುರಿತಂತೆ ಮಾಹಿತಿ ಪ್ರಕಟಿಸಿರುವ ವಿಐಎಸ್'ಎಲ್ ಕಾರ್ಖಾನೆಯ ಹಿರಿಯ ಅಧಿಕಾರಿ ಪ್ರವೀಣ್ ಕುಮಾರ್ ಅವರು, ಕಾರ್ಖಾನೆಯ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿದೆ. ಹೀಗಾಗಿ, ಸಿಬ್ಬಂದಿಗಳು ಎಚ್ಚರಿಕೆಯಿಂದ ಇರಬೇಕು. ರಾತ್ರಿ ವೇಳೆಯಲ್ಲಿ ಯಾರೂ ಸಹ ಒಬ್ಬರೇ ಓಡಾಡಬಾರದು ಎಂದು ತಿಳಿಸಿದ್ದಾರೆ.
    ಒಂದು ವೇಳೆ ಚಿರತೆ ಮತ್ತೆ ಕಾಣಸಿಕೊಂಡರೆ ತತಕ್ಷಣವೇ ಭದ್ರತಾ ವಿಭಾಗವನ್ನು ಸಂಪರ್ಕಿಸಿ ಮೊ: ೯೪೮೦೮೨೯೧೯೦ಎಂದು ಎಚ್ಚರಿಕೆ ನೀಡಿದ್ದಾರೆ.


        ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ :
    ಕಾರ್ಖಾನೆಯಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ರಾತ್ರಿ ವಲಯ ಅರಣ್ಯಾಧಿಕಾರಿ ಕೆ.ಆರ್‌ ರಾಕೇಶ್‌ ಮತ್ತು ಉಪ ವಲಯ ಅರಣ್ಯಾಧಿಕಾರಿ ಬಿ.ಆರ್‌ ದಿನೇಶ್‌ ಕುಮಾರ್‌ ಮತ್ತು ಕಾರ್ಖಾನೆ ಭದ್ರತಾ ಸಿಬ್ಬಂದಿಗಳು ಸ್ಥಳದಲ್ಲಿ ಬೀಡುಬಿಟ್ಟು ಪರಿಶೀಲನೆ ನಡೆಸಿದರು.  ಚಿರತೆ ಪತ್ತೆಯಾದ ಸ್ಥಳಕ್ಕೆ ಶ್ವಾನ ಕರೆ ತರಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.
    ಸುಮಾರು ಒಂದು ವರ್ಷದ ಹಿಂದೆ ನ್ಯೂಟೌನ್‌ ಶ್ರೀ ಸತ್ಯಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆ ಸಮೀಪದ ಕಾರ್ಖಾನೆಯ ವಸತಿ ಗೃಹದಲ್ಲಿ ಚಿರತೆ ಪತ್ತೆಯಾಗಿತ್ತು. ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಸುಮಾರು ೮ ಗಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

No comments:

Post a Comment