Wednesday, July 7, 2021

ಎಟಿಎಂ ಕಳ್ಳತನಕ್ಕೆ ಯತ್ನ : ಓರ್ವನ ಸೆರೆ

ಭದ್ರಾವತಿ, ಜು. ೭: ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದ ಬಳಿ ಇರುವ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ.
    ತಾಲೂಕಿನ ಅರಳಿಹಳ್ಳಿ ಬಸಲಿಕಟ್ಟೆ ನಿವಾಸಿ, ಟ್ರ್ಯಾಕ್ಟರ್ ಚಾಲಕ ಅಸಾದುಲ್ಲಾ ಅಲಿಯಾಸ್ ಹರ್ಷದ್(೩೨) ಎಂಬಾತನನ್ನು ಬಂಧಿಸಲಾಗಿದ್ದು, ಈತ ಜು.೫ರ ರಾತ್ರಿ ೮ ಗಂಟೆ ಸಮಯದಲ್ಲಿ ಎಟಿಎಂ ಒಳಗೆ ಪ್ರವೇಶಿಸಿ ಕಳ್ಳತನಕ್ಕೆ ಯತ್ನಿಸಿ ವಿಫಲನಾಗಿದ್ದಾನೆ. ಈ ಕುರಿತು ಬ್ಯಾಂಕ್ ಶಾಖಾ ವ್ಯವಸ್ಥಾಪಕ ತಮ್ಮಯ್ಯದಾಸ ಪೊಲೀಸರಿಗೆ ದೂರು ಸಲ್ಲಿಸಿದ್ದರು.
     ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಅಭಿನಂದಿಸಿದ್ದಾರೆ.

ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಸದಾಶಿವಮೂರ್ತಿ, ರವಿಕುಮಾರ್ ನೇಮಕ

ಭದ್ರಾವತಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿಗಳಾಗಿ ಸದಾಶಿವಮೂರ್ತಿ, ರವಿಕುಮಾರ್ ಅವರನ್ನು ನೇಮಕಗೊಳಿಸಿ ಅಭಿನಂದಿಸಿದರು.
    ಭದ್ರಾವತಿ, ಜು. ೭: ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾಗಿ ಜಿ. ಸದಾಶಿವಮೂರ್ತಿ ಮತ್ತು ಎಂ. ರವಿಕುಮಾರ್ ನೇಮಕ ಗೊಂಡಿದ್ದಾರೆ.
    ಜಿ. ಸದಾಶಿವಮೂರ್ತಿ ಮತ್ತು ಎಂ. ರವಿಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೂಚನೆ ಮೇರೆಗೆ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ ನೇಮಕಗೊಳಿಸಿ ಆದೇಶಿಸಿದ್ದಾರೆ. ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ನೇಮಕಾತಿ ಆದೇಶದಲ್ಲಿ ಸೂಚಿಸಿದ್ದಾರೆ.
    ಬಿಪಿಎಲ್ ಸಂಘದ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಎಸ್.ಕೆ ಸುಧೀಂದ್ರ, ಅಧ್ಯಕ್ಷ ಎಂ. ಮುಕುಂದನ್, ಕಾರ್ಯಾಧ್ಯಕ್ಷ ಎಂ. ರವಿಕುಮಾರ್, ಉಪಾಧ್ಯಕ್ಷರಾದ ವಿಲಿಯಂ ಸಂಪತ್ ಕುಮಾರ್ ಮತ್ತು ಸ್ಯಾಮ್ಯೂಯೇಲ್, ಪ್ರಧಾನ ಕಾರ್ಯದರ್ಶಿ ಬಿ. ಜಗದೀಶ್, ಕಾರ್ಯದರ್ಶಿ ಎಂ.ಸಿ ಸುನಿಲ್‌ಕುಮಾರ್, ಸಹ ಕಾರ್ಯದರ್ಶಿ ಜಿ. ಗೋವಿಂದ, ಖಜಾಂಚಿ ಎ.ವಿ ಮುರುಳಿಕೃಷ್ಣ, ನಿರ್ದೇಶಕರದ ಶ್ರೀಕಾಂತ್, ನವೀನ್‌ಕುಮಾರ್, ಎನ್.ಆರ್ ರವೀಂದ್ರಪ್ಪ, ಸಿ. ಉಮಾಶಂಕರ್, ಕರುಣಾನಿಧಿ ಸೇರಿದಂತೆ ಇನ್ನಿತರರು ನೂತನ ಕಾರ್ಯದರ್ಶಿಗಳಾದ ಜಿ. ಸದಾಶಿವಮೂರ್ತಿ ಮತ್ತು ಎಂ. ರವಿಕುಮಾರ್ ಅವರನ್ನು ಅಭಿನಂದಿಸಿದ್ದಾರೆ.

ಸರೋಜಮ್ಮ ನಿಧನ

ಸರೋಜಮ್ಮ
   ಭದ್ರಾವತಿ, ಜು. ೭: ಲಿಮ್ಕಾ ದಾಖಲೆ ಕುಂಚ ಕಲಾವಿದ, ಉಜ್ಜನಿಪುರ ನಿವಾಸಿ ಭದ್ರಾವತಿ ಗುರು ಅವರ ತಾಯಿ ಸರೋಜಮ್ಮ(೫೮) ಬುಧವಾರ ಸಂಜೆ ನಿಧನ ಹೊಂದಿದರು.
   ಪತಿ ನಿವೃತ್ತ ಎಂಪಿಎಂ ಉದ್ಯೋಗಿ ಜಿ. ಬೊಮ್ಮಯ್ಯ ಹಾಗು ೩ ಗಂಡು ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಬುಳ್ಳಾಪುರ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ಭೂಮಿಯಲ್ಲಿ ನಡೆಯಲಿದೆ.
ಮೃತರ ನಿಧನಕ್ಕೆ ಕಲಾವಿದರು, ವಿವಿಧ ಸಂಘಟನೆಗಳು ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ದೇಹದಾರ್ಢ್ಯ ಪಟು ನಂಜುಂಡಿ ನಿಧನ

ನಂಜುಂಡಿ
     ಭದ್ರಾವತಿ, ಜು. ೭: ಕಾಗದನಗರದ ನಿವಾಸಿ, ದೇಹದಾರ್ಢ್ಯ ಪಟು ನಂಜುಂಡಿ(೪೫) ನಿಧನ ಹೊಂದಿದ್ದು, ಇವರ ಅಂತ್ಯಕ್ರಿಯೆ ಬುಧವಾರ ಸಂಜೆ ಬೈಪಾಸ್ ಹೊಸಬುಳ್ಳಾಪುರ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
     ಪತ್ನಿ, ಓರ್ವ ಪುತ್ರ ಇದ್ದರು. ಅಪಘಾತದಲ್ಲಿ ಗಾಯಗೊಂಡು ಕಳೆದ ಸುಮಾರು ಒಂದೂವರೆ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರ ಸಹೋದರ ಹುಡ್ಕೋಕಾಲೋನಿಯ ಲಕ್ಷ್ಮಣ ಅವರ ನಿವಾಸದಲ್ಲಿ ಬೆಳಿಗ್ಗೆ ನಿಧನ ಹೊಂದಿದರು.
    ಸುಮಾರು ೨ ದಶಕಗಳ ಹಿಂದೆಯೇ ನಂಜುಂಡಿ ದೇಹದಾರ್ಢ್ಯ ಪಟುವಾಗಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದರು. ಹಲವಾರು ಪ್ರಶಸ್ತಿ, ಬಿರುದುಗಳನ್ನು ಪಡೆದುಕೊಂಡಿದ್ದರು. ಎಂಪಿಎಂ ವ್ಯಾಯಾಮ ಶಾಲೆಯಲ್ಲಿ ತರಬೇತಿದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
    ಇವರ ನಿಧನಕ್ಕೆ ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್ ಮತ್ತು ಪದಾಧಿಕಾರಿಗಳು, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಹಾಗು ದೇಹದಾರ್ಢ್ಯ ಪಟುಗಳು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸೈಕಲ್ ಜಾಥಾ : ಕೇಂದ್ರ, ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳಿಗೆ ಆಕ್ರೋಶ

ಸೈಕಲ್ ತುಳಿದು ಚಾಲನೆ ನೀಡಿದ ಶಾಸಕ ಬಿ.ಕೆ ಸಂಗಮೇಶ್ವರ್

ಪೆಟ್ರೋಲ್, ಡೀಸೆಲ್ ಹಾಗು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಬುಧವಾರ ಭದ್ರಾವತಿಯಲ್ಲಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೈಕಲ್ ಜಾಥಾದೊಂದಿಗೆ ಪ್ರತಿಭಟನೆ ನಡೆಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್ ಸೈಕಲ್ ತುಳಿದು ಚಾಲನೆ ನೀಡಿದರು.
    ಭದ್ರಾವತಿ, ಜು. ೭: ಪೆಟ್ರೋಲ್, ಡೀಸೆಲ್ ಹಾಗು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಬುಧವಾರ ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೈಕಲ್ ಜಾಥಾದೊಂದಿಗೆ ಪ್ರತಿಭಟನೆ ನಡೆಸಲಾಯಿತು.
    ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಮಾಲಾರ್ಪಣೆ ಮಾಡುವ ಜೊತೆಗೆ ಸ್ವತಃ ಸೈಕಲ್ ತುಳಿದು ಚಾಲನೆ ನೀಡಿದರು.
    ಸೈಕಲ್ ಜಾಥಾ ಹಾಲಪ್ಪವೃತ್ತ, ಮಾಧವಚಾರ್ ವೃತ್ತ ಮೂಲಕ ರಂಗಪ್ಪ ವೃತ್ತ ತಲುಪಿತು. ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರಗೌಡ ಮತ್ತು ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಮಾತನಾಡಿ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರಿಂದಾಗಿ ಜೀವನ ನಡೆಸುವುದು ಕಷ್ಟಕರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಅಲ್ಲದೆ ಜನವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿವೆ ಎಂದು ಆರೋಪಿಸಿದರು.
    ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಕಾಂತರಾಜ್, ಚನ್ನಪ್ಪ, ಸೈಯದ್ ರಿಯಾಜ್, ನಗರಸಭೆ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಕಾಂಗ್ರೆಸ್ ನಗರ ಯುವ ಘಟಕದ ಅಧ್ಯಕ್ಷ ಜಿ. ವಿನೋದ್, ಮುಖಂಡರಾದ ಅಣ್ಣೋಜಿರಾವ್, ದಶರಥಗಿರಿ, ಅಮಿರ್‌ಜಾನ್, ಮುರಳಿಕೃಷ್ಣ, ಜಗದೀಶ್, ಸದಾಶಿವಮೂರ್ತಿ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Tuesday, July 6, 2021

ಆಶ್ರಯ ಯೋಜನೆಯಡಿ ಬಡವರಿಗೆ ಸೂರು : ಖಾಲಿ ಜಾಗ ಗುರುತಿಸುವಲ್ಲಿ ನಿರ್ಲಕ್ಷ್ಯ

ಶಾಸಕ ಬಿ.ಕೆ ಸಂಗಮೇಶ್ವರ್ ತಹಸೀಲ್ದಾರ್ ಕಚೇರಿ ಅಧಿಕಾರಿಗಳ ವಿರುದ್ಧ ಅಸಮಾಧಾನ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ವಸತಿ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡುವ ಹಾಗು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ೯೪ಸಿ ಮತ್ತು ೯೪ಸಿಸಿ ಯೋಜನೆಯಡಿ ಹಕ್ಕು ಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
     ಭದ್ರಾವತಿ, ಜು. ೬: ಬಡವರಿಗೆ ಮನೆ ನಿರ್ಮಿಸಿಕೊಡುವ ಸಂಬಂಧ ಖಾಲಿ ಜಾಗ ಸರ್ವೆ ಮಾಡಿ ಆಶ್ರಯ ಸಮಿತಿಗೆ ವರದಿ  ನೀಡುವಂತೆ ಹಲವು ಬಾರಿ ತಿಳಿಸಿದ್ದರೂ ಸಹ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಜನಪ್ರತಿನಿಧಿಗಳು ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
     ಮಂಗಳವಾರ ನಗರಸಭೆ ಕಛೇರಿ ಸಭಾಂಗಣದಲ್ಲಿ ವಸತಿ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡುವ ಹಾಗು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ೯೪ಸಿ ಮತ್ತು ೯೪ಸಿಸಿ ಯೋಜನೆಯಡಿ ಹಕ್ಕು ಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ನಗರಸಭೆ ವ್ಯಾಪ್ತಿಯ ಬಹುತೇಕ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ಕೆಲವು ಕೊಳಚೆ ಪ್ರದೇಶಗಳಿಗೆ ಇನ್ನೂ ನೀಡಲು ಸಾಧ್ಯವಾಗಿಲ್ಲ. ಕೊಳಚೆ ಪ್ರದೇಶ ಹೊರತುಪಡಿಸಿ ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ೯೪ಸಿ ಯೋಜನೆಯಡಿ ಹಾಗು ಗ್ರಾಮಾಂತರ ಪ್ರದೇಶದಲ್ಲಿ ೯೪ಸಿಸಿ ಯೋಜನೆಯಡಿ ಹಕ್ಕು ಪತ್ರ ನೀಡಲಾಗುವುದು. ಈ ಸಂಬಂಧ ಸರ್ವೆ ಮಾಡಿ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
     ನಗರ ವ್ಯಾಪ್ತಿಯಲ್ಲಿ ಆಶಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಖಾಲಿ ಜಾಗ ಗುರುತಿಸುವಲ್ಲಿ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯತನ ವಹಿಸುತ್ತಿರುವುದು ಸರಿಯಲ್ಲ. ಹಲವಾರು ಬಾರಿ ಸಭೆಯಲ್ಲಿ ಈ ಕುರಿತು ಸೂಚಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಜಾಗ ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಸಿದರು.
    ಉಪತಹಸೀಲ್ದಾರ್ ಮಲ್ಲಿಕಾರ್ಜುನಯ್ಯ ಹಾಗು ಕಂದಾಯಾಧಿಕಾರಿ ಪ್ರಶಾಂತ್ ಜಾಗ ಗುರುತಿಸುವಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರೂ ಸಹ ಸಭೆಯಲ್ಲಿ ಪಾಲ್ಗೊಂಡಿದ್ದ ನಗರಸಭಾ ಸದಸ್ಯರು ಸಹ ಸಮಾಧಾನಗೊಳ್ಳದೆ ಅಸಮಾಧಾನ ವ್ಯಕ್ತಪಡಿಸಿದರು.
     ನಗರಸಭೆ ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ ೪೦೦೦ ಗುಂಪು ಮನೆಗಳಿಗೆ ೪೪೦೦ ಅರ್ಜಿಗಳು ಬಂದಿದ್ದು, ಈ ಪೈಕಿ ೨೦೫೦ ಅರ್ಜಿದಾರರು ಆಯ್ಕೆಯಾಗಿ ಶುಲ್ಕ ಪಾವತಿಸಿದ್ದಾರೆ. ಇವರು ಬ್ಯಾಂಕಿನವರೊಂದಿಗೆ ಚರ್ಚಿಸಿ ಮುಂದಿನ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕೆಂದರು. ಉಳಿದಂತೆ ೧೯೫೦ ಅರ್ಜಿದಾರರು ಹೊಸದಾಗಿ ಅರ್ಜಿ ಸಲ್ಲಿಸಲು ಇದೀಗ ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ಈ ಹಿಂದೆ ಅರ್ಜಿ ಸಲ್ಲಿಸದವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು ತಕ್ಷಣ ಎಲ್ಲೆಡೆ ವ್ಯಾಪಕ ಪ್ರಚಾರಕ್ಕೆ ಕ್ರಮ ಕೈಗೊಳ್ಳುವಂತೆ ಶಾಸಕರು ಪೌರಾಯುಕ್ತರಿಗೆ ಸೂಚಿಸಿದರು.
   ಸಭೆಯಲ್ಲಿ ಪೌರಾಯುಕ್ತ ಕೆ. ಪರಮೇಶ್, ಇಂಜಿನಿಯರ್ ಪ್ರಸನ್ನಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ, ನಗರಸಭೆ ಇಂಜಿನಿಯರ್ ರಂಗರಾಜಪುರೆ, ನಗರಸಭಾ ಸದಸ್ಯರಾದ ಬಿ.ಟಿ ನಾಗರಾಜ್, ಬಿ.ಕೆ ಮೋಹನ್‌ಕುಮಾರ್, ವಿ. ಕದಿರೇಶ್, ಟಿಪ್ಪುಸುಲ್ತಾನ್, ಸುದೀಪ್‌ಕುಮಾರ್, ಮಣಿ, ಚನ್ನಪ್ಪ, ಜಯಶೀಲ, ಲತಾ ಚಂದ್ರಶೇಖರ್, ಉದಯ್‌ಕುಮಾರ್, ಕಾಂತರಾಜ್, ಜಾರ್ಜ್, ಆರ್. ಮೋಹನ್‌ಕುಮಾರ್, ರಾಜ್‌ಕುಮಾರ್, ಗಂಗಾಧರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Monday, July 5, 2021

ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

ಭದ್ರಾವತಿಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ಖಂಡಿಸಿ  ಜಾತ್ಯಾತೀತ ಜನತಾದಳ ವತಿಯಿಂದ ಶಾರದ ಅಪ್ಪಾಜಿ ನೇತೃತ್ವದಲ್ಲಿ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜು. ೫: ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ಖಂಡಿಸಿ  ಜಾತ್ಯಾತೀತ ಜನತಾದಳ ವತಿಯಿಂದ ಶಾರದ ಅಪ್ಪಾಜಿ ನೇತೃತ್ವದಲ್ಲಿ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.
    ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮುಖರು, ಕೊರೋನಾ ಪರಿಣಾಮ ಜನರ ಬದುಕು ಅತಂತ್ರವಾಗಿದೆ. ಈ ನಡುವೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಹಾಗು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬದುಕು ಮತ್ತಷ್ಟು ಸಂಕಷ್ಟದಿಂದ ಸಾಗಿಸುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿವೆ ಎಂದು ಆರೋಪಿಸಲಾಯಿತು.
   ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕುವ ಮೂಲಕ ಜನ ಸಾಮಾನ್ಯರು ನೆಮ್ಮದಿಯಾಗಿ ಬದುಕು ಸಾಗಿಸಲು ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸುವ ಜೊತೆಗೆ  ಪ್ರಧಾನ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಪಕ್ಷದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಮಾಜಿ ಸದಸ್ಯ ಎಸ್. ಕುಮಾರ್, ನಗರಸಭಾ ಸದಸ್ಯರಾದ ಬಸವರಾಜ ಆನೆಕೊಪ್ಪ, ಜಯಶೀಲ, ವಿಜಯ, ಸವಿತ, ಮುಖಂಡರಾದ ಡಿ.ಟಿ ಶ್ರೀಧರ್, ಅಶೋಕ್‌ಕುಮಾರ್, ನಂಜುಂಡೇಗೌಡ, ಗೊಂದಿ ಜಯರಾಂ, ಡಾರ್ವಿನ್, ಬದರಿನಾರಾಯಣ, ಗುಣಶೇಖರ್, ಶಿವರಾಜ್, ವೆಂಕಟೇಶ್ ಉಜ್ಜನಿಪುರ, ಉಮೇಶ್ ಸೇರಿದಂತೆ, ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ  ಪ್ರಮುಖರು ಇನ್ನಿತರರು ಪಾಲ್ಗೊಂಡಿದ್ದರು.