Thursday, October 24, 2024

ಬಿಳಿಕಿ ಹಿರೇಮಠದಲ್ಲಿ ಅ.೩೦ರಂದು ಇಷ್ಟಲಿಂಗ ಮಹಾಪೂಜೆ, ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭ


    ಭದ್ರಾವತಿ : ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ಹಾಗು ಲಿಂಗೈಕ್ಯ ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳವರ ೫೭ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭ ಅ.೩೦ರಂದು ನಡೆಯಲಿದೆ. 
    ಅಂದು ಬೆಳಿಗ್ಗೆ ೬ ಗಂಟೆಗೆ ಗಂಗೆ ಪೂಜೆಯೊಂದಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಶ್ರೀ ವೀರಭದ್ರಸ್ವಾಮಿಗೆ ಮತ್ತು ಶ್ರೀ ಶಕ್ತಿಮಾತೆ ಚೌಡೇಶ್ವರಿ ದೇವಿಗೆ ಮಹಾರುದ್ರಾಭಿಷೇಕ, ಕುಂಕುಮಾರ್ಚನೆ, ಬಿಲ್ವಾರ್ಚನೆ, ಅಷ್ಟೋತ್ತರ, ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ಮತ್ತು ೮ ಗಂಟೆಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಅಷ್ಟಲಿಂಗ ಮಹಾಪೂಜೆ ಹಾಗು ೧೦ ಗಂಟೆಗೆ ಅಂಗೈಕ್ಯ ಶ್ರೀಗಳವರ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭ ನಡೆಯಲಿದೆ. 
    ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದು,  ಖಾಸಾ ಶಾಖಾಮಠ, ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ,  ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗು ಬಿಳಿಕಿ ಹಿರೇಮಠ ಗೌರವಾಧ್ಯಕ್ಷ ಟಿ. ವಿ. ಈಶ್ವರಯ್ಯ ಉಪಸ್ಥಿತರುವರು. 
    ಸಂಸದ ಬಿ.ವೈ ರಾಘವೇಂದ್ರ ಸಮಾರಂಭ ಉದ್ಘಾಟಿಸಲಿದ್ದು, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ. ಕೆ. ಸಂಗಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. 
    ಹೊನ್ನಾಳಿ ಹಿರೇಕಲ್ಮಠದ ಶ್ರೀ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ, ಹಾಲಸ್ವಾಮಿಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂಥಿಮಠದ  ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ,  ತೊಗರ್ಶಿ ಪಂಚವಣ್ಣಿಗಿಮಠದ ಶ್ರೀ ಚನ್ನವೀರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಬೀರೂರು ಬಾಳೆಹೊನ್ನೂರು ಖಾಸಾ ಶಾಖಾಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕೆ. ಬಿದಿರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ,  ಮೆಟಿಕುರ್ಕೆಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಸಂಸ್ಥಾನ ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ರಾಮಲಿಂಗೇಶ್ವರಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠ, ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕುರವತ್ತಿ ಹಿರೇಮಠದ ಶ್ರೀ ಸಿದ್ಧನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ದಿಂಡದಹಳ್ಳಿ ಧರ್ಮಕ್ಷೇತ್ರ ಮಠದ  ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ನಂದಿಪುರಮಠದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಹಣ್ಣೆಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು  ಬುಡರಕಟ್ಟಿ ಶ್ರೀಗುರು ಮಡಿವಾಳೇಶ್ವರಮಠದ ಶ್ರೀ ಶಿವಪಂಚಾಕ್ಷರಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.  
    ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎನ್. ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಶಿವಮೊಗ್ಗ ಬಸವೇಶ್ವರ ವೀರಶೈವ ಸಮಾಜ ಅಧ್ಯಕ್ಷ ಎಸ್. ಎಸ್. ಜ್ಯೋತಿಪ್ರಕಾಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಎನ್. ಮಹಾಲಿಂಗಯ್ಯ ಶಾಸ್ತ್ರಿ, ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ ಎ. ಎಂ. ಚಂದ್ರಯ್ಯ, ಜಿಲ್ಲಾ ವೀರಶೈವ ಪುರೋಹಿತ ಮತ್ತು ಅರ್ಚಕರ ಸಂಘದ ಅಧ್ಯಕ್ಷ ಎಚ್. ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ವೀರಶೈವ ಪುರೋಹಿತ-ಜ್ಯೋತಿಷ್ಯರ ಸಂಘದ ಅಧ್ಯಕ್ಷ ಶ್ರೀ ವಿದ್ವಾನ್ ಡಾ. ರೇಣುಕಾರಾಧ್ಯ ಶಾಸ್ತ್ರಿಗಳು, ಮುಖಂಡರಾದ ಮಂಗೋಟೆ ರುದ್ರೇಶ್,  ಶಾರದ ಅಪ್ಪಾಜಿ, ಆರ್. ಮಹೇಶ್ ಕುಮಾರ್ ಮತ್ತು ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.  
    ಜನ್ಮ ಶತಮಾನೋತ್ಸವ ಅಂಗವಾಗಿ ಹೊನ್ನಾಳಿ ಕೋಟೆಮಲ್ಲೂರು ನಿವೃತ್ತ ಮುಖ್ಯೋಪಾಧ್ಯಾಯ ವಿ.ಎಂ ಶಿವಲಿಂಗಾರಾಧ್ಯ ಶಾಸ್ತ್ರಿಗಳಿಗೆ `ಸೌಜನ್ಯ ಸುಧಾಕರ ರತ್ನ' ವಿಶೇಷ ಪ್ರಶಸ್ತಿ ಪ್ರದಾನ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಬಿಜೆಪಿ ಸಕ್ರಿಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಭದ್ರಾವತಿ ಜನಸಂಘ ಕಾಲದ ೭೫ ವರ್ಷದ ಹಿರಿಯ ಕಾರ್ಯಕರ್ತರಾದ ನಂಜಪ್ಪನವರು ಗುರುವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷದ ಸಕ್ರಿಯ ಸದಸ್ಯತ್ವ ಪಡೆಯುವ ಮೂಲಕ ತಾಲೂಕು ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸಕ್ರಿಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. 

ಭದ್ರಾವತಿ: ಜನಸಂಘ ಕಾಲದ ೭೫ ವರ್ಷದ ಹಿರಿಯ ಕಾರ್ಯಕರ್ತರಾದ ನಂಜಪ್ಪನವರು ಗುರುವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷದ ಸಕ್ರಿಯ ಸದಸ್ಯತ್ವ ಪಡೆಯುವ ಮೂಲಕ ತಾಲೂಕು ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸಕ್ರಿಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. 
ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ಮೊದಲ ಸಕ್ರಿಯ ಸದಸ್ಯತ್ವ ನಂಜಪ್ಪನವರು ಪಡೆದುಕೊಳ್ಳುತ್ತಿರುವುದು ಕಾರ್ಯಕರ್ತರ ಹೆಮ್ಮೆಯ ವಿಚಾರವಾಗಿದೆ. ನಂಜಪ್ಪನವರು ಕೀಪ್ಯಾಡ್ ಮೊಬೈಲನ್ನು ಹೊಂದಿದ್ದರೂ ಮತ್ತೊಬ್ಬರ ಮೊಬೈಲ್ ಸಹಾಯದಿಂದ ಇಳಿ ವಯಸ್ಸಿನಲ್ಲೂ ಕೂಡ ಒಟ್ಟು ೧೨೭ ಸಾಮಾನ್ಯ ಸದಸ್ಯರನ್ನು ನೊಂದಾಯಿಸಿ ಇಂದಿನ ಯುವ ಪೀಳಿಗೆ ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದಾರೆ ಎಂದರು. 
ಮಂಡಲ ಪ್ರಧಾನ ಕಾರ್ಯದರ್ಶಿ ಮೊಸರಳ್ಳಿ ಅಣ್ಣಪ್ಪ, ಜನ್ನಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಘು ರಾವ್, ಪ್ರಧಾನ ಕಾರ್ಯದರ್ಶಿ ರವಿ ಹಾಗೂ  ಪ್ರಮುಖ ಕಾರ್ಯಕರ್ತರಾದ  ಆಶಾ ಪುಟ್ಟಸ್ವಾಮಿ, ಮೋಹನ್, ಧರ್ಮರಾಜ್ ಬೂತ್ ಅಧ್ಯಕ್ಷೆ ರೂಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಕಾನೂನು ಉಲ್ಲಂಘಿಸಿ ಶಾಲಾ ವ್ಯಾಪ್ತಿಯೊಳಗೆ ತಂಬಾಕು ಉತ್ಪನ್ನ ಮಾರಾಟ

ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ : ೧,೬೫೩ ರು. ಮೌಲ್ಯದ ತಂಬಾಕು ಉತ್ಪನ್ನ ವಶ 



    ಭದ್ರಾವತಿ : ಕಾನೂನು ಉಲ್ಲಂಘಿಸಿ ಶಾಲಾ ವ್ಯಾಪ್ತಿಯೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
    ನಗರದ ನ್ಯೂಟೌನ್ ಉಂಬ್ಳೆಬೈಲು ರಸ್ತೆಯ ಶಾಲೆಯೊಂದರ ಬಳಿ ಸುಮಾರು ೧೦೦ ಗಜ ವ್ಯಾಪ್ತಿಯೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ನ್ಯೂಟೌನ್ ಪೊಲೀಸ್ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜುರವರ ನೇತೃತ್ವದಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಟಿ. ರಮೇಶ್ ಹಾಗು ಸಿಬ್ಬಂದಿ ದಾಳಿ ನಡೆಸಿ ಸುಮಾರು ೧,೬೫೩ ರು. ಮೌಲ್ಯದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಬಿ.ಕೆ ಮೋಹನ್

ಭದ್ರಾವತಿ ಹಳೇನಗರದ ವೀರಶೈವ ಸಭಾ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮೇಸನ್ ಮತ್ತು ವೆಲ್ಡಿಂಗ್ ಕಿಟ್‌ಗಳ ವಿತರಣೆ ಮತ್ತು ಅರಿವು ಕಾರ್ಯಕ್ರಮ' ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಇನ್ನೂ ಹೆಚ್ಚು ಸಂಘಟಿತರಾಗುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮನವಿ ಮಾಡಿದರು. 
    ಅವರು ಹಳೇನಗರದ ವೀರಶೈವ ಸಭಾ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮೇಸನ್ ಮತ್ತು ವೆಲ್ಡಿಂಗ್ ಕಿಟ್‌ಗಳ ವಿತರಣೆ ಮತ್ತು ಅರಿವು ಕಾರ್ಯಕ್ರಮ'ದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಸಮಾಜದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಶ್ರಮಿ ಹೆಚ್ಚಿದ್ದಾಗಿದೆ. ಶಾಸಕರಿಗೆ ಮತ್ತು ನಮ್ಮ ಕುಟುಂಬದವರಿಗೆ ಅವರ ಶ್ರಮದ ಅರಿವಿದೆ. ಈ ಹಿನ್ನಲೆಯಲ್ಲಿ ಪ್ರಾಮಾಣಿಕವಾಗಿ ಅವರ ನೋವು-ನಲಿವುಗಳಿಗೆ ಸ್ಪಂದಿಸುತ್ತಿದ್ದೇವೆ. ಯಾವುದೇ ತಾರತಮ್ಯವಿಲ್ಲದೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮುಂದಾಗಿದ್ದೇವೆ. ಇದಕ್ಕೆ ಪೂರಕವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸಹ ಒಗ್ಗಟ್ಟಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕೆಂದರು. 
    ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಶಿಮುಲ್ ನಿರ್ದೇಶಕ ಎಸ್. ಕುಮಾರ್, ಮಾಜಿ ಉಪಾಧ್ಯಕ್ಷ ಚನ್ನಪ್ಪ, ಸೂಡ ಸದಸ್ಯ ಎಚ್. ರವಿಕುಮಾರ್, ಕಾರ್ಮಿಕ ಮುಖಂಡ ವಿ. ವಿನೋದ್, ಸಿ.ಎಂ ಖಾದರ್ ಸೇರಿದಂತೆ ಇನ್ನಿತರರು ಮಾತನಾಡಿದರು. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. 
    ಬಗರ್ ಹುಕುಂ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಉದ್ಯಮಿ ಬಿ.ಕೆ ಜಗನ್ನಾಥ, ನಗರಸಭೆ ಸದಸ್ಯರಾದ ಬಸವರಾಜ ಬಿ. ಆನೆಕೊಪ್ಪ, ಬಷೀರ್ ಅಹಮದ್, ಗೀತಾ ರಾಜ್‌ಕುಮಾರ್, ಅನುಸುಧಾ ಮೋಹನ್ ಪಳನಿ, ಕೆ. ಸುದೀಪ್ ಕುಮಾರ್, ಸೈಯದ್ ರಿಯಾಜ್, ಸರ್ವಮಂಗಳ ಭೈರಪ್ಪ, ಕಾರ್ಮಿಕ ಮುಖಂಡರಾದ ಚಂದ್ರಶೇಖರ್, ಸುಂದರ್ ಬಾಬು, ಅಭಿಲಾಷ್, ಬಗರ್ ಹುಕುಂ ತಾಲೂಕು ಸಮಿತಿ ಸದಸ್ಯೆ ಎಂ.ಎಸ್ ಸುಧಾಮಣಿ, ಕಸಾಪ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷೆ ಡಾ. ವಿಜಯದೇವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಭದ್ರಾವತಿ ಹಳೇನಗರದ ವೀರಶೈವ ಸಭಾ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮೇಸನ್ ಮತ್ತು ವೆಲ್ಡಿಂಗ್ ಕಿಟ್‌ಗಳ ವಿತರಣೆ ಮತ್ತು ಅರಿವು ಕಾರ್ಯಕ್ರಮ'ದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕಿಟ್‌ಗಳನ್ನು ವಿತರಿಸಿದರು. 

Wednesday, October 23, 2024

ಒಂದೇ ದಿನ ಓ.ಸಿ ಮಟ್ಕಾ ೩ ಪ್ರತ್ಯೇಕ ಪ್ರಕರಣ ದಾಖಲು

    ಭದ್ರಾವತಿ : ನಗರದ ವಿವಿಧ ಠಾಣೆಗಳಲ್ಲಿ ಒಂದೇ ದಿನ ಓ.ಸಿ ಮಟ್ಕಾ ಜೂಜಾಟ ೩ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ನಗರದ ನಾಗರೀಕರಲ್ಲಿ ಆತಂಕಕ್ಕೆ ಕಾರಣವಾಗಿದೆ. 
    ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಸಿಬ್ಬಂದಿ ಹಣಮಂತ ಅಮಾತಿ ಅ.೨೧ರ ಮಧ್ಯಾಹ್ನ ೩.೩೦ರ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಹೊಸಮನೆ ಮುಖ್ಯ ರಸ್ತೆಯಲ್ಲಿರುವ ಸಂತೆ ಮೈದಾನದಲ್ಲಿ ಪರಿಶೀಲನೆ ನಡೆಸಿದಾಗ ವ್ಯಕ್ತಿಯೋರ್ವ ಓ.ಸಿ ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ನ್ಯೂಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಗುಳ್ಯಪ್ಪ ಅ.೨೧ರ ರಾತ್ರಿ ೯ ಗಂಟೆ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ರಣಧೀರ ಪಡೆ ಸರ್ಕಲ್ ಹತ್ತಿರದ ಬಸ್ ನಿಲ್ದಾಣದ ಬಳಿ ಪರಿಶೀಲನೆ ನಡೆಸಿದಾಗ ವ್ಯಕ್ತಿಯೋರ್ವ ಓ.ಸಿ ಮಟ್ಕಾ ಜೂಜಾಟದಲಲಿ ತೊಡಗಿರುವುದು ಕಂಡು ಬಂದಿದೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಜಿ.ಎಂ ಈರಯ್ಯ ಅ.೨೧ರ ಸಂಜೆ ೪ ಗಂಟೆ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ವೀರಾಪುರ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಲಕ್ಷ್ಮೀ ಭವನ್ ಹೋಟೆಲ್ ಹತ್ತಿರ ಪರಿಶೀಲನೆ ನಡೆಸಿದಾಗ ಓರ್ವ ವ್ಯಕ್ತಿ ಓ.ಸಿ ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರದ ಜಾಗೃತಿ, ಅರಿವು ಅತ್ಯಗತ್ಯ : ವೀರಬಸಪ್ಪ ಎಲ್. ಕುಶಲಾಪುರ

ಭದ್ರಾವತಿ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಬಿ.ಇಡಿ ಕಾಲೇಜ್ ಮತ್ತು ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಸಹಯೋಗದಲ್ಲಿ  `ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-೨೦೨೪' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ: ಪ್ರಸ್ತುತ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮತ್ತು ಅರಿವು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರ ಸಹಕಾರ ಹೆಚ್ಚಿನದಾಗಿದೆ ಎಂದು ಲೋಕಾಯುಕ್ತ ಜಿಲ್ಲಾ ಪೊಲೀಸ್ ನಿರೀಕ್ಷಕ ವೀರಬಸಪ್ಪ ಎಲ್. ಕುಶಲಾಪುರ ಹೇಳಿದರು. 
     ಅವರು ಬುಧವಾರ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಬಿ.ಇಡಿ ಕಾಲೇಜ್ ಮತ್ತು ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ `ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-೨೦೨೪' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
     ಸಮಾಜದ ಮುಂದಿನ ಪೀಳಿಗೆಯ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮತ್ತು ಅರಿವಿನ ಜೊತೆಗೆ ಹಗರಣಗಳ ದೂರು ನೀಡುವ ಪ್ರಕ್ರಿಯೆಗಳು ಮತ್ತು ನ್ಯಾಯದ ಪಾರದರ್ಶಕತೆ ಕುರಿತು ತಿಳಿದು ಕೊಳ್ಳಬೇಕೆಂದರು
ವಿದ್ಯಾಸಂಸ್ಥೆ ಆಡಳಿತ ಅಧಿಕಾರಿ ಡಾ. ಎಸ್. ಪಿ ರಾಕೇಶ್ ಅಧ್ಯಕ್ಷತೆ ವಹಿಸಿದ್ದರು.  ಪ್ರಥಮ ಬಿ.ಇಡಿ ಪ್ರಶಿಕ್ಷಣಾರ್ಥಿ ಸಂಭ್ರಮ ಪ್ರಾರ್ಥಿಸಿದರು. ಉಪನ್ಯಾಸಕಿ ಎಚ್.ವಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಸ್ವಾಗತಿಸಿ ವಂದಿಸಿದರು. 
         ಬಿ. ಇಡಿ ಕಾಲೇಜಿನ ಉಪನ್ಯಾಸಕ .ವರದರಾಜ ಸೇರಿದಂತೆ ಉಪನ್ಯಾಸಕ ವೃಂದ, ಬಿ. ಇಡಿ ಪ್ರಶಿಕ್ಷಣಾರ್ಥಿಗಳು ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳು ಭಾಗವಹಿಸಿದ್ದರು.  

ಕಾಗೇಕೊಡಮಗ್ಗಿ ನೀರು ಬಳಕೆದಾರರ ಸಹಕಾರ ಸಂಘಕ್ಕೆ ರಾಷ್ಟ್ರೀಯ ಜಲ ಪುರಸ್ಕಾರ

ಭದ್ರಾವತಿ ತಾಲೂಕಿನ ಕಾಗೇಕೊಡಮಗ್ಗಿ ನೀರು ಬಳಕೆದಾರರ ಸಹಕಾರ ಸಂಘ ಈ ಬಾರಿ ೨ನೇ ಸ್ಥಾನದೊಂದಿಗೆ ೨೦೨೩ನೇ ಸಾಲಿನ ರಾಷ್ಟ್ರೀಯ ಜಲ ಪುರಸ್ಕಾರಕ್ಕೆ ಪಾತ್ರವಾಗಿದ್ದು, ಸಂಘದ ಅಧ್ಯಕ್ಷ ಸೈಯದ್ ಅಬಿದ್ ಮತ್ತು ಕಾರ್ಯದರ್ಶಿ ರವಿಕುಮಾರ್ ಪ್ರಶಸ್ತಿ ಸ್ವೀಕರಿಸಿರುವುದು. 
    ಭದ್ರಾವತಿ: ತಾಲೂಕಿನ ಕಾಗೇಕೊಡಮಗ್ಗಿ ನೀರು ಬಳಕೆದಾರರ ಸಹಕಾರ ಸಂಘ ಈ ಬಾರಿ ೨ನೇ ಸ್ಥಾನದೊಂದಿಗೆ ೨೦೨೩ನೇ ಸಾಲಿನ ರಾಷ್ಟ್ರೀಯ ಜಲ ಪುರಸ್ಕಾರಕ್ಕೆ ಪಾತ್ರವಾಗಿದ್ದು, ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. 
    ನೀರು ಬಳಕೆದಾರರ ಸಹಕಾರ ಸಂಘ ಉತ್ತಮ ಕಾರ್ಯನಿರ್ವಹಣೆಯೊಂದಿಗೆ ನೀರು ಸಂರಕ್ಷಣೆ ಕುರಿತು ರೈತರು, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಮಾದರಿಯಾಗಿದೆ. ಸಂಘದ ಕಾರ್ಯ ವೈಖರಿ ಕುರಿತು ಹಲವು ಬಾರಿ ಪ್ರಶಂಸೆಗಳು ವ್ಯಕ್ತವಾಗಿದ್ದವು. ಇದೀಗ ೨ನೇ ಸ್ಥಾನದೊಂದಿಗೆ ಪುರಸ್ಕಾರಕ್ಕೆ ಪಾತ್ರವಾಗಿದೆ. 


    ರಾಷ್ಟ್ರಪತಿಯವರಿಂದ ಸಂಘದ ಅಧ್ಯಕ್ಷ ಸೈಯದ್ ಅಬಿದ್ ಹಾಗು ಕಾರ್ಯದರ್ಶಿ ರವಿಕುಮಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬುಧವಾರ ಪ್ರಶಸ್ತಿಯೊಂದಿಗೆ ನಗರಕ್ಕೆ ಆಗಮಿಸಿದ ಇಬ್ಬರನ್ನು ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಗ್ರಾಮಸ್ಥರು, ಸ್ಥಳೀಯ ಮುಖಂಡರು ಸನ್ಮಾನಿಸಿ ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.  ಫೀರ್ ಷರೀಫ್, ಅಯುಬ್ ಖಾನ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.