Thursday, December 15, 2022

ಎರಡನೇ ಹಂತದ ಕಾಮಗಾರಿ ಮುಕ್ತಾಯ : ಧಾರ್ಮಿಕ ಆಚರಣೆ

ಭದ್ರಾವತಿ ನಗರಸಭೆ ೩ನೇ ವಾರ್ಡ್ ವ್ಯಾಪ್ತಿಯ ಹಳೇನಗರದ ಪಾರ್ಕ್ ಬಡಾವಣೆಯಲ್ಲಿರುವ ಪತ್ರಿಕಾ ಭವನದ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು. 
    ಭದ್ರಾವತಿ, ಡಿ. ೧೫ : ನಗರಸಭೆ ೩ನೇ ವಾರ್ಡ್ ವ್ಯಾಪ್ತಿಯ ಹಳೇನಗರದ ಪಾರ್ಕ್ ಬಡಾವಣೆಯಲ್ಲಿರುವ ಪತ್ರಿಕಾ ಭವನದ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು.
    ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ದಂಪತಿ ಧಾರ್ಮಿಕ ಆಚರಣೆಗಳ ನೇತೃತ್ವ ವಹಿಸಿದ್ದರು. ಶ್ರೀನಿವಾಸ ಆರಾಧ್ಯ ಮತ್ತು ಮನು ಆರಾಧ್ಯ ನೇತೃತ್ವದ ತಂಡ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿತು.
    ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಪದಾಧಿಕಾರಿಗಳಾದ ಕೂಡ್ಲಿಗೆರೆ ಮಂಜುನಾಥ್, ಬಸವರಾಜ್, ಪಿಲೋಮಿನಾ, ಅನಂತಕುಮಾರ್, ಹಿರಿಯ ಸದಸ್ಯರಾದ ಎನ್. ಬಾಬು, ಶಿವಶಂಕರ್, ಗಂಗಾನಾಯ್ಕ್ ಗೊಂದಿ, ಬದರಿನಾರಾಯಣ ಶ್ರೇಷ್ಠಿ, ಟಿ.ಎಸ್ ಆನಂದಕುಮಾರ್, ಸುದರ್ಶನ್, ಶೈಲೇಶ್‌ಕೋಠಿ, ರವೀಂದ್ರನಾಥ್(ಬ್ರದರ್), ಸೈಯದ್‌ಖಾನ್, ಕೆ.ಆರ್ ಶಂಕರ್, ರಾಬರ್ಟ್ ಹಾಗು ಪತ್ರಿಕಾಭವನ ವ್ಯವಸ್ಥಾಪಕಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಡಿ.೧೬ರಂದು ಸಮಾರೋಪ ಸಮಾರಂಭ

    ಭದ್ರಾವತಿ, ಡಿ. ೧೫: ಹಳೇನಗರದ ಸರ್ಕಾರಿ ಸಂಚಿಯ ಹೊನ್ನಮ್ಮ ಬಾಲಕಿಯರ ಪದವಿಪೂರ್ವ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ, ಎನ್‌ಎಸ್‌ಎಸ್, ಸೇವಾದಳ ಹಾಗು ರೇಂಜರ್ ಮತ್ತು ರೋವರ‍್ಸ್ ಘಟಕಗಳ ಸಮಾರೋಪ ಸಮಾರಂಭ ಡಿ.೧೬ರ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಡೆಯಲಿದೆ.
    ಸಮಾರಂಭ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ. ಕೃಷ್ಣಪ್ಪ, ವ್ಯದ್ಯ ಡಾ. ನರೇಂದ್ರಬಾಬು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ಕಾಲೇಜಿನ ಉಪಪ್ರಾಂಶುಪಾಲರಾದ ಶಾಂತಮ್ಮ, ನಗರಸಭಾ ಸದಸ್ಯೆ ಅನುಪಮ ಚನ್ನೇಶ್, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ವಿ. ವೆಂಕಟರಮಣ ಶೇಟ್ ಹಾಗು ಸದಸ್ಯರು, ಯುವ ಮುಖಂಡರಾದ ರವೀಶ್ ಮತ್ತು ಅಮೋಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಸ್ ಸಿದ್ದಲಿಂಗಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಸಮಾರಂಭ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

Wednesday, December 14, 2022

ಗುಡ್ಡದ ನೇರಲಕೆರೆ ಗ್ರಾಮದ ಜಮೀನುಗಳಿಗೆ ಕಾಡಾ ಅಧ್ಯಕ್ಷೆ ಭೇಟಿ : ಪರಿಶೀಲನೆ

ಭದ್ರಾವತಿ ತಾಲೂಕಿನ ಕೊಮಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದ ನೇರಲಕೆರೆ ಗ್ರಾಮದ ಜಮೀನುಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಪವಿತ್ರರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಡಿ. ೧೪ : ತಾಲೂಕಿನ ಕೊಮಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದ ನೇರಲಕೆರೆ ಗ್ರಾಮದ ಜಮೀನುಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಪವಿತ್ರರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ರೈತರ ಮನವಿ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿದ ಅಧ್ಯಕ್ಷರು, ಜಮೀನುಗಳ ರಸ್ತೆ, ಕಾಲುವೆ ವೀಕ್ಷಿಸಿದರು. ಗ್ರಾಮದ ಚಾನಲ್ ಟ್ಯೂಬ್ ಸಂಪೂರ್ಣವಾಗಿ ಹಾಳಾಗಿರುವುದು ಕಂಡು ಬಂದಿದ್ದು, ತಕ್ಷಣ ಸ್ಥಳದಲ್ಲಿಯೇ ನೀರಾವರಿ ಇಲಾಖೆ ಅಧಿಕಾರಿಗಳಿಗೆ ದುರಸ್ತಿಗೊಳಿಸುವಂತೆ ಸೂಚಿಸಿದರು. ಗ್ರಾಮದ ಮುಖಂಡರು, ರೈತರು ಉಪಸ್ಥಿತರಿದ್ದರು.

Tuesday, December 13, 2022

ಹಿರಿಯ ಲೆಕ್ಕ ಪರಿಶೋಧಕ ಶ್ರೀಪಾದ್ ವಿಧಿವಶ


ಹಿರಿಯ ಲೆಕ್ಕಪರಿಶೋಧಕ ಶ್ರೀಪಾದ್
    ಭದ್ರಾವತಿ, ಡಿ. ೧೪: ನಗರದ ಹಿರಿಯ ಲೆಕ್ಕ ಪರಿಶೋಧಕ, ಹೊಸಮನೆ ಹಳೇಸಂತೆ ಮೈದಾನದ ರಸ್ತೆ ನಿವಾಸಿ ಶ್ರೀಪಾದ್(೫೯) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.  
ಪತ್ನಿ, ಇಬ್ಬರು ಸಹೋದರರನ್ನು ಹೊಂದಿದ್ದರು. ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು    ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾರೆ.
    ಇವರ ಅಂತ್ಯ ಸಂಸ್ಕಾರ ಸಂಜೆ ನಡೆಯಲಿದೆ. ೩-೪ ದಶಕಗಳಿಂದ ಆಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಇವರು, ಭದ್ರಾವತಿ, ಶಿವಮೊಗ್ಗ ಮಾತ್ರವಲ್ಲದೇ ಬೆಂಗಳೂರಿನಲ್ಲಿಯೂ ಈ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದರು. ತಮ್ಮ ಜೀವಮಾನದುದ್ದಕ್ಕೂ ಕಷ್ಟದಲ್ಲಿರುವರಿಗೆ ಸಹಾಯಹಸ್ತ ನೀಡುತ್ತಾ, ಮಠ ಮಂದಿರಗಳಿಗೆ ದಾನ, ಧರ್ಮ ಮಾಡುತ್ತಿದ್ದ ಶ್ರೀಪಾದ್ ಅವರು ಎಂದಿಗೂ ತಮ್ಮ ಈ ಸೇವೆಯ ಕುರಿತಾಗಿ ಸಾರ್ವಜನಿಕವಾಗಿ ಹೇಳಿಕೊಂಡವರಲ್ಲ.
    ಪ್ರಮುಖವಾಗಿ, ಕೊರೋನಾದಿಂದಾಗಿ ಮೃತಪಟ್ಟ ಬಹಳಷ್ಟು ಮಂದಿಯ ಶವಸಂಸ್ಕಾರಕ್ಕೆ ಇವರು ನೀಡಿದ ನೆರವು ಬಹುತೇಕ ಮಂದಿಗೆ ತಿಳಿದಿಲ್ಲ. ತಮ್ಮ ವೃತ್ತಿ ಕ್ಷೇತ್ರದ ಹೊರತಾಗಿ ಧರ್ಮ, ಅಧ್ಯಾತ್ಮ, ವೇದಾಧ್ಯಯ, ಮಾಧ್ವ ಸಂಪ್ರದಾಯದ ಹಲವು ಪಾಠಗಳನ್ನು ಇಂದಿಗೂ ಇವರು ಅಭ್ಯಾಸ ಮಾಡುತ್ತಾ, ಎಲೆ ಮರೆಯ ಕಾಯಿಯಂತೆ ಸಾಧನೆ ಮಾಡಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು, ತಾಲೂಕು ಬ್ರಾಹ್ಮಣ ಮಹಾಸಭಾ ಸಂತಾಪ ಸೂಚಿಸಿದೆ.

ಹಾಡುಹಗಲಿನಲ್ಲಿಯೇ ದರೋಡೆಗೆ ಯತ್ನ : ಮೂವರ ಸೆರೆ


    ಭದ್ರಾವತಿ, ಡಿ. ೧೩ : ಹಾಡುಹಗಲಿನಲ್ಲಿಯೇ ದರೋಡೆಗೆ ಯತ್ನಿಸುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಮೊಮಿನ್ ಮೊಹಲ್ಲಾ ನಿವಾಸಿಗಳಾದ ಸಮೀರ್ ಖಾನ್, ಸಯ್ಯದ್ ಆಲ್ವಿ, ಮಹಮದ್ ಗೌಸ್ ಯಾನೆ ಜಂಗ್ಲಿ ಸುಹೇಲ್ ಯಾನೆ ಕುಟ್ಟಿ ಮತ್ತು ಮಹಮದ್ ಸಾಬೀದ್ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
    ಸಿ.ಎನ್ ರಸ್ತೆ ಸೀಗೆಬಾಗಿ ಆಲೆಮನೆಯೊಂದರ ಬಳಿ ಐವರು ಸುಮಾರು ಬೆಳಿಗ್ಗೆ ೧೧.೩೦ರ ಸಮಯದಲ್ಲಿ ಪೊದೆಯಲ್ಲಿ ಅಡಗಿಕೊಂಡು ದರೋಡೆಗೆ ಯತ್ನಿಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಹಳೇನಗರದ ಪೊಲೀಸ್ ಠಾಣಾಧಿಕಾರಿ ಕವಿತರವರ ನೇತೃತ್ವದ ತಂಡ ದಾಳಿ ನಡೆಸಿ ಮೂವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
    ಒಬ್ಬಂಟಿಯಾಗಿ ಸಂಚರಿಸುವವರನ್ನು ಅಡ್ಡಗಟ್ಟಿ ಮಾರಾಕಾಸ್ತ್ರಗಳಿಂದ ಬೆದರಿಸಿ ದರೋಡೆಗೆ ಯತ್ನಿಸುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ ಚಾಕು, ಕಬ್ಬಿಣದ ರಾಡು ಮತ್ತು ಖಾರದಪುಡಿ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಸುಮೋಟೋ ಪ್ರಕರಣ ದಾಖಲಾಗಿದೆ. ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ.

ಮಕ್ಕಳು ಸರ್ವತೋಮುಖ ಬೆಳವಣಿಗೆ ಹೊಂದುವಂತೆ ರೂಪಿಸುವುದೇ ಶಿಕ್ಷಣ : ಎಸ್.ಎಲ್ ಭೋಜೇಗೌಡ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ, ಶಿವಮೊಗ್ಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಡಿ. ೧೩: ಮಕ್ಕಳು ಸರ್ವತೋಮುಖ ಬೆಳವಣಿಗೆ ಹೊಂದುವಂತೆ ರೂಪಿಸುವುದೇ ಶಿಕ್ಷಣ. ಇದನ್ನು ನಾವೆಲ್ಲರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಹೇಳಿದರು.
    ಅವರು ಮಂಗಳವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ, ಶಿವಮೊಗ್ಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
    ಶಿಕ್ಷಣದ ಜೊತೆಗೆ ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಹೆಚ್ಚಿನದ್ದಾಗಿದೆ ಎಂದರು.
     ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ ಎಂದರು.
    ವೇದಿಕೆಯಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸದಸ್ಯೆ ಸರ್ವಮಂಗಳ ಭೈರಪ್ಪ, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್,  ತಹಸೀಲ್ದಾರ್ ಆರ್. ಪ್ರದೀಪ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಧ್ಯಕ್ಷ ಬಿ. ಸಿದ್ದಬಸಪ್ಪ,  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆನಂದಕುಮಾರ್, ಶಂಕರಪ್ಪ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಜೆ. ಸುಮತಿ, ಅಧ್ಯಕ್ಷ ಪೃಥ್ವಿರಾಜ್, ನಿರ್ದೇಶಕರಾದ ಯು. ಮಹಾದೇವಪ್ಪ, ಬಸವರಾವ್‌ದಾಳೆ, ಶ್ರೀಧರ್ ಗೌಡ, ಮಾಯಮ್ಮ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ. ಬಸವರಾಜಪ್ಪ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಾಲಾಕ್ಷಪ್ಪ, ಅಪೇಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  
    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಸಿ.ಆರ್ ಪರಮೇಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಕರು, ಸಿಬ್ಬಂದಿ ವರ್ಗದವರು, ಜಿಲ್ಲೆಯ ೭ ತಾಲೂಕುಗಳ ವಿವಿಧ ಶಾಲೆಗಳ ಶಿಕ್ಷಕರು, ಪೋಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ : ಅನಾವರಣಗೊಂಡ ಮಕ್ಕಳ ಪ್ರತಿಭೆ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಕರಾವಳಿ ಬದುಕು ಅನಾವರಣ.
    ಭದ್ರಾವತಿ, ಡಿ. ೧೩: ಒಂದೆಡೆ ತಮ್ಮ ಪ್ರತಿಭೆ ಅನಾವರಣಗೊಳಿಸಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಬೇಕೆಂಬ ತವಕ. ಮತ್ತೊಂದೆಡೆ ಮಕ್ಕಳ ಪ್ರತಿಭೆಯನ್ನು ನೋಡಲು ಕಾತುರದಿಂದ ಕಾಯುವ ಕ್ಷಣ ಮಂಗಳವಾರ ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಕಂಡು ಬಂದಿತು.


ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕನ್ನಡ ