Thursday, December 2, 2021

ವಿಧಾನ ಪರಿಷತ್ : ಜೆಡಿಯು ಅಭ್ಯರ್ಥಿಗೆ ರೈತಸಂಘ-ಕೆಆರ್‌ಎಸ್ ಬೆಂಬಲ


ವಿಧಾನಪರಿಷತ್ ಜೆಡಿಯು ಅಭ್ಯರ್ಥಿ ಶಶಿಕುಮಾರ್ ಎಸ್ ಗೌಡರವರಿಗೆ ಮತ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
    ಭದ್ರಾವತಿ, ಡಿ. ೨ : ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಲಕ್ಷ್ಮೀನಾರಾಯಣಗೌಡ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿಯ (ಕೆಆರ್‌ಎಸ್) ರಾಜ್ಯಾಧ್ಯಕ್ಷರಾದ ರವಿಕೃಷ್ಣ ರೆಡ್ಡಿ ಮತ್ತು ಅವರ ಬೆಂಬಲಿಗರು ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷರಾದ ಮಹಿಮ ಜೆ. ಪಟೇಲ್‌ರವರ ಗ್ರಾಮ ಸ್ವರಾಜ್ಯ, ಗ್ರಾಮೀಣಾಭಿವೃದ್ಧಿ ಯೋಜನೆಗಳು ಹಾಗೂ ಅವರ ನಾಯಕತ್ವದಲ್ಲಿ ವಿಶ್ವಾಸವಿಟ್ಟು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಸಾಮಾಜಿಕ ಬದಲಾವಣೆಗಾಗಿ ಚುನಾವಣೆಗಳನ್ನು ಎದುರಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ಶಶಿಕುಮಾರ್‌ಗೌಡ ರವರಿಗೆ ಬೇಷರತ್ ಬೆಂಬಲ ನೀಡಿರುತ್ತಾರೆಂದು ಪಕ್ಷದ ಜಿಲ್ಲಾ ಸಂಚಾಲಕ ಎಂ.ಡಿ ದೇವರಾಜ ಶಿಂಧೆ ತಿಳಿಸಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.೧೦ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ಶಶಿಕುಮಾರ್‌ಗೌಡ ಸ್ಪರ್ಧಿಸಿದ್ದು, ಸಂಯುಕ್ತ ಜನತಾದಳದ ಸಮಾಜವಾದಿ ನಿಲುವು, ಸಾವಯವ ಕೃಷಿ ಹಾಗೂ ನೈಸರ್ಗಿಕ ಪರಿಸರಕ್ಕೆ ಕೊಡುತ್ತಿರುವ ಕಾರ್ಯಕ್ರಮಗಳು ಹಾಗೂ ಮೌಲ್ಯಾಧಾರಿತ ರಾಜಕಾರಣದ ರೂವಾರಿಗಳಾದ ರಾಮಕೃಷ್ಣ ಹೆಗಡೆ, ಜೆ.ಹೆಚ್ ಪಟೇಲ್‌ರವರ ಆಡಳಿತ ವೈಖರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ವ್ಯಾಪಕ ಬೆಂಬಲ ಕಂಡು ಬರುತ್ತಿದೆ ಎಂದರು.
ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜೆ. ಪಟೇಲ್ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರೇ ಶೇ ೯೦ರಷ್ಟು ಮತದಾರರಾಗಿದ್ದು, ಚುನಾವಣೆಯಲ್ಲಿ ಬಂಡವಾಳ ಹೂಡದೆ ಗ್ರಾಮದ ಹಿತವನ್ನು ಸದನದಲ್ಲಿ ಕಾಪಾಡುವ ಸಮರ್ಥ ಅಭ್ಯರ್ಥಿಯನ್ನು ಆರಿಸಬೇಕಾಗಿದೆ ಎಂದರು.
    ಹಣ-ಹೆಂಡ ಹಂಚದೆ ವಿಧಾನಸಭಾ ಚುನಾವಣೆಯಲ್ಲಿ ಈ ಹಿಂದೆ ಆರಿಸಿಹೋಗಿರುವ ಬಗ್ಗೆ ನಾನೇ ತಾಜಾ ಉದಾಹರಣೆ ಎಂದರು. ಮುಂದಿನ ಬಾರಿ ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮತದಾರರು ಬೇಡಿಕೆಯಿಟ್ಟಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತೀಶ್ ಕುಮಾರ್‌ರವರ ಬಿಹಾರ್ ಮಾದರಿಯಲ್ಲಿ ರಾಜ್ಯದಲ್ಲೂ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದರು.
    ರವಿಕೃಷ್ಣ ರೆಡ್ಡಿ ಮಾತನಾಡಿ, ರಾಜಕೀಯ ಪಕ್ಷಗಳ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಣಕ್ಕೆ ಮಾರಿಕೊಳ್ಳದೆ ಮೊದಲ ಪ್ರಾಶಸ್ತ್ಯ ಮತವನ್ನು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಹಾಗು ೨ನೇ ಪ್ರಾಶಸ್ತದ ಮತವನ್ನು ಜೆಡಿಯು ಅಭ್ಯರ್ಥಿಗೆ ಹಾಗು ಸ್ವತಂತ್ರವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರು ಪ್ರಥಮ ಪ್ರಾಶಸ್ತ್ಯ ಮತವನ್ನು ನೀಡುವಂತೆ ಮನವಿ ಮಾಡಿಕೊಂಡರು.
    ಲಕ್ಷ್ಮೀನಾರಾಯಣಗೌಡ, ಲಿಂಗೇಗೌಡ, ಅಭ್ಯರ್ಥಿ ಶಶಿಕುಮಾರ ಎಸ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment