೪.೯೫ ಲಕ್ಷ ರು. ಮೌಲ್ಯದ ಒಟ್ಟು ೨೩೪ ಚೀಲ ಗೋಧಿ ವಶ
![](https://blogger.googleusercontent.com/img/a/AVvXsEg2JXb5qKQk0y-uvbuQ0H80Y7HSOkaeXjMeONOOqElHQKeTVhrwMl8TlN4lEFoiL6rKWqyeymQlXQt3xi9-nNI33S9DdABy77hPa7mZZL25Wj_3Gqlc5OArcqjKqGb8BAeSaHmOcSER-752FTbjvoKag5aMSiVxhBJqhB0mKClGhzhuxf-wHwo09tK_BQ=w400-h300-rw)
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ(ಕೆಎಫ್ಸಿಎಸ್ಸಿ)ಕ್ಕೆ ಸೇರಿದ ಕಡೂರು-೧ ಗೋದಾಮಿಗೆ ಸರಬರಾಜು ಮಾಡಬೇಕಿದ್ದ ಗೋಧಿಯನ್ನು ಅಕ್ರಮವಾಗಿ ಬೇರೆಡೆ ದಾಸ್ತಾನು ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಕಳೆದ ೩ ದಿನಗಳ ಹಿಂದೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿ, ನ. ೫ : ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ(ಕೆಎಫ್ಸಿಎಸ್ಸಿ)ಕ್ಕೆ ಸೇರಿದ ಕಡೂರು-೧ ಗೋದಾಮಿಗೆ ಸರಬರಾಜು ಮಾಡಬೇಕಿದ್ದ ಗೋಧಿಯನ್ನು ಅಕ್ರಮವಾಗಿ ಬೇರೆಡೆ ದಾಸ್ತಾನು ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಕಳೆದ ೩ ದಿನಗಳ ಹಿಂದೆ ನಡೆದಿದೆ.
ಒಟ್ಟು ಸುಮಾರು ೪,೯೫,೦೦೦ ರು. ಮೌಲ್ಯದ ಒಟ್ಟು ೫೦ ಕೆ.ಜಿ ತೂಕದ ಒಟ್ಟು ೨೩೪ ಚೀಲ ಗೋಧಿಯನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿರುವ ಲಾರಿ ಚಿಕ್ಕಮಗಳೂರು ಜಿಲ್ಲೆಯ ಸಗಟು ಸಾಗಾಣಿಕೆ ಗುತ್ತಿಗೆದಾರರೊಬ್ಬರಿಗೆ ಸೇರಿದೆ ಎನ್ನಲಾಗಿದೆ.
ಈ ಲಾರಿಯಲ್ಲಿ ನಗರದ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ ಸಮೀಪದಲ್ಲಿರುವ ಭಾರತೀಯ ಆಹಾರ ನಿಗಮ ಗೋದಾಮಿನಿಂದ ಪಡೆದ ಗೋಧಿಯನ್ನು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲೋರ್ ಮಿಲ್ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲು ಯತ್ನಿಸಲಾಗಿತ್ತು. ಖಚಿತ ಮಾಹಿತಿ ಆಧಾರದ ಮೇರೆಗೆ ಆಹಾರ ಇಲಾಖೆ ಅಧಿಕಾರಿ ಸುನೀತ ಹಾಗು ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ವಶಪಡಿಸಿಕೊಳ್ಳಲಾಗಿರುವ ಗೋಧಿ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವುದಾಗಿದ್ದು, ಹೆಚ್ಚಿನ ಬೆಲೆಗೆ ಖಾಸಗಿಯವರಿಗೆ ಮಾರಾಟ ಮಾಡಲು ಯತ್ನಿಸಲಾಗುತ್ತಿತ್ತು ಎನ್ನಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ) ಮುಖಂಡರಾದ ಎನ್. ಸಂತೋಷ್ ಮತ್ತು ಎ. ಶರತ್ಕುಮಾರ್ರವರು ಕಾರ್ಯಾಚರಣೆಯಲ್ಲಿ ವಶಪಡಿಸಲಾಗಿರುವ ಗೋಧಿ ತುಂಬಿದ ಲಾರಿ ಚಿಕ್ಕಮಗಳೂರು ಜಿಲ್ಲೆಯ ಸಗಟು ಸಾಗಾಣಿಕೆ ಗುತ್ತಿಗೆದಾರರಾದ ಬೇಲೂರು ಎಂ.ಕೆ ರೋಡ್ ಲೈನ್ಸ್ ಮಾಲೀಕ ಡಿ.ಪಿ ನಾಗೇಶ್ ಎಂಬುವರಿಗೆ ಸೇರಿದ್ದಾಗಿದೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿ ಒತ್ತಾಯಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರ ಮಾಹಿತಿ ಮೇರೆಗೆ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ನೆರವಾಗಿದ್ದು, ಯಶಸ್ವಿ ಕಾರ್ಯಚರಣೆ ನಡೆಸಿರುವ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.