Saturday, December 7, 2024

ಸಾಮಾಜಿಕ ಸಾಮರಸ್ಯ ದಿನ : ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವ ಸಮರ್ಪಣೆ

ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ಫೋರಂ ವತಿಯಿಂದ ಭದ್ರಾವತಿ ತಾಲೂಕಿನ ಕಾಗೆಕೋಡಮಗ್ಗೆ ಗ್ರಾಮ ಪಂಚಾಯಿತಿ ಜಯನಗರ ಗ್ರಾಮದಲ್ಲಿ ಸಾಮಾಜಿಕ ಸಾಮರಸ್ಯ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. 
    ಭದ್ರಾವತಿ: ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ಫೋರಂ ವತಿಯಿಂದ ತಾಲೂಕಿನ ಕಾಗೆಕೋಡಮಗ್ಗೆ ಗ್ರಾಮ ಪಂಚಾಯಿತಿ ಜಯನಗರ ಗ್ರಾಮದಲ್ಲಿ ಸಾಮಾಜಿಕ ಸಾಮರಸ್ಯ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. 
    ಪೋರಂ ಸಂಚಾಲಕ ಕೆ.ಎನ್ ಶ್ರೀಹರ್ಷ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅವರು ಮಾತನಾಡಿ, ಸಂವಿಧಾನದ ಮಹತ್ವವನ್ನು ತಿಳಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನುಡಿನಮನಗಳನ್ನು ಅರ್ಪಿಸಿದರು. ಪ್ರಧಾನಿ ನರೇಂದ್ರ  ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದ ಮಹತ್ವ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ, ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಲು ನಾವೆಲ್ಲರೂ ಶ್ರಮಿಸೋಣ ಎಂಬುದಾಗಿ ಮನವಿ ಮಾಡಿದರು.
ಎಸ್.ಸಿ ಮೋರ್ಚಾ ಅಧ್ಯಕ್ಷ  ಹನುಮಂತ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಓಬಿಸಿ ಮೋರ್ಚಾ ಅಧ್ಯಕ್ಷ ರಾಜಶೇಖರ್ ಉಪ್ಪಾರ್ ಸಂವಿಧಾನ ಪ್ರತಿಜ್ಞಾ ವಿಧಿ ಭೋದಿಸಿದರು.
    ಗ್ರಾಮದ ಪ್ರಮುಖರಾದ ಚಂದ್ರಪ್ಪ, ನಂಜೇಗೌಡ್ರು, ಅಶೋಕ, ಪಾಪಣ್ಣ, ಶಂಕ್ರನಾಯ್ಕ, ಸ್ವಾಮಿನಾಯ್ಕ, ರೆಡ್ಡಿನಾಯ್ಕ,  ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ  ಮೊಸರಳ್ಳಿ ಅಣ್ಣಪ್ಪ, ರವಿಕುಮಾರ್, ಶಿವಮೂರ್ತಿ, ನಟರಾಜ್, ಶಕುಂತಲಾ, ಲೋಲಾಕ್ಷಿ, ರಾಜಗುರು, ಉಮಾದೇವಿ, ಜಯಲಕ್ಷ್ಮಿ, ಕವಿತಾ ರಾವ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. 

ನಗರಸಭೆ ಮಾಜಿ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ

    ಭದ್ರಾವತಿ: ವಾರ್ಡ್ ನಂ. ೨೯ರ ನಗರಸಭೆ ಮಾಜಿ ಸದಸ್ಯರೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿರುವುದಾಗಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ನಗರಸಭೆ ಮಾಜಿ ಸದಸ್ಯ ೪೬ ವರ್ಷದ ಅನಿಲ್ ಕುಮಾರ್ ಹೊಸ ಸಿದ್ದಾಪುರ ಗ್ರಾಮದವರಾಗಿದ್ದು, ಅವರ ಮನೆಯ ಪಕ್ಕದ ನಿವಾಸಿಯಾಗಿರುವ ಆನಿ ಯಾನೆ ಅನಿಲ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
    ಹಲ್ಲೆ ನಡೆಯುವ ಹಿಂದಿನ ದಿನ ರಾತ್ರಿ ಅನಿ ಮದ್ಯಪಾನ ಮಾಡಿಕೊಂಡು ರಸ್ತೆಯಲ್ಲಿ ಇದ್ದಂತಹ ಬೀದಿ ದೀಪಗಳ ವೈಯರ್ ಗಳನ್ನು ಕಿತ್ತು ಹಾಕಿ ದೀಪಗಳನ್ನು ಒಡೆದು ಹಾಕಿದ್ದನು. ಅಲ್ಲದೆ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ರಸ್ತೆಯಲ್ಲಿ ಕೂಗಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಯಾಕೆ ಈ ರೀತಿ ಪದೇ ಪದೇ ಏರಿಯಾದಲ್ಲಿ ಗಲಾಟೆ ಮಾಡುತ್ತೀಯಾ ಎಂದು ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದರು.
    ಇದಾದ ಮರುದಿನ ಬೆಳಿಗ್ಗೆ ೯.೪೦ರ ಸಮಯದಲ್ಲಿ ತೋಟಕ್ಕೆ ಹೋಗಲು ಬೈಕ್ ತೆಗೆಯುತ್ತಿರುವಾಗ ಅನಿ ಅಲಿಯಾಸ್ ಅನಿಲ್ ಈತನು ಏಕಾಏಕಿ ಬಂದವನೇ ನಿನ್ನೆ ನನಗೆ ಬುದ್ಧಿ ಹೇಳಲು ಬರುತ್ತೀಯಾ ಎಂದು ಆರೋಪಿಸಿ ಏಕಾಏಕಿ ಮಚ್ಚಿನಿಂದ ಅನಿಲ್ ಕುಮಾರ್ ಅವರ ತಲೆಯ ಎಡಭಾಗಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ.
    ತಕ್ಷಣವೇ ಸ್ಥಳೀಯರು ಗಲಾಟೆ ಬಿಡಿಸಿರುತ್ತಾರೆ, ನಂತರ ಅನಿಲ್ ಕುಮಾರ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.
 

ವಿಜೃಂಭಣೆಯಿಂದ ಜರುಗಿದ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ ವಿಜೃಂಭಣೆಯಿಂದ ಜರಗಿತು. 
    ಭದ್ರಾವತಿ: ಪ್ರತಿ ವರ್ಷದಂತೆ ಈ ಬಾರಿ ಸಹ ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ ವಿಜೃಂಭಣೆಯಿಂದ ಜರಗಿತು. 
    ಉತ್ಸವದ ಅಂಗವಾಗಿ ಕೃಷ್ಣಮೂರ್ತಿ ಸೋಮಯಾಜಿ ನೇತೃತ್ವದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಸುಬ್ರಮಣ್ಯ ಮೂಲಮಂತ್ರದಿಂದ ಹೋಮ ಹಾಗೂ ಶ್ರೀ ರಾಮೇಶ್ವರ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಿಂದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದವರೆಗೆ ನಾದಸ್ವರ ವಾದ್ಯಗಳೊಂದಿಗೆ ರಾಜಬೀದಿ ಉತ್ಸವ ಮೆರವಣಿಗೆ ನಡೆಯಿತು. ನಂತರ ಪೂರ್ಣಾವತಿ, ಬ್ರಹ್ಮಚಾರಿಗಳ ಪೂಜೆ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
    ದೇವಸ್ಥಾನ ಆಡಳಿತ ಮಂಡಳಿಯರು ಸೇರಿದಂತೆ ಹಳೇನಗರ, ಹೊಸಮನೆ, ಜನ್ನಾಪುರ, ನ್ಯೂಟೌನ್ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಭಕ್ತರು ಪಾಲ್ಗೊಂಡಿದ್ದರು.  
 

Friday, December 6, 2024

ಡಿ.೭ರಂದು ಶಾಲಾ ವಾರ್ಷಿಕೋತ್ಸವ ಸಂಭ್ರಮ




    ಭದ್ರಾವತಿ: ನಗರದ ನ್ಯೂಟೌನ್  ಈಶ್ವರಮ್ಮ ಪ್ರೌಢಶಾಲೆ ಮತ್ತು ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ವಾರ್ಷಿಕೋತ್ಸವ ಸಂಭ್ರಮ ಡಿ.೭ರಂದು ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. 
    ಸಂಜೆ ೬ ಗಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯಾದೇವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ರಾಜ್ಯ ಸಂಯೋಜಕ ಡಾ. ಡಿ. ಪ್ರಭಾಕರ ಬೀರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. 
    ಪ್ರಮುಖರಾದ ಸೌಮ್ಯ ರೂಪ ಕೆ., ಎಂ. ದೇವೇಂದ್ರಪ್ಪ, ಶಾಮರಾಯ ಆಚಾರ್, ಟಿ.ವಿ ಸುಜಾತ ಮತ್ತು ಜಿ.ಪಿ ಪರಮೇಶ್ವರಪ್ಪ ಉಪಸ್ಥಿತರಿರುವರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶಾಲಾ ಮಕ್ಕಳು, ಪೋಷಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಾರ್ಷಿಕೋತ್ಸವ ಸಂಭ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರಸಭೆಗೆ ಮನವಿ

 

ಭದ್ರಾವತಿ: ಜನ್ನಾಪುರ ಮತ್ತು ಹುತ್ತಾ ಕಾಲೋನಿ ವ್ಯಾಪ್ತಿಯಲ್ಲಿನ ನಾಗರಿಕರ ಬೇಡಿಕೆಗಳನ್ನು ಈಡೇರಿಸಿ ಕೊಡುವಂತೆ ಒತ್ತಾಯಿಸಿ ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದ ವತಿಯಿಂದ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. 
    ಯು.ಜಿ.ಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಟಾಯ್ಲೆಟ್ ಪಿಟ್‌ಗಳು (ಶೌಚಾಲಯ ಗುಂಡಿಗಳು) ತುಂಬಿ ತುಳುಕುತ್ತಿವೆ. ತಕ್ಷಣವೇ ಸ್ಥಗಿತಗೊಂಡಿರುವ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸುವುದು. ಮೀಟರ್ ಅಳವಡಿಕೆಯಿಂದ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಸರಿಯಾಗಿ ಬಾರದೆ ತೊಂದರೆಯುಂಟಾಗಿದೆ ತಕ್ಷಣ ಸರಿಪಡಿಸುವುದು. ಜನ್ನಾಪುರ ಕೆರೆ ಶುದ್ದೀಕರಣ ಕಾರ್ಯ ತ್ವರಿತವಾಗಿ ಕೈಗೊಳ್ಳುವುದು. ಈ ವ್ಯಾಪ್ತಿಯಲ್ಲಿ ನಿರಂತರವಾಗಿ ಬೀದಿ ನಾಯಿಗಳ ಹಾವಳಿ, ಸೊಳ್ಳೆಕಾಟ, ಬಿಡಾಡಿ ದನಗಳ ಕಾಟ ಹೆಚ್ಚಾಗಿವೆ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. 
    ಕಂದಾಯ ಪಾವತಿಸಲು ಜನ್ನಾಪುರ ಎನ್‌ಟಿಬಿ ಕಛೇರಿಯಲ್ಲಿ ಕಂಪ್ಯೂಟರ್ ವಿಭಾಗ ತೆರೆಯುವುದು. ಕಸ ತೆಗೆಯುವಾಗ ವಯೋವೃದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಆದ್ಯತೆ ನೀಡಿ ತಂದಿಟ್ಟ ಕಸವನ್ನು ತೆಗೆಯಲು ಸಹಕರಿಸುವುದು ಹಾಗು ಕಳಪೆ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಲಾಗಿದೆ. 

Thursday, December 5, 2024

ತುರ್ತು ಚಿಕಿತ್ಸೆಗೆ ಆಗಮಿಸಿದ ಯುವಕನಿಗೆ ಚಿಕಿತ್ಸೆ ನೀಡದೆ ಕರ್ತವ್ಯ ಲೋಪ

ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಶುಶ್ರೂಷಕಿ ಅಧಿಕಾರಿ ವಿರುದ್ಧ ದೂರು 

ತುರ್ತು ಚಿಕಿತ್ಸೆಗಾಗಿ ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಯುವಕನಿಗೆ ಸೂಕ್ತ ಚಿಕಿತ್ಸೆ ನೀಡದೆ ಕರ್ತವ್ಯ ಲೋಪವೆಸಗಿರುವ ಘಟನೆ ಗುರುವಾರ ಸಂಜೆ ನಡೆದಿದೆ. 
    ಭದ್ರಾವತಿ: ತುರ್ತು ಚಿಕಿತ್ಸೆಗಾಗಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಯುವಕನಿಗೆ ಸೂಕ್ತ ಚಿಕಿತ್ಸೆ ನೀಡದೆ ಕರ್ತವ್ಯ ಲೋಪವೆಸಗಿರುವ ಘಟನೆ ಗುರುವಾರ ಸಂಜೆ ನಡೆದಿದೆ. 
    ಅನಿಲ ಎಂಬ ಯುವಕನಿಗೆ ಎಂಎಲ್‌ಸಿ ಪ್ರಕರಣದಡಿಯಲ್ಲಿ ಚಿಕಿತ್ಸೆಗಾಗಿ ಸಂಜೆ ೪ ಗಂಟೆ ಸಮಯದಲ್ಲಿ ಆಸ್ಪತ್ರೆಗೆ ಕರೆ ತಂದಾಗ ಸೂಕ್ತ ಚಿಕಿತ್ಸೆಯನ್ನೂ ನೀಡದೆ, ವೈದ್ಯರಿಗೂ ತಿಳಿಸದೆ ಉದಾಸೀನವಾಗಿ ವರ್ತಿಸುವ ಜೊತೆಗೆ ಮನೆಗೆ ತೆರಳುವಂತೆ ಏರು ಧ್ವನಿಯಲ್ಲಿ ಮಾತನಾಡಿ ಕರ್ತವ್ಯ ಲೋಪವೆಸಗಿದ್ದಾರೆಂದು ಆರೋಪಿಸಲಾಗಿದೆ. 
    ಘಟನೆ ಸಂಬಂಧ ಕುಟುಂಬಸ್ಥರು ಸಮಾಜ ಸೇವಕ, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣರವರಿಗೆ ಮಾಹಿತಿ ನೀಡಿದ್ದು, ತಕ್ಷಣ ಆಸ್ಪತ್ರೆಗೆ ಆಗಮಿಸಿ ವಿಚಾರಿಸಿದಾಗ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. 
    ಸುಮಾರು ೨ ಗಂಟೆ ಸಮಯ ಚಿಕಿತ್ಸೆ ಇಲ್ಲದೆ ಯುವಕ ನರಳಾಡುವಂತೆ ಮಾಡಿದ್ದು, ಈ ಹಿನ್ನಲೆಯಲ್ಲಿ ಕರ್ತವ್ಯ ಲೋಪವೆಸಗಿ ಉದಾಸೀನವಾಗಿ ವರ್ತಿಸಿರುವ ಆಸ್ಪತ್ರೆಯ ಶುಶ್ರೂಷಕಿ ಅಧಿಕಾರಿಯಾಗಿರುವ ಸುರಾಜ್‌ಮತಿ ಎಲಿಜಬೆತ್ ಸ್ಯಾಂಡ್ರ ಪಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಅಲ್ಲದೆ ಈ ಕುರಿತು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪರವರಿಗೆ ದೂರು ಸಲ್ಲಿಸಲಾಗಿದೆ.
    ಕಾರಣ ಕೇಳಿ ನೋಟಿಸ್ : 
ತುರ್ತು ಚಿಕಿತ್ಸೆಗೆ ಆಗಮಿಸಿದ ಯುವಕನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ಹಾಗು ಉದಾಸೀನವಾಗಿ ವರ್ತಿಸಿ ಕರ್ತವ್ಯಲೋಪವೆಗಿರುವ ಸಂಬಂಧ ದೂರು ಬಂದಿದ್ದು, ಈ ಹಿನ್ನಲೆಯಲ್ಲಿ ಉತ್ತರಿಸುವಂತೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಸುರಾಜ್‌ಮತಿ ಎಲಿಜಬೆತ್ ಸ್ಯಾಂಡ್ರ ಪಾರವರಿಗೆ ಸೂಚಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ರೀತಿ ಪ್ರಕರಣಗಳು ಮರುಕಳುಹಿಸಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದ್ದಾರೆ. 

ಕಾಳೇಗೌಡರು ನಿಧನ

ಕಾಳೇಗೌಡರು 
    ಭದ್ರಾವತಿ : ನಗರದ ಅಪ್ಪರ್ ಹುತ್ತಾ ನಿವಾಸಿ, ತಾಲೂಕು ಒಕ್ಕಲಿಗರ ಸಂಘದ ಮಹಾಪೋಷಕರಾದ ಕಾಳೇಗೌಡರು(೯೪) ವಯೋಸಹಜವಾಗಿ ಗುರುವಾರ ನಿಧನ ಹೊಂದಿದರು. 
    ಇವರಿಗೆ ಪುತ್ರ ಹಾಗು ೮ ಜನ ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಲೋಯರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದ್ದು, ಕಾಳೇಗೌಡರು ಬೊಂಬು ಗುತ್ತಿಗೆದಾರರಾಗಿ ಜನಪ್ರಿಯರಾಗಿದ್ದರು. ತಾಲೂಕು ಒಕ್ಕಲಿಗರ ಸಂಘವನ್ನು ಮುಂಚೂಣಿಗೆ ತರುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಇವರು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಕುಟುಂಬ ಸಂಬಂಧಿಯಾಗಿದ್ದಾರೆ. 
    ಇವರ ನಿಧನಕ್ಕೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಮುಖಂಡರಾದ ಆರ್. ಕರುಣಾಮೂರ್ತಿ, ಟಿ. ಚಂದ್ರೇಗೌಡ, ಕರಿಯಪ್ಪ, ಸಿ. ರಾಮಕೃಷ್ಣ, ಮಧುಸೂಧನ್ ಹಾಗು ತಾಲೂಕು ಒಕ್ಕಲಿಗರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.