Monday, February 17, 2025

ಬಂಜಾರ ಸಮಾಜಕ್ಕೂ ಸ್ವಂತ ಕಟ್ಟಡ ಹೊಂದುವ ಆಶಯ : ಬಿ.ಕೆ ಶಿವಕುಮಾರ್

ಭದ್ರಾವತಿ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ತಾಲೂಕು ಬಂಜಾರ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸಂತ ಸೇವಾಲಾಲ್ ಜಯಂತಿ ಆಯೋಜಿಸಲಾಗಿತ್ತು.  
    ಭದ್ರಾವತಿ : ಕ್ಷೇತ್ರದಲ್ಲಿ ಬಂಜಾರ ಸಮಾಜ ತಮ್ಮದೇ ಆದ ಸ್ವಂತ ಕಟ್ಟಡ ಹೊಂದುವ ಮೂಲಕ ಇತರೆ ಸಮಾಜದವರೊಂದಿಗೆ ಸರಿ ಸಮಾನವಾಗಿ ಮುನ್ನಡೆಯಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಹೇಳಿದರು.  
     ಶನಿವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ತಾಲೂಕು ಬಂಜಾರ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
     ಪ್ರತಿಯೊಬ್ಬರಿಗೂ ತನ್ನದೇ ಆದ ಸೂರು ಇರಬೇಕೆಂಬ ಮಹಾದಾಸೆ ಇರುತ್ತದೆ. ಅದೇ ರೀತಿ ಬಂಜಾರ ಸಮಾಜಕ್ಕೂ ಸಹ ಒಂದು ಕಟ್ಟಡದ ಅಗತ್ಯವಿದೆ. ಸಮಾಜಕ್ಕೆ ನಿವೇಶನ ಕಲ್ಪಿಸಿಕೊಡುವಲ್ಲಿ ಶಾಸಕರ ಪ್ರಯತ್ನ ಹೆಚ್ಚಿನದ್ದಾಗಿದ್ದು, ಅಲ್ಲದೆ ಸ್ವಂತ ಕಟ್ಟಡ ಹೊಂದಲು ಸರ್ಕಾರದಿಂದ ೨ ಕೋ. ರು. ಅನುದಾನ ಸಹ ಬಿಡುಗಡೆಯಾಗಲಿದೆ. ಮುಂದಿನ ದಿನಗಳಲ್ಲಿ ಸಮಾಜದವರು ಇನ್ನೂ ಹೆಚ್ಚಿನ ರೀತಿಯಲ್ಲಿ ಒಗ್ಗಟ್ಟಾಗಿ ಕಟ್ಟಡ ನಿರ್ಮಿಸಲು ಮುಂದಾಗಬೇಕೆಂದರು. 
    ಯಾವುದೇ ಕೆಲಸ ಅಸಾಧ್ಯವಲ್ಲ. ಗುರಿ ಮುಟ್ಟುವ ವಿಶ್ವಾಸ ಪ್ರತಿಯೊಬ್ಬರಲ್ಲೂ ಇರಬೇಕು. ದೊಡ್ಡ ಸಮಾಜವಿರಲಿ, ಸಣ್ಣ ಸಮಾಜವಿರಲಿ ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಸಮಾಜಕ್ಕೆ ಸ್ವಂತ ಕಟ್ಟಡವಿದ್ದಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಸಮಾಜದ ಪ್ರತಿಯೊಬ್ಬರೂ ಸಹ ಅದರ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು. 
     ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಪ್ರೇಮ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಬಾಯಿ, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಮುಖಂಡರಾದ  ಜುಂಜ್ಯಾನಾಯ್ಕ, ಕೋಕಿಲ ಬಾಯಿ, ಟಿ. ವೆಂಕಟೇಶ್, ದಶರಥಗಿರಿ, ಉಪತಹಸೀಲ್ದಾರ್ ಮಂಜಾನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ಶಿಕ್ಷಣ ನಿಯಮ ಉಲ್ಲಂಘಿಸಿ ಕೆಲಸಕ್ಕೆ ನೇಮಿಸಿಕೊಂಡು ವಂಚನೆ

ಬಿಇಓ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ : ಕ್ರಮ ಕೈಗೊಳ್ಳುವ ಭರವಸೆ  

ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿ ಕೆಲಸಕ್ಕೆ ನೇಮಿಸಿಕೊಂಡಿರುವವರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಭದ್ರಾವತಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪರಿಗೆ ಮನವಿ ಸಲ್ಲಿಸಲಾಯಿತು.  
       ಭದ್ರಾವತಿ : ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿ ಕೆಲಸಕ್ಕೆ ನೇಮಿಸಿಕೊಂಡಿರುವವರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ನೆಪಮಾತ್ರಕ್ಕೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡು ನಂತರ ಅವರನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿರುವ ಜೊತೆಗೆ ಅವರಿಗೆ ನ್ಯಾಯ ಬದ್ಧವಾಗಿ ಸಿಗಬೇಕಾದ ಸೌಲಭ್ಯದಿಂದ ವಂಚಿಸಲಾಗುತ್ತಿದೆ ಎಂದು ಆರೋಪಿಸಲಾಯಿತು. 
    ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಸದಸ್ಯರಾದ ವಿನ್ನಿ ಡಿಸೋಜಾ ಕೋಂ ಲಿಗೋರಿಯಾ ಎಂಬುವರು ಕಳೆದ ೧೭ ವರ್ಷಗಳಿಂದ ಸೆಂಟ್ ಚಾರ್ಲ್ಸ್ ಹೈಸ್ಕೂಲ್ ಸಮ್ಮುಖದಲ್ಲಿರುವ ಕರುಣ ಸೇವಾ ಕೇಂದ್ರ ಮತ್ತು ಕರುಣ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಇವರ ಪಿ.ಎಫ್ ಹಣ ಹೈಸ್ಕೂಲ್ ಮತ್ತು ಸೊಸೈಟಿ ಆಫ್ ದ ಸಿಸ್ಟರ್ ಆಫ್ ಎಸ್.ಟಿ ಚಾರ್ಲ್ಸ್ ಹೆಸರಿನಲ್ಲಿ ಶಿವಮೊಗ್ಗದ ಪಿ.ಎಫ್ ಕಛೇರಿಯಲ್ಲಿರುವ ಖಾತೆಗೆ ಜಮಾ ಮಾಡಲಾಗಿದೆ. ಅಲ್ಲದೆ ಇವರ ವೇತನ ಪ್ರತಿ ತಿಂಗಳು ಇವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಕಳೆದ ೫ ವರ್ಷಗಳಿಂದ ಸಿಸ್ಟರ್ ಹೆಲೆನ್ ಮೊರಾಸ್‌ರವರು ಇವರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದು, ಮೂಡುಬಿದರೆಯಲ್ಲಿರುವ ಇವರ ಸ್ವಂತ ಮನೆಯಲ್ಲಿ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದು, ಇದಕ್ಕೆ ಒಪ್ಪದ ಹಿನ್ನಲೆಯಲ್ಲಿ ಇವರ ವಿರುದ್ಧ ಸ್ವಸಹಾಯ ಸಂಘಗಳ ಸದಸ್ಯರಿಗೆ ಸುಳ್ಳು ಸುದ್ದಿಗಳನ್ನು ಹರಡುವ ಜೊತೆಗೆ ೧೦ ವರ್ಷಗಳವರೆಗೆ ನಿರಂತರವಾಗಿ ಇವರ ಪಿ.ಎಫ್ ಹಣ ಪಾವತಿಸಿದರೆ ೬೦ ವರ್ಷಗಳ ನಂತರ ಪ್ರತಿ ತಿಂಗಳು ೨ ರಿಂದ ೩ ಸಾವಿರ ರು. ಪಿಂಚಣಿ ಬರುತ್ತದೆ ಎಂಬ ಸಂಕಟದಿಂದ ಇವರ ಜೊತೆಗೆ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೧೦ ರಿಂದ ೧೨ ಜನರನ್ನು ಸಹ ಅರ್ಧದಲ್ಲಿಯೇ ಕೆಲಸದಿಂದ ತೆಗೆದು ಹಾಕಿದ್ದಾರೆಂದು ದೂರಲಾಯಿತು.  
    ಈ ನಡುವೆ ವಿನ್ನಿ ಡಿಸೋಜಾರವರು ಸ್ಕೂಲ್ ಅಥವಾ ಸೇವಾ ಕೇಂದ್ರ ಅಥವಾ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ಯಾವುದೇ ಕೆಲಸ ನಿರ್ವಹಿಸಿರುವುದಿಲ್ಲ. ಈ ಹಿನ್ನಲೆಯಲ್ಲಿ ಇವರಿಗೆ ಯಾವುದೇ ವೇತನವಾಗಲಿ, ಪಿ.ಎಫ್ ಹಣವಾಗಲಿ ಪಾವತಿಸಿರುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೆಂಟ್ ಚಾರ್ಲ್ಸ್ ಹೈಸ್ಕೂಲ್ ಸುಳ್ಳು ಮಾಹಿತಿ ನೀಡಿರುವುದನ್ನು ಸಮಿತಿ ವತಿಯಿಂದ ಖಂಡಿಸಲಾಯಿತು. 
    ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪಿ.ಎಫ್ ಕಛೇರಿಯಿಂದ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 
    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು. ವಿನ್ನಿ ಡಿಸೋಜಾ, ಮೇರಿಯಮ್ಮ ಮತ್ತು ಗ್ರೇಸಿ ಹಾಗು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಸೇರಿದಂತೆ ಇನ್ನಿತರರು ಪ್ರಾಲ್ಗೊಂಡಿದ್ದರು. 

Sunday, February 16, 2025

ಪ್ಯಾರಾ ಅಥ್ಲೆಟಿಕ್ಸ್ : ರಾಷ್ಟ್ರಮಟ್ಟಕ್ಕೆ ಎಂ.ಜಿ ಅಭಿಜಿತ್ ಆಯ್ಕೆ

ಎಂ.ಜಿ ಅಭಿಜಿತ್  
    ಭದ್ರಾವತಿ: ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನ ಎಂ.ಜಿ ಅಭಿಜಿತ್ ೨೩ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. 
    ಚೆನ್ನೈ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಫೆ.೧೭ ರಿಂದ ೨೦ರವರೆಗೆ ಕ್ರೀಡಾಕೂಟ ನಡೆಯಲಿದ್ದು, ಅಭಿಜಿತ್ ೧೦೦ ಮೀಟರ್ ಹಾಗು ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 
    ಅಭಿಜಿತ್ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಇವರಿಗೆ ಸಿದ್ದಾರ್ಥ ಅಂಧರ ಕೇಂದ್ರ  ಅಧ್ಯಕ್ಷ ಶಿವಬಸಪ್ಪ, ಆಡಳಿತಾಧಿಕಾರಿ ಶಾರದ ಶಿವಬಸಪ್ಪ ಮತ್ತು ಕಾರ್ಯದರ್ಶಿ ಎಂ. ಗುರುಮೂರ್ತಿ ಅಭಿನಂದಿಸಿದ್ದಾರೆ.

ಶ್ರೀ ಕೃಷ್ಣ ದೇವಸ್ಥಾನದ ಮೊದಲ ವರ್ಷದ ವಾರ್ಷಿಕೋತ್ಸವ


ಭದ್ರಾವತಿ ತಾಲೂಕಿನ ಗೊಲ್ಲ-ಯಾದವ ಸಂಘದ ವತಿಯಿಂದ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ರಸ್ತೆ, ಮೆಸ್ ಸರ್ಕಲ್ ಶ್ರೀ ಕೃಷ್ಣ ದೇವಸ್ಥಾನದ ಮೊದಲ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆ ಜರುಗಿದವು. ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. 
    ಭದ್ರಾವತಿ : ತಾಲೂಕಿನ ಗೊಲ್ಲ-ಯಾದವ ಸಂಘದ ವತಿಯಿಂದ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ರಸ್ತೆ, ಮೆಸ್ ಸರ್ಕಲ್ ಶ್ರೀ ಕೃಷ್ಣ ದೇವಸ್ಥಾನದ ಮೊದಲ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆ ಜರುಗಿದವು. 
    ದೇವತಾ ಪ್ರಾರ್ಥನೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಮಹಾ ಸಂಕಲ್ಪ, ಸ್ವಸ್ತಿ ಪುಣ್ಯಾಹವಾಚನ, ಪಂಚಗವ್ಯ ಪ್ರೋಕ್ಷಣೆ, ಆಚಾರ್ಯಾದಿ ಋತ್ವಿಗ್ವರಣ, ಕಳಶ ಪೂಜೆ, ಗಣಪತಿ ಮಂಡಲ ಆರಾಧನೆ, ನವಗ್ರಹ ಪೂಜೆ, ಕಲಾತತ್ವ ಕಳಶ ಪೂಜೆ, ಮಂಡಲ ಪೂಜೆ, ಅಗ್ನಿ ಪ್ರತಿಷ್ಠೆ, ಗಣಪತಿ ಹೋಮ, ನವಗ್ರಹ ಹೋಮ, ಪರಿವಾರ ದೇವತಾ ಹೋಮ, ಕಲಾತತ್ವ ಹೋಮ, ಪೂರ್ಣಾಹುತಿ, ಕಳಶಾಭಿಷೇಕ, ಅಲಂಕಾರ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಹಾಗು ರಾಜಬೀದಿ ಉತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಪ್ರಧಾನ ಅರ್ಚಕ ಗುರುಮೂರ್ತಿಯವರ ಸಾರಥ್ಯದಲ್ಲಿ ನೆರವೇರಿದವು. 
    ಗೊಲ್ಲ-ಯಾದವ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಗೊಲ್ಲ-ಯಾದವ ಸಮಾಜದವರು ಮತ್ತು ಗಣ್ಯರು, ದಾನಿಗಳು, ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 

ಕುಡಿಯುವ ನೀರಿನ ಯೋಜನೆಯ ಗುದ್ದಲಿಪೂಜೆ, ಉದ್ಘಾಟನೆಗೆ ಕ್ರಮ ಕೈಗೊಳ್ಳಿ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೂಚನೆ 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಹೇಮಂತ್ 
    ಭದ್ರಾವತಿ : ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಷ್ಟಾಚಾರ ಪಾಲನೆ(ಪ್ರೋಟೋ ಕಾಲ್) ಪ್ರಕಾರ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಗುದ್ದಲಿಪೂಜೆ ಹಾಗು ಉದ್ಘಾಟನೆ ಕಾರ್ಯ ನೆರವೇರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಹೇಮಂತ್‌ರವರು ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರವರಿಗೆ ಸೂಚಿಸಿದ್ದಾರೆ. 
    ಕಳೆದ ಸುಮಾರು ೧ ತಿಂಗಳ ಹಿಂದೆ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್‌ರವರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ತಾಲೂಕಿನ ಗ್ರಾಮಾಂತರ ವ್ಯಾಪ್ತಿಯ ಉಂಬ್ಳೆಬೈಲು ಹಾಗು ಕಲ್ಲಹಳ್ಳಿ ಗ್ರಾ ಪಂಚಾಯಿತಿ ಮತ್ತು ೨೮ ಹಳ್ಳಿಗಳಲ್ಲಿ ಹಾಗು ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹಾಗು ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತು ೨೩ ಹಳ್ಳಿಗಳಲ್ಲಿ, ಆನವೇರಿ ಗ್ರಾಮ ಪಂಚಾಯಿತಿ ಮತ್ತು ೩೭ ಹಳ್ಳಿಗಳಲ್ಲಿ ಕುಂಸಿ ಮತ್ತು ಗಾಜನೂರು ಗ್ರಾಮ ಪಂಚಾಯಿತಿ ಮತ್ತು ೮೯ ಹಳ್ಳಿಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿರುವುದರಿಂದ ಶಿಷ್ಟಾಚಾರ ಪಾಲನೆ ಪ್ರಕಾರ ಗುದ್ದಲಿ ಪೂಜೆ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಹಾಗು ತಾಲೂಕಿನ ಅಂತರಗಂಗೆ ಮತ್ತು ೨೧ ಹಳ್ಳಿಗಳಿಗೆ, ದೊಡ್ಡೇರಿ ಮತ್ತು ಇತರೆ ೧೬ ಹಳ್ಳಿಗಳಲ್ಲಿ ಹಾಗು ತಡಸ ಮತ್ತು ೪ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ಯೋಜನೆ ಪೂರ್ಣಗೊಂಡಿರುವುದರಿಂದ ಶಿಷ್ಟಾಚಾರ ಪಾಲನೆ ಪ್ರಕಾರ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿತ್ತು. 
    ಇದಕ್ಕೆ ಸ್ಪಂದಿಸಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. 

Saturday, February 15, 2025

ನಾನು ಮಹಿಳಾ ಅಧಿಕಾರಿ ನೋಡೇ ಇಲ್ಲ, ಅವಾಚ್ಯ ಶಬ್ದಗಳಿಂದ ನಿಂದನೆಯೂ ಮಾಡಿಲ್ಲ

ಜೆಡಿಎಸ್, ಬಿಜೆಪಿ ಪಕ್ಷಗಳಿಂದ ನನ್ನ ವಿರುದ್ಧ ಷಡ್ಯಂತ್ರ, ಅಪಪ್ರಚಾರ : ಬಿ.ಎಸ್ ಬಸವೇಶ್ 

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಬಸವೇಶ್ ಶನಿವಾರ ನಗರಸಭೆ ಅಧ್ಯಕ್ಷರಾಗಿ ಪುನಃ ೨ನೇ ಬಾರಿಗೆ ಆಯ್ಕೆಯಾದ ಗೀತಾರಾಜ್‌ಕುಮಾರ್ ಅವರನ್ನು ಅಭಿನಂದಿಸಿದರು. 
    ಭದ್ರಾವತಿ: ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವುದಾಗಿ ಆರೋಪಿಸಿ ನನ್ನ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಷಡ್ಯಂತ್ರ ನಡೆಸುತ್ತಿದ್ದು, ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಬಸವೇಶ್ ಹೇಳಿದರು. 
    ಅವರು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ನನಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲದಿದ್ದರೂ ಸಹ ವಿನಾಕಾರಣ ಅಪಪ್ರಚಾರ ನಡೆಸಲಾಗುತ್ತಿದೆ. ನಾನು ಆ ಮಹಿಳಾ ಅಧಿಕಾರಿಯನ್ನು ಇದುವರೆಗೂ ನೋಡೇ ಇಲ್ಲ. ಟಿ.ವಿ ಹಾಗೂ ಪತ್ರಿಕೆಗಳಲ್ಲಿ ಬಂದ ಮೇಲೆಯೇ ನನಗೆ ಆ ಮಹಿಳಾ ಅಧಿಕಾರಿ ಗೊತ್ತಾಗಿರುವುದು. ನಾನು  ಇದುವರೆಗೂ ಯಾವ ಅಧಿಕಾರಿಗಳು ಆ ರೀತಿ ಮಾತಾಡಿಲ್ಲ ಎಂದರು. 
    ಈ ಘಟನೆ ಸಂಬಂಧ ನನ್ನ ವಿರುದ್ಧ ಯಾವುದೇ ದೂರು ಸಹ ದಾಖಲಾಗಿಲ್ಲ. ಇದುವರೆಗೂ ಪೊಲೀಸರು ಸಹ ನನ್ನನ್ನು ಸಂಪರ್ಕಿಸಿಲ್ಲ. ನನ್ನ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ ಎಂದರು. 

ಶಾಸಕ ಸಂಗಮೇಶ್ವರ್ ಪುತ್ರ ಬಸವೇಶ್‌ಗೆ ಹಾಲಿನ ಅಭಿಷೇಕ : ಬಿಜೆಪಿ, ಜೆಡಿಎಸ್ ವಿರುದ್ಧ ಆಕ್ರೋಶ

ಭದ್ರಾವತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವುದಾಗಿ ಆರೋಪಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಳೆದ ಕೆಲವು ದಿನಗಳಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸುತ್ತಿವೆ. ಈ ನಡುವೆ ಇದೀಗ ಶಾಸಕರ ಪುತ್ರನಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಲಿನ ಅಭಿಷೇಕ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. 
    ಭದ್ರಾವತಿ: ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವುದಾಗಿ ಆರೋಪಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಳೆದ ಕೆಲವು ದಿನಗಳಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸುತ್ತಿವೆ. ಈ ನಡುವೆ ಇದೀಗ ಶಾಸಕರ ಪುತ್ರನಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಲಿನ ಅಭಿಷೇಕ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. 
    ಶನಿವಾರ ನಗರಸಭೆ ಅಧ್ಯಕ್ಷರ ಚುನಾವಣೆ ಹಿನ್ನಲೆಯಲ್ಲಿ ನಗರಸಭೆ ಮುಂಭಾಗ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿದ್ದರು. ಅಲ್ಲದೆ ಮಹಾತ್ಮಗಾಂಧಿ ರಸ್ತೆಯಲ್ಲಿ(ಟಿ.ಕೆ ರಸ್ತೆ) ಬೈಕ್ ರ್‍ಯಾಲಿ ಸಹ ನಡೆಸಿದರು. ಈ ಸಂದರ್ಭದಲ್ಲಿ ಆಗಮಿಸಿದ ಶಾಸಕ ಸಂಗಮೇಶ್ವರ್ ಕಿರಿಯ ಪುತ್ರ ಬಿ.ಎಸ್ ಬಸವೇಶ್‌ಗೆ ಕಾರ್ಯಕರ್ತರು, ಅಭಿಮಾನಿಗಳು ೨-೩ ಕೊಡ ಹಾಲಿನ ಅಭಿಷೇಕ ಮಾಡುವ ಮೂಲಕ ಜೈಕಾರ ಹಾಕಿದರು. 
    ಬಸವೇಶ್ ವಿರುದ್ಧ ಶುಕ್ರವಾರ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದವು. ಈ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಲಿನ ಅಭಿಷೇಕ ನಡೆಸುವ ಮೂಲಕ ಬಸವೇಶ್ ವಿರುದ್ಧದ ಆರೋಪಗಳು ನಿರಾಧಾರವಾಗಿದ್ದು, ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಹಾಗು ಜನಪ್ರಿಯತೆಯನ್ನು ಸಹಿಸದೆ ಈ ರೀತಿ ಕುತಂತ್ರ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರು.