Sunday, February 16, 2025

ಕುಡಿಯುವ ನೀರಿನ ಯೋಜನೆಯ ಗುದ್ದಲಿಪೂಜೆ, ಉದ್ಘಾಟನೆಗೆ ಕ್ರಮ ಕೈಗೊಳ್ಳಿ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೂಚನೆ 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಹೇಮಂತ್ 
    ಭದ್ರಾವತಿ : ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಷ್ಟಾಚಾರ ಪಾಲನೆ(ಪ್ರೋಟೋ ಕಾಲ್) ಪ್ರಕಾರ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಗುದ್ದಲಿಪೂಜೆ ಹಾಗು ಉದ್ಘಾಟನೆ ಕಾರ್ಯ ನೆರವೇರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಹೇಮಂತ್‌ರವರು ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರವರಿಗೆ ಸೂಚಿಸಿದ್ದಾರೆ. 
    ಕಳೆದ ಸುಮಾರು ೧ ತಿಂಗಳ ಹಿಂದೆ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್‌ರವರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ತಾಲೂಕಿನ ಗ್ರಾಮಾಂತರ ವ್ಯಾಪ್ತಿಯ ಉಂಬ್ಳೆಬೈಲು ಹಾಗು ಕಲ್ಲಹಳ್ಳಿ ಗ್ರಾ ಪಂಚಾಯಿತಿ ಮತ್ತು ೨೮ ಹಳ್ಳಿಗಳಲ್ಲಿ ಹಾಗು ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹಾಗು ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತು ೨೩ ಹಳ್ಳಿಗಳಲ್ಲಿ, ಆನವೇರಿ ಗ್ರಾಮ ಪಂಚಾಯಿತಿ ಮತ್ತು ೩೭ ಹಳ್ಳಿಗಳಲ್ಲಿ ಕುಂಸಿ ಮತ್ತು ಗಾಜನೂರು ಗ್ರಾಮ ಪಂಚಾಯಿತಿ ಮತ್ತು ೮೯ ಹಳ್ಳಿಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿರುವುದರಿಂದ ಶಿಷ್ಟಾಚಾರ ಪಾಲನೆ ಪ್ರಕಾರ ಗುದ್ದಲಿ ಪೂಜೆ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಹಾಗು ತಾಲೂಕಿನ ಅಂತರಗಂಗೆ ಮತ್ತು ೨೧ ಹಳ್ಳಿಗಳಿಗೆ, ದೊಡ್ಡೇರಿ ಮತ್ತು ಇತರೆ ೧೬ ಹಳ್ಳಿಗಳಲ್ಲಿ ಹಾಗು ತಡಸ ಮತ್ತು ೪ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ಯೋಜನೆ ಪೂರ್ಣಗೊಂಡಿರುವುದರಿಂದ ಶಿಷ್ಟಾಚಾರ ಪಾಲನೆ ಪ್ರಕಾರ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿತ್ತು. 
    ಇದಕ್ಕೆ ಸ್ಪಂದಿಸಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. 

No comments:

Post a Comment