Sunday, April 18, 2021

ಹೊಸ ಸೇತುವೆ ಕಾಮಗಾರಿ ಶೇ.೮೦ರಷ್ಟು ಪೂರ್ಣ

ಸುಮಾರು ೧೫೦ ವರ್ಷಗಳಿಗೂ ಅಧಿಕ, ಹಳೇಯದಾದ ಭದ್ರಾವತಿ ನಗರದ ಹೃದಯ ಭಾಗದಲ್ಲಿರುವ ಭದ್ರಾ ಸೇತುವೆ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಇದೀಗ ಶೇ.೮೦ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ.

   ಭದ್ರಾವತಿ, ಏ. ೧೮: ಸುಮಾರು ೧೫೦ ವರ್ಷಗಳಿಗೂ ಅಧಿಕ, ಹಳೇಯದಾದ ನಗರದ ಹೃದಯ ಭಾಗದಲ್ಲಿರುವ ಭದ್ರಾ ಸೇತುವೆ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಇದೀಗ ಶೇ.೮೦ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ.
  ಸೇತುವೆಯನ್ನು ಸಂಪೂರ್ಣವಾಗಿ ಕಾಂಕ್ರಿಟ್‌ನಿಂದ ನಿರ್ಮಿಸಲಾಗುತ್ತಿದ್ದು, ಎರಡು ಬದಿ ಆಕರ್ಷಕವಾಗಿ ಕಮಾನು ಮಾದರಿಯಲ್ಲಿ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಭಾನುವಾರ ಬೆಳಿಗ್ಗೆ ಸೇತುವೆ ಎರಡನೇ ಕಮಾನು ಅಳವಡಿಸುವ ಕಾರ್ಯ ನಡೆಯಿತು. ಇದರಿಂದಾಗಿ ಬೆಳಿಗ್ಗೆ ಸುಮಾರು ೨ ತಾಸು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
    ಭದ್ರಾ ಸೇತುವೆ ಶಿಥಿಲಗೊಂಡ ಪರಿಣಾಮ ಹೊಸ ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸಿಕೊಂಡು ಬರಲಾಗುತ್ತಿತ್ತು. ಇದರ ಪರಿಣಾಮ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಡಾ. ಎಚ್.ಸಿ ಮಹಾದೇವಪ್ಪ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಸುಮಾರು ೧೮ ತಿಂಗಳ ಅವಧಿಯಲ್ಲಿ ಮುಕ್ತಾಯಗೊಳ್ಳಬೇಕಾದ ಕಾಮಗಾರಿ ಹಲವಾರು ಕಾರಣಗಳಿಂದ ವಿಳಂಬವಾಗಿದ್ದು, ಇದೀಗ ಶೇ.೮೦ರಷ್ಟು ಕಾಮಗಾರಿ ನಡೆದಿದೆ. ಮುಂದಿನ ೨-೩ ತಿಂಗಳಲ್ಲಿ ಸೇತುವೆ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.

Saturday, April 17, 2021

ಏ.೧೮ರಂದು ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ಲಭ್ಯ

ಭದ್ರಾವತಿ, ಏ. ೧೭: ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಏ.೧೮ರಂದು ಬೆಳಿಗ್ಗೆ ೧೦.೩೦ ರಿಂದ ಸಂಜೆ ೪ ಗಂಟೆವರೆಗೆ ಕೊರೋನಾ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
   ೪೫ ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದಾಗಿದ್ದು, ಲಸಿಕೆ ಹಾಕಿಸಿಕೊಳ್ಳುವವರು ತಪ್ಪದೇ ಆಧಾರ್ ಕಾರ್ಡ್ ತರುವುದು. ಜೊತೆಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ ಹಿರಿಯ ಆರೋಗ್ಯ ಅಧಿಕಾರಿ ಡಾ. ಗಿರಿಧರ್ ಅವರನ್ನು ಸಂಪರ್ಕಿಸಬಹುದಾಗಿದೆ.

