Thursday, December 2, 2021

ಬಿಎಸ್‌ಪಿ ತಾಲೂಕು ಅಧ್ಯಕ್ಷರಾಗಿ ರಹಮತುಲ್ಲಾಖಾನ್ ನೇಮಕ


ಬಿಎಸ್‌ಪಿ ಭದ್ರಾವತಿ ತಾಲೂಕು ಅಧ್ಯಕ್ಷ ರಹಮತುಲ್ಲಾಖಾನ್(ಸರದಾರ್)

    ಭದ್ರಾವತಿ, ಡಿ. ೨: ಬಹುಜನ ಸಮಾಜ ಪಕ್ಷದ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ  ಹೊಳೆಹೊನ್ನೂರು ರಸ್ತೆಯ ಖಲಂದರಿಯ ನಗರ ನಿವಾಸಿ  ರಹಮತುಲ್ಲಾಖಾನ್(ಸರದಾರ್) ರವರನ್ನು ನೇಮಕ ಮಾಡಿರುವುದಾಗಿ  ಪಕ್ಷದ ಜಿಲ್ಲಾಧ್ಯಕ್ಷರಾದ ಎ.ಡಿ.ಶಿವಪ್ಪ ತಿಳಿಸಿದರು.
    ಅವರು ಗುರುವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು. ಸಂಯೋಜಕರಾಗಿ ಎಂ.ರಾಜೇಂದ್ರ, ಉಪಾಧ್ಯಕ್ಷರಾಗಿ ಚಂದ್ರು ವಿ, ಪ್ರಧಾನ ಕಾರ್ಯದರ್ಶಿಯಾಗಿ ನರಸಯ್ಯ ಬಿ.ವಿ., ಸಹ ಕಾರ್ಯದರ್ಶಿಯಾಗಿ ಇಮಾಮ್‌ಬಕ್ಷ್, ಖಜಾಂಚಿಯಾಗಿ ಕೈಸರ್ ಷರಿಫ್,  ಕಛೇರಿ ಕಾರ್ಯದರ್ಶಿಯಾಗಿ ಸೈಯದ್ ಶೌಕತ್ ನೇಮಕ ಗೊಂಡಿರುತ್ತಾರೆ.
    ಜಿಲ್ಲಾಧ್ಯಕ್ಷ ಎ.ಡಿ.ಶಿವಪ್ಪ ಮಾತನಾಡಿ, ರಾಷ್ಟ್ರೀಯ ಪಕ್ಷವಾದ ಬಹುಜನ ಸಮಾಜ ಪಕ್ಷ ಇತರೆ ರಾಜಕೀಯ ಪಕ್ಷಗಳಿಗೆ ಹೋಲಿಕೆ ಮಾಡಿದ್ದಲ್ಲಿ ಭಿನ್ನವಾಗಿದೆ.  ಶ್ರೀ ಸಾಮಾನ್ಯರ ಹಿತ ಕಾಪಾಡುವಲ್ಲಿ, ಬಹುಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ, ಕನಿಷ್ಟ ಮಟ್ಟದ ಜೀವನಾವಶ್ಯಕ ಸೌಲಭ್ಯಗಳನು ಕಲ್ಪಿಸುವಲ್ಲಿ ಸುದೀರ್ಘಕಾಲ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಹಾಗೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಕಾಯ್ದೆಗಳನ್ನು ಚರ್ಚಿಸದೆ ಜಾರಿಗೊಳಿಸುವುದು ಹಾಗು ಅದೇ ರೀತಿ ಹಿಂಪಡೆಯುವುದು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ ಸರ್ವಾಧಿಕಾರಿ ಧೋರಣೆಯಾಗಿದೆ. ಪ್ರಸ್ತುತ ದೇಶದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ದೇಶದ ರೈತರು ತಕ್ಕ ಉತ್ತರ ನೀಡಿದ್ದಾರೆ ಎಂದರು.
ಎಂ. ರಾಜೇಂದ್ರ ಮಾತನಾಡಿ, ಅವಳಿ ಕಾರ್ಖಾನೆಗಳ ಅವನತಿ ಸೇರಿದಂತೆ ನಗರದ ಅಭಿವೃದ್ಧಿಗೆ ಸ್ಥಳೀಯ ಶಾಸಕರ ಹಾಗೂ ಸಂಸದರ ಕೊಡುಗೆ ಶೂನ್ಯ ಎಂದು ಆರೋಪಿಸಿದರು.
    ನೂತನ ಅಧ್ಯಕ್ಷರಾದ ರಹಮತುಲ್ಲಾಖಾನ್ (ಸರದಾರ್) ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ  ಸ್ಥಳೀಯವಾಗಿ ಅಲ್ಪ ಸಂಖ್ಯಾತರಿಗೆ ಗೌರವ ಇಲ್ಲದ ಕಾರಣ  ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಬಹುಜನ ಸಮಾಜ ಪಾರ್ಟಿಗೆ ಸೇರಿದ್ದು, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕಲಾಗುವುದು ಎಂದರು.
    ಜಿಲ್ಲಾ ಉಪಾಧ್ಯಕ್ಷರಾದ  ಎಚ್.ಎನ್ ಶ್ರೀನಿವಾಸ್ ಸೇರಿದಂತೆ ತಾಲ್ಲ್ಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.

No comments:

Post a Comment