ಏಕೈಕ ಜೆಡಿಯು ನಾಮಪತ್ರ ಸೇರಿದಂತೆ ೫೩ ತಿರಸ್ಕಾರ
ಭದ್ರಾವತಿ, ಏ. ೧೬: ನಗರಸಭೆ ೩೫ ವಾರ್ಡ್‌ಗಳ ಚುನಾವಣೆಗೆ ಸಂಬಂಧಿಸಿದಂತೆ ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಒಟ್ಟು ೨೪೮ ನಾಮಪತ್ರಗಳ ಪೈಕಿ ೧೯೫ ನಾಮಪತ್ರಗಳು ಪುರಸ್ಕೃತಗೊಂಡಿವೆ.
ನಾಮಪತ್ರ ಸಲ್ಲಕೆಗೆ ಕೊನೆಯ ದಿನವಾದ ಗುರುವಾರ ಒಟ್ಟು ೨೪೮ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಓರ್ವ ಅಭ್ಯರ್ಥಿಗಳಿಂದ ೨-೩ ಬಾರಿ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ನಡುವೆ ವಿವಿಧ ರಾಜಕೀಯ ಪಕ್ಷಗಳ ಆಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿದ್ದವರ ಪೈಕಿ ಪಕ್ಷದ ಅಧಿಕೃತ ಬಿ ಫಾರಂ ನೀಡದವರ ನಾಮಪತ್ರಗಳು ಹಾಗೂ ಸೂಕ್ತ ದಾಖಲೆಗಳನ್ನು ಸಲ್ಲಿಸದವರ ನಾಮಪತ್ರಗಳು ಒಟ್ಟು ೫೩ ನಾಮಪತ್ರಗಳು ತಿರಸ್ಕಾರಗೊಂಡಿವೆ.
ನಾಮಪತ್ರಗಳ ಪರಿಶೀಲನೆ ನಂತರ ಕಾಂಗ್ರೆಸ್-೩೫, ಜೆಡಿಎಸ್-೩೫, ಬಿಜೆಪಿ-೩೫, ಎಎಪಿ-೭, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೨, ಎಐಎಂಐಎಂ-೨, ಎಸ್‌ಡಿಪಿಐ-೩ ಮತ್ತು ಪಕ್ಷೇತರ-೭೬ ನಾಮಪತ್ರಗಳು ಪುರಸ್ಕೃತಗೊಂಡಿವೆ.
ಏಕೈಕ ಜೆಡಿಯು ಅಭ್ಯರ್ಥಿ ನಾಮಪತ್ರ ತಿರಸ್ಕಾರ:
ಜನತಾದಳ(ಸಂಯುಕ್ತ) ಕರ್ನಾಟಕ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡರವರ ಪತ್ನಿ ದಿವ್ಯಶ್ರೀ ನಗರಸಭೆ ೩೨ನೇ ವಾರ್ಡ್‌ಗೆ ಮೊದಲ ಬಾರಿಗೆ ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದು, ಇವರ ನಾಮಪತ್ರ ತಿರಸ್ಕೃತಗೊಂಡಿದೆ. ಇದರಿಂದಾಗಿ ಈ ಪಕ್ಷದಿಂದ ಯಾವುದೇ ಅಭ್ಯರ್ಥಿ ಇಲ್ಲದಂತಾಗಿದೆ.
No comments:
Post a Comment