Thursday, September 1, 2022

ಸೆ.೪ರಂದು ಶಿವಮೊಗ್ಗ ಜಿಲ್ಲಾ ಮೋಚಿಗಾರ ಜನಾಂಗದ ಮಹಿಳೆಯರ ಘಟಕ(ಎಸ್.ಸಿ ಮೋಚಿ)ದ ಉದ್ಘಾಟನೆ

ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಮೋಚಿಗಾರ ಜನಾಂಗದ ಮಹಿಳೆಯರ ಘಟಕ(ಎಸ್.ಸಿ ಮೋಚಿ)ದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
    ಭದ್ರಾವತಿ, ಸೆ. ೧ : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶಿವಮೊಗ್ಗ ಜಿಲ್ಲಾ ಮೋಚಿಗಾರ ಜನಾಂಗದ ಮಹಿಳೆಯರ ಘಟಕ(ಎಸ್.ಸಿ ಮೋಚಿ)ದ ಉದ್ಘಾಟನೆ ಸೆ.೪ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಹಳೇನಗರದ ಬಸವೇಶ್ವರ ವೃತ್ತ ಸಮೀಪದಲ್ಲಿರುವ ಬಲಿಜ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಎನ್. ರೇಖಾ ತಿಳಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋಚಿಗಾರ ಜನಾಂಗದವರು ಕುಲಕಸುಬು ನಂಬಿಕೊಂಡು ಬದುಕು ಸಾಗಿಸಿದವರು. ಹಿಂದುಳಿದ ಜನಾಂಗವಾಗಿದ್ದು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗು ರಾಜಕೀಯ ಶೋಷಣೆಗೆ ಒಳಗಾಗಿದ್ದಾರೆ. ಈ ನಡುವೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅದರಲ್ಲೂ ಈ ಜನಾಂಗದ ಮಹಿಳೆಯರ ಸಮಸ್ಯೆಗಳು ಹೆಚ್ಚಿನದ್ದಾಗಿವೆ. ಈ ನಿಟ್ಟಿನಲ್ಲಿ ಸಂಘಟನೆ ಅಗತ್ಯ ಮನಗಂಡು ಶಿವಮೊಗ್ಗ ಜಿಲ್ಲಾ ಮೋಚಿಗಾರ ಜನಾಂಗದ ಮಹಿಳೆಯರ ಘಟಕ(ಎಸ್.ಸಿ ಮೋಚಿ) ಅಸ್ತಿತ್ವಕ್ಕೆ ತರಲಾಗಿದೆ ಎಂದರು.
    ನೂತನ ಘಟಕವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಅಖಿಲ ಕರ್ನಾಟಕ ಮೋಚಿಗಾರ ಸಂಘದ ರಾಜ್ಯಾಧ್ಯಕ್ಷ ಶಿವಪ್ಪ ಜೆ. ಮುಳಗುಂದ ಅಧ್ಯಕ್ಷತೆ ವಹಿಸಲಿದ್ದಾರೆ. ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್, ಮೋಚಿಗಾರ ಸಂಘದ ಜಿಲ್ಲಾಧ್ಯಕ್ಷ ಆರ್. ಸತ್ಯನಾರಾಯಣ್, ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
    ಉಪಾಧ್ಯಕ್ಷೆ ಪಿ. ಶೋಭಾ, ಕಾರ್ಯದರ್ಶಿ ಎಂ.ಎಲ್ ಶಾಂತಮ್ಮ, ಸಹಕಾರ್ಯದರ್ಶಿ ಸುಶೀಲಾ, ಖಜಾಂಚಿ ಎನ್. ಪಾರ್ವತಿದೇವಿ, ತರೀಕೆರೆ ಘಟಕದ ಅಧ್ಯಕ್ಷೆ ಶ್ವೇತ ಮತ್ತು ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಿವೃತ್ತ ಪೌರಕಾರ್ಮಿಕ ಶಂಕರಪ್ಪ ನಿಧನ

ಶಂಕರಪ್ಪ
    ಭದ್ರಾವತಿ, ಸೆ. ೧ : ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಸಮೀಪದ ಅಂಬೇಡ್ಕರ್ ನಗರದ ನಿವಾಸಿ, ನಿವೃತ್ತ ಪೌರಕಾರ್ಮಿಕ ಶಂಕರಪ್ಪ(೬೫) ನಿಧನ ಹೊಂದಿದರು.
    ಪತ್ನಿ, ೩ ಪುತ್ರಿಯರು ಮತ್ತು ಓರ್ವ ಪುತ್ರ ಇದ್ದರು. ಇವರ ಅಂತ್ಯಕ್ರಿಯೆ ಗುರುವಾರ ಹುತ್ತಾ ಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ಪೌರಕಾರ್ಮಿಕರು ಮತ್ತು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

Tuesday, August 30, 2022

ಚಿನ್ನದ ಸರ ಅಪಹರಣ : 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

 ಭದ್ರಾವತಿ:  ಮಹಿಳೆಯೊಬ್ಬರ ಚಿನ್ನದ ಸರ ಹಾಗೂ ಬೆಳ್ಳಿ ಕರಡಿಕೆ  ಕಳುವು ಮಾಡಿದ್ದ ವ್ಯಕ್ತಿಗೆ  ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. 
    ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆ ಮಾರನಹಳ್ಳಿಯಲ್ಲಿ ತಮ್ಮ ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು ದುಷ್ಕರ್ಮಿಯೊಬ್ಬ ಕದ್ದೊಯ್ದ ಘಟನೆ ನಡೆದಿತ್ತು. 
      ಮಹಿಳೆಯೊಬ್ಬರು ತಮ್ಮ ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿದ್ದ ವೇಳೆ ತಿಮ್ಲಾಪುರದ ಜಯ  ಸುನಿಲ್ ಎಂಬ ವ್ಯಕ್ತಿಯು ಹಿಂದಿನಿಂದ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಬೆಳ್ಳಿಯ ಕರಡಿಗೆಯನ್ನು ಕಿತ್ತುಕೊಂಡು ಪರಾರಿಯಾಗಿದ್ದನು. 
ದೂರಿನ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದ ಅಂದಿನ  ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ  ಕೆ.ಎಂ ಯೋಗೇಶ್ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ  4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.

ಗೌರಿ-ಗಣೇಶ ಹಬ್ಬಕ್ಕೆ ಅತಿ ಸೂಕ್ಷ್ಮ ಗಣೇಶ

ಭದ್ರಾವತಿ ಹಳೇನಗರದ ಸೂಕ್ಷ್ಮ ಕೆತ್ತನೆಗಳ ಕಲಾವಿದ ವರುಣ್ ಆಚಾರ್ ಈ ಬಾರಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅತಿಸೂಕ್ಷ್ಮ ಗಣೇಶ ಮಾದರಿಯನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
    ಭದ್ರಾವತಿ, ಆ. ೩೦: ಹಳೇನಗರದ ಸೂಕ್ಷ್ಮ ಕೆತ್ತನೆಗಳ ಕಲಾವಿದ ವರುಣ್ ಆಚಾರ್ ಈ ಬಾರಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅತಿಸೂಕ್ಷ್ಮ ಗಣೇಶ ಮಾದರಿಯನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
    ಪೆನ್ಸಿಲ್ ತುದಿಯಲ್ಲಿ ಸುಮಾರು ೦.೫ ಎಂ.ಎಂ ಎತ್ತರದ ಅತಿಸೂಕ್ಷ್ಮವಾದ ಗಣೇಶ ಮಾದರಿಯನ್ನು ಕೇವಲ ೨ ಗಂಟೆ ೨.೫ ನಿಮಿಷದಲ್ಲಿ ತಯಾರಿಸಿದ್ದಾರೆ. ವರುಣ್ ಅವರು ಈಗಾಗಲೇ  ಅಕ್ಕಿ ಕಾಳು, ಸೀಮೆ ಸುಣ್ಣ, ಪೆನ್ಸಿಲ್ ಸೇರಿದಂತೆ ಅತಿ ಸೂಕ್ಷ್ಮ ವಸ್ತುಗಳನ್ನು ಬಳಸಿ ಹಲವಾರು ಸೂಕ್ಷ್ಮ ಕಲಾ ಮಾದರಿಗಳನ್ನು ತಯಾರಿಸಿದ್ದು,  ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ಸಾಧನೆ ಸಹ ಮಾಡಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಅಕ್ರಮವಾಗಿ ಗಾಂಜಾ ಮಾರಾಟ : ನಾಲ್ಕು ಯುವಕರ ಬಂಧನ

೬೯ ಸಾವಿರ ರು. ಮೌಲ್ಯದ ೨ ಕೆ.ಜಿ ೧೫೦ ಗ್ರಾಂ ಒಣ ಗಾಂಜಾ ವಶ

ಭದ್ರಾವತಿ ಹಳೇನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿರುವ ಒಣ ಗಾಂಜಾ.
    ಭದ್ರಾವತಿ, ಆ. ೩೦ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಹಳೇನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
    ಅಮೀರ್‌ಜಾನ್ ಕಾಲೋನಿ ನಿವಾಸಿ ಮೊಹಮ್ಮದ್ ಖಾಲಿದ್(೨೧), ಸೀಗೇಬಾಗಿ ನಿವಾಸಿಗಳಾದ ಮೊಹಮ್ಮದ್ ಸಾಹಿಲ್(೧೮) ಮತ್ತು ಸಯ್ಯದ್ ಅರ್ಬಾಜ್(೨೬) ಹಾಗು ಅನ್ವರ್ ಕಾಲೋನಿ ನಿವಾಸಿ ಮೊಹಮ್ಮದ್ ಅರ್ಷನ್(೨೩)ನನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು ೬೯,೦೦೦ ರು. ಮೌಲ್ಯದ ೨ ಕೆ.ಜಿ ೧೫೦ ಗ್ರಾಂ ತೂಕದ ಒಣ ಗಾಂಜಾ ಹಾಗು ೮೦೦ ರು. ನಗದು, ೩ ಮೊಬೈಲ್ ಮತ್ತು ೨ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
    ಹೊಳೆಹೊನ್ನೂರು ರಸ್ತೆಯಿಂದ ಹೊಸಸೀಗೇಬಾಗಿ ಕಡೆಗೆ ಹೋಗುವ ರಸ್ತೆಯ ಸಮೀಪದ ಅಂಗಡಿಯ ಮುಂಭಾಗದ ಕಚ್ಚಾರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸ್ ಉಪಾಧೀಕ್ಷಕ, ನಗರವೃತ್ತ ನಿರೀಕ್ಷಕ ಹಾಗು ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಮವಾರ ದಾಳಿ ನಡೆಸಿದೆ.

ಯೋಗ ಕ್ಷೇತ್ರದ ಸಾಧನೆಗೆ ಡಿ. ನಾಗರಾಜ್‌ಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ


ಭದ್ರಾವತಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ಅವರ ಯೋಗ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
    ಭದ್ರಾವತಿ, ಆ. ೩೦ : ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ಅವರ ಯೋಗ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
    ಡಿ. ನಾಗರಾಜ್ ಅವರು ಕಳೆದ ೪ ದಶಕಗಳಿಂದ ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಲಕ್ಷಾಂತರ ಜನರಿಗೆ ಯೋಗ ತರಬೇತಿ ನೀಡುವ ಮೂಲಕ ಅವರು ಸಹ ಯೋಗ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಅಲ್ಲದೆ ಡಿ. ನಾಗರಾಜ್ ಅವರು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ, ಬಿರುದನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಯೋಗ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಇವರಿಗೆ ೨೦೨೦ನೇ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು ನೀಡಿದೆ. ರಾಷ್ಟ್ರೀಯ ಕ್ರೀಡಾದಿನವಾದ ಸೋಮವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕ್ರೀಡಾ ಮತ್ತು ರೇಷ್ಮೆ ಸಚಿವ ಡಾ. ಕೆ.ಸಿ ನಾರಾಯಣಗೌಡ, ವಿಧಾನಪರಿಷತ್ ಸದಸ್ಯ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್, ಡಾ. ಶಾಲಿನಿರಜನೀಶ್, ಡಾ.ಎಚ್.ಎನ್ ಗೋಪಾಲಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಪ್ರಶಸ್ತಿ ಪುರಸ್ಕೃತರಾದ ಡಿ. ನಾಗರಾಜ್ ಅವರನ್ನು ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ ಡಾ. ರಾಮಮೂರ್ತಿ ಹಾಗು ಕಾರ್ಯದರ್ಶಿ ಡಾ. ಡಿ. ಪುಟ್ಟೇಗೌಡ ಮತ್ತು ಯೋಗಪಟುಗಳು, ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

ಗೌರಿ-ಗಣೇಶ ಹಬ್ಬ ವಿಶಿಷ್ಟ ಆಚರಣೆ : ಮಹಿಳೆಯರಿಗೆ ಬಾಗಿನ ನೀಡಿ ಸಂಭ್ರಮ

ಭದ್ರಾವತಿ ನಗರಸಭೆ ವಾರ್ಡ್ ನಂ.೨೧ರ ಸದಸ್ಯೆ ವಿಜಯ ಅವರು ಈ ಬಾರಿ ಗೌರಿ-ಗಣೇಶ ಹಬ್ಬವನ್ನು ವಾರ್ಡ್‌ನಲ್ಲಿ ವಿಶಿಷ್ಟವಾಗಿ ಆಚರಿಸುವ ಮೂಲಕ ಸ್ಥಳೀಯರೊಂದಿಗೆ ಸಂಭ್ರಮ ಹಂಚಿಕೊಂಡರು.
    ಭದ್ರಾವತಿ, ಆ. ೩೦: ನಗರಸಭೆ ವಾರ್ಡ್ ನಂ.೨೧ರ ಸದಸ್ಯೆ ವಿಜಯ ಅವರು ಈ ಬಾರಿ ಗೌರಿ-ಗಣೇಶ ಹಬ್ಬವನ್ನು ವಾರ್ಡ್‌ನಲ್ಲಿ ವಿಶಿಷ್ಟವಾಗಿ ಆಚರಿಸುವ ಮೂಲಕ ಸ್ಥಳೀಯರೊಂದಿಗೆ ಸಂಭ್ರಮ ಹಂಚಿಕೊಂಡರು.
    ಹಿಂದೂ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬ ತನ್ನದೇ ಆದ ಮಹತ್ವ ಪಡೆದುಕೊಂಡಿದ್ದು, ವಾರ್ಡ್‌ನ ಎಲ್ಲಾ ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಹಬ್ಬದ ಮಹತ್ವ ತಿಳಿಸಿಕೊಡುವ ಜೊತೆಗೆ ವಾರ್ಡ್ ನಿವಾಸಿಗಳ ನೋವು-ನಲಿವುಗಳಿಗಗೆ ಸದಾ ಕಾಲ ಸ್ಪಂದಿಸುತ್ತೇನೆ ಎಂಬ ಸಂದೇಶವನ್ನು ವಿಜಯ ಅವರು ಹಬ್ಬದ ಸಂಭ್ರಮದ ಮೂಲಕ ತೋರ್ಪಡಿಸಿಕೊಂಡಿದ್ದಾರೆ.
    ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್,  ಮುಖಂಡರಾದ ಡಿ.ಟಿ ಶ್ರೀಧರ್, ಮೈಲಾರಪ್ಪ, ಅಶೋಕ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.