ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯ ಭದ್ರಾ ನದಿ ತಗ್ಗು ಪ್ರದೇಶದ ಕವಲಗುಂದಿ ಗ್ರಾಮದ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ಭದ್ರಾವತಿ, ಆ. ೩೦: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕವಲಗುಂದಿ ತಗ್ಗು ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ಅಲ್ಲದೆ ಮನೆ ನಿರ್ಮಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ರೀತಿಯ ನೆರವು ಸಹ ನೀಡಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಅವರು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯ ಭದ್ರಾ ನದಿ ತಗ್ಗು ಪ್ರದೇಶದ ಕವಲಗುಂದಿ ಗ್ರಾಮದ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ಇಲ್ಲಿನ ನಿವಾಸಿಗಳು ಪ್ರತಿವರ್ಷ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದ ಸಂದರ್ಭದಲ್ಲಿ ಜಲಾವೃತಗೊಂಡು ಸಂತ್ರಸ್ಥರಾಗುತ್ತಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರ ಪಡೆದು ಕ್ರಮ ಕೈಗೊಳ್ಳಲಾಗಿದೆ. ಸಂತ್ರಸ್ಥರಿಗೆ ಹಕ್ಕುಪತ್ರ ವಿತರಣೆ ಜೊತೆಗೆ ಮುಂದಿನ ದಿನಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಅಥವಾ ಮನೆ ಕಟ್ಟಿಸಿಕೊಡಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಲವಾರು ವಸತಿ ಯೋಜನೆಗಳನ್ನು ಜಾರಿಗೆ ತಂದಿವೆ. ಅಲ್ಲದೆ ರಾಜ್ಯ ಸರ್ಕಾರ ಪ್ರಾಕೃತಿಕ ವಿಕೋಪಗಳಿಂದ ಹಾನಿಯಾಗುವ ದಾಖಲೆ ರಹಿತ ಅನಧಿಕೃತ ಮನೆಗಳು ಸೇರಿದಂತೆ ಎಲ್ಲಾ ಮನೆಗಳಿಗೂ ಸಹ ಸೂಕ್ತ ಪರಿಹಾರ ನೀಡಲಿದೆ. ದೇಶದಲ್ಲಿ ಈ ರೀತಿಯ ಪರಿಹಾರ ನೀಡುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಹಾಗು ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿಯಾಗಿರುವ ಮನೆಗಳಿಗೆ ತಕ್ಷಣ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಬಡಜನರಿಗೆ ತೊಂದರೆ ನೀಡಬಾರದು. ಶಾಸಕರು ಹಾಗು ನಾನು ಬೇರೆ ಬೇರೆ ಪಕ್ಷದಲ್ಲಿದ್ದರೂ ಸಹ ಚುನವಣೆ ಸಂದರ್ಭದಲ್ಲಿ ಮಾತ್ರ ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಇರುತ್ತವೆ. ಆದರೆ ಜನಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಇಬ್ಬರು ಸಹ ಅಭಿವೃದ್ಧಿ ವಿಚಾರದಲ್ಲಿ ಒಗ್ಗಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕ್ಷೇತ್ರದಲ್ಲಿ ಹಾಗು ಜಿಲ್ಲೆಯಲ್ಲಿ ಎಷ್ಟೋ ಜನ ಶಾಸಕರು, ಸಂಸದರು ಬಂದು ಹೋದರೂ ಆದರೆ ಯಾರಿಂದಲೂ ಸಹ ಹಕ್ಕು ಪತ್ರ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ನಾನು ಹಾಗು ಸಂಸದರು ಒಗ್ಗಟ್ಟಾಗಿ ಈ ಕೆಲಸ ಯಶಸ್ವಿಯಾಗಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಫಲಾನುಭವಿಗಳಿಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಾಣಕ್ಕೂ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿ ಸಂಸದರು ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳಿಗೆ ನೀಡುವಷ್ಟು ಆದ್ಯತೆಯನ್ನು ನನ್ನ ಕ್ಷೇತ್ರಕ್ಕೂ ಸಹ ನೀಡಬೇಕೆಂದು ಮನವಿ ಮಾಡಿದರು.
ಕಲವಗುಂದಿ ಒಟ್ಟು ೩೦ ನೆರೆ ಸಂತ್ರಸ್ಥರ ಪೈಕಿ ೨೮ ಮಂದಿಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ನಗರಸಭೆ ಜೇಡಿಕಟ್ಟೆ ಗ್ರಾಮದಲ್ಲಿ ಸುಮಾರು ೧೮ ಎಕರೆ ಪ್ರದೇಶದಲ್ಲಿ ಹಕ್ಕು ಪತ್ರ ನೀಡಲಾಗಿದೆ. ಇಬ್ಬರು ಫಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದ ಇನ್ನೂ ಹಕ್ಕು ಪತ್ರ ನೀಡಿಲ್ಲ.
ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ದೊಡ್ಡೇಗೌಡರ್, ತಹಸೀಲ್ದಾರ್ ಆರ್. ಪ್ರದೀಪ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯ ಭದ್ರಾ ನದಿ ತಗ್ಗು ಪ್ರದೇಶದ ಕವಲಗುಂದಿ ಗ್ರಾಮದ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಹಾಗು ನಗರಸಭೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಅಂತಿಮವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಸಂಸದರು-ಶಾಸಕರ ಮುಂದೆಯೇ ಮಾತಿನ ಚಕಮಕಿ : ಅವಾಚ್ಯ ಶಬ್ದ
ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಭಾಷಣದಲ್ಲಿ ಸಂಸದರಿಗೆ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಗಮನ ಹರಿಸುವಂತೆ ಮನವಿ ಮಾಡಿದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗು ನಗರಸಭೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಅಂತಿಮವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ನಡುವೆ ಸ್ವತಃ ಸಂಸದರು ಸಮಾಧಾನ ಮಾಡಲು ಮುಂದಾದರೂ ಸಹ ಸಾಧ್ಯವಾಗಲಿಲ್ಲ. ಈ ನಡುವೆ ಶಾಸಕರು ಬಿಜೆಪಿ ಮುಖಂಡರೊಬ್ಬರಿಗೆ ಅವಾಚ್ಯ ಶಬ್ದ ಬಳಸಿದ್ದು, ಈ ಸಂದರ್ಭದಲ್ಲಿ ಸಂಸದರು ತಕ್ಷಣ ಸ್ಥಳದಿಂದ ಕಾಲ್ಕಿತ್ತರು. ಶಾಸಕರ ಅವಾಚ್ಯ ಶಬ್ದ ಬಳಕೆಯಿಂದ ಸಂಸದರೇ ಬೆಚ್ಚಿ ಬಿದ್ದ ಘಟನೆ ನಡೆಯಿತು. ಈ ನಡುವೆ ಶಾಸಕರ ವರ್ತನೆಗೆ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
No comments:
Post a Comment