Tuesday, July 6, 2021

ಆಶ್ರಯ ಯೋಜನೆಯಡಿ ಬಡವರಿಗೆ ಸೂರು : ಖಾಲಿ ಜಾಗ ಗುರುತಿಸುವಲ್ಲಿ ನಿರ್ಲಕ್ಷ್ಯ

ಶಾಸಕ ಬಿ.ಕೆ ಸಂಗಮೇಶ್ವರ್ ತಹಸೀಲ್ದಾರ್ ಕಚೇರಿ ಅಧಿಕಾರಿಗಳ ವಿರುದ್ಧ ಅಸಮಾಧಾನ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ವಸತಿ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡುವ ಹಾಗು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ೯೪ಸಿ ಮತ್ತು ೯೪ಸಿಸಿ ಯೋಜನೆಯಡಿ ಹಕ್ಕು ಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
     ಭದ್ರಾವತಿ, ಜು. ೬: ಬಡವರಿಗೆ ಮನೆ ನಿರ್ಮಿಸಿಕೊಡುವ ಸಂಬಂಧ ಖಾಲಿ ಜಾಗ ಸರ್ವೆ ಮಾಡಿ ಆಶ್ರಯ ಸಮಿತಿಗೆ ವರದಿ  ನೀಡುವಂತೆ ಹಲವು ಬಾರಿ ತಿಳಿಸಿದ್ದರೂ ಸಹ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಜನಪ್ರತಿನಿಧಿಗಳು ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
     ಮಂಗಳವಾರ ನಗರಸಭೆ ಕಛೇರಿ ಸಭಾಂಗಣದಲ್ಲಿ ವಸತಿ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡುವ ಹಾಗು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ೯೪ಸಿ ಮತ್ತು ೯೪ಸಿಸಿ ಯೋಜನೆಯಡಿ ಹಕ್ಕು ಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ನಗರಸಭೆ ವ್ಯಾಪ್ತಿಯ ಬಹುತೇಕ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ಕೆಲವು ಕೊಳಚೆ ಪ್ರದೇಶಗಳಿಗೆ ಇನ್ನೂ ನೀಡಲು ಸಾಧ್ಯವಾಗಿಲ್ಲ. ಕೊಳಚೆ ಪ್ರದೇಶ ಹೊರತುಪಡಿಸಿ ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ೯೪ಸಿ ಯೋಜನೆಯಡಿ ಹಾಗು ಗ್ರಾಮಾಂತರ ಪ್ರದೇಶದಲ್ಲಿ ೯೪ಸಿಸಿ ಯೋಜನೆಯಡಿ ಹಕ್ಕು ಪತ್ರ ನೀಡಲಾಗುವುದು. ಈ ಸಂಬಂಧ ಸರ್ವೆ ಮಾಡಿ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
     ನಗರ ವ್ಯಾಪ್ತಿಯಲ್ಲಿ ಆಶಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಖಾಲಿ ಜಾಗ ಗುರುತಿಸುವಲ್ಲಿ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯತನ ವಹಿಸುತ್ತಿರುವುದು ಸರಿಯಲ್ಲ. ಹಲವಾರು ಬಾರಿ ಸಭೆಯಲ್ಲಿ ಈ ಕುರಿತು ಸೂಚಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಜಾಗ ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಸಿದರು.
    ಉಪತಹಸೀಲ್ದಾರ್ ಮಲ್ಲಿಕಾರ್ಜುನಯ್ಯ ಹಾಗು ಕಂದಾಯಾಧಿಕಾರಿ ಪ್ರಶಾಂತ್ ಜಾಗ ಗುರುತಿಸುವಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರೂ ಸಹ ಸಭೆಯಲ್ಲಿ ಪಾಲ್ಗೊಂಡಿದ್ದ ನಗರಸಭಾ ಸದಸ್ಯರು ಸಹ ಸಮಾಧಾನಗೊಳ್ಳದೆ ಅಸಮಾಧಾನ ವ್ಯಕ್ತಪಡಿಸಿದರು.
     ನಗರಸಭೆ ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ ೪೦೦೦ ಗುಂಪು ಮನೆಗಳಿಗೆ ೪೪೦೦ ಅರ್ಜಿಗಳು ಬಂದಿದ್ದು, ಈ ಪೈಕಿ ೨೦೫೦ ಅರ್ಜಿದಾರರು ಆಯ್ಕೆಯಾಗಿ ಶುಲ್ಕ ಪಾವತಿಸಿದ್ದಾರೆ. ಇವರು ಬ್ಯಾಂಕಿನವರೊಂದಿಗೆ ಚರ್ಚಿಸಿ ಮುಂದಿನ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕೆಂದರು. ಉಳಿದಂತೆ ೧೯೫೦ ಅರ್ಜಿದಾರರು ಹೊಸದಾಗಿ ಅರ್ಜಿ ಸಲ್ಲಿಸಲು ಇದೀಗ ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ಈ ಹಿಂದೆ ಅರ್ಜಿ ಸಲ್ಲಿಸದವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು ತಕ್ಷಣ ಎಲ್ಲೆಡೆ ವ್ಯಾಪಕ ಪ್ರಚಾರಕ್ಕೆ ಕ್ರಮ ಕೈಗೊಳ್ಳುವಂತೆ ಶಾಸಕರು ಪೌರಾಯುಕ್ತರಿಗೆ ಸೂಚಿಸಿದರು.
   ಸಭೆಯಲ್ಲಿ ಪೌರಾಯುಕ್ತ ಕೆ. ಪರಮೇಶ್, ಇಂಜಿನಿಯರ್ ಪ್ರಸನ್ನಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ, ನಗರಸಭೆ ಇಂಜಿನಿಯರ್ ರಂಗರಾಜಪುರೆ, ನಗರಸಭಾ ಸದಸ್ಯರಾದ ಬಿ.ಟಿ ನಾಗರಾಜ್, ಬಿ.ಕೆ ಮೋಹನ್‌ಕುಮಾರ್, ವಿ. ಕದಿರೇಶ್, ಟಿಪ್ಪುಸುಲ್ತಾನ್, ಸುದೀಪ್‌ಕುಮಾರ್, ಮಣಿ, ಚನ್ನಪ್ಪ, ಜಯಶೀಲ, ಲತಾ ಚಂದ್ರಶೇಖರ್, ಉದಯ್‌ಕುಮಾರ್, ಕಾಂತರಾಜ್, ಜಾರ್ಜ್, ಆರ್. ಮೋಹನ್‌ಕುಮಾರ್, ರಾಜ್‌ಕುಮಾರ್, ಗಂಗಾಧರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment