Tuesday, August 30, 2022

ಯೋಗ ಕ್ಷೇತ್ರದ ಸಾಧನೆಗೆ ಡಿ. ನಾಗರಾಜ್‌ಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ


ಭದ್ರಾವತಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ಅವರ ಯೋಗ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
    ಭದ್ರಾವತಿ, ಆ. ೩೦ : ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ಅವರ ಯೋಗ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
    ಡಿ. ನಾಗರಾಜ್ ಅವರು ಕಳೆದ ೪ ದಶಕಗಳಿಂದ ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಲಕ್ಷಾಂತರ ಜನರಿಗೆ ಯೋಗ ತರಬೇತಿ ನೀಡುವ ಮೂಲಕ ಅವರು ಸಹ ಯೋಗ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಅಲ್ಲದೆ ಡಿ. ನಾಗರಾಜ್ ಅವರು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ, ಬಿರುದನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಯೋಗ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಇವರಿಗೆ ೨೦೨೦ನೇ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು ನೀಡಿದೆ. ರಾಷ್ಟ್ರೀಯ ಕ್ರೀಡಾದಿನವಾದ ಸೋಮವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕ್ರೀಡಾ ಮತ್ತು ರೇಷ್ಮೆ ಸಚಿವ ಡಾ. ಕೆ.ಸಿ ನಾರಾಯಣಗೌಡ, ವಿಧಾನಪರಿಷತ್ ಸದಸ್ಯ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್, ಡಾ. ಶಾಲಿನಿರಜನೀಶ್, ಡಾ.ಎಚ್.ಎನ್ ಗೋಪಾಲಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಪ್ರಶಸ್ತಿ ಪುರಸ್ಕೃತರಾದ ಡಿ. ನಾಗರಾಜ್ ಅವರನ್ನು ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ ಡಾ. ರಾಮಮೂರ್ತಿ ಹಾಗು ಕಾರ್ಯದರ್ಶಿ ಡಾ. ಡಿ. ಪುಟ್ಟೇಗೌಡ ಮತ್ತು ಯೋಗಪಟುಗಳು, ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

No comments:

Post a Comment