ಕೊರೋನಾ ಲಸಿಕೆ ಪಡೆದು ಜಾಗೃತಿ ಮೂಡಿಸಿದ ಶಾಸಕ ಬಿ.ಕೆ ಸಂಗಮೇಶ್ವರ್

ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿದರು.
   ಭದ್ರಾವತಿ, ಏ. ೧೭: ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿದರು.
   ಕೊರೋನಾ ೨ನೇ ಅಲೆ ಹಿನ್ನಲೆಯಲ್ಲಿ ಸಾರ್ವಜನಿಕರು ಎಚ್ಚರ ವಹಿಸುವ ಜೊತೆಗೆ ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಜರ್ ಬಳಸುವ ಜೊತೆಗೆ ವೈಯಕ್ತಿಕ ಸ್ವಚ್ಛತೆಗೆ ಗಮನ ಹರಿಸಬೇಕು.  ಲಸಿಕೆ ಅಗತ್ಯವಿರುವವರು ತಪ್ಪದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುವ ಲಸಿಕೆ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಆಸ್ಪತ್ರೆ ಮುಖ್ಯ ವ್ಯದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಯುಗಾದಿ ಜೂಜೂ ತಪ್ಪಿಸಲು ಗ್ರಾಮಸ್ಥರಿಂದ ಹೊಸ ಪ್ರಯೋಗ

ಯುವ ಸಮುದಾಯ ಸೆಳೆಯಲು ಕ್ರಿಕೆಟ್ ಪಂದ್ಯಾವಳಿ ಆಯೋಜನೆ, ಜಾಗೃತಿ


ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಯುಗಾದಿ ಹಬ್ಬದಂದು ಜೂಜೂ ತಪ್ಪಿಸುವ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಗ್ರಾಮದ ಮುಖಂಡ ತ್ಯಾಗರಾಜ್ ಬಹುಮಾನಗಳನ್ನು ವಿತರಿಸಿದರು
    ಭದ್ರಾವತಿ, ಏ. ೧೭: ಯುಗಾದಿ ಎಂದರೆ ಹಿಂದೂಗಳಿಗೆ ವರ್ಷದ ಮೊದಲ ದಿನ, ಬದುಕಿನ ಸಿಹಿ-ಕಹಿಗಳೊಂದಿಗೆ ಸಂಭ್ರಮಿಸುವ ದಿನ. ಈ ನಡುವೆ ಜೂಜೂಗಾರರು ಮತ್ತಷ್ಟು ಸಂಭ್ರಮಿಸುವ ಹಬ್ಬ ದಿನ ಸಹ ಯುಗಾದಿಯಾಗಿದೆ. ಇಂದಿಗೂ ಯುಗಾದಿ ಹಬ್ಬದಂದು ಜೂಜೂ ಆಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಈ ಸಂಸ್ಕೃತಿ ಮರೆಯಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಉಳಿದುಕೊಂಡಿದೆ. ಸಮಾಜಕ್ಕೆ ಮಾರಕವಾಗಿರುವ ಜೂಜು ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಗೋಣಿಬೀಡು ಗ್ರಾಮಸ್ಥರು ಮಾದರಿಯಾಗಿದ್ದಾರೆ.
   ಈ ಬಾರಿ ಯುಗಾದಿ ಹಬ್ಬದಂದು ಗ್ರಾಮದಲ್ಲಿ ಹೇಗಾದರೂ ಮಾಡಿ ಜೂಜು ಆಡುವವರಿಗೆ ಕಡಿವಾಣ ಹಾಕಬೇಕೆಂಬ ಸಂಕಲ್ಪದೊಂದಿಗೆ ಹೊಸ ಪ್ರಯೋಗಕ್ಕೆ ಮುಂದಾಗಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.
   ಜೂಜು ಆಟದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಯುವ ಸಮುದಾಯವನ್ನು ಸೆಳೆಯಲು ಈ ಬಾರಿ ಗ್ರಾಮಸ್ಥರೆಲ್ಲರೂ ಒಂದಾಗಿ ಯುಗಾದಿ ಹಬ್ಬದಂದು ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ  ಮೂಲಕ ಜೂಜು ಆಡುವವರಿಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಕೆಟ್ ಪಂದ್ಯಾವಳಿ ಮೂಲಕ ಜೂಜು ನಿರ್ಮೂಲನೆಯಾಗಬೇಕೆಂಬ ಸಂದೇಶವನ್ನು ಸಾರಿದ್ದಾರೆ.
   ಪಂದ್ಯಾವಳಿಗೆ ಹೆಚ್ಚಿನ ಸಹಕಾರ ನೀಡಿರುವ ಗ್ರಾಮದ ಪ್ರಮುಖರು, ಜಯಕರ್ನಾಟಕ ಸಂಘಟನೆ ಮುಖಂಡರಾದ ತ್ಯಾಗರಾಜ್‌ರವರು ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು. ಗ್ರಾಮದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಯುವ ಘಟಕ ನಗರ ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಶಂಕರ್ ನೇಮಕ


ಯುವ ಕಾಂಗ್ರೆಸ್ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಭದ್ರಾವತಿ ನ್ಯೂಟೌನ್ ಆಂಜನೇಯ ಅಗ್ರಹಾರ ನಿವಾಸಿ ಎಸ್. ಶಂಕರ್‌ಗೆ ಶಾಸಕ ಬಿ.ಕೆ ಸಂಗಮೇಶ್ವರ್ ಆದೇಶ ಪತ್ರ ವಿತರಿಸಿದರು.    
ಭದ್ರಾವತಿ, ಏ. ೧೭: ಯುವ ಕಾಂಗ್ರೆಸ್ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನ್ಯೂಟೌನ್ ಆಂಜನೇಯ ಅಗ್ರಹಾರ ನಿವಾಸಿ ಎಸ್. ಶಂಕರ್ ನೇಮಕಗೊಂಡಿದ್ದಾರೆ.
    ಯುವ ಘಟಕದ ನಗರ ಅಧ್ಯಕ್ಷ ಜಿ. ವಿನೋದ್‌ಕುಮಾರ್ ಮನವಿ ಮೇರೆಗೆ ಜಿಲ್ಲಾಧ್ಯಕ್ಷ ಎಚ್.ಪಿ ಗಿರೀಶ್ ನೇಮಕಗೊಳಿಸಿ ಆದೇಶ ಹೊರಡಿಸಿದ್ದು, ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷವನ್ನು ಮತ್ತಷ್ಟು ಬಲಪಡಿಸುವಂತೆ ಸೂಚಿಸಲಾಗಿದೆ.
    ಆದೇಶ ಪತ್ರವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಎಸ್. ಶಂಕರ್‌ಗೆ ವಿತರಿಸಿದರು. ಈ ಸಂದರ್ಭದಲ್ಲಿ ಯುವ ಘಟಕದ ನಗರ ಅಧ್ಯಕ್ಷ ಜಿ. ವಿನೋದ್‌ಕುಮಾರ್, ಮುಖಂಡರಾದ ಮುಕುಂದಪ್ಪ,  ಪ್ರಾನ್ಸಿಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, April 16, 2021

ಬಿ.ಇಡಿ ಕಾಲೇಜಿಗೆ ಶೇ.೧೦೦ರಷ್ಟು ಫಲಿತಾಂಶ




ಬಿ.ಇಡಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು.   
ಭದ್ರಾವತಿ, ಏ. ೧೬: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಬಿ.ಇಡಿ ಕಾಲೇಜಿಗೆ ಈ ಬಾರಿ ಶೇ.೧೦೦ರಷ್ಟು ಫಲಿತಾಂಶ ಲಭಿಸಿದೆ.
      ಒಟ್ಟು ೫೦ ವಿದ್ಯಾರ್ಥಿಗಳ ಪೈಕಿ ೪೨  ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸೈಯದ ಗುಲ್ನಾಜ್ ಪರ್ವಿನ್ ಶೇ.೯೦.೬೦, ಕವಿತಾ ಎ. ಎಸ್ ಶೇ. ೮೯.೧೫ ಮತ್ತು ನಂದಿನಿ ಟಿ .ಪಿ ಶೇ. ೮೯.೦೫ರಷ್ಟು ಅತಿಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ.
     ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಪದನಿಮಿತ್ತ ಅಧ್ಯಕ್ಷ  ಎನ್. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಡಿ. ಎಸ್. ರಾಜಪ್ಪ, ಬಿ.ಇಡಿ ವಿಭಾಗದ ಕಾರ್ಯದರ್ಶಿ ಎ .ಜೆ. ರಂಗನಾಥ್ ಪ್ರಸಾದ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಪ್ರಾಂಶುಪಾಲರು, ಉಪನ್ಯಾಸಕ ಹಾಗು ಸಿಬ್ಬಂದಿ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ನಾಮಪತ್ರ ಪರಿಶೀಲನೆ : ೧೯೫ ಪುರಸ್ಕೃತ

ಏಕೈಕ ಜೆಡಿಯು ನಾಮಪತ್ರ ಸೇರಿದಂತೆ ೫೩ ತಿರಸ್ಕಾರ

ಭದ್ರಾವತಿ, ಏ. ೧೬: ನಗರಸಭೆ ೩೫ ವಾರ್ಡ್‌ಗಳ ಚುನಾವಣೆಗೆ ಸಂಬಂಧಿಸಿದಂತೆ ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಒಟ್ಟು ೨೪೮ ನಾಮಪತ್ರಗಳ ಪೈಕಿ ೧೯೫ ನಾಮಪತ್ರಗಳು ಪುರಸ್ಕೃತಗೊಂಡಿವೆ.
ನಾಮಪತ್ರ ಸಲ್ಲಕೆಗೆ ಕೊನೆಯ ದಿನವಾದ ಗುರುವಾರ ಒಟ್ಟು ೨೪೮ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಓರ್ವ ಅಭ್ಯರ್ಥಿಗಳಿಂದ ೨-೩ ಬಾರಿ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ನಡುವೆ ವಿವಿಧ ರಾಜಕೀಯ ಪಕ್ಷಗಳ ಆಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿದ್ದವರ ಪೈಕಿ ಪಕ್ಷದ ಅಧಿಕೃತ ಬಿ ಫಾರಂ ನೀಡದವರ ನಾಮಪತ್ರಗಳು ಹಾಗೂ ಸೂಕ್ತ ದಾಖಲೆಗಳನ್ನು ಸಲ್ಲಿಸದವರ ನಾಮಪತ್ರಗಳು ಒಟ್ಟು ೫೩ ನಾಮಪತ್ರಗಳು ತಿರಸ್ಕಾರಗೊಂಡಿವೆ.
ನಾಮಪತ್ರಗಳ ಪರಿಶೀಲನೆ ನಂತರ ಕಾಂಗ್ರೆಸ್-೩೫, ಜೆಡಿಎಸ್-೩೫, ಬಿಜೆಪಿ-೩೫, ಎಎಪಿ-೭, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೨, ಎಐಎಂಐಎಂ-೨, ಎಸ್‌ಡಿಪಿಐ-೩ ಮತ್ತು ಪಕ್ಷೇತರ-೭೬ ನಾಮಪತ್ರಗಳು ಪುರಸ್ಕೃತಗೊಂಡಿವೆ.
ಏಕೈಕ ಜೆಡಿಯು ಅಭ್ಯರ್ಥಿ ನಾಮಪತ್ರ ತಿರಸ್ಕಾರ:
ಜನತಾದಳ(ಸಂಯುಕ್ತ) ಕರ್ನಾಟಕ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡರವರ ಪತ್ನಿ ದಿವ್ಯಶ್ರೀ ನಗರಸಭೆ ೩೨ನೇ ವಾರ್ಡ್‌ಗೆ ಮೊದಲ ಬಾರಿಗೆ ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದು, ಇವರ ನಾಮಪತ್ರ ತಿರಸ್ಕೃತಗೊಂಡಿದೆ. ಇದರಿಂದಾಗಿ ಈ ಪಕ್ಷದಿಂದ ಯಾವುದೇ ಅಭ್ಯರ್ಥಿ ಇಲ್ಲದಂತಾಗಿದೆ.