![](https://blogger.googleusercontent.com/img/b/R29vZ2xl/AVvXsEhrflvyPrK2uGHMrwRmYN0yJt10Nx_mHmgldMiwuFxpevAU1-A_vChFsIxkUn4WdLycaL8NEOoHGak7pDb4qhvynJs3RP1K0ADdHcFJ7iz5nQN6irbR1yPndHzzDfnbg4aYaGF4otXpFlqv/w400-h263-rw/D1-BDVT3-795666.jpg)
ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಮಹಿಳಾ ಸೇವಾ ಸಮಾಜದವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ, ಡಿ. ೧: ಕನ್ನಡ ನಾಡಿನ ಇತಿಹಾಸ ಅರಿತುಕೊಂಡಾಗ ಮಾತ್ರ ಭಾಷೆಯ ಮಹತ್ವ ತಿಳಿದುಕೊಳ್ಳಲು ಸಾಧ್ಯ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಡಾ. ಎಚ್.ವಿ ನಾಗರಾಜ್ ಹೇಳಿದರು.
ಅವರು ಹಳೇನಗರ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಮಹಿಳಾ ಸೇವಾ ಸಮಾಜದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇತಿಹಾಸವನ್ನು ತಿಳಿಯದಿದ್ದರೆ ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಯ ಬೆಳೆವಣಿಗೆಯಲ್ಲಿ ನಾಡಿನ ವಿದ್ವಾಸಂರು, ಇತಿಹಾಸಕಾರರು, ಲೇಖಕರುಗಳ ಶ್ರಮವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದರು.
ಜಾಗತೀಕರಣದ ಪ್ರಭಾವ ಎಲ್ಲಾ ಭಾಷೆಗಳ ಮೇಲೂ ತನ್ನ ಕರಿನೆರಳನ್ನು ಬೀರಿದೆ. ಕಾರ್ಪೋರೇಟ್ ಸಂಸ್ಕೃತಿ ಭಾಷೆಗೆ ಧಕ್ಕೆಯನ್ನುಂಟು ಮಾಡಿದ್ದು, ಇದರ ಪರಿಣಾಮದಿಂದಾಗಿ ಭಾಷೆಯ ಮೌಲ್ಯ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ಕನ್ನಡದಲ್ಲಿ ಉತ್ತಮ ಸಾಹಿತ್ಯ ಲೇಖನಗಳು ಹೊರಬರುತ್ತಿಲ್ಲ. ಬೇರೆ ಭಾಷೆಗಳ ಸಾಹಿತ್ಯಗಳು ಕನ್ನಡ ಭಾಷೆಗೆ ಭಾಷಾಂತರವಾಗಬೇಕಿದೆ. ಇಂತಹ ಸಂದರ್ಭದಲ್ಲಿ ಸ್ಪ್ಪರ್ಧತ್ಮಕವಾಗಿ ಭಾಷೆಯನ್ನು ಬೆಳೆಸಬೇಕಿದೆ. ಅಂದು ಕನ್ನಡ ಏಕೀಕರಣಕ್ಕಾಗಿ ಹೋರಾಡಿದ ನಾವು ಇಂದು ಅದೇ ಕನ್ನಡ ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಹೋರಾಟ ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಿದೆ ಎಂದರು.
ಕನ್ನಡ ಭಾಷೆ ಉಳಿವು, ಬೆಳವಣಿಗೆಗಾಗಿ ರಾಜ್ಯ ಸರ್ಕಾರ ಸುಮಾರು ೨೦೦ಕ್ಕೂ ಹೆಚ್ಚಿನ ಆದೇಶಗಳನ್ನು ಹೊರಡಿಸಿದೆ. ಆದರೆ ಜನರು ಸ್ವ ಇಚ್ಚೆಯಿಂದ ಭಾಷೆಯನ್ನು ಬಳಸುವಲ್ಲಿ ಪಾಲ್ಗೊಳ್ಳದ ಹೊರತು ಭಾಷೆಯ ಬೆಳವಣಿಗೆ ಅಸಾಧ್ಯ ಎಂದರು.
ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಅನ್ನಪೂರ್ಣ ಸತೀಶ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಆರಂಭದಲ್ಲಿ ಪುಟಾಣಿ ಮಕ್ಕಳಾದ ಬಿ.ಸಿ ಶಾನ್ವಿರಾವ್, ಬಿ.ಜೆ ರೊಚನಾರಾವ್, ಬಿ.ಜೆ ಕಾಶ್ವಿರಾವ್, ಸಾನ್ವಿ, ಆರೂಷ್ ಹುಲುಮಂಡೇರಿ, ಪಿ. ಧ್ಯಾನ್, ಮೊನಾಲ್ ಕೆ ಗೌಡ, ಕೃತಿ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷೆ ಹೇಮಾವತಿ ವಿಶ್ವನಾಥರಾವ್ ಅಧ್ಯಕ್ಷತೆ ವಹಿಸಿದ್ದರು. ಕಮಲ ಕುಮಾರಿ, ಲತಾ ಗೋವಿಂದ ಪ್ರಾರ್ಥಿಸಿದರು. ಶೋಭಾ ಗಂಗರಾಜ್ ಸ್ವಾಗತಿಸಿ ಶಾರದ ಶ್ರೀನಿವಾಸ್ ಅತಿಥಿ ಪರಿಚಯ ಮಾಡಿಕೊಟ್ಟರು. ಜಯಂತಿ ನಾಗರಾಜ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಕಮಲ ಕುಮಾರಿ ವಂದಿಸಿದರು.