Wednesday, April 23, 2025

ಚಾನಲ್‌ನಲ್ಲಿ ಈಜಲು ಹೋಗಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಮಹಿಳೆ


ಭದ್ರಾವತಿ : ತಾಲೂಕಿನ ಗೊಂದಿ ಗ್ರಾಮದ ಚಾನಲ್‌ನಲ್ಲಿ ಈಜಲು ಹೋಗಿದ್ದ ಮಹಿಳೆಯೊಬ್ಬರು ಸುಮಾರು ೬ ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗು ನಗದು ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. 
ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಕೋಣನೂರು ಗ್ರಾಮದ ನಿವಾಸಿ ಅಬಿದಾ ಬಾನು(೩೮) ಒಟ್ಟು ೭೫ ಗ್ರಾಂ. ತೂಕದ, ೬ ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗು ೧೦ ಸಾವಿರ ರು. ನಗದು ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
    ಘಟನೆ ವಿವರ: 
    ಅಬಿದಾ ಬಾನು ಸೇರಿದಂತೆ ಒಟ್ಟು ೨೦ ಮಂದಿ ನಗರದ ಜನ್ನಾಪುರದ ಚಂದ್ರಾಲಯದಲ್ಲಿ ಸಂಬಂಧಿಕರ ಮದುವೆಗೆ ಏ.೨೦ರಂದು ಆಗಮಿಸಿದ್ದು, ಅಂದು ಮದುವೆ ಕಾರ್ಯ ಮುಗಿಸಿಕೊಂಡು ಓಮ್ನಿ ವಾಹನದಲ್ಲಿ ಗೊಂದಿ ಗ್ರಾಮಕ್ಕೆ ತೆರಳಿ ಚಾನಲ್‌ನಲ್ಲಿ ಈಜಾಡಲು ಹೋಗಿದ್ದಾರೆ. 
    ಚಾನಲ್‌ನಲ್ಲಿ ಈಜಲು ಹೋಗುವಾಗ ಚಿನ್ನಾಭರಣಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಬಹುದು ಎಂಬ ಮುನ್ನಚ್ಚರಿಕೆಯಿಂದ ಅಬಿದ ಬಾನುರವರು ಕೊರಳಿನಲ್ಲಿದ್ದ ಸುಮಾರು ೨೫ ಗ್ರಾಂ. ತೂಕದ ೧ ಬಂಗಾರದ ನಕ್ಲೆಸ್, ೩೦ ಗ್ರಾಂ. ತೂಕದ ಮತ್ತೊಂದು ಬಂಗಾರದ ನಕ್ಲೆಸ್, ಒಟ್ಟು ೧೪ ಗ್ರಾಂ. ತೂಕದ ೪ ಬಂಗಾರದ ಉಂಗುರಗಳು ಮತ್ತು ೬ ಗ್ರಾಂ. ತೂಕದ ಎರಡು ಜೊತೆ ಬಂಗಾರದ ಓಲೆಯನ್ನು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಹಾಕಿಕೊಂಡಿದ್ದು, ಓಮ್ನಿ ವಾಹನದಲ್ಲಿಯೇ ವ್ಯಾನಿಟಿ ಬಿಟ್ಟು ಈಜಾಡಲು ತೆರಳಿದ್ದಾರೆ. ಪುನಃ ಹಿಂದಿರುಗಿ ಬಂದು ವ್ಯಾನಿಟಿ ಬ್ಯಾಗ್ ಪರಿಶೀಲನೆ ನಡೆಸಿದ್ದು, ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಹಾಗು ನಗದು ಕಳವು ಮಾಡಿರುವುದು ತಿಳಿದು ಬಂದಿದೆ.  

ಸತತ ೨ನೇ ಬಾರಿಗೆ ಎಫ್‌ಸಿಸಿ ತಂಡಕ್ಕೆ ಚಾಂಪಿಯನ್ ಪ್ರಶಸ್ತಿ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶಿವಮೊಗ್ಗ ವಲಯದಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ೨೦೨೪-೨೫ನೇ ಸಾಲಿನ ಪ್ರಥಮ ಡಿವಿಷನ್ ಲೀಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಎಫ್‌ಸಿಸಿ ತಂಡ ಚಾಂಪಿಯನ್ನಾಗಿ ಹೊರಹೊಮ್ಮುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡಿದೆ.
    ಭದ್ರಾವತಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶಿವಮೊಗ್ಗ ವಲಯದಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ೨೦೨೪-೨೫ನೇ ಸಾಲಿನ ಪ್ರಥಮ ಡಿವಿಷನ್ ಲೀಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಎಫ್‌ಸಿಸಿ ತಂಡ ಚಾಂಪಿಯನ್ನಾಗಿ ಹೊರಹೊಮ್ಮುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡಿದೆ.
    ಸ್ಥಳೀಯ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶಿವಮೊಗ್ಗ ವಲಯದಿಂದ ಪಂದ್ಯಾವಳಿ ಆಯೋಜಿಸಿಕೊಂಡು ಬರಲಾಗುತ್ತಿದೆ. ರಾಜ್ಯದ ಪ್ರತಿಷ್ಠಿತ ತಂಡಗಳಲ್ಲಿ ಶಿವಮೊಗ್ಗ ಎಫ್‌ಸಿಸಿ ತಂಡ ಸಹ ಒಂದಾಗಿದ್ದು, ಸತತ ಎರಡನೇ ಬಾರಿಗೆ ಚಾಂಪಿಯನ್ನಾಗಿ ಹೊರಹೊಮ್ಮುವ ಮೂಲಕ ಗಮನ ಸೆಳೆದಿದೆ. ಪಂದ್ಯಾವಳಿಯಲ್ಲಿ ವಿವಿಧೆಡೆಗಳಿಂದ ಹಲವು ತಂಡಗಳು ಭಾಗವಹಿಸಿದ್ದವು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶಿವಮೊಗ್ಗ ವಲಯದ ಮೇಲ್ವಿಚಾರಕರು, ತರಬೇತಿದಾರರು ಹಾಗು ಕ್ರಿಕೆಟ್ ಅಭಿಮಾನಿಗಳು  ಎಫ್‌ಸಿಸಿ ತಂಡವನ್ನು ಅಭಿನಂದಿಸಿದ್ದಾರೆ. 

ಮಾಯಪ್ಪ ನಿಧನ : ನೇತ್ರದಾನ

ನೇತ್ರದಾನಿ ಮೃತ ಮಾಯಪ್ಪ 
    ಭದ್ರಾವತಿ : ತಾಲೂಕಿನ ಡಣಾಯಕಪುರ ಗ್ರಾಮದ ನಿವಾಸಿ ಮಾಯಪ್ಪ(೪೧) ಅನಾರೋಗ್ಯದಿಂದ ನಿಧನರಾಗಿದ್ದು, ಇವರ ನೇತ್ರಗಳನ್ನು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಗಿದೆ. 
    ಮಾಯಪ್ಪರವರ ನೇತ್ರದಾನ ೪ ಜನ ಕಾರ್ನಿಯಾ ಅಂಧರಿಗೆ ಬೆಳಕಾಗಲಿದೆ. ಸಾವಿನ ನಂತರವೂ ಮಾಯಪ್ಪರವರು ನೇತ್ರದಾನದ ಮೂಲಕ ಸಾರ್ಥಕತೆ ತಂದು ಕೊಂಡಿದ್ದಾರೆ. ಹಸಿರು ಸೇನಾನಿ, ರಕ್ತದಾನಿ ನಗರದ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಯಾಗಿರುವ ಹಾಲೇಶಪ್ಪರವರು ಸಂಬಂದಿ ಮಾಯಪ್ಪರವರ ನೇತ್ರದಾನಕ್ಕೆ ಪ್ರಶಂಸೆ ವ್ಯಕ್ತಪಡಿಸುವ ಮೂಲಕ ನೇತ್ರದಾನ ಮನೆಮನೆಯ ಸಂಪ್ರದಾಯವಾಗಲಿ. ಮರಣ ನಂತರ ಕಣ್ಣುಗಳನ್ನು ಸುಡದೇ ನೇತ್ರದಾನ ಮಾಡಿಸುವ ಸಂಬಂಧ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದ್ದಾರೆ.  

Tuesday, April 22, 2025

ಹಿರಿಯ ನ್ಯಾಯವಾದಿ ಸದಾಶಿವರೆಡ್ಡಿ ಮೇಲೆ ಹಲ್ಲೆಗೆ ಖಂಡನೆ : ನ್ಯಾಯವಾದಿಗಳಿಂದ ಪ್ರತಿಭಟನೆ

ಭದ್ರಾವತಿಯಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಉಮೇಶ್ ನೇತೃತ್ವದಲ್ಲಿ ಬೆಂಗಳೂರಿನ ಹಿರಿಯ ವಕೀಲರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ಬೆಂಗಳೂರಿನಲ್ಲಿ ವಕೀಲರ ಪರಿಷತ್ ಸಹ ಅಧ್ಯಕ್ಷ, ಹಿರಿಯ ನ್ಯಾಯವಾದಿ ಸದಾಶಿವರೆಡ್ಡಿ ಅವರ ಮೇಲೆ ನಡೆದ ಹಲ್ಲೆ ಮತ್ತು ಕಚೇರಿ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ರಾಜ್ಯ ವಕೀಲರ ಪರಿಷತ್ ಕರೆ ಮೇರೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಬೆಂಬಲಿಸಿ ನಗರದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಸಂಘದ ಅಧ್ಯಕ್ಷ ಉಮೇಶ್ ಮಾತನಾಡಿ, ನ್ಯಾಯವಾದಿಗಳ ಮೇಲಿನ ಹಲ್ಲೆ, ಜೀವಹಾನಿ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಅದರಲ್ಲೂ ನ್ಯಾಯಾಲಯದ ಆವರಣದಲ್ಲಿ ಹಲ್ಲೆ ಮಾಡಿರುವುದು ವಿಷಾದನೀಯ ಸಂಗತಿಯಾಗಿದೆ. ಇದರಿಂದ ವೃತ್ತಿನಿರತರಿಗೆ ಜೀವ ಭದ್ರತೆ ಇಲ್ಲದಂತಾಗಿದೆ. ಸರ್ಕಾರ ತಕ್ಷಣ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯವಾದಿಗಳ ಸಂರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಹಿರಿಯ ನ್ಯಾಯವಾದಿ ಸದಾಶಿವ ರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
     ಆರಂಭದಲ್ಲಿ ನ್ಯಾಯವಾದಿಗಳಿಂದ ಕೈ ತೋಳಿಗೆ ಕೆಂಪು ಪಟ್ಟಿಕಟ್ಟಿಕೊಂಡು ನ್ಯಾಯಾಲಯದ ಆವರಣದಿಂದ ಘೋಷಣೆ ಕೂಗುತ್ತಾ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಂತಿಮವಾಗಿ ಉಪ ತಹಸೀಲ್ದಾರ್ ಮಂಜಾನಾಯ್ಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. 
    ಪ್ರತಿಭಟನೆಯಲ್ಲಿ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ನಾಗರಾಜ, ಕಾರ್ಯದರ್ಶಿ ರಾಜೇಶ್, ಸಹಕಾರ್ಯದರ್ಶಿ ಹರೀಶ್ ಬರ್ಗೆ, ಪ್ರಮುಖರಾದ ಆದರ್ಶ, ಹೇಮಾ, ಪವನ್ ಸೇರಿದಂತೆ ಸಂಘದ ಬಹುತೇಕ ಸದಸ್ಯರು ಪಾಲ್ಗೊಂಡಿದ್ದರು.  

ಅವನಿ ಶ್ರೀಗಳ ಸಾನಿಧ್ಯದಲ್ಲಿ ಲೋಕ ಕಲ್ಯಾರ್ಥವಾಗಿ ಚಂಡಿಕಾ ಹವನ

ಭದ್ರಾವತಿ ಜನ್ನಾಪುರದ ಬಬ್ಬೂರು ಕಮ್ಮೆ ಸೇವಾ ಸಂಘವು ಹಮ್ಮಿಕೊಂಡಿದ್ದ ಚಂಡಿಕಾ ಹವನ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಧಕರಾದ ಡಾ: ಹರೀಶ್ ದೇಲಂತಬೆಟ್ಟು, ಡಾ: ವಿದ್ಯಾಶಂಕರ್, ಎನ್.ಎಸ್.ಸುಬ್ರಮಣ್ಯ ಇವರುಗಳನ್ನು ಗೌರವಿಸಲಾಯಿತು.
    ಭದ್ರಾವತಿ: ನಗರದ ಜನ್ನಾಪುರ ಬಬ್ಬೂರು ಕಮ್ಮೆ ಸೇವಾ ಸಂಘದ ೩೫ನೇ ವರ್ಷದ ಸ್ಥಾಪನಾ ಮಹೋತ್ಸವದ ಅಂಗವಾಗಿ ಮತ್ತು ಬೇವುಬೆಲ್ಲ ಕಾರ್ಯಕ್ರಮ ಹಾಗು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ೭೫ನೇ ವರ್ಧಂತಿ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಹವನ ನೆರವೇರಿಸಲಾಯಿತು.  ಆವನಿ ಶೃಂಗೇರಿ ಶಂಕರ ಮಠದ ಪೀಠಾಧಿಪತಿಗಳಾದ ಶ್ರೀ ಅಧ್ವೈತಾನಂದ ಭಾರತೀ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
    ಬಬ್ಬೂರು ಕಮ್ಮೆ ಸೇವಾ ಸಂಘದ ರಾಜ್ಯಾದ್ಯಕ್ಷ ಡಾ. ಎ.ವಿ.ಪ್ರಸನ್ನ ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಮಾಡುವ ಧಾರ್ಮಿಕ ಆಚರಣೆಗಳಿಂದ ಸಂಸ್ಕಾರ ಮತ್ತು ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. 
    ಜಿಲ್ಲಾ ಬ್ರಾಹ್ಮಣ ಸಂಘಕ್ಕೆ ಆಯ್ಕೆಯಾದ ರಘುರಾಮ್‌ರವರು ಮಾತನಾಡಿ, ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರತಿಯೊಬ್ಬರು ಸಹಕರಿಸಬೇಕೆಂದರು. ತಾಲೂಕು ಅಧ್ಯಕ್ಷ ಎಚ್.ಎಸ್ ನಂಜುಂಡಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 
    ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಂಘದ ಪ್ರಮುಖರಾದ ನಾಗರಾಜ್, ಕೆ.ವಿ ನಾಗೇಶ್, ಕಾರ್‌ಕೊಡ್ಲು ಗುರುಮೂರ್ತಿ, ಮಾ.ಸಾ ನಂಜುಂಡಸ್ವಾಮಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಜಿ. ರಮೇಶ್ ಸೇರಿದಂತೆ ಇನ್ನಿತರರು ಮಾತನಾಡಿದರು. 
    ಕಾರ್ಯಕ್ರಮದಲ್ಲಿ ಸಾಧಕರಾದ ಡಾ. ಹರೀಶ ದೇಲಂತಬೆಟ್ಟು, ಡಾ. ಎಂ.ಎಚ್ ವಿದ್ಯಾಶಂಕರ್ ಮತ್ತು ಎನ್.ಎಸ್ ಸುಬ್ರಮಣ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುರೇಶ್, ಗುರುದತ್ತ, ಶ್ರೀಧರ್, ಪ್ರಕಾಶ್, ಛಾಯಾಪತಿ ಮತ್ತು ರಾಜಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಎಂ.ಡಿ.ಹಿರಿಯಣ್ಣ ಭಟ್ ವೇದಘೋಷ ನಡೆಸಿಕೊಟ್ಟರು. ಗ್ರಾಯತ್ರಿ ಪ್ರಾರ್ಥಿಸಿ, ಡಾ. ವಿದ್ಯಾಶಂಕರ್ ವಂದಿಸಿದರು. ದಿನೇಶ್ ನಿರೂಪಿಸಿದರು. 

ಏ.೨೩ರಂದು ಉಚಿತ ಕಣ್ಣಿನ ತಪಾಸಣೆ ಶಿಬಿರ

ಭದ್ರಾವತಿ : ನಗರಸಭೆ ವತಿಯಿಂದ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಏ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿದೆ. 
ನಗರಸಭೆ ಕಛೇರಿಯಲ್ಲಿ ಆಯೋಜಿಸಲಾಗಿರುವ ಶಿಬಿರದಲ್ಲಿ ನಗರಸಭೆ ಚುನಾಯಿತ ಪ್ರತಿನಿಧಿಗಳು ಹಾಗು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಗುವುದು. ಶಿಬಿರದ ಸದುಪಯೋಗಪಡಿಸಿಕೊಳ್ಳುವಂತೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಕೋರಿದ್ದಾರೆ. 

ಜಗದ್ಗುರುಗಳಾದ ಪೋಪ್ ಫ್ರಾನ್ಸಿಸ್‌ರವರ ನಿಧನಕ್ಕೆ ಶಾಸಕರಿಂದ ಸಂತಾಪ

ಶಾಸಕ ಬಿ.ಕೆ ಸಂಗಮೇಶ್ವರ್ 
ಭದ್ರಾವತಿ: ರೋಮನ್ ಕ್ಯಾಥೋಲಿಕ್ ಧರ್ಮಸಭೆಯ ಜಗದ್ಗುರುಗಳಾದ ಪೋಪ್ ಫ್ರಾನ್ಸಿಸ್‌ರವರ ನಿಧನಕ್ಕೆ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ. 
ಜಗದ್ಗುರುಗಳು ಸೋಮವಾರ ಬೆಳಗ್ಗೆ ಈ ಲೋಕದ ಯಾತ್ರೆ ಮುಗಿಸಿ ದೇವರ ಪಾದಗಳಿಗೆ ಸೇರಿರುವ ವಿಷಯ ಕೇಳಿ ಮನಸ್ಸಿಗೆ ತುಂಬಾ ದುಃಖ ಮತ್ತು ನೋವು ಉಂಟು ಮಾಡಿದೆ.
ಜಗದ್ಗುರುಗಳ ಸಿನೋಡಿಯಲ್ ಅಂದರೆ ಎಲ್ಲರೂ ಜೊತೆಯಾಗಿ ನಡೆಯೋಣ ಮತ್ತು ಒಬ್ಬರನ್ನು ಒಬ್ಬರು ಗೌರವದಿಂದ ಆಲಿಸೋಣ ಎಂಬ ಕರೆ ನಿಜವಾಗಲೂ ವಿಶ್ವಕ್ಕೆ ಪ್ರೀತಿಯಿಂದ ಶಾಂತಿಯ ಪ್ರಯಾಸಕ್ಕೆ ಮುನ್ನುಡಿ ಬರೆದಂತಿತ್ತು. ಇವರ ಅಗಲಿಕೆಯಿಂದ ಇಡೀ ಮಾನವ ಕುಲಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಸಮಸ್ತ ಕ್ರೈಸ್ತ ಬಾಂಧವರಿಗೆ ಆಧಾರಣೆ ಮತ್ತು ಧೈರ್ಯ ಕೊಡಲಿ ಎಂದು ಪ್ರಾರ್ಥಿಸುತ್ತಾ ಸಂತಾಪ ಸೂಚಿಸುತ್ತೇನೆ ಎಂದು ಶಾಸಕರು ತಿಳಿಸಿದ್ದಾರೆ.