ಉತ್ಸವ ಮೆರವಣಿಗೆ, ಬನ್ನಿ ಮುಡಿದ ತಹಸೀಲ್ದಾರ್ ಆರ್. ಪ್ರದೀಪ್
ಭದ್ರಾವತಿ ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಉತ್ಸವ ಮೆರವಣಿಗೆಯಲ್ಲಿ ದೇವಾನು ದೇವತೆಗಳು ಪಾಲ್ಗೊಂಡಿರುವುದು.
ಭದ್ರಾವತಿ, ಅ. ೫: ನಗರಸಭೆ ವತಿಯಿಂದ ಸುಮಾರು ೧೦ ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಆಚರಣೆಗೆ ತಹಸೀಲ್ದಾರ್ ಆರ್. ಪ್ರದೀಪ್‌ರವರು ಬನ್ನಿ ಮುಡಿಯುವ ಮೂಲಕ ಬುಧವಾರ ರಾತ್ರಿ ಸಂಪನ್ನಗೊಳಿಸಿದರು.
ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ರಂಗನಾಥ ಶರ್ಮರವರ ನೇತೃತ್ವದ ತಂಡ ಧಾರ್ಮಿಕ ಆಚರಣೆ ನೆರವೇರಿಸಿತು. ಕೊನೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಬನ್ನಿ ಮುಡಿಯುವ ಮೂಲಕ ಆಚರಣೆಗೆ ತೆರೆ ಎಳೆದರು. ಸಿಡಿಮದ್ದು ಪ್ರದರ್ಶನ ಹಾಗು ರಾವಣ ಸಂಹಾರ ಎಲ್ಲರ ಗಮನ ಸೆಳೆಯಿತು.
ಭದ್ರಾವತಿ ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಬನ್ನಿ ಮುಡಿದರು.
ಮುಂದಿನ ವರ್ಷ ಇನ್ನೂ ಅದ್ದೂರಿ ಆಚರಣೆ :
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ, ಪರಂಪರೆ ಇಂದಿನ ಪೀಳಿಗೆಗೆ ಉಳಿಸಿಕೊಡುವ ನಿಟ್ಟಿನಲ್ಲಿ ನಾಡಹಬ್ಬ ದಸರಾ ಆಚರಣೆಯನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಗಿದೆ. ಮುಂದಿನ ವರ್ಷ ಇನ್ನೂ ಅದ್ದೂರಿಯಾಗಿ ಆಚರಿಸಲು ಪ್ರತಿಯೊಬ್ಬರು ಸಹಕರಿಸಬೇಕೆಂದರು.
ಇದಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಹುತ್ತಾ ಕಾಲೋನಿಯಿಂದ ಉತ್ಸವ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಮಳೆ ಹಿನ್ನೆಲೆಯಲ್ಲಿ ಉತ್ಸವ ಮೆರವಣಿಗೆ ವಿಳಂಬವಾಯಿತು. ಮಧ್ಯಾಹ್ನ ೨:೩೦ಕ್ಕೆ ಆರಂಭಗೊಳ್ಳಬೇಕಿದ್ದ ಉತ್ಸವ ಮೆರವಣಿಗೆ ಸಂಜೆ ೪:೩೦ ಆದರೂ ಸಹ ಆರಂಭಗೊಳ್ಳಲಿಲ್ಲ. ಸುಮಾರು ೫೦ಕ್ಕೂ ಹೆಚ್ಚು ಅಲಂಕೃತಗೊಂಡ ದೇವಾನು ದೇವತೆಗಳು ಪಾಲ್ಗೊಂಡಿದ್ದವು. ಈ ನಡುವೆ ವಿಶ್ವ ಸ್ವರೂಪಿಣಿ ಮಾರಿಯಮ್ಮ ದೇವರು ಹೆಚ್ಚು ಆಕರ್ಷಕವಾಗಿ ಕಂಡು ಬರುವ ಮೂಲಕ ಎಲ್ಲರ ಗಮನ ಸೆಳೆಯತು. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಇನ್ನಿತರ ಕಲಾ ತಂಡಗಳು ಭಾಗವಹಿಸಿದ್ದವು.
ಭದ್ರಾವತಿ ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ರಾವಣನ ಸಂಹಾರ ಎಲ್ಲರನ್ನು ಆಕರ್ಷಿಸಿತು.
ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಪೌರಾಕಾರ್ಮಿಕರ ಸಂಘದ ಅಧ್ಯಕ್ಷ ಮಂಜುನಾಥ್ ಹಾಗು ಪದಾಧಿಕಾರಿಗಳು, ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು, ಸೇವಾಕರ್ತರಾದ ರಮಾಕಾಂತ್, ನರಸಿಂಹಚಾರ್, ಶ್ರೀನಿವಾಸ್, ಮಾರುತಿ, ಪವನ್‌ಕುಮಾರ್ ಉಡುಪ, ಸುಧೀಂದ್ರ, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಪ್ರಮುಖರು, ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.