ಶಿವಮೊಗ್ಗಕ್ಕೆ ಆಗಮಿಸಿದ್ದ ಪೇಜಾವರ ಮಠದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿಯವರಿಗೆ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಕಾರ್ಖಾನೆಯಲ್ಲಿನ ವಿದ್ಯಮಾನಗಳನ್ನು ವಿವರಿಸಿದರು.
ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಸುಮಾರು ೨ ವರ್ಷಗಳ ಹಿಂದೆ ಕಾರ್ಖಾನೆ ಮುಂಭಾಗ ಹೋರಾಟ ಬೆಂಬಲಿಸಿದ ಸಂದರ್ಭದಲ್ಲಿ ಹೇಳಿದ ಮಾತಿಗೆ ಈಗಲೂ ಬದ್ಧವಾಗಿದ್ದೇನೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಎಲ್ಲಾ ಸಮಸ್ಯೆಗಳು ಸಹ ಬಗೆಹರಿಯಲಿವೆ ಎಂದು ಪೇಜಾವರ ಮಠದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿಯವರು ಹೇಳಿದರು.
ಶ್ರೀಗಳು ಮಂಗಳವಾರ ಶಿವಮೊಗ್ಗದಲ್ಲಿ ತಮ್ಮನ್ನು ಭೇಟಿ ಮಾಡಿದ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳ ನಿಯೋಗಕ್ಕೆ ಆಶೀರ್ವದಿಸಿ, ಪ್ರಸ್ತುತ ಕಾರ್ಖಾನೆಯ ವಿದ್ಯಾಮಾನಗಳ ಕುರಿತು ಮಾಹಿತಿ ಪಡೆದು ಮಾತನಾಡಿದರು.
ಕಾರ್ಖಾನೆಗೆ ತನ್ನದೇ ಆದ ಇತಿಹಾಸವಿದೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತ ರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಪರಿಶ್ರಮದಿಂದ ಸ್ಥಾಪನೆಗೊಂಡ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಪ್ರಸ್ತುತ ಆಶಾದಾಯಕ ಬೆಳವಣಿಗೆಗಳು ಕಂಡು ಬರುತ್ತಿವೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯ ಎಲ್ಲಾ ಸಮಸ್ಯೆಗಳು ದೂರವಾಗಲಿದ್ದು, ಗುತ್ತಿಗೆ ಕಾರ್ಮಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಉಕ್ಕು ಸಚಿವರು ಹಾಗು ಸಂಸದರೊಂದಿಗೆ ಚರ್ಚಿಸುವುದಾಗಿ ಶ್ರೀಗಳು ಭರವಸೆ ವ್ಯಕ್ತಪಡಿಸದರು.
ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಕೇಶ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಆನಂದ್, ನಿವೃತ್ತ ಕಾರ್ಮಿಕ ನರಸಿಂಹಾಚಾರ್ ಸೇರಿದಂತೆ ಇನ್ನಿತರರು ನಿಯೋಗದಲ್ಲಿದ್ದರು.