Saturday, April 17, 2021

ಯುಗಾದಿ ಜೂಜೂ ತಪ್ಪಿಸಲು ಗ್ರಾಮಸ್ಥರಿಂದ ಹೊಸ ಪ್ರಯೋಗ

ಯುವ ಸಮುದಾಯ ಸೆಳೆಯಲು ಕ್ರಿಕೆಟ್ ಪಂದ್ಯಾವಳಿ ಆಯೋಜನೆ, ಜಾಗೃತಿ


ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಯುಗಾದಿ ಹಬ್ಬದಂದು ಜೂಜೂ ತಪ್ಪಿಸುವ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಗ್ರಾಮದ ಮುಖಂಡ ತ್ಯಾಗರಾಜ್ ಬಹುಮಾನಗಳನ್ನು ವಿತರಿಸಿದರು
    ಭದ್ರಾವತಿ, ಏ. ೧೭: ಯುಗಾದಿ ಎಂದರೆ ಹಿಂದೂಗಳಿಗೆ ವರ್ಷದ ಮೊದಲ ದಿನ, ಬದುಕಿನ ಸಿಹಿ-ಕಹಿಗಳೊಂದಿಗೆ ಸಂಭ್ರಮಿಸುವ ದಿನ. ಈ ನಡುವೆ ಜೂಜೂಗಾರರು ಮತ್ತಷ್ಟು ಸಂಭ್ರಮಿಸುವ ಹಬ್ಬ ದಿನ ಸಹ ಯುಗಾದಿಯಾಗಿದೆ. ಇಂದಿಗೂ ಯುಗಾದಿ ಹಬ್ಬದಂದು ಜೂಜೂ ಆಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಈ ಸಂಸ್ಕೃತಿ ಮರೆಯಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಉಳಿದುಕೊಂಡಿದೆ. ಸಮಾಜಕ್ಕೆ ಮಾರಕವಾಗಿರುವ ಜೂಜು ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಗೋಣಿಬೀಡು ಗ್ರಾಮಸ್ಥರು ಮಾದರಿಯಾಗಿದ್ದಾರೆ.
   ಈ ಬಾರಿ ಯುಗಾದಿ ಹಬ್ಬದಂದು ಗ್ರಾಮದಲ್ಲಿ ಹೇಗಾದರೂ ಮಾಡಿ ಜೂಜು ಆಡುವವರಿಗೆ ಕಡಿವಾಣ ಹಾಕಬೇಕೆಂಬ ಸಂಕಲ್ಪದೊಂದಿಗೆ ಹೊಸ ಪ್ರಯೋಗಕ್ಕೆ ಮುಂದಾಗಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.
   ಜೂಜು ಆಟದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಯುವ ಸಮುದಾಯವನ್ನು ಸೆಳೆಯಲು ಈ ಬಾರಿ ಗ್ರಾಮಸ್ಥರೆಲ್ಲರೂ ಒಂದಾಗಿ ಯುಗಾದಿ ಹಬ್ಬದಂದು ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ  ಮೂಲಕ ಜೂಜು ಆಡುವವರಿಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಕೆಟ್ ಪಂದ್ಯಾವಳಿ ಮೂಲಕ ಜೂಜು ನಿರ್ಮೂಲನೆಯಾಗಬೇಕೆಂಬ ಸಂದೇಶವನ್ನು ಸಾರಿದ್ದಾರೆ.
   ಪಂದ್ಯಾವಳಿಗೆ ಹೆಚ್ಚಿನ ಸಹಕಾರ ನೀಡಿರುವ ಗ್ರಾಮದ ಪ್ರಮುಖರು, ಜಯಕರ್ನಾಟಕ ಸಂಘಟನೆ ಮುಖಂಡರಾದ ತ್ಯಾಗರಾಜ್‌ರವರು ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು. ಗ್ರಾಮದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment