Friday, September 1, 2023

ಸರ್ಕಾರಿ ಶಾಲೆ ಅಡುಗೆ ಸಹಾಯಕಿಗೆ ಜಾತಿ ನಿಂದನೆ, ಕೊಲೆ ಬೆದರಿಕೆ ಆರೋಪ

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಿ : ಪ್ರತಿಭಟನೆ

ಭದ್ರಾವತಿ ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಗೊಪ್ಪೇನಹಳ್ಳಿ(ಗೊಂದಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಹಾಯಕಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಅಪಪ್ರಚಾರದಲ್ಲಿ ತೊಡಗಿರುವ ಶಾಲಾಭಿವೃದ್ಧಿ ಸಮಿತಿ ವಿರುದ್ಧ ಕಾನೂನು ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಪೊಲೀಸ್‌ ಉಪಾಧೀಕ್ಷಕರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಸೆ. ೧ : ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಗೊಪ್ಪೇನಹಳ್ಳಿ(ಗೊಂದಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಹಾಯಕಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಅಪಪ್ರಚಾರದಲ್ಲಿ ತೊಡಗಿರುವ ಶಾಲಾಭಿವೃದ್ಧಿ ಸಮಿತಿ ವಿರುದ್ಧ ಕಾನೂನು ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಪೊಲೀಸ್‌ ಉಪಾಧೀಕ್ಷಕರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಗ್ರಾಮದ ಎ.ಕೆ ಕಾಲೋನಿ ನಿವಾಸಿ, ಪರಿಶಿಷ್ಟ ಜಾತಿ ಮಾದಿಗ ಸಮುದಾಯದ ರೂಪರವರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿಯಾಗಿದ್ದ ಅಡುಗೆ ಸಹಾಯಕಿ ಹುದ್ದೆಗೆ ನಿಯಮಾನುಸಾರ ಅರ್ಜಿ ಸಲ್ಲಿಸಿದ್ದು, ೨೦೦೮ರ ಅಕ್ಷರ ದಾಸೋಹ ಮಾರ್ಗ ಸೂಚಿಯನ್ವಯ, ಆಯುಕ್ತರು,  ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು  ೨೦೦೩-೦೪ರ ಸುತ್ತೋಲೆ, ಜಂಟಿ ನಿರ್ದೇಶಕರು, ಮಧ್ಯಾಹ್ನ ಉಪಹಾರ ಯೋಜನೆ, ಬೆಂಗಳೂರುರವರ ಪತ್ರ ಹಾಗು ಗ್ರಾಮ ಪಂಚಾಯಿತಿ ಕಾರ್ಯಾಲಯ, ಅರಳಿಕೊಪ್ಪ ಮತ್ತು ತಾಲೂಕು ಪಂಚಾಯಿತಿ  ಅನುಮೋದನೆಯಂತೆ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.


    ರೂಪ ಅವರು ಪರಿಶಿಷ್ಟ ಜಾತಿಗೆ ಸೇರಿರುವ ಹಿನ್ನಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೈಯದ್‌ ಶಫಿ ಉಲ್ಲಾ, ಸದಸ್ಯರಾದ ಅರುಣ್‌, ಅಸ್ಮಾಬಾನು, ಸಮೀನ ಬಾನು, ಎಸ್. ನಾಗರಾಜ್‌, ಜಯಮ್ಮ, ಕೆ. ನಾಗರಾಜ, ಮಂಜುಳ ಮತ್ತು ಬಾಲು ನಾಯ್ಕ ಸೇರಿದಂತೆ ಇನ್ನಿತರರು ಕರ್ತವ್ಯ ನಿರ್ವಹಿಸದಂತೆ ಬೆದರಿಕೆ ಹಾಕುತ್ತಿದ್ದು, ಅಲ್ಲದೆ ಜಾತಿ ನಿಂದನೆ ಮಾಡಿ ಎಲ್ಲೆಡೆ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆಂದು ಆರೋಪಿಸಲಾಯಿತು.
     ಈ ಸಂಬಂಧ ೩ ದಿನಗಳ ಹಿಂದೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಲಾಯಿತು. ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಲಾಯಿತು.
    ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಉಪಾಧೀಕ್ಷಕ ನಾಗರಾಜ್‌ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೂ ಪ್ರತಿಭಟನೆ ಮುಂದುವರೆಸಿ ತಕ್ಷಣ ಬಂಧಿಸಬೇಕೆಂದು ಆಗ್ರಹಿಸಲಾಯಿತು. ಈ ನಡುವೆ ಪೊಲೀಸರು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಲು ಯತ್ನಿಸಿದರಾದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ.
    ಪ್ರತಿಭಟನೆಯಲ್ಲಿ ಪ್ರಮುಖರಾದ ಬಾಲಕೃಷ್ಣ, ಸುರೇಶ್‌(ಪ್ರಜಾಪ್ರತಿನಿಧಿ), ಕೃಷ್ಣಪ್ಪ, ಎಸ್.ಕೆ ಸುಧೀಂದ್ರ, ಚನ್ನಪ್ಪ, ಸಿ. ಜಯಪ್ಪ, ಜಿ. ರಾಜು, ವಿಲ್ಸನ್‌ ಬಾಬು ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಗು ರೂಪ ಕುಟುಂಬಸ್ಥರು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Thursday, August 31, 2023

ಚರಂಡಿ‌ ಕಾಮಗಾರಿಗೆ ಗುದ್ದಲಿಪೂಜೆ

ಭದ್ರಾವತಿ ನಗರಸಭೆ 19ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮ)ಯಲ್ಲಿ ಆಯೋಜಿಸಲಾಗಿದ್ದ ಚರಂಡಿ ಕಾಮಗಾರಿಗೆ ನಗರಸಭೆ ಸದಸ್ಯ ಬಸವರಾಜ್ ಬಿ. ಆನೇಕೊಪ್ಪ ಗುದ್ದಲಿಪೂಜೆ ನರವೇರಿಸಿದರು.
    ಭದ್ರಾವತಿ: ನಗರಸಭೆ 19ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮ)ಯಲ್ಲಿ ಆಯೋಜಿಸಲಾಗಿದ್ದ ಚರಂಡಿ ಕಾಮಗಾರಿಗೆ ನಗರಸಭೆ ಸದಸ್ಯ ಬಸವರಾಜ್ ಬಿ. ಆನೇಕೊಪ್ಪ ಗುದ್ದಲಿಪೂಜೆ ನರವೇರಿಸಿದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್, ಶಾಲಾ ಅಭಿವೃದ್ಧಿ ಸಮಿತಿಯ ವೆಂಕಟೇಶ್ ಉಜ್ಜೀನಿಪುರ, ಸ್ಥಳೀಯ ಮುಖಂಡರಾದ ನಾಗೇಶ್, ಶ್ಯಾಮ್, ಭಾಸ್ಕರ್, ವೆಂಕಟಯ್ಯ, ರವಿ, ಗುತ್ತಿಗೆದಾರ ಲೋಕೇಶ್ ಸೇರಿದಂತೆ ಶಾಲೆಯ ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ : ಭವ್ಯ ಮೆರವಣಿಗೆಗೆ ಚಾಲನೆ

ಭದ್ರಾವತಿಯಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆ (ಈಡಿಗ ಸಮಾಜದ 26 ಪಂಗಡಗಳ ಒಕ್ಕೂಟ) ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ ಹಾಗು ಈಡಿಗ ಸಮಾಜ ಮತ್ತು ಬಿಲ್ಲವ ಸಮಾಜದ ವತಿಯಿಂದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಕಾರದೊಂದಿಗೆ ಗುರುವಾರ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಅಂಗವಾಗಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು.
    ಭದ್ರಾವತಿ: ಶ್ರೀ ನಾರಾಯಣಗುರು ವಿಚಾರ ವೇದಿಕೆ (ಈಡಿಗ ಸಮಾಜದ 26 ಪಂಗಡಗಳ ಒಕ್ಕೂಟ) ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ ಹಾಗು ಈಡಿಗ ಸಮಾಜ ಮತ್ತು ಬಿಲ್ಲವ ಸಮಾಜದ ವತಿಯಿಂದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಕಾರದೊಂದಿಗೆ ಗುರುವಾರ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಅಂಗವಾಗಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು.
    ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರದೊಂದಿಗೆ ನಗರದ ಹುತ್ತಾಕಾಲೋನಿಯಿಂದ ಆರಂಭಗೊಂಡ ಮೆರವಣಿಗೆ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಹಾಗು ರಂಗಪ್ಪ ವೃತ್ತ ಮೂಲಕ ತಾಲೂಕು ಪಂಚಾಯಿತಿ ಆವರಣ ತಲುಪಿತು.
    ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗರಾಜ್, ಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಎನ್. ನಟರಾಜ್‌, ಕೇರಳ ಸಮಾಜದ ಅಧ್ಯಕ್ಷ ಗಂಗಾಧರ್‌, ಆರ್ಯ ಈಡಿಗ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಭಾಗ್ಯಮ್ಮ ಪುಟ್ಟಸ್ವಾಮಿಗೌಡ, ವೇದಿಕೆ ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಹಿಳೆಯರು ಆರೋಗ್ಯ ಕಾಳಜಿ ಕುರಿತು ಅರಿವು ಬೆಳೆಸಿಕೊಳ್ಳಿ : ಡಾ. ಎಂ.ವಿ ಅಶೋಕ್

ಭದ್ರಾವತಿ ತಾಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ -2ರ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ರೋಟರಿ ಕ್ಲಬ್ ಹಾಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂಘದ ಎನ್ ಜಿ ಓ ಸದಸ್ಯರುಗಳಿಗೆ ಎನ್‌ಆರ್ ಎಚ್ ಎಂ ಕಾರ್ಯಾಗಾರ ಯುವ ಮುಖಂಡ ಬಿ.ಎಂ ರವಿಕುಮಾರ್ ಉದ್ಘಾಟಿಸಿದರು.
    ಭದ್ರಾವತಿ, ಆ. 31: ಮಹಿಳೆಯರು ಸಾಮಾನ್ಯ ಖಾಯಿಲೆಗಳ ಕುರಿತು ಅರಿವು ಹೊಂದಬೇಕು. ಪ್ರಾಥಮಿಕ ಹಂತದಲ್ಲಿಯೇ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದಾಗ ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಹೇಳಿದರು.
    ಅವರು ಗುರುವಾರ ತಾಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ -2ರ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ರೋಟರಿ ಕ್ಲಬ್ ಹಾಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂಘದ ಎನ್ ಜಿ ಓ ಸದಸ್ಯರುಗಳಿಗೆ ಎನ್‌ಆರ್ ಎಚ್ ಎಂ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರತಿಯೊಂದು ಸಾಮಾನ್ಯ ಖಾಯಿಲೆಯ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ಕಾರ್ಯಾಗಾರದ ಸದುಪಯೋಗಪಡೆದುಕೊಳ್ಳಬೇಕೆಂದರು.
    ಸ್ತ್ರೀ ರೋಗ, ಪ್ರಸೂತಿ ಹಾಗು ಬಂಜೇತನ ತಜ್ಞೆ ಡಾ. ಎಚ್.ಎಲ್ ವರ್ಷ ಮಹಿಳೆಯರ ಆರೋಗ್ಯ ಕುರಿತು ಮಾಹಿತಿ ನೀಡಿದರು. ಯುವ ಮುಖಂಡ ಬಿ.ಎಂ ರವಿಕುಮಾರ್ ಕಾರ್ಯಾಗಾರ ಉದ್ಘಾಟಿಸಿದರು. ಯೋಜನಾಧಿಕಾರಿ ಮಾಧವ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಎನ್ ಸಿ ಡಿ ಆಪ್ತಸಮಾಲೋಚಕಿ ಶ್ರೀದೇವಿ ಪ್ರಾರ್ಥಿಸಿದರು. ಜ್ಞಾನ ಸಮನ್ವಯಾಧಿಕಾರಿ ಸೌಮ್ಯ ಸ್ವಾಗತಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಬಾಯಿ ನಿರೂಪಿಸಿ, ಯೋಜನೆಯ ಹೊಸಮನೆ ಮೇಲ್ವಿಚಾರಕಿ ಪುಷ್ಪಲತಾ ವಂದಿಸಿದರು.

ಶ್ರೀ ನುಲಿಯ ಚಂದಯ್ಯನವರ 916ನೇ ಜಯಂತ್ಯೋತ್ಸವ

ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕುಳುವ ಸಮಾಜ(ಕೊರಚ-ಕೊರಮ-ಕೊರವ) ಹಾಗು ತಾಲೂಕು ಪಂಚಾಯಿತಿ ಮತ್ತು ನಗರಸಭೆ ಸಹಯೋಗದೊಂದಿಗೆ ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ನುಲಿಯ ಚಂದಯ್ಯನವರ 916ನೇ ಜಯಂತ್ಯೋತ್ಸವದಲ್ಲಿ ಕೊರಚ-ಕೊರಮ-ಕೊರವ ಸಮಾಜದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಆ. 31: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕುಳುವ ಸಮಾಜ(ಕೊರಚ-ಕೊರಮ-ಕೊರವ) ಹಾಗು ತಾಲೂಕು ಪಂಚಾಯಿತಿ ಮತ್ತು ನಗರಸಭೆ ಸಹಯೋಗದೊಂದಿಗೆ ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶ್ರೀ ನುಲಿಯ ಚಂದಯ್ಯನವರ 916ನೇ ಜಯಂತ್ಯೋತ್ಸವ ನಡೆಯಿತು.
    ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ದಲಿತ ನೌಕರರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಸಿ. ಜಯಪ್ಪ ಹೆಬ್ಬಳಗೆರೆ ಉಪನ್ಯಾಸ ನೀಡಿದರು.
    ತಹಸೀಲ್ದಾರ್ ಗ್ರೇಡ್-2 ವಿ. ರಂಗಮ್ಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ನಗರಸಭೆ ಮಾಜಿ ಸದಸ್ಯ ಶಿವರಾಜ್, ದಲಿತ ನೌಕರರ ಒಕ್ಕೂಟದ ತಾಲೂಕು ಗೌರವಾಧ್ಯಕ್ಷ ಎಂ. ಈಶ್ವರಪ್ಪ, ಯುವ ಮುಖಂಡ ಬಿ.ಎಂ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕೊರಚ-ಕೊರಮ-ಕೊರವ ಸಮಾಜದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮೊದಲು ನಗರದ ರಂಗಪ್ಪ ವೃತ್ತದಿಂದ ತಾಲೂಕು ಪಂಚಾಯಿತಿವರೆಗೂ ಶ್ರೀ ನುಲಿಯ ಚಂದಯ್ಯನವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು. ಶ್ರೀನಿವಾಸ್ ಜಾಜೂರ್ ನಿರೂಪಿಸಿ, ನಾಗೇಶ್ ಸ್ವಾಗತಿಸಿ, ನವೀನ್ ವಂದಿಸಿದರು.

ರಾಖಿಯನ್ನು ಕಟ್ಟಿಸಿಕೊಂಡ ಕೈಗಳು ಸದಾ ಶ್ರೇಷ್ಠ ಕಾರ್ಯಗಳಲ್ಲಿ ತೊಡಗಿರಲಿ : ಮಾಲಾ ಅಕ್ಕ

ಭದ್ರಾವತಿ ನ್ಯೂಟೌನ್‌ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರೋಟರಿ ಕ್ಲಬ್‌ ಸಹಯೋಗದೊಂದಿಗೆ ಪವಿತ್ರ ರಕ್ಷಾ ಬಂಧನ ಆಚರಿಸಲಾಯಿತು.
    ಭದ್ರಾವತಿ, ಆ. ೩೧ : ನಗರದ ನ್ಯೂಟೌನ್‌ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರೋಟರಿ ಕ್ಲಬ್‌ ಸಹಯೋಗದೊಂದಿಗೆ ಪವಿತ್ರ ರಕ್ಷಾ ಬಂಧನ ಆಚರಿಸಲಾಯಿತು.
    ವಿಶ್ವ ವಿದ್ಯಾಲಯದ ಮಾಲಾ ಅಕ್ಕ ಮಾತನಾಡಿ,  ರಾಖಿಯನ್ನು ಕೈಗೆ ಕಟ್ಟಲಾಗುತ್ತದೆ. ಕೈಗಳು ನಾವು ಮಾಡುವ ಕರ್ಮಗಳ
ಸೂಚಕವಾಗಿದೆ. ನಮ್ಮ ಕರ್ತವ್ಯಗಳನ್ನು ನಾವು ಹೆಚ್ಚಾಗಿ ಕೈಗಳಿಂದಲೇ ಮಾಡುತ್ತೇವೆ. ಕೆಲವು ಕಾರ್ಯಗಳನ್ನು ಮಾಡಲು ಸಾಧ್ಯವಾಗದಿದ್ದರೆ "ನಮ್ಮ ಕೈಗಳು ಬಂಧಿತವಾಗಿವೆ" ಎಂದು ಹೇಳುತ್ತೇವೆ. ನಮ್ಮಿಂದ ತಪ್ಪು ಕರ್ಮಗಳು ಆಗದಂತೆ ರಕ್ಷಾ ಬಂಧನವು ನಮ್ಮನ್ನು "ಕಟ್ಟಿಹಾಕುತ್ತದೆ" ಅಥವಾ ತಪ್ಪಿಸುತ್ತದೆ. ರಾಖಿಯನ್ನು ಕಟ್ಟಿಸಿಕೊಂಡ ಕೈಗಳು ಸದಾ ಶ್ರೇಷ್ಠ ಕಾರ್ಯಗಳಲ್ಲಿ ತೊಡಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
    ಕೈಗೆ ಕಟ್ಟಿದ ರಾಖಿಯ ದಾರವು ಭಗವಂತನ ಕೈಯಲ್ಲಿದೆ. ಇದುವೇ ʻʻಬಂಧನʼʼದ ಅರ್ಥವಾಗಿದೆ. ನಮ್ಮ ಜೀವನದ ಸೂತ್ರವು ಭಗವಂತನ ಕೈಯಲ್ಲಿ ಸುರಕ್ಷಿತವಾಗಿದೆ. ಭಗವಂತನೊಬ್ಬನೇ ನಮಗೆ ರಕ್ಷಕನು, ಇತರರು ಯಾರೂ ಅಲ್ಲ. ಕೆಟ್ಟ ಕಾರ್ಯಗಳು ನಮ್ಮಿಂದ ಆಗದಿರುವುದು  ಇದುವೇ ರಕ್ಷಣೆಯ ಅರ್ಥ, ಜ್ಞಾನ ಮತ್ತು ಅನುಭೂತಿಯಿಂದ ಮಾತ್ರ ಇದು ಸಾಧ್ಯ. ಈ ಜಗತ್ತಿನಲ್ಲಿ ಸರ್ವರಿಗೂ ರಕ್ಷಣೆಯ ಅವಶ್ಯಕತೆ ಇದೆ. ನಾವು ಒಬ್ಬ ಭಗವಂತನ ಛತ್ರ ಛಾಯೆಯಲ್ಲಿ ಇರುವುದೇ ನಿಜವಾದ ರಕ್ಷಣೆಯಾಗಿದೆ ಎಂದರು.
    ಸಹೋದರ - ಸಹೋದರಿ ಸಂಬಂಧವು ದಿವ್ಯತೆಯನ್ನು ಸೂಚಿಸುತ್ತದೆ. ನಮ್ಮ ಎಲ್ಲ ಸಂಬಂಧಗಳಲ್ಲಿ ಸ್ಥಿತಿಯನ್ನು ತರಿಸುತ್ತದೆ. ಈ ದಿವ್ಯ ಸಂಬಂಧವು ಸತ್ಯ ಪ್ರೇಮ, ನಂಬಿಕೆ, ವಿಶ್ವಾಸ, ನಿಸ್ವಾರ್ಥತೆ ಮತ್ತು ಸ್ವಚ್ಛತೆಯಿಂದ ಮಾತ್ರ ರೂಪುಗೊಳ್ಳುತ್ತದೆ. ರಾಖಿಯ ದಾರವು ಪವಿತ್ರತೆ, ಶಾಂತಿ ಹಾಗೂ ಸಮೃದ್ಧಿಯನ್ನೂ ಹಾಗು ದಾರದ ಗಂಟು ದಿವ್ಯ ಉದ್ದೇಶದ ಪ್ರತಿ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ರಾಖಿಯ ಹೂ ನಮ್ಮ ಜೀವನದಲ್ಲಿ ನಾವು ಧಾರಣೆ ಮಾಡಬೇಕಾಗಿರುವ ದಿವ್ಯ ಗುಣಗಳ ಪ್ರತೀಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌  ಹಾಗು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಭಕ್ತರು  ಪಾಲ್ಗೊಂಡಿದ್ದರು.  ಆಶ್ರಮದ ಆಶ್ರಮದ ಸೇವಾಕರ್ತರು ಉಪಸ್ಥಿತರಿದ್ದರು.
    ಮಾಲಾ ಅಕ್ಕ ಪ್ರತಿಯೊಬ್ಬರಿಗೂ ರಾಖಿ ಕಟ್ಟುವ ಮೂಲಕ ಸಿಹಿ ವಿತರಿಸಿದರು. ಬ್ರಹ್ಮ ಭೋಜನದ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಕುಡಿದ ಅಮಲಿನಲ್ಲಿ ತನ್ನ ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪುತ್ರ


    ಭದ್ರಾವತಿ, ಆ. 30: ಮಗನೊಬ್ಬ ಕುಡಿದ ಅಮಲಿನಲ್ಲಿ ತನ್ನ ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ  ನಡೆದಿದೆ.
     ಸುಲೋಚನಮ್ಮ(57) ಕೊಲೆಯಾದ ದುರ್ದೈವಿ. ಮಗ ಸಂತೋಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
    ಟ್ರ್ಯಾಕ್ಟರ್‌ ಚಾಲಕನಾಗಿರುವ  ಸಂತೋಷ್ ಕುಡಿತದ ಚಟಕ್ಕೆ ಬಲಿಯಾಗಿದ್ದು, ಆಗಾಗ ತಾಯಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.
    ಇದರಿಂದ ಬೇಸತ್ತ ತಾಯಿ ಸುಲೋಚನಮ್ಮ ಮಗನೊಂದಿಗೆ ವಾಸವಿರದೆ  ಪ್ರತ್ಯೇಕವಾಗಿ ವಾಸವಾಗಿದ್ದರು.  ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ತಾಯಿ ಮನೆಗೆ ಬಂದಿದ್ದ ಸಂತೋಷ್ ಹಣ ಕೊಡುವಂತೆ ಪೀಡಿಸಿದ್ದಾನೆ. ಹಣ ನೀಡಲು ನಿರಾಕರಿಸಿದ ತಾಯಿಯೊಂದಿಗೆ ಜಗಳಕ್ಕಿಳಿದು ಅಲ್ಲಿಯೇ ಇದ್ದ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
      ಸೋಮವಾರ ಮಧ್ಯಾಹ್ನ ಪಕ್ಕದ ಮನೆಯ ಮಹಿಳೆಯೊಬ್ಬರು ಸುಲೋಚನಮ್ಮ ಅವರ ಮನೆಗೆ ಹೋದಾಗ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ. ಸುಲೋಚನಮ್ಮ ಅವರ ಮೊದಲ ಮಗ ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್  ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.