ಜಮೀನಿನ ಅಕ್ರಮ ಕಲ್ಲುಕಂಬ, ಬೇಲಿ ತೆರವುಗೊಳಿಸಲು ಆಗ್ರಹಿಸಿ ಕುಟುಂಬ ಸಮೇತ ಪ್ರತಿಭಟನೆ ಮಂಗಳವಾರ ಭದ್ರಾವತಿ ತಾಲೂಕಿನ ಗುಡ್ಡದ ನೇರಳೆಕೆರೆ ಗ್ರಾಮದ ಕಲಾಮನಿ ಕುಟುಂಬದವರು ಪ್ರತಿಭಟನೆ ನಡೆಸಿದರು.
ಭದ್ರಾವತಿ, ಜೂ. ೨೩: ನ್ಯಾಯಾಲಯದ ಆದೇಶವಿದ್ದರೂ ಸಹ ಜಮೀನಿನಲ್ಲಿ ಅಕ್ರಮವಾಗಿ ಹಾಕಿರುವ ಬೇಲಿ ಮತ್ತು ಕಲ್ಲು ಕಂಬ ತೆಗೆದು ಯಥಾಸ್ಥಿತಿ ಮುಂದುವರೆಸುವಲ್ಲಿ ನಿರ್ಲಕ್ಷ್ಯತನ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ತಾಲೂಕಿನ ಗುಡ್ಡದ ನೇರಳೆಕೆರೆ ಗ್ರಾಮದ ಕಲಾಮನಿ ಕುಟುಂಬದವರು ಪ್ರತಿಭಟನೆ ನಡೆಸಿದರು.
ಸುಮಾರು ೫೫ ವರ್ಷಗಳಿಂದ ಪತಿ ಸುಬ್ಬರಾಜು ಹಾಗೂ ಅವರ ಅಣ್ಣ ಪೊನ್ನಯ್ಯರವರು ಜಮೀನು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಈ ಪೈಕಿ ಪತಿ ಸುಬ್ಬರಾಜುರವರ ಹೆಸರಿನಲ್ಲಿ ೩.೦೫ ಗುಂಟೆ ಜಮೀನು ಹಾಗೂ ಪೊನ್ನಯ್ಯ ಹೆಸರಿನಲ್ಲಿ ೩.೧೦ ಗುಂಟೆ ಜಮೀನು ಇದ್ದು, ೨೦೧೮ರಿಂದ ನನಗೆ ತಿಳಿಯದೆ ಪೋಡಿ ಮಾಡಿ ನನ್ನ ಜಮೀನನ್ನು ದುರಸ್ತಿ ಮಾಡಿ ಒತ್ತುವರಿಯಾಗಿದೆ ಎಂದು ಸುಮಾರು ೩೦೦ ಅಡಕೆ ಮರ ಒಳಗೊಂಡದಂತೆ ಜಮೀನಿಗೆ ಅಕ್ರಮವಾಗಿ ಕಲ್ಲು ಕಂಬದೊಂದಿಗೆ ಬೇಲಿ ಹಾಕಿಸಲಾಗಿದೆ. ಇದಕ್ಕೆ ಗ್ರಾಮ ಲೆಕ್ಕಾಧಿಕಾರಿ ಅನಿಲ್‌ಕುಮಾರ್, ರಾಜಸ್ವ ನಿರೀಕ್ಷಕ ಜಗದೀಶ್ ಹಾಗೂ ಸಿಬ್ಬಂದಿ ಪೂರ್ಣಿಮಾ ಕಾರಣಕರ್ತರಾಗಿದ್ದರೆಂದು ಆರೋಪಿಸಲಾಯಿತು.
ಈ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಹಳೇಯ ಆದೇಶ ರದ್ದು ಪಡಿಸಲಾಗಿದೆ. ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ್ಯಾಯಾಲಯದ ಆದೇಶವಿದೆ. ಈ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ಕಲ್ಲು ಕಂಬ, ಬೇಲಿ ತೆರವುಗೊಳಿಸುವಂತೆ ಮನವಿ ಮಾಡಿಕೊಂಡರೂ ಸಹ ಗ್ರಾಮ ಲೆಕ್ಕಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನಲೆ ತಕ್ಷಣ ತೆರವು ಕೈಗೊಂಡು ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಲಾಯಿತು.
No comments:
Post a Comment