Thursday, August 31, 2023

ರಾಖಿಯನ್ನು ಕಟ್ಟಿಸಿಕೊಂಡ ಕೈಗಳು ಸದಾ ಶ್ರೇಷ್ಠ ಕಾರ್ಯಗಳಲ್ಲಿ ತೊಡಗಿರಲಿ : ಮಾಲಾ ಅಕ್ಕ

ಭದ್ರಾವತಿ ನ್ಯೂಟೌನ್‌ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರೋಟರಿ ಕ್ಲಬ್‌ ಸಹಯೋಗದೊಂದಿಗೆ ಪವಿತ್ರ ರಕ್ಷಾ ಬಂಧನ ಆಚರಿಸಲಾಯಿತು.
    ಭದ್ರಾವತಿ, ಆ. ೩೧ : ನಗರದ ನ್ಯೂಟೌನ್‌ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರೋಟರಿ ಕ್ಲಬ್‌ ಸಹಯೋಗದೊಂದಿಗೆ ಪವಿತ್ರ ರಕ್ಷಾ ಬಂಧನ ಆಚರಿಸಲಾಯಿತು.
    ವಿಶ್ವ ವಿದ್ಯಾಲಯದ ಮಾಲಾ ಅಕ್ಕ ಮಾತನಾಡಿ,  ರಾಖಿಯನ್ನು ಕೈಗೆ ಕಟ್ಟಲಾಗುತ್ತದೆ. ಕೈಗಳು ನಾವು ಮಾಡುವ ಕರ್ಮಗಳ
ಸೂಚಕವಾಗಿದೆ. ನಮ್ಮ ಕರ್ತವ್ಯಗಳನ್ನು ನಾವು ಹೆಚ್ಚಾಗಿ ಕೈಗಳಿಂದಲೇ ಮಾಡುತ್ತೇವೆ. ಕೆಲವು ಕಾರ್ಯಗಳನ್ನು ಮಾಡಲು ಸಾಧ್ಯವಾಗದಿದ್ದರೆ "ನಮ್ಮ ಕೈಗಳು ಬಂಧಿತವಾಗಿವೆ" ಎಂದು ಹೇಳುತ್ತೇವೆ. ನಮ್ಮಿಂದ ತಪ್ಪು ಕರ್ಮಗಳು ಆಗದಂತೆ ರಕ್ಷಾ ಬಂಧನವು ನಮ್ಮನ್ನು "ಕಟ್ಟಿಹಾಕುತ್ತದೆ" ಅಥವಾ ತಪ್ಪಿಸುತ್ತದೆ. ರಾಖಿಯನ್ನು ಕಟ್ಟಿಸಿಕೊಂಡ ಕೈಗಳು ಸದಾ ಶ್ರೇಷ್ಠ ಕಾರ್ಯಗಳಲ್ಲಿ ತೊಡಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
    ಕೈಗೆ ಕಟ್ಟಿದ ರಾಖಿಯ ದಾರವು ಭಗವಂತನ ಕೈಯಲ್ಲಿದೆ. ಇದುವೇ ʻʻಬಂಧನʼʼದ ಅರ್ಥವಾಗಿದೆ. ನಮ್ಮ ಜೀವನದ ಸೂತ್ರವು ಭಗವಂತನ ಕೈಯಲ್ಲಿ ಸುರಕ್ಷಿತವಾಗಿದೆ. ಭಗವಂತನೊಬ್ಬನೇ ನಮಗೆ ರಕ್ಷಕನು, ಇತರರು ಯಾರೂ ಅಲ್ಲ. ಕೆಟ್ಟ ಕಾರ್ಯಗಳು ನಮ್ಮಿಂದ ಆಗದಿರುವುದು  ಇದುವೇ ರಕ್ಷಣೆಯ ಅರ್ಥ, ಜ್ಞಾನ ಮತ್ತು ಅನುಭೂತಿಯಿಂದ ಮಾತ್ರ ಇದು ಸಾಧ್ಯ. ಈ ಜಗತ್ತಿನಲ್ಲಿ ಸರ್ವರಿಗೂ ರಕ್ಷಣೆಯ ಅವಶ್ಯಕತೆ ಇದೆ. ನಾವು ಒಬ್ಬ ಭಗವಂತನ ಛತ್ರ ಛಾಯೆಯಲ್ಲಿ ಇರುವುದೇ ನಿಜವಾದ ರಕ್ಷಣೆಯಾಗಿದೆ ಎಂದರು.
    ಸಹೋದರ - ಸಹೋದರಿ ಸಂಬಂಧವು ದಿವ್ಯತೆಯನ್ನು ಸೂಚಿಸುತ್ತದೆ. ನಮ್ಮ ಎಲ್ಲ ಸಂಬಂಧಗಳಲ್ಲಿ ಸ್ಥಿತಿಯನ್ನು ತರಿಸುತ್ತದೆ. ಈ ದಿವ್ಯ ಸಂಬಂಧವು ಸತ್ಯ ಪ್ರೇಮ, ನಂಬಿಕೆ, ವಿಶ್ವಾಸ, ನಿಸ್ವಾರ್ಥತೆ ಮತ್ತು ಸ್ವಚ್ಛತೆಯಿಂದ ಮಾತ್ರ ರೂಪುಗೊಳ್ಳುತ್ತದೆ. ರಾಖಿಯ ದಾರವು ಪವಿತ್ರತೆ, ಶಾಂತಿ ಹಾಗೂ ಸಮೃದ್ಧಿಯನ್ನೂ ಹಾಗು ದಾರದ ಗಂಟು ದಿವ್ಯ ಉದ್ದೇಶದ ಪ್ರತಿ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ರಾಖಿಯ ಹೂ ನಮ್ಮ ಜೀವನದಲ್ಲಿ ನಾವು ಧಾರಣೆ ಮಾಡಬೇಕಾಗಿರುವ ದಿವ್ಯ ಗುಣಗಳ ಪ್ರತೀಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌  ಹಾಗು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಭಕ್ತರು  ಪಾಲ್ಗೊಂಡಿದ್ದರು.  ಆಶ್ರಮದ ಆಶ್ರಮದ ಸೇವಾಕರ್ತರು ಉಪಸ್ಥಿತರಿದ್ದರು.
    ಮಾಲಾ ಅಕ್ಕ ಪ್ರತಿಯೊಬ್ಬರಿಗೂ ರಾಖಿ ಕಟ್ಟುವ ಮೂಲಕ ಸಿಹಿ ವಿತರಿಸಿದರು. ಬ್ರಹ್ಮ ಭೋಜನದ ವ್ಯವಸ್ಥೆ ಕೈಗೊಳ್ಳಲಾಗಿತ್ತು.

No comments:

Post a Comment