Tuesday, September 14, 2021

ಹಿಂದಿ ದಿವಸ್ ವಿರೋಧಿಸಿ ಕರಾವೇ ಪ್ರತಿಭಟನೆ : ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ

ಕರ್ನಾಟಕ ರಕ್ಷಣಾ ವೇದಿಕೆ ಭದ್ರಾವತಿ ತಾಲೂಕು ಘಟಕದ ವತಿಯಿಂದ ಹಿಂದಿ ದಿವಸ್ ವಿರೋಧಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಸೆ. ೧೪:  ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಹಿಂದಿ ದಿವಸ್ ವಿರೋಧಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ಸಿಗಬೇಕು. ಯಾವುದೇ ಕಾರಣಕ್ಕೂ ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರಿಕೆ ಮಾಡಬಾರದು. ಎಲ್ಲಾ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸಬೇಕು. ಈ ಸಂಬಂಧ ಹಲವಾರು ಬಾರಿ ಬ್ಯಾಂಕ್‌ಗಳ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಗ್ರಾಹಕರ ಮೇಲೆ ಬಲವಂತಾಗಿ ಹಿಂದಿ ಭಾಷೆಯನ್ನು ಏರಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
    ಪ್ರಮುಖವಾಗಿ ಕೆನರಾ ಬ್ಯಾಂಕಿನ ಶಾಖೆಗಳಲ್ಲಿ ವ್ಯವಹಾರ ನಡೆಸಲು ಕನ್ನಡಿಗರನ್ನು ಉದ್ಯೋಗಿಗಳಾಗಿ ನೇಮಿಸಿಕೊಳ್ಳಬೇಕು. ಕನ್ನಡ ಬಾರದ ಇತರೆ ರಾಜ್ಯಗಳ ಉದ್ಯೋಗಿಗಳನ್ನು ವಾಪಾಸು ಕಳುಹಿಸಬೇಕು. ಬ್ಯಾಂಕಿನ ಎಲ್ಲಾ ವ್ಯವಹಾರಗಳು ಕನ್ನಡದಲ್ಲಿಯೇ ನಡೆಯುವಂತೆ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಹಾಗು ಬ್ಯಾಂಕಿನ ನಾಮಫಲಕ, ಸೂಚನಾ ಫಲಕಗಳಲ್ಲಿ ಶೇ.೬೦ರಷ್ಟು ಭಾಗ ಕನ್ನಡ ಭಾಷೆಗೆ ಮೀಸಲಿಡಬೇಕೆಂದು ಹಕ್ಕೊತ್ತಾಯಿಸಿ ತಹಸೀಲ್ದಾರ್ ಆರ್. ಪ್ರದೀಪ್  ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ವೇದಿಕೆ ಜಿಲ್ಲಾಧ್ಯಕ್ಷ ಪಿ. ಪ್ರಶಾಂತ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ತಾಲೂಕು ಅಧ್ಯಕ್ಷ ಎಂ. ಪರಮೇಶ್, ಪ್ರಮುಖರಾದ ವಿಶ್ವನಾಥ್, ರೆಡ್‌ಸನ್ ರಾಜು, ಆರ್. ಪ್ರಾಣೇಶ್, ದಿಲೀಪ್, ರಾಮಕೃಷ್ಣ, ಎಚ್.ಎಂ ಉಮೇಶ್, ಚಂದ್ರಪ್ಪ, ಮುನ್ನ, ಬಾಲು, ಆರ್. ರಂಗನಾಥ್ ಮತ್ತು ಅನಿಲ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

No comments:

Post a Comment