ಭದ್ರಾವತಿ ತಾಲೂಕಿನ ಜೀವನದಿ ಭದ್ರಾನದಿ ಜಲಾಶಯಕ್ಕೆ ಪ್ರತಿ ವರ್ಷದಂತೆ ಈ ಬಾರಿ ಸಹ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ರೈತ ವರಿಷ್ಠ ಕೆ.ಟಿ ಗಂಗಾಧರ್ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಿದರು.
ಭದ್ರಾವತಿ, ಆ. ೬: ಭದ್ರಾನದಿ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರು ಹರಿಸಲು ಭದ್ರಾ ಜಲಾಯಶಯದಿಂದ ನಿಗದಿ ಪಡಿಸಲಾಗಿರುವ ೨೦ ಟಿ.ಎಂ.ಸಿ ನೀರನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸದೆ ಬೇಸಿಗೆ ಬೆಳೆಗಳಿಗೆ ನೀರಿನ ಅಗತ್ಯತೆ ಹಿನ್ನಲೆಯಲ್ಲಿ ಕಾಯ್ದಿರಿಸಿಕೊಳ್ಳುವಂತೆ ರೈತ ವರಿಷ್ಠ ಕೆ.ಟಿ ಗಂಗಾಧರ್ ಆಗ್ರಹಿಸಿದರು.
ಅವರು ಶುಕ್ರವಾರ ತಾಲೂಕಿನ ಜೀವನದಿ ಭದ್ರಾನದಿ ಜಲಾಶಯಕ್ಕೆ ಪ್ರತಿ ವರ್ಷದಂತೆ ಈ ಬಾರಿ ಸಹ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಿ ಮಾತನಾಡಿದರು.
ಪ್ರಸ್ತುತ ೬ ಜಿಲ್ಲೆಗಳು ಜಲಾಶಯ ವ್ಯಾಪ್ತಿಗೆ ವಿಸ್ತರಿಸಿಕೊಂಡಿವೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದೀಗ ಭದ್ರಾ ಜಲಾಶಯದಿಂದ ೨೦ ಟಿ.ಎಂ.ಸಿ ನೀರು ಭದ್ರಾ ಮೇಲ್ದಂಡೆ ಯೋಜನೆಗೆ ಹರಿಸಲು ಸರ್ಕಾರ ನಿರ್ಧರಿಸಿದೆ. ಈ ನೀರನ್ನು ಭದ್ರಾ ಜಲಾಶಯದಿಂದ ಬಿಡುಗಡೆಗೊಳಿಸದೆ ತುಂಗಾ ಜಲಾಶಯದಿಂದ ಬಿಡುಗಡೆಗೊಳಿಸಬೇಕು. ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇತ್ತೀಚೆಗೆ ಬೆಳಕಿಗೆ ಬಂದಿರುವ ಜಲಾಶಯದಲ್ಲಿ ನಡೆದಿರುವ ಕಳಪೆ ಕಾಮಗಾರಿ ಕುರಿತು ತಕ್ಷಣ ತಾಂತ್ರಿಕ ಸಮಿತಿಯಿಂದ ವರದಿ ಸಿದ್ದಪಡಿಸಿ ಜಲಾಶಯದಿಂದ ನೀರು ಬಿಡುಗಡೆ ಸ್ಥಗಿತಗೊಂಡ ತಕ್ಷಣ ಕಾಮಗಾರಿ ಆರಂಭಿಸಬೇಕು. ಕಾಮಗಾರಿ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗಮನ ಹರಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಮುಖಂಡರಾದ ಯಶವಂತರಾವ್ ಘೋರ್ಪಡೆ, ಅಶೋಕ್‌ರಾವ್ ಘೋರ್ಪಡೆ, ರಾಮಚಂದ್ರರಾವ್ ಘೋರ್ಪಡೆ, ಹಿರಿಯಣ್ಣಯ್ಯ, ಡಿ.ವಿ ವೀರೇಶ್, ಪುಟ್ಟಪ್ಪ, ಕೂಡ್ಲಿಗೆರೆ ಮೋಹನ್, ರಮೇಶ್, ಲವಾಕುಮಾರ್, ಜಗದೀಶ್‌ಗೌಡ, ಮಂಜಪ್ಪಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment