Wednesday, March 12, 2025

ಪುರುಷರು ಮಹಿಳೆಯರ ಸ್ವಾತಂತ್ರ್ಯ ಕಸಿದುಕೊಳ್ಳದಂತೆ ಎಚ್ಚರಿಕೆ ನೀಡಿ : ಡಾ. ವಿಜಯದೇವಿ

 

ಭದ್ರಾವತಿ ಜನ್ನಾಪುರ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಎಂದು ಸಾಹಿತಿ, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ `ಕಾರುಣ್ಯ ವರ್ಷದ ಮಹಿಳೆ ಪ್ರಶಸ್ತಿ' ಸ್ವೀಕರಿಸಿದರು. 
    ಭದ್ರಾವತಿ: ಮಹಿಳೆ ಎಂದಿಗೂ ಪುರುಷನನ್ನು ಬಿಟ್ಟು ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲ. ಸಮಾಜದಲ್ಲಿ ಇಬ್ಬರು ಒಟ್ಟಿಗೆ ಬದುಕಲೇ ಬೇಕು. ಆದರೆ ಪುರುಷ ಮಹಿಳೆ ತನಗಾಗಿ ಮಾತ್ರ, ತನ್ನ ಹಿಡಿತದಲ್ಲಿಯೇ ಇರಬೇಕೆಂದು ಬಯಸುವುದು ಸರಿಯಲ್ಲ. ಆಕೆಯ ಸ್ವಾತಂತ್ರ್ಯ ಕಸಿದುಕೊಳ್ಳದಂತೆ ಎಚ್ಚರಿಕೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಾಹಿತಿ, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಹೇಳಿದರು. 
    ಅವರು ಬುಧವಾರ ನಗರದ ಜನ್ನಾಪುರ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ `ಕಾರುಣ್ಯ ವರ್ಷದ ಮಹಿಳೆ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದರು. 
    ಮಹಿಳೆಯರಿಗೆ ಡಾ.ಬಿ.ಆರ್ ಅಂಬೇಡ್ಕರ್‌ರವರು ಕುಟುಂಬದಲ್ಲಿನ ಪುರುಷರ ಹಿಡಿತದಿಂದ ಹೊರತಂದು ಅವರಿಗೆ ಸಂವಿಧಾನ ಬದ್ಧ ಸಮಾನತೆ ಹಕ್ಕನ್ನು ನೀಡಿದ್ದಾರೆ. ಈ ಹಕ್ಕು ನಮ್ಮೆಲ್ಲರಿಗೂ ಸಂತೋಷ, ಸಂಭ್ರಮವನ್ನುಂಟು ಮಾಡಿದೆ. ನಾವು ಈ ಹಕ್ಕನ್ನು ಸದ್ಬಳಕೆ ಮಾಡಿಕೊಂಡು ಪುರುಷರೊಂದಿಗೆ ಭವಿಷ್ಯದ ಸಮಾಜ ರೂಪಿಸಿಕೊಳ್ಳಬೇಕೆಂದರು. 
    ಸಮಾಜದಲ್ಲಿ ಮಹಿಳೆಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಗಮನ ಹರಿಸುವ ಅಗತ್ಯವಿದೆ. ಜೊತೆಗೆ ಮಹಿಳೆಯರು ಸಹ ತಮ್ಮ ಜವಾಬ್ದಾರಿಗಳನ್ನು ಅರಿತು ಪುರುಷರೊಂದಿಗೆ ಭವಿಷ್ಯದ ಸಮಾಜ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕೆಂದರು. 
    ಕಾರ್ಯಕ್ರಮವನ್ನು ದಲಿತ ಚಳುವಳಿಯ ರೂವಾರಿ, ಡಿಎಸ್‌ಎಸ್ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪನವರ ಧರ್ಮಪತ್ನಿ, ಚಿಂತಕಿ ಇಂದಿರಾ ಕೃಷ್ಣಪ್ಪ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಸರ್ಕಾರಿ ಅಭಿಯೋಜಕ ಮಮತ ಸೇರಿದಂತೆ ಇನ್ನಿತರರು ಮಾತನಾಡಿದರು. 
ಕಾರುಣ್ಯ ಚಾರಿಟೇಬಲ್ ಅಧ್ಯಕ್ಷ ಜಿ. ರಾಜು, ನಗರಸಭೆ ಸದಸ್ಯರಾದ ಜಯಶೀಲ, ನಾಗರತ್ನ ಅನಿಲ್‌ಕುಮಾರ್, ಸವಿತ ಉಮೇಶ್,  ಡಿಎಸ್‌ಎಸ್ ಮುಖಂಡ ಸಿ. ಜಯಪ್ಪ, ಆರ್.ಎಸ್ ಶೋಭಾ, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಎಂ. ಸುಹಾಸಿನಿ, ಪೇಪರ್‌ಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಕವಿತ, ದುರ್ಗಾದೇವಿ ಮಣಿಶೇಖರ್  ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ನಗರದ ವಿವಿಧ ಮಹಿಳಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಂಜುಳಾ ಸ್ವಾಗತಿಸಿ, ನಾಗವೇಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎ. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿ, ಜೀವಾ ವಂದಿಸಿದರು. ಟ್ರಸ್ಟ್ ಪದಾಧಿಕಾರಿಗಳು, ಸೇವಾಕರ್ತರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 


No comments:

Post a Comment