Tuesday, September 14, 2021

ಜಯಂತಿ ಆಚರಣೆಗಳು ಎಲ್ಲರನ್ನು ಒಗ್ಗೂಡಿಸುವಂತಿರಲಿ : ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ

ಭದ್ರಾವತಿ ಬಿಳಿಕಿ ಹಿರೇಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ, ಮಹಿಳಾ ಘಟಕ ಹಾಗು ಯುವ ಘಟಕ ಮತ್ತು ಬಿಳಿಕಿ ಗ್ರಾಮಸ್ಥರು ಹಾಗು ಶ್ರೀ ಮಠದ ಭಕ್ತರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶ್ರೀ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಸೆ. ೧೪: ಜಯಂತಿ ಆಚರಣೆಗಳು ಕೇವಲ ಸೀಮಿತ ವ್ಯಾಪ್ತಿಯಲ್ಲಿ ನಡೆಯದೆ ಸಮಾಜದಲ್ಲಿ ಎಲ್ಲರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಾದರಿಯಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ನಡೆಯುವಂತಾಗಬೇಕೆಂದು ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
    ಶ್ರೀಗಳು ಮಂಗಳವಾರ ಶ್ರೀ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ, ಮಹಿಳಾ ಘಟಕ ಹಾಗು ಯುವ ಘಟಕ ಮತ್ತು ಬಿಳಿಕಿ ಗ್ರಾಮಸ್ಥರು ಹಾಗು ಶ್ರೀ ಮಠದ ಭಕ್ತರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ಎಲ್ಲರೂ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಮುಂದಿನ ದಿನಗಳಲ್ಲಿ ಇನ್ನೂ ವಿಜೃಂಭಣೆಯಿಂದ ನಡೆಯುವ ಮೂಲಕ ಸಮಾಜಕ್ಕೆ ಒಳಿತಾಗಬೇಕೆಂದರು.
    ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರೂಪಾ ನಾಗರಾಜ್ ಮಾತನಾಡಿ, ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಶ್ರೀ ಮಠದಲ್ಲಿ ಮುಂದಿನ ದಿನಗಳಲ್ಲಿ ಮಹಿಳಾ ಘಟಕದ ವತಿಯಿಂದ ಇನ್ನೂ ವಿಜೃಂಭಣೆ ಆಚರಿಸುವುದಾಗಿ ಭರವಸೆ ನೀಡುವ ಜೊತೆಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
    ಶ್ರೀ ಮರುಳಸಿದ್ದೇಶ್ವರ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಉಪಾಧ್ಯಕ್ಷ ಎಸ್. ವಾಗೀಶ್, ಸಂಘಟನಾ ಕಾರ್ಯದರ್ಶಿ ಬಾರಂದೂರು ಮಂಜುನಾಥ್, ಜಿ.ಎಂ ಮೂರ್ತಿ, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಕವಿತಾ ಸುರೇಶ್,  ಬಿಳಿಕಿ ಗ್ರಾಮದ ಹಿರಿಯರಾದ ಲೋಕೇಶ್ ರಾವ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಂಗಾಧರ್, ಗ್ರಾಮಸ್ಥರಾದ ಪರ್ವತಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಇದಕ್ಕೂ ಮೊದಲು ಜಯಂತ್ಯೋತ್ಸವದ ಅಂಗವಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಶ್ರೀ ಮಠದ ಶ್ರೀ ಆನಂದ ಸ್ವಾಮಿ ಮತ್ತು ಶ್ರೀ ತಿಪ್ಪೇಸ್ವಾಮಿ ಶಾಸ್ತ್ರಿಗಳಿಂದ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ನೆರವೇರಿಸಲಾಯಿತು.  

No comments:

Post a Comment