Friday, August 6, 2021

ಆ.೭ರಂದು ‘ರಸ ರಾಮಾಯಣ’

     ಭದ್ರಾವತಿ, ಆ. ೬: ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಯಕ ವರ್ಷ ಯೋಜನೆಯಡಿ ನಗರದ ಭೂಮಿಕಾ ಸಹಯೋಗದೊಂದಿಗೆ ಪ್ರೊ. ಗಜಾನನ ಹೆಗಡೆ ಮೈಸೂರು ವಿರಚಿತ ಕೃತಿ ಆಧಾರಿತ 'ರಸ ರಾಮಾಯಣ' ಗಾಯನ-ಚಿತ್ರಣ-ಭಾವಾಭಿನಯ-ವ್ಯಾಖ್ಯಾನ ವಿಶೇಷ ಕಾರ್ಯಕ್ರಮ ಆ.೭ರಂದು ಸಂಜೆ ೫.೩೦ಕ್ಕೆ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ, ಕನ್ನಡ ಜಾಗೃತಿ ಸಮಿತಿಯ ಎಂ.ಎನ್ ಸುಂದರ್‌ರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
    ರಂಗಕಲಾವಿದ, ಕಿರುತೆರೆ ನಟ, ಕನ್ನಡ ಕಾಯಕಪಡೆಯ ಅಪರಂಜಿ ಶಿವರಾಜ್, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಾಯ ಹೆಗಡೆ ಕಪ್ಪೆಕೆರೆ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಆ.೮ರಂದು ವಿದ್ಯುತ್ ವ್ಯತ್ಯಯ

      ಭದ್ರಾವತಿ, ಆ. ೬: ನಗರ ಉಪವಿಭಾಗ ಘಟಕ-೪ರ ಶಾಖಾ ವ್ಯಾಪ್ತಿಯ ವಿದ್ಯುತ್ ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.೮ರಂದು ಬೆಳಿಗ್ಗೆ ೧೦.೩೦ ರಿಂದ ಸಂಜೆ ೫.೩೦ರ ವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.
       ಸೀಗೇಬಾಗಿ, ಶ್ರೀ ಸತ್ಯ ಸಾಯಿ ನಗರ, ಸೈಯ್ಯದ್  ಕಾಲೋನಿ, ಅಂಬೇಡ್ಕರ್ ಬೀದಿ, ಕಣಕಟ್ಟೆ, ಭದ್ರಾ ಕಾಲೋನಿ, ಮಜ್ಜಿಗೇನಹಳ್ಳಿ, ಗೌಡರ ಹಳ್ಳಿ, ಬಾಬಳ್ಳಿ ಮತ್ತು ಲಕ್ಷ್ಮೀಪುರ ಸೇರಿದಂತೆ ಇತ್ಯಾದಿ ಭಾಗಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.


ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಜಲಾಶಯದಿಂದ ೨೦ ಟಿ.ಎಂ.ಸಿ ನೀರು ಹರಿಸಿ : ಕೆ.ಟಿ ಗಂಗಾಧರ್

ಭದ್ರಾವತಿ ತಾಲೂಕಿನ ಜೀವನದಿ ಭದ್ರಾನದಿ ಜಲಾಶಯಕ್ಕೆ ಪ್ರತಿ ವರ್ಷದಂತೆ ಈ ಬಾರಿ ಸಹ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ರೈತ ವರಿಷ್ಠ ಕೆ.ಟಿ ಗಂಗಾಧರ್ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಿದರು.  
     ಭದ್ರಾವತಿ, ಆ. ೬:  ಭದ್ರಾನದಿ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರು ಹರಿಸಲು ಭದ್ರಾ ಜಲಾಯಶಯದಿಂದ ನಿಗದಿ ಪಡಿಸಲಾಗಿರುವ  ೨೦ ಟಿ.ಎಂ.ಸಿ ನೀರನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸದೆ ಬೇಸಿಗೆ ಬೆಳೆಗಳಿಗೆ ನೀರಿನ ಅಗತ್ಯತೆ ಹಿನ್ನಲೆಯಲ್ಲಿ ಕಾಯ್ದಿರಿಸಿಕೊಳ್ಳುವಂತೆ ರೈತ ವರಿಷ್ಠ ಕೆ.ಟಿ ಗಂಗಾಧರ್ ಆಗ್ರಹಿಸಿದರು.
     ಅವರು ಶುಕ್ರವಾರ ತಾಲೂಕಿನ ಜೀವನದಿ ಭದ್ರಾನದಿ ಜಲಾಶಯಕ್ಕೆ ಪ್ರತಿ ವರ್ಷದಂತೆ ಈ ಬಾರಿ ಸಹ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಿ ಮಾತನಾಡಿದರು.
    ಪ್ರಸ್ತುತ ೬ ಜಿಲ್ಲೆಗಳು ಜಲಾಶಯ ವ್ಯಾಪ್ತಿಗೆ ವಿಸ್ತರಿಸಿಕೊಂಡಿವೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದೀಗ ಭದ್ರಾ ಜಲಾಶಯದಿಂದ ೨೦ ಟಿ.ಎಂ.ಸಿ ನೀರು ಭದ್ರಾ ಮೇಲ್ದಂಡೆ   ಯೋಜನೆಗೆ ಹರಿಸಲು ಸರ್ಕಾರ ನಿರ್ಧರಿಸಿದೆ. ಈ ನೀರನ್ನು ಭದ್ರಾ ಜಲಾಶಯದಿಂದ ಬಿಡುಗಡೆಗೊಳಿಸದೆ ತುಂಗಾ ಜಲಾಶಯದಿಂದ ಬಿಡುಗಡೆಗೊಳಿಸಬೇಕು. ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
     ಇತ್ತೀಚೆಗೆ ಬೆಳಕಿಗೆ ಬಂದಿರುವ ಜಲಾಶಯದಲ್ಲಿ ನಡೆದಿರುವ ಕಳಪೆ ಕಾಮಗಾರಿ ಕುರಿತು ತಕ್ಷಣ ತಾಂತ್ರಿಕ ಸಮಿತಿಯಿಂದ ವರದಿ ಸಿದ್ದಪಡಿಸಿ ಜಲಾಶಯದಿಂದ ನೀರು ಬಿಡುಗಡೆ ಸ್ಥಗಿತಗೊಂಡ ತಕ್ಷಣ ಕಾಮಗಾರಿ ಆರಂಭಿಸಬೇಕು. ಕಾಮಗಾರಿ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗಮನ ಹರಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.  
     ಮುಖಂಡರಾದ ಯಶವಂತರಾವ್ ಘೋರ್ಪಡೆ, ಅಶೋಕ್‌ರಾವ್ ಘೋರ್ಪಡೆ, ರಾಮಚಂದ್ರರಾವ್ ಘೋರ್ಪಡೆ, ಹಿರಿಯಣ್ಣಯ್ಯ, ಡಿ.ವಿ ವೀರೇಶ್, ಪುಟ್ಟಪ್ಪ, ಕೂಡ್ಲಿಗೆರೆ ಮೋಹನ್, ರಮೇಶ್, ಲವಾಕುಮಾರ್, ಜಗದೀಶ್‌ಗೌಡ, ಮಂಜಪ್ಪಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಪರಿಚಿತ ವ್ಯಕ್ತಿ ಸಾವು : ಪತ್ತೆಗೆ ಮನವಿ

ಭದ್ರಾವತಿಯಲ್ಲಿ ಸುಮಾರು ೭೦ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದು, ಯಾರಿಗಾದರೂ ಆ ವ್ಯಕ್ತಿಯ ಸುಳಿವು ಕಂಡು ಬಂದಲ್ಲಿ ಮಾಹಿತಿ ನೀಡಲು ಕೋರಲಾಗಿದೆ.
    ಭದ್ರಾವತಿ, ಆ. ೬: ಸುಮಾರು ೭೦ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದು, ಯಾರಿಗಾದರೂ ಆ ವ್ಯಕ್ತಿಯ ಸುಳಿವು ಕಂಡು ಬಂದಲ್ಲಿ ಮಾಹಿತಿ ನೀಡಲು ಕೋರಲಾಗಿದೆ.
    ನಗರದ ಸಿ.ಎನ್ ರಸ್ತೆ ಪರಿಮಳ ಹೋಟೆಲ್ ಸಮೀಪದ ಅಂಗಡಿಯೊಂದರ ಮುಂಭಾಗ ಅನಾರೋಗ್ಯದಿಂದ ಅಸ್ವಸ್ಥಗೊಂಡು ಮಲಗಿದ್ದ ಅಪರಿಚಿತ ವ್ಯಕ್ತಿಯನ್ನು ಅಂಗಡಿ ಮಾಲೀಕರು ೧೦೮ ವಾಹನಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
      ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾರಿಗಾದರೂ ಅಪರಿಚಿತ ವ್ಯಕ್ತಿಯ ಬಗ್ಗೆ ಸುಳಿವು ಕಂಡು ಬಂದಲ್ಲಿ. ದೂ. ಸಂಖ್ಯೆ ೦೮೨೮೨-೨೬೬೩೪೩ ಅಥವಾ ಮೊ: ೯೪೮೦೮೦೩೩೫೪ ಸಂಖ್ಯೆಗೆ ಕರೆ ಮಾಡುವಂತೆ ಕೋರಲಾಗಿದೆ.

Thursday, August 5, 2021

ಸಚಿವ ಕೆ.ಎಸ್ ಈಶ್ವರಪ್ಪಗೆ ಅದ್ದೂರಿ ಸ್ವಾಗತ : ಸನ್ಮಾನ, ಅಭಿನಂದನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಗುರುವಾರ ಶಿವಮೊಗ್ಗ ನಗರಕ್ಕೆ ಆಗಮಿಸುವ ವೇಳೆ ಕೆ.ಎಸ್ ಈಶ್ವರಪ್ಪ ಅವರಿಗೆ ಭದ್ರಾವತಿ ನಗರದಲ್ಲಿ ಬಿಜೆಪಿ ಮಂಡಲ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯಿತು.
    ಭದ್ರಾವತಿ, ಆ. ೫: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಗುರುವಾರ  ಶಿವಮೊಗ್ಗ ನಗರಕ್ಕೆ ಆಗಮಿಸುವ ವೇಳೆ ಕೆ.ಎಸ್ ಈಶ್ವರಪ್ಪ ಅವರಿಗೆ ನಗರದಲ್ಲಿ ಬಿಜೆಪಿ ಮಂಡಲ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯಿತು.
     ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಮುಂಭಾಗ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗು ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸುವ ಜೊತೆಗೆ ಸನ್ಮಾನಿಸಿ ಅಭಿನಂದಿಸಿದರು. ಜಿಲ್ಲೆಯ ಹಿರಿಯ ರಾಜಕಾರಣಿಗಳು, ಅನುಭವಿಗಳಾಗಿರುವ ಈಶ್ವರಪ್ಪನವರಿಗೆ ಪುನಃ ಸಚಿವ ಸ್ಥಾನ ಲಭಿಸಿರುವುದು ಸಂತಸದ ವಿಚಾರವಾಗಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.
      ಪಕ್ಷದ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್, ರಾಜ್ಯ ಪ್ರಕೋಸ್ಟಗಳ ಸಂಯೋಜಕ ಎಂ.ಬಿ ಭಾನುಪ್ರಕಾಶ್, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಶಿವರಾಜ್, ಜಿಲ್ಲಾ ಖಜಾಂಚಿ ಎಸ್. ರಮೇಶ್, ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕರ್ನಾಟಕ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ಸದಸ್ಯ ಮಂಗೋಟೆ ರುದ್ರೇಶ್, ಸೂಡಾ ಸದಸ್ಯರಾದ ವಿ. ಕದಿರೇಶ್, ರಾಮಲಿಂಗಯ್ಯ, ಬಿ.ಎಸ್ ನಾರಾಯಣಪ್ಪ, ಎಂ.ಎಸ್ ಸುರೇಶಪ್ಪ, ಯುವ ಮೋರ್ಚಾ ಅಧ್ಯಕ್ಷ ವಿಜಯ್, ಮಹಿಳಾ ಘಟಕದ ಪ್ರಮುಖರಾದ ಆರ್.ಎಸ್ ಶೋಭಾ, ಅನ್ನಪೂರ್ಣ ಸಾವಂತ್, ಶೋಭಾ ಪಾಟೀಲ್, ಸುಲೋಚನಾ, ಮಂಜುಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾ ಜಲಾಶಯದಿಂದ ೧೬೦೦ ಕ್ಯೂಸೆಕ್ಸ್ ನೀರು ಬಿಡುಗಡೆ

ಭದ್ರಾವತಿ ತಾಲೂಕಿನ ಜೀವ ನದಿ ಭದ್ರಾ ನದಿ ಜಲಾಶಯ ಈ ಬಾರಿ ನಿರೀಕ್ಷೆಗೂ ಮೊದಲೇ ಭರ್ತಿಯಾಗಿದ್ದು, ಗುರುವಾರ ಬೆಳಿಗ್ಗೆ ೪ ಕ್ರಸ್ಟ್ ಗೇಟ್ ಮೂಲಕ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಯಿತು.
      ಭದ್ರಾವತಿ, ಆ. ೫: ತಾಲೂಕಿನ ಜೀವ ನದಿ ಭದ್ರಾ ನದಿ ಜಲಾಶಯ ಈ ಬಾರಿ ನಿರೀಕ್ಷೆಗೂ ಮೊದಲೇ ಭರ್ತಿಯಾಗಿದ್ದು, ಗುರುವಾರ ಬೆಳಿಗ್ಗೆ ೪ ಕ್ರಸ್ಟ್ ಗೇಟ್ ಮೂಲಕ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಯಿತು.
    ಬೆಳಿಗ್ಗೆ ೧೧.೧೫ರ ಸುಮಾರಿಗೆ ಜಲಾಶಯದಿಂದ ೪ ಕ್ರಸ್ಟ್ ಗೇಟ್‌ಗಳ ಮೂಲಕ ಸುಮಾರು ೧೬೦೦ ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ. ಬಾಳೆಹೊನ್ನೂರು ಗೇಜ್ ಮಾಹಿತಿಯಂತೆ ಮಧ್ಯಾಹ್ನ ೧.೩೦ ಸುಮಾರಿಗೆ ಜಲಾಶಯದ ನೀರಿನ ಮಟ್ಟ ೧೮೪.೩ ಅಡಿ ಇದ್ದು, ೬೮೬೪ ಕ್ಯೂಸೆಕ್ಸ್ ಒಳಹರಿವು ಹೊಂದಿದೆ.
   ಜಲಾಶಯದ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಜಲಾಶಯಕ್ಕೆ ಹರಿದು ಬರುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಯಾವುದೇ ಕ್ಷಣದಲ್ಲಿ ಹೊರ ಬಿಡುವ ನೀರಿನ ಪ್ರಮಾಣದಲ್ಲೂ ಏರಿಕೆಯಾಗುವ ಲಕ್ಷಣಗಳು ಕಂಡು ಬರುತ್ತಿದೆ.
   ಈಗಾಗಲೇ ತಾಲೂಕು ಆಡಳಿತ ನದಿ ಪಾತ್ರದ ಹಾಗು ತಗ್ಗು ಪ್ರದೇಶದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಿದ್ದು, ನದಿ ತಡದಲ್ಲಿ ಸಾರ್ವಜನಿಕರು, ಕುರಿ ಹಾಗು ದನಗಾಯಿಗಳು ತಿರುಗಾಡದಂತೆ ಸೂಚಿಸಲಾಗಿದೆ.



ಮಹಿಳಾ ಸಮಾಜದಿಂದ ಬಜರಂಗದಳ ಕೊರೋನಾ ವಾರಿಯರ್ಸ್‌ಗಳಿಗೆ ಸನ್ಮಾನ

ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಉಚಿತವಾಗಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಬಜರಂಗದಳ ಕೊರೋನಾ ವಾರಿಯರ್ಸ್‌ಗಳನ್ನು ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
     ಭದ್ರಾವತಿ, ಆ. ೫: ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಉಚಿತವಾಗಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಬಜರಂಗದಳ ಕೊರೋನಾ ವಾರಿಯರ್ಸ್‌ಗಳನ್ನು ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
    ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬ ವರ್ಗದವರೇ ಹಿಂದೆ ಮುಂದೆ ನೋಡುವ ಸಂದರ್ಭದಲ್ಲಿ ಅದರಲ್ಲೂ ಉಚಿತವಾಗಿ ಮೃತ ದೇಹಗಳ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಸಂಕಷ್ಟದ ಸಮಯದಲ್ಲಿ ನೆರವಾಗಿ ನಿಂತಿರುವ ಬಜರಂಗದಳ ಕಾರ್ಯಕರ್ತರ ಸೇವೆ ಶ್ಲಾಘನೀಯವಾಗಿದ್ದು, ಈ ಯುವಕರ ಸೇವೆಯನ್ನು ನಗರದ ವಿವಿಧ ಸಂಘ-ಸಂಸ್ಥೆಗಳು ಗುರುತಿಸುವ ಮೂಲಕ ಸನ್ಮಾನಿಸಿ ಗೌರವಿಸುತ್ತಿವೆ. ಇದೆ ರೀತಿ ಮಹಿಳಾ ಸೇವಾ ಸಮಾಜದ ವತಿಯಿಂದ ಸಹ ಸನ್ಮಾನಿಸಿ ಗೌರವಿಸಲಾಯಿತು.
    ಸಮಾಜದ ಸಂಸ್ಥಾಪಕಿ ರತ್ನಮ್ಮ ಶ್ರೀನಿವಾಸ ಮೂರ್ತಿ ಹಾಗು ಗೌರವಾಧ್ಯಕ್ಷೆ ವಸುಧಾ ಮುಕುಂದ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಲಾಯಿತು.
     ಸಂಘದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶೋಭಾ ಗಂಗಾರಾಜ್, ಖಜಾಂಚಿ ಜಯಂತಿ ನಾಗರಾಜ್ ಶೇಟ್, ಕಮಲಕುಮಾರಿ, ಇಂದಿರಾ ರಮೇಶ್, ಲೋಹಿತಾ ನಂಜಪ್ಪ, ಶಾರದ ಶ್ರೀನಿವಾಸ್, ಡಾ. ವೀಣಾ ಭಟ್, ರೈಲ್ವೆ ಸಲಹಾ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.