ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ, ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗು ಎನ್‌ಆರ್‌ಇಜಿ ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ನ. ೨೦: ತಾಲೂಕಿನ ಕೂಡ್ಲಿಗೆರೆ ಹೋಬಳಿ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗು ಎನ್‌ಆರ್‌ಇಜಿ ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಕಲಿ ದಾಖಲಾತಿ ಸೃಷ್ಟಿಸಿ ವೈಯಕ್ತಿಕವಾಗಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ. ಕಾಮಗಾರಿ ಅನುಷ್ಠಾನ ಆಗದೆ ಕೂಲಿ ಹಣ ಪಾವತಿಸಿರುವುದು, ಅಸ್ತಿತ್ವದಲ್ಲಿ ಇಲ್ಲದ ವ್ಯಕ್ತಿಗೆ, ಸ್ಥಳಾಂತರಗೊಂಡ ವ್ಯಕ್ತಿಗೆ, ಕೆಲಸ ನಿರ್ವಹಿಸದ ವ್ಯಕ್ತಿಗೆ ಹಣ ಪಾವತಿಸಲಾಗಿದೆ. ಅಲ್ಲದೆ ಅಪ್ರಾಪ್ತ ವಯಸ್ಸಿನ ಶಾಲಾ ಮಕ್ಕಳಿಗೂ ಈ ಯೋಜನೆಯಡಿ ಹಣ ಪಾವತಿಸಲಾಗಿದೆ. ಆಡಳಿತ ಮಂಜೂರಾತಿ ಪಡೆಯದೆ, ತಾಂತ್ರಿಕ ಅಂದಾಜು ಪ್ರತಿ ಇಲ್ಲದೆ, ತಾಂತ್ರಿಕ ಮಂಜೂರಾತಿ ಪಡೆಯದೆ ಹಾಗು ಗ್ರಾಮಸಭೆಯಲ್ಲಿ ಆಯ್ಕೆ ಮಾಡದೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಒಂದು ಕಾಮಗಾರಿಗೆ ಆಡಳಿತ ಮಂಜೂರಾತಿ ನೀಡಿ ಬೇರೊಂದು ಕಾಮಗಾರಿ ನಡೆಸಲಾಗಿದೆ. ಒಟ್ಟಾರೆ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಲಾಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೇರಿ ಗ್ರಾಮದಲ್ಲಿ ರಾಮಣ್ಣನ ಕೆರೆಗೆ ನೀರು ಹೋಗುವ ಕಾಲುವೆಯನ್ನು ಮುಚ್ಚಿ ಕೆರೆಗೆ ನೀರು ಹಾಯುವರಿಯಾಗದಂತೆ ಅಕ್ರಮವಾಗಿ ತಡೆಯಲಾಗಿದೆ. ಅಲ್ಲದೆ ಇದುವರೆಗೂ ರಾಮಣ್ಣನ ಕೆರೆಯನ್ನು ಹರಾಜು ಮಾಡದೆ ನಿರ್ಲಕ್ಷವಹಿಸಲಾಗಿದೆ. ಇತ್ತೀಚೆಗೆ ಮಳೆಯಿಂದ ಹಾನಿಯಾಗಿ ಶಿಥಿಲಗೊಂಡಿರುವ ಮನೆಗಳಿಗೆ ಮನೆ ನೀಡದೆ ಮನೆ ಇರುವವರಿಗೆ ಮನೆ ನೀಡಿದ್ದು, ಅಕ್ರಮ ವಿದ್ಯುತ್ ಬಿಲ್, ಕುಡಿಯುವ ನೀರಿನ ದುರಸ್ತಿ ಹಾಗು ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾಕಷ್ಟು ದುರುಪಯೋಗವಾಗಿದೆ ಎಂದು ದೂರಲಾಯಿತು.
ತಕ್ಷಣ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗು ಡಾಟಾ ಎಂಟ್ರಿ ಆಪರೇಟರ್ ಸೇರಿದಂತೆ ಅಕ್ರಮಗಳಿಗೆ ಕಾರಣಕರ್ತರಾಗಿರುವವರ ವಿರುದ್ಧ ಕಾನೂರು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ಮನವಿ ಸ್ವೀಕರಿಸಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ಮಾಹಿತಿ ತರಲಾಗಿದೆ. ಈ ಹಿನ್ನಲೆಯಲ್ಲಿ ಅವರು ಖುದ್ದಾಗಿ ಶನಿವಾರ ಆಗಮಿಸಲಿದ್ದು, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ರಾಮಚಂದ್ರ, ರವಿಕುಮಾರ್(ಗಂಗೂರು), ಮೋಹನ್, ಮಂಜು, ಕಿರಣ್ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೧ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment