Sunday, June 14, 2020

ಅಧಿಕಾರಕ್ಕಾಗಿ ಅರಳಿಕೊಪ್ಪ ಅಧ್ಯಕ್ಷೆಯಿಂದ ದ್ರೋಹ : ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಆರೋಪ

ಮಾಜಿ ಶಾಸಕ ಎಂ.ಜೆ ಅಪ್ಪಾಜಿ 
ಭದ್ರಾವತಿ, ಜೂ. ೧೪: ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಎಂಬುವರು ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರಲಿಲ್ಲ. ಕಳೆದ ಒಂದು ವರ್ಷದ ಹಿಂದೆ ನಮ್ಮ ಬೆಂಬಲ ಕೋರಿ ಬಂದಿದ್ದು, ನಂತರ ಅಧಿಕಾರಕ್ಕಾಗಿ ದ್ರೋಹವೆಸಗಿದ್ದಾರೆಂದು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಆರೋಪಿಸಿದ್ದಾರೆ. 
ಅವರು ಪತ್ರಿಕೆಯೊಂದಿಗೆ ಮಾತನಾಡಿ, ಈಕೆ ಇದೀಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವುದಾಗಿ ತಿಳಿದು ಬಂದಿದೆ. ಹಣ ಬಲದ ಮೇಲೆ ಈಕೆ ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದು, ಎಂದಿಗೂ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರಲಿಲ್ಲ. ಈಕೆಯ ಅಕ್ರಮಗಳಿಗೆ ನಾನು ಬೆಂಬಲ ನೀಡದ ಕಾರಣ ಇದೀಗ ಜೆಡಿಎಸ್ ಪಕ್ಷ ಬಿಟ್ಟಿರುವುದಾಗಿ ಸುಳ್ಳು ಹೇಳಿಕೊಳ್ಳುತ್ತಿದ್ದು, ಈಕೆ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ಇದೀಗ ಪುನಃ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿರುವುದು ಹೊಸದೇನಲ್ಲ. ಈ ಹಿನ್ನಲೆಯಲ್ಲಿ ಹೆಚ್ಚಿನ ಮಾನ್ಯತೆ ಕೊಡುವ ಅವಶ್ಯಕತೆ ಇಲ್ಲ ಎಂದರು. 

Saturday, June 13, 2020

ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ೨ ಮೃತದೇಹ ಪತ್ತೆ

ಭದ್ರಾವತಿ  ಹಳೇನಗರದ ಶಂಕರ ಮಠದ ಬಳಿ ಭದ್ರಾ ನದಿ ಸಮೀಪದಲ್ಲಿ ಶನಿವಾರ ಸಂಜೆ ಎರಡು ಅಪರಿಚಿತ ಮೃತದೇಹಗಳು ಪತ್ತೆಯಾಗಿವೆ. 
ಭದ್ರಾವತಿ, ಜೂ. ೧೩: ಹಳೇನಗರದ ಶಂಕರ ಮಠದ ಬಳಿ ಭದ್ರಾ ನದಿ ಸಮೀಪದಲ್ಲಿ ಶನಿವಾರ ಸಂಜೆ ಎರಡು ಅಪರಿಚಿತ ಮೃತದೇಹಗಳು ಪತ್ತೆಯಾಗಿವೆ. 
ನದಿ ದಡದಲ್ಲಿ ನಿರ್ಮಿಸಲಾಗಿರುವ ಕೊಳಚೆ ನೀರು ಶುದ್ಧೀಕರಣ ಘಟಕದ ಒಳಭಾಗದಲ್ಲಿ ಸುಮಾರು ೩೫ ರಿಂದ ೪೦ ವರ್ಷ ವಯಸ್ಸಿನ ಓರ್ವ ಪುರುಷ, ಓರ್ವ ಮಹಿಳೆ ಮೃತದೇಹ ಪತ್ತೆಯಾಗಿದೆ. ನದಿ ದಡದ ದನ, ಕುರಿಗಾಯಿಗಳಿಗೆ ಕೊಳೆತ ಮೃತದೇಹಗಳ ವಾಸನೆ ಬಂದಿದ್ದು, ಈ ಹಿನ್ನಲೆಯಲ್ಲಿ ಒಳಭಾಗ ಪ್ರವೇಶಿಸಿ ಪರಿಶೀಲನೆ ನಡೆಸಿದಾಗ ೨ ಮೃತದೇಹಗಳು ಪತ್ತೆಯಾಗಿವೆ. 
ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಹೊರಗೆ ತೆಗೆದಿದ್ದು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಹಳೇನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದು, ಮೃತದೇಹಗಳ ಸುಳಿವು ಇನ್ನು ಪತ್ತೆಯಾಗಿಲ್ಲ. 

ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಭದ್ರಾವತಿ ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಜೆಡಿಎಸ್ ಪಕ್ಷ ತೊರೆದು ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 

ಭದ್ರಾವತಿ, ಜೂ. ೧೩:  ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 
ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳ ಅವಧಿ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಇದೀಗ ಗ್ರಾಮೀಣ ಭಾಗದಲ್ಲಿ ಪುನಃ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಗ್ರಾಮೀಣ ಭಾಗದಲ್ಲೂ ಹಾಲಿ-ಮಾಜಿ ಶಾಸಕರ ಪ್ರತಿಷ್ಠೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕಂಡು ಬರುತ್ತಿದ್ದು, ಪ್ರಸ್ತುತ ರಾಜ್ಯ ಸರ್ಕಾರ ಇನ್ನೂ ಚುನಾವಣೆ ಘೋಷಿಸದಿದ್ದರೂ ಸಹ ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳು ಆರಂಭಗೊಳ್ಳುತ್ತಿವೆ. ಇದಕ್ಕೆ ಪೂರಕವೆಂಬಂತೆ ಪ್ರಮುಖ ರಾಜಕೀಯ ಪಕ್ಷಗಳಿಂದ ಬೇರೆ ಬೇರೆ ಪಕ್ಷಗಳಿಗೆ ವಲಸೆ ಆರಂಭಗೊಂಡಿದೆ.  
ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿರುವ ಮಮತ ಜೆಡಿಎಸ್ ಪಕ್ಷ ತೊರೆದು ಇದೀಗ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 
ಮುಖಂಡರಾದ ಬಿ.ಟಿ ನಾಗರಾಜ್, ಬಾಲಕೃಷ್ಣ, ರುದ್ರೇಶ್ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.  

ಬಿಳಕಿ ಮಠದಲ್ಲಿ ೫೦ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠ ಭದ್ರಾವತಿ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಮುಖ್ಯಮಂತ್ರಿಗಳ ಅನುದಾನದಲ್ಲಿ ಬಿಡುಗಡೆಯಾದ ೫೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನಕ್ಕೆ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದರು. ಶ್ರೀ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. 
ಭದ್ರಾವತಿ, ಜೂ. ೧೩: ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠ ತಾಲೂಕಿನ ಬಿಳಕಿ ಹಿರೇಮಠ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಅನುದಾನದಲ್ಲಿ ಬಿಡುಗಡೆಯಾದ ೫೦ ಲಕ್ಷ ರು. ವೆಚ್ಚದಲ್ಲಿ ಮಠದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿದೆ. 
ಸಮುದಾಯ ಭವನ ನಿರ್ಮಾಣಕ್ಕೆ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದರು. ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. 
ಶಿವಮೊಗ್ಗ ಬಸವೇಶ್ವರ ಸಹಕಾರ ಸಂಘದ ನಿದೆ೯ಶಕ ಬಿ.ಪಿ ಮರುಳೇಶ್,  ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಜಿತೇಂದ್ರ, ಸಿವಿಲ್ ಇಂಜಿನಿಯರ್ ಮಂಜುನಾಥ್, ಮಠದ ವ್ಯವಸ್ಥಾಪಕ ಚಿದಾನಂದ ಸ್ವಾಮಿ, ಬಿ.ಪಿ ಚಂದ್ರಶೇಖರಪ್ಪ, ಜಿ.ಎಸ್ ಸುರೇಶಯ್ಯ, ಎಚ್. ಮಂಜುನಾಥ್, ಆನಂದ ಸ್ವಾಮಿ, ಕೆ.ಆರ್ ಆನಂದ್, ಬಿ.ಎಂ. ರಮೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. 

ಬಿಎಸ್‌ಪಿ ಅಧ್ಯಕ್ಷರಾಗಿ ಬಿ.ಆರ್ ಸತೀಶ್

ಭದ್ರಾವತಿ, ಜೂ. ೧೩: ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಸಮಿತಿ ಪುನರ್ ರಚಿಸಿದ್ದು, ಅಧ್ಯಕ್ಷರಾಗಿ ಬಿ.ಆರ್ ಸತೀಶ್ ನೇಮಕಗೊಂಡಿದ್ದಾರೆ.
ಸಂಯೋಜಕರಾಗಿ ವಿ. ರಾಜಶೇಖರ್, ಉಪಾಧ್ಯಕ್ಷರಾಗಿ ಸೋಮು, ಎಂ. ಶಿವಮೂರ್ತಿ, ಡಿ. ಮಹೇಶ್ವರನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ನಾಗಾನಾಯ್ಕ, ಕಾರ್ಯದರ್ಶಿಯಾಗಿ ಜಯರಾಜ್, ಖಜಾಂಚಿಯಾಗಿ ನಾಗರಾಜ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜೀವನ್‌ರಾವ್, ಸಿ. ಚಂದ್ರಪ್ಪ, ಕಾಡಪ್ಪ, ಮಹೇಶ್, ರಮೇಶ್, ಬಾಲಕಾಶಿ, ಶ್ರೀನಿವಾಸ್ ಮತ್ತು ಸಹೋದರತ್ವ ಸಮಿತಿ ಸಂಯೋಜಕರಾಗಿ ನಾದನ್ ಮತ್ತು ಸಹ ಸಂಯೋಜಕರಾಗಿ ಜಾವೇದ್ ಖಾನ್ ಹಾಗೂ ಎನ್. ಓಂಕಾರನಾಯ್ಕ ಅವರನ್ನು ನೇಮಕಗೊಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಎ.ಡಿ ಶಿವಪ್ಪ ತಿಳಿಸಿದ್ದಾರೆ.

Friday, June 12, 2020

ಆಶಾ ಕಾರ್ಯಕರ್ತೆಯರಿಗೆ ಬೂಸ್ಟರ್ ಕಿಟ್ ವಿತರಣೆ

ಭದ್ರಾವತಿಯಲ್ಲಿ ಕೋವಿಡ-೧೯ ಸಂಬಂಧ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಆಶಾ ಕಾರ್ಯಕರ್ತೆಯರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಬೂಸ್ಟರ್ ಕಿಟ್ ವಿತರಿಸಿದರು. 
ಭದ್ರಾವತಿ, ಜೂ. ೧೨:  ಕೋವಿಡ್-೧೯ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ತಾಲೂಕು ಆಯುಷ್ ಇಲಾಖೆಯಿಂದ ನೀಡಲಾದ ಇಮ್ಯುನಿಟಿ ಬೂಸ್ಟರ್ ಕಿಟ್ ವಿತರಿಸಿದರು. 
ತಮ್ಮ ಗೃಹ ಕಛೇರಿಯಲ್ಲಿ ಕಿಟ್ ವಿತರಿಸಿ ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು. ಆಶಾ ಕಾರ್ಯಕರ್ತೆಯರು, ಆಯುಷ ಇಲಾಖೆ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಬಿಜೆಪಿ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ

ಭದ್ರಾವತಿ ಬಿಜೆಪಿ ಮಹಿಳಾ ಮೋರ್ಚಾ ನೂತನ ಅಧ್ಯಕ್ಷೆ ಕಲ್ಪನ
ಭದ್ರಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಜಯರಾಜ್ 
ಭದ್ರಾವತಿ, ಜೂ. ೧೨: ತಾಲೂಕಿನ ಬಿಜೆಪಿ ಮಂಡಲದ ವಿವಿಧ ಮೋರ್ಚಾಗಳಿಗೆ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನೇಮಕಗೊಂಡಿದ್ದಾರೆ. 
ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಕಲ್ಪನ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುಳ, ಯುವ ಮೋರ್ಚಾ ಅಧ್ಯಕ್ಷರಾಗಿ ಎಂ. ವಿಜಯರಾಜ್, ಪ್ರಧಾನ ಕಾರ್ಯದರ್ಶಿಯಾಗಿ ನಕುಲ್ ರೇವಣಕರ್, ಓಬಿಸಿ ಮೋರ್ಚಾ ಅಧ್ಯಕ್ಷರಾಗಿ ಜೆ. ಸುಬ್ರಮಣಿ, ಆರ್.ಪಿ ವೆಂಕಟೇಶ್, ಎಸ್.ಸಿ ಮೋರ್ಚಾ ಅಧ್ಯಕ್ಷ ಗಣೇಶ್‌ರಾವ್, ಮುರುಳಿ, ರೈತ ಮೋರ್ಚಾ ಅಧ್ಯಕ್ಷರಾಗಿ ನಾಗರಾಜರಾವ್ ಅಂಬೋರೆ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಆರ್ ಮೋಹನ್‌ಕುಮಾರ್, ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಇಮ್ರಾನ್ ಆಲಿ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಜಾಬೀರ್ ನೇಮಕಗೊಂಡಿದ್ದಾರೆಂದು ಪಕ್ಷದ ತಾಲೂಕು ಮಂಡಲದ ಅಧ್ಯಕ್ಷ ಎಂ. ಪ್ರಭಾಕರ್ ತಿಳಿಸಿದ್ದಾರೆ.