Thursday, March 13, 2025

ಮಾ.೧೫ರಂದು ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

    ಭದ್ರಾವತಿ: ಶ್ರೀ ಕ್ಷೇತ್ರ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಾ.೧೫ರಂದು ಮಧ್ಯಾಹ್ನ ೧೨ ಗಂಟೆಗೆ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. 
    ಪ್ರತಿ ವರ್ಷದಂತೆ ಈ ಬಾರಿ ಸಹ ರಥೋತ್ಸವ ಅದ್ದೂರಿಯಾಗಿ ಜರುಗಲಿದ್ದು, ರಥೋತ್ಸವ ನಂತರ ಮಧ್ಯಾಹ್ನ ೧೨.೩೦ಕ್ಕೆ ಅನ್ನ ಸಂತರ್ಪಣೆ ನೆರವೇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಶ್ರೀ ವೀರಾಂಜನೇಯ ಸೇವಾ ಸಮಿತಿ ಕೋರಿದೆ. 

ಗಾಂಜಾ ಸೇವನೆ ಪ್ರಕರಣ ದಾಖಲು

ಭದ್ರಾವತಿ: ನಗರದ ನ್ಯೂಟೌನ್ ಗಾಂಧಿ ಉದ್ಯಾನವನ ಸಮೀಪ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ್ದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ರಮೇಶ್‌ರವರು ಮಾ.೧೨ರಂದು ಸಂಜೆ ೬.೩೦ರ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಓರ್ವ ವ್ಯಕ್ತಿ ಗಾಂಜಾ ಸೇವನೆ ಮಾಡಿರುವ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆತನನ್ನು ವಶಕ್ಕೆ ಪಡೆದು ಸಾರ್ವಜನಿಕ ಸರ್ಕಾರಿಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ. 

ರ್‍ಯಾಮ್ಕೋಸ್ ಅಧ್ಯಕ್ಷರಾಗಿ ೨ನೇ ಬಾರಿಗೆ ಎಚ್.ಎಲ್ ಷಡಾಕ್ಷರಿ ಅವಿರೋಧ ಆಯ್ಕೆ

ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಮುಸ್ಲಿಂ ಸಮುದಾಯದ ನೂರು ಬೇಗ್ 

ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ(ರ್‍ಯಾಮ್ಕೋಸ್)ದ ಅಧ್ಯಕ್ಷರಾಗಿ ೨ನೇ ಬಾರಿಗೆ ಎಚ್.ಎಲ್ ಷಡಾಕ್ಷರಿ ಹಾಗು ರ್‍ಯಾಮ್ಕೋಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ನೂರ್ ಬೇಗ್ ಉಪಾಧ್ಯಕ್ಷರಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ಭದ್ರಾವತಿ :  ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ(ರ್‍ಯಾಮ್ಕೋಸ್)ದ ಅಧ್ಯಕ್ಷರಾಗಿ ೨ನೇ ಬಾರಿಗೆ ಎಚ್.ಎಲ್ ಷಡಾಕ್ಷರಿ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ೧೫ ನಿರ್ದೇಶಕರ ಸ್ಥಾನ ಹೊಂದಿರುವ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಎಲ್ ಷಡಾಕ್ಷರಿ ಮತ್ತು ಮಂಜುನಾಥೇಶ್ವರ ನಾಮಪತ್ರ ಸಲ್ಲಿಸಿದ್ದರು. ಅಂತಿಮ ಕ್ಷಣದಲ್ಲಿ ಮಂಜುನಾಥೇಶ್ವರ ಅವರು ನಾಮಪತ್ರ ಹಿಂಪಡೆದ ಹಿನ್ನಲೆಯಲ್ಲಿ ಷಡಾಕ್ಷರಿ ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಉಪಾಧ್ಯಕ್ಷರಾಗಿ ರ್‍ಯಾಮ್ ಕೋಸ್ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ(ಬಿಸಿಎಂ-ಎ) ನೂರ್ ಬೇಗ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
    ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಡಿಸಿಸಿ ಬ್ಯಾಂಕ್) ಮಾಜಿ ಉಪಾಧ್ಯಕ್ಷರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿರುವ ಷಡಾಕ್ಷರಿಯವರು ಈ ಹಿಂದೆ ೨೦೧೫-೧೬ರ ಸಾಲಿನಲ್ಲಿ ೧ ವರ್ಷದ ಅವಧಿಗೆ ರ್‍ಯಾಮ್ಕೋಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 
  ಚುನಾವಣಾ ಅಧಿಕಾರಿಯಾಗಿ ಸಿಡಿಓ ಶಾಂತರಾಜ್ ಕಾರ್ಯನಿರ್ವಹಿಸಿದರು. ಮುಖ್ಯ ವ್ಯವಸ್ಥಾಪಕ ಎಂ. ವಿರುಪಾಕ್ಷಪ್ಪ ಉಪಸ್ಥಿತರಿದ್ದರು. ನಿರ್ದೇಶಕರಾದ ಬಿ.ಜಿ ಜಗದೀಶ್‌ಗೌಡ, ಟಿ. ಅಣ್ಣಪ್ಪ, ಆರ್. ಶ್ರೀನಿವಾಸ್, ಎಂ.ಎಸ್ ಬಸವರಾಜಪ್ಪ, ಎ.ಜಿ ವಿಜಯಕುಮಾರ್, ಲಲಿತಮ್ಮ, ಎನ್.ಪಿ ಅನುಸೂಯಮ್ಮ, ಕೆ.ವಿ ರುದ್ರಪ್ಪ, ಸಿ.ಹನುಮಂತಪ್ಪ, ಎ.ಎಂ ಹರ್ಷ, ಎಚ್.ಎಸ್ ಸಂಜೀವಕುಮಾರ್ ಮತ್ತು ಎಸ್.ಎಂ ಹಾಲೇಶಪ್ಪ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. 
      ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ವಿದ್ಯುತ್ ಇಲಾಖೆ ನಿರ್ವಹಣಾ ಸಮಿತಿ ಸದಸ್ಯ ಬಸವಂತಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ದಶರಥ ಗಿರಿ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಮುಸ್ವೀರ್ ಬಾಷಾ, ಪಂಚ ಗ್ಯಾರೆಂಟಿಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಟಿಎಪಿಸಿಎಂಎಸ್ ಸದಸ್ಯ ಲೋಕೇಶ್, ಮುಖಂಡರಾದ ಜೆಬಿಟಿ ಬಾಬು, ಗೌಡರಹಳ್ಳಿ ಶೌಕತ್ ಆಲಿ ಸೇರಿದಂತೆ ಇನ್ನಿತರರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದ್ದಾರೆ. 

ಕಾರ್ಮಿಕರೆಲ್ಲರೂ ಒಂದೇ ಸಂಘಟನೆಯಲ್ಲಿ ಗುರುತಿಸಿಕೊಂಡಾಗ ಸಂಘಟನೆಗೆ ಹೆಚ್ಚು ಬಲ : ಬಿ.ಕೆ ಮೋಹನ್

ಭದ್ರಾವತಿಯಲ್ಲಿ ಅಖಿಲ ಕರ್ನಾಟಕ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕ ಇಲಾಖೆ ಕಲ್ಯಾಣ ಮಂಡಳಿಯ ಕ್ಯಾಲೆಂಡರ್ ವಿತರಣೆ ಹಾಗು ಮಹಿಳಾ ದಿನಾಚರಣೆ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು. 
    ಭದ್ರಾವತಿ : ಕಾರ್ಮಿಕರೆಲ್ಲರೂ ಒಂದೇ ಸಂಘಟನೆಯಲ್ಲಿ ಗುರುತಿಸಿಕೊಂಡಾಗ ಸಂಘಟನೆಗೆ ಹೆಚ್ಚು ಬಲ ಬರುವ ಜೊತೆಗೆ ಕಾರ್ಮಿಕರ ಬೇಡಿಕೆಗಳು ತಕ್ಷಣ ಈಡೇರಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ ಮುಖಂಡರು ಗಮನ ಹರಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು. 
    ಅವರು ಗುರುವಾರ ಅಖಿಲ ಕರ್ನಾಟಕ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕ ಇಲಾಖೆ ಕಲ್ಯಾಣ ಮಂಡಳಿಯ ಕ್ಯಾಲೆಂಡರ್ ವಿತರಣೆ ಹಾಗು ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ನಗರದ ಕಾರ್ಮಿಕರಲ್ಲಿ ಬಲಿಷ್ಠ ಸಂಘಟನೆ ಕೊರತೆ ಕಂಡು ಬರುತ್ತಿದ್ದು, ಇದು ವಿಪರ್ಯಾಸದ ಸಂಗತಿಯಾಗಿದೆ. ಯಾವುದೇ ಸಂಘಟನೆ ಬಲಶಾಲಿಯಾಗಿರಬೇಕು. ಆ ಮೂಲಕ ನಮ್ಮ ಹಕ್ಕು, ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರು. 
ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಕಾರ್ಮಿಕರು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲದೆ ಕಾರ್ಮಿಕ ಇಲಾಖೆ ಅರ್ಹ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಬೇಕೆಂದರು. 
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಮಾತನಾಡಿ, ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳುವಳಿಕೆ ಹೊಂದಬೇಕು.  ಅಸಂಘಟಿತ ಕಾರ್ಮಿಕರ ಪರವಾಗಿ ಕ್ಷೇತ್ರದ ಶಾಸಕರು ಜೊತೆಗಿದ್ದು, ತಮ್ಮ ಹಕ್ಕು, ಬೇಡಿಕೆಗಳನ್ನು ಈಡೇರಿಸಿಕೊಡಲು ಬದ್ಧರಾಗಿದ್ದಾರೆ ಎಂದರು. 
  ಒಕ್ಕೂಟದ ಅಧ್ಯಕ್ಷ ತ್ಯಾಗರಾಜ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರ್ಮಲ ಆಸ್ಪತ್ರೆ ಸುಪೇರಿಯರ್ ಸಿಸ್ಟರ್ ವಿಲ್ಮಾ, ಆಶಾಕಾರ್ಯಕರ್ತೆ ರಾಜೇಶ್ವರಿ, ವಲಯ ಅರಣ್ಯಾಧಿಕಾರಿ ದುಗ್ಗಪ್ಪ, ಟೈಲರ್ ಸಂಘದ ಅಧ್ಯಕ್ಷ ಸುಂದರ್, ಪೂರ್ಣಿಮಾ, ಕಾರ್ಮಿಕ ನಿರೀಕ್ಷಕರಾದ ಬಿ.ಎಂ ರಕ್ಷಿತ್ ಮತ್ತು ಸುಪ್ರೀತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಯುವ ಮುಖಂಡ ವಿಜಯ್ ನಿರೂಪಿಸಿದರು. ಒಕ್ಕೂಟದ ತಾಲೂಕು ಕಾರ್ಯಾಧ್ಯಕ್ಷ ಎನ್. ಕುಮಾರ್, ಜಿಲ್ಲಾ ಉಪಾಧ್ಯಕ್ಷ ಸಂಜಯ್, ತಾಲೂಕು  ಕಾರ್ಯದರ್ಶಿಗಳಾದ ಮಧುಸೂದನ್ ಮತ್ತು ಮಧು ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಅಸಂಘಟಿತ ಕಾರ್ಮಿಕರು ಪಾಲ್ಗೊಂಡಿದ್ದರು.  

Wednesday, March 12, 2025

ಗಾಂಜಾ ಸೇವನೆ : ಪ್ರಕರಣ ದಾಖಲು


    ಭದ್ರಾವತಿ : ನಗರದ ಎಂಪಿಎಂ ಬಡಾವಣೆಯಲ್ಲಿ ಮಾದಕ ವಸ್ತು ಗಾಂಜಾ ಸೇವಿಸಿ ಅಮಲಿನಲ್ಲಿ ಓಡಾಡುತ್ತಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
    ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಎಚ್.ಪಿ ವಿಕ್ರಮ್ ಮಾ.೧೧ರಂದು ಗಸ್ತಿನಲ್ಲಿದ್ದಾಗ ಮಧ್ಯಾಹ್ನ ೨.೪೫ ಸಮಯದಲ್ಲಿ ಎಂಪಿಎಂ ಬಡಾವಣೆ ವ್ಯಾಪ್ತಿಯಲ್ಲಿ ಯಾರೋ ಒಬ್ಬ ವ್ಯಕ್ತಿಯು  ಅಮಲಿನಲ್ಲಿ ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆತನನ್ನು ವಶಕ್ಕೆ ಪಡೆದು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿ ಆತ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. 

ಪುರುಷರು ಮಹಿಳೆಯರ ಸ್ವಾತಂತ್ರ್ಯ ಕಸಿದುಕೊಳ್ಳದಂತೆ ಎಚ್ಚರಿಕೆ ನೀಡಿ : ಡಾ. ವಿಜಯದೇವಿ

 

ಭದ್ರಾವತಿ ಜನ್ನಾಪುರ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಎಂದು ಸಾಹಿತಿ, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ `ಕಾರುಣ್ಯ ವರ್ಷದ ಮಹಿಳೆ ಪ್ರಶಸ್ತಿ' ಸ್ವೀಕರಿಸಿದರು. 
    ಭದ್ರಾವತಿ: ಮಹಿಳೆ ಎಂದಿಗೂ ಪುರುಷನನ್ನು ಬಿಟ್ಟು ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲ. ಸಮಾಜದಲ್ಲಿ ಇಬ್ಬರು ಒಟ್ಟಿಗೆ ಬದುಕಲೇ ಬೇಕು. ಆದರೆ ಪುರುಷ ಮಹಿಳೆ ತನಗಾಗಿ ಮಾತ್ರ, ತನ್ನ ಹಿಡಿತದಲ್ಲಿಯೇ ಇರಬೇಕೆಂದು ಬಯಸುವುದು ಸರಿಯಲ್ಲ. ಆಕೆಯ ಸ್ವಾತಂತ್ರ್ಯ ಕಸಿದುಕೊಳ್ಳದಂತೆ ಎಚ್ಚರಿಕೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಾಹಿತಿ, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಹೇಳಿದರು. 
    ಅವರು ಬುಧವಾರ ನಗರದ ಜನ್ನಾಪುರ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ `ಕಾರುಣ್ಯ ವರ್ಷದ ಮಹಿಳೆ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದರು. 
    ಮಹಿಳೆಯರಿಗೆ ಡಾ.ಬಿ.ಆರ್ ಅಂಬೇಡ್ಕರ್‌ರವರು ಕುಟುಂಬದಲ್ಲಿನ ಪುರುಷರ ಹಿಡಿತದಿಂದ ಹೊರತಂದು ಅವರಿಗೆ ಸಂವಿಧಾನ ಬದ್ಧ ಸಮಾನತೆ ಹಕ್ಕನ್ನು ನೀಡಿದ್ದಾರೆ. ಈ ಹಕ್ಕು ನಮ್ಮೆಲ್ಲರಿಗೂ ಸಂತೋಷ, ಸಂಭ್ರಮವನ್ನುಂಟು ಮಾಡಿದೆ. ನಾವು ಈ ಹಕ್ಕನ್ನು ಸದ್ಬಳಕೆ ಮಾಡಿಕೊಂಡು ಪುರುಷರೊಂದಿಗೆ ಭವಿಷ್ಯದ ಸಮಾಜ ರೂಪಿಸಿಕೊಳ್ಳಬೇಕೆಂದರು. 
    ಸಮಾಜದಲ್ಲಿ ಮಹಿಳೆಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಗಮನ ಹರಿಸುವ ಅಗತ್ಯವಿದೆ. ಜೊತೆಗೆ ಮಹಿಳೆಯರು ಸಹ ತಮ್ಮ ಜವಾಬ್ದಾರಿಗಳನ್ನು ಅರಿತು ಪುರುಷರೊಂದಿಗೆ ಭವಿಷ್ಯದ ಸಮಾಜ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕೆಂದರು. 
    ಕಾರ್ಯಕ್ರಮವನ್ನು ದಲಿತ ಚಳುವಳಿಯ ರೂವಾರಿ, ಡಿಎಸ್‌ಎಸ್ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪನವರ ಧರ್ಮಪತ್ನಿ, ಚಿಂತಕಿ ಇಂದಿರಾ ಕೃಷ್ಣಪ್ಪ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಸರ್ಕಾರಿ ಅಭಿಯೋಜಕ ಮಮತ ಸೇರಿದಂತೆ ಇನ್ನಿತರರು ಮಾತನಾಡಿದರು. 
ಕಾರುಣ್ಯ ಚಾರಿಟೇಬಲ್ ಅಧ್ಯಕ್ಷ ಜಿ. ರಾಜು, ನಗರಸಭೆ ಸದಸ್ಯರಾದ ಜಯಶೀಲ, ನಾಗರತ್ನ ಅನಿಲ್‌ಕುಮಾರ್, ಸವಿತ ಉಮೇಶ್,  ಡಿಎಸ್‌ಎಸ್ ಮುಖಂಡ ಸಿ. ಜಯಪ್ಪ, ಆರ್.ಎಸ್ ಶೋಭಾ, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಎಂ. ಸುಹಾಸಿನಿ, ಪೇಪರ್‌ಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಕವಿತ, ದುರ್ಗಾದೇವಿ ಮಣಿಶೇಖರ್  ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ನಗರದ ವಿವಿಧ ಮಹಿಳಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಂಜುಳಾ ಸ್ವಾಗತಿಸಿ, ನಾಗವೇಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎ. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿ, ಜೀವಾ ವಂದಿಸಿದರು. ಟ್ರಸ್ಟ್ ಪದಾಧಿಕಾರಿಗಳು, ಸೇವಾಕರ್ತರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 


ಮಾ.೧೬ರಂದು ಮೊದಲ ಬಾರಿಗೆ ತಾಲೂಕು ಮಟ್ಟದ ಜಾನಪದ ಸಮ್ಮೇಳನ

ಸಮ್ಮೇಳನ ಸರ್ವಾಧ್ಯಕ್ಷರಾಗಿ ಲಕ್ಷ್ಮಣ್‌ರಾವ್ ಬೋರತ್

ಭದ್ರಾವತಿ ಹೊಸಮನೆ ನಿವಾಸಿ ಚೌಡಿಕೆ ಕಲಾವಿದರಾದ ಲಕ್ಷ್ಮಣ್‌ರಾವ್  ಬೋರತ್‌ರವರನ್ನು ತಾಲೂಕು ಮಟ್ಟದ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಎಂ.ಆರ್ ರೇವಣಪ್ಪ ಹಾಗೂ ಸದಸ್ಯರು ಲಕ್ಷ್ಮಣ್ ರಾವ್‌ಬೋರತ್‌ರವರ ನಿವಾಸಕ್ಕೆ ತೆರಳಿ ಅಭಿನಂದಿಸಿದರು. 
    ಭದ್ರಾವತಿ: ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ, ಹಿರಿಯೂರು ಹೋಬಳಿ ಘಟಕ ನೇತೃತ್ವದಲ್ಲಿ ಮೊದಲ ಬಾರಿಗೆ ತಾಲೂಕು ಮಟ್ಟದ ಜಾನಪದ ಸಮ್ಮೇಳನ ಹಾಗು ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಮಾ.೧೬ರಂದು ತಾಲೂಕಿನ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಲಾಗಿದೆ. 
    ಗೊಂದಿ ಶ್ರೀ ಪಾಂಡುರಂಗ ಸಾಧಕಾಶ್ರಮದ ಮಾತಾ ಮುಕ್ತಾನಂದಮಯಿ ದಿವ್ಯ ಸಾನಿಧ್ಯವಹಿಸಲಿದ್ದು, ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಆಶಯ ನುಡಿಗಳನ್ನಾಡಲಿದ್ದಾರೆ. ಚನ್ನಗಿರಿ ಸಿದ್ದನ ಮಠದ ಆಧುನಿಕ ಸರ್ವಜ್ಞ ಯುಗಧರ್ಮ ರಾಮಣ್ಣ ಸಮ್ಮೇಳನ ಉದ್ಘಾಟಿಸಲಿದ್ದಾರೆ. 
    ಸಮ್ಮೇಳನಾಧ್ಯಕ್ಷ ಚೌಡಿಕೆ ಕಲಾವಿದ ಲಕ್ಷ್ಮಣ್‌ರಾವ್ ಬೋರತ್ ಸಮ್ಮೇಳನ ನುಡಿಗಳನ್ನಾಡಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಹಿರಿಯ ಕಲಾವಿದರಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಎಂ.ಆರ್ ರೇವಣಪ್ಪ ಅಧ್ಯಕ್ಷತೆ ವಹಿಸಲಿದ್ದು, ಹಿರಿಯೂರು ಹೋಬಳಿ ಘಟಕ ಅಧ್ಯಕ್ಷ ಜಯರಾಂ ಗೊಂದಿ, ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಬಿ. ಸುರೇಶ್, ಎಸ್. ರಾಜು, ಅಭಿವೃದ್ಧಿ ಅಧಿಕಾರಿ ಸುರೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಹಾಗು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ಕಲಾವಿದರಾದ ಲಕ್ಷ್ಮಮ್ಮ(ಸೋಬಾನೆ ಪದ), ಭಾಗ್ಯಬಾಯಿ(ಲಂಬಾಣಿ ನೃತ್ಯ), ವೆಂಕಟರಮಣ(ತಮಟೆ ವಾದನ), ಕಣ್ಣನ್(ಭಜನೆ ಪದ), ಜಂಬೂಸ್ವಾಮಿ(ಜಾನಪದ ಗಾಯನ), ಶಿವಾಜಿ ರಾವ್(ಡೊಳ್ಳು ಕುಣಿತ) ಮತ್ತು ಹನುಮಂತ್‌ರಾವ್(ರಂಗಕಲೆ) ಅವರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಲಾಗುವುದು. 
    ಎಮ್ಮಹಟ್ಟಿ ಅನಿಲ್ ಕುಮಾರ್ ಮತ್ತು ಸಂಗಡಿಗರಿಂದ ಡೊಳ್ಳು ಕುಣಿತ, ತಾರೀಕಟ್ಟೆ ಶೇಖರ್ ಮತ್ತು ಸಂಗಡಿಗರು ಹಾಗು ಜೆ. ಪ್ರಶಾಂತ್ ಮತ್ತು ಸಂಗಡಿಗರಿಂದ ತಮಟೆ ಕುಣಿತ, ಹೊಸಮನೆ ಲಕ್ಷ್ಮಣ್ ರಾವ್ ಮತ್ತು ಕುಟುಂಬ ಹಾಗು ಕೇಶವ ಮತ್ತು ಸಂಗಡಿಗರಿಂದ ಚೌಡಿಕೆ ಗೊಂದಲಿಗರ ಪದ, ಹಿರಿಯೂರು ನಗರಾಜ್ ಮತ್ತು ಸಂಗಡಿಗರಿಂದ ವೀರಗಾಸೆ, ದಿವಾಕರ್ ಮತ್ತು ಸಂಗಡಿಗರಿಂದ ಲಂಬಾಣಿ ನೃತ್ಯ, ತಿಮ್ಲಾಪುರ ಮಹಾದೇವಿ ಮತ್ತು ಸಂಗಡಿಗರು, ರಮಾ ಮತ್ತು ಸಂಗಡಿಗರು ಹಾಗು ಓಂಕಾರ ಯೋಗ ತಂಡದಿಂದ ಕೋಲಾಟ ನಡೆಯಲಿವೆ.  ಅಲ್ಲದೆ ಪುಟಾಣಿ ಮಕ್ಕಳಿಂದ ಕಂಸಾಳೆ ನೃತ್ಯ, ಲಂಬಾಣಿ ನೃತ್ಯ, ಸುಗ್ಗಿ ಕುಣಿತ ಮತ್ತು ಜಾನಪದ ನೃತ್ಯ ಜರುಗಲಿವೆ. ಕಲಾವಿದರು, ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ರಿಗೊಳಿಸುವಂತೆ ಕೋರಲಾಗಿದೆ. 
  ಸಮ್ಮೇಳನದ ಸರ್ವಾಧ್ಯಕ್ಷರಾಗಿ ಲಕ್ಷ್ಮಣ್‌ರಾವ್ ಬೋರತ್: 
    ಹೊಸಮನೆ ನಿವಾಸಿ ಚೌಡಿಕೆ ಕಲಾವಿದರಾದ ಲಕ್ಷ್ಮಣ್‌ರಾವ್  ಬೋರತ್‌ರವರನ್ನು ತಾಲೂಕು ಮಟ್ಟದ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. 
    ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಎಂ.ಆರ್ ರೇವಣಪ್ಪ ಹಾಗೂ ಸದಸ್ಯರು ಲಕ್ಷ್ಮಣ್ ರಾವ್‌ಬೋರತ್‌ರವರ ನಿವಾಸಕ್ಕೆ ತೆರಳಿ ಅಭಿನಂದಿಸಿದರು. ಪರಿಷತ್ ಪ್ರಧಾನ ಕಾರ್ಯದರ್ಶಿ ಮೋಹನ್ ಹಾಗೂ ಲತಾ, ಕಮಲಾಕರ್, ಬಿ.ಎಚ್ ಪ್ರಶಾಂತ್, ದಿವಾಕರ್, ಜಂಬೂಸ್ವಾಮಿ, ಶಿವರಾಜ್, ಹರೀಶ್, ಭಾರ್ಗವಿ ಮತ್ತು ಶಶಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.