ಕಾಗದನಗರದ ೬ನೇ ವಾರ್ಡಿನಲ್ಲಿ ಆತಂಕ
ಭದ್ರಾವತಿ ಕಾಗದನಗರದ ೬ನೇ ವಾರ್ಡಿನ ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂಬ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ನಗರಸಭೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಿಳೆ ವಾಸವಿದ್ದ ಮನೆಯ ಸುತ್ತಮುತ್ತ ಸಂಚಾರ ನಿರ್ಬಂಧಿಸಿ ಕಟ್ಟೆಚ್ಚರ ಕೈಗೊಂಡಿತು.
ಭದ್ರಾವತಿ, ಜೂ. ೨೩: ಕೆಲವು ದಿನಗಳ ಹಿಂದೆ ನಗರದ ಹೃದಯ ಭಾಗದಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ವೈರಸ್ ಪ್ರಕರಣ ಇದೀಗ ಕಾಗದನಗರಕ್ಕೂ ವಿಸ್ತರಿಸಿಕೊಂಡಿದೆ. ೬ನೇ ವಾರ್ಡಿನ ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಮಂಗಳವಾರ ವಾರ್ಡಿನ ೩-೪ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಸ್ವಂತ ವಾಹನದಲ್ಲಿ ಮುಂಬೈ ಚಂಬುರೂಗೆ ಜೂ.೫ ರಂದು ಮಗುವಿನೊಂದಿಗೆ ಪ್ರಯಾಣ ಬೆಳೆಸಿದ್ದ ಮಹಿಳೆ ವಾಪಾಸು ರೈಲಿನ ಮೂಲಕ ಬೆಂಗಳೂರು ಮತ್ತು ಕೆ.ಆರ್ ಪೇಟೆಗೆ ತೆರಳಿ ಪುನಃ ಅಲ್ಲಿಂದ ಜೂ.೧೭ರಂದು ನಗರಕ್ಕೆ ಆಗಮಿಸಿದ್ದು, ಮೊದಲು ಜೂ.೧೮ರಂದು ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದಾರೆ. ನಂತರ ಮಹಿಳೆ ಮತ್ತು ಮಗು ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಇಬ್ಬರ ಗಂಟಲು ಮಾದರಿಯನ್ನು ತಪಾಸಣೆಗೆ ಕಳುಹಿಸಿ ಕೊಡಲಾಗಿತ್ತು. ಸೋಮವಾರ ರಾತ್ರಿ ಮಹಿಳೆಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಮಗುವಿನಲ್ಲಿ ಯಾವುದೇ ವೈರಸ್ ಪತ್ತೆಯಾಗಿಲ್ಲ. ಆದರೆ ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಂಗಳವಾರ ಸಂಜೆಯಾದರೂ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ.
ಮುನ್ನಚ್ಚರಿಕೆ ಕ್ರಮವಾಗಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಶಿವಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಕಾಗದನಗರ ಪೊಲೀಸರು, ಸ್ಥಳೀಯ ಆಶಾ ಕಾರ್ಯಕರ್ತೆರು ಸೇರಿದಂತೆ ಇನ್ನಿತರನ್ನು ಒಳಗೊಂಡ ತಂಡ ಬೆಳಿಗ್ಗೆ ಮಹಿಳೆ ವಾಸವಿದ್ದ ಮನೆಯ ಸುತ್ತಾಮುತ್ತ ಪರಿಶೀಲನೆ ನಡೆಸಿತು. ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದೊಂದಿಗೆ ಸ್ಯಾನಿಟೈಸರ್ ಕೈಗೊಂಡರು.
ಜಿಲ್ಲಾ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಹೊರಬಿದ್ದ ನಂತರ ಸೀಲ್‌ಡೌನ್ ಘೋಷಣೆಯಾಗುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ. ಸೀಲ್ ಡೌನ್ ಘೋಷಣೆಯಾದಲ್ಲಿ ಇಲ್ಲಿನ ನಿವಾಸಿಗಳಿಗೆ ಅಗತ್ಯ ಸೇವೆಗಳನ್ನು ನಗರಸಭೆ ಪೂರೈಸಲಿದೆ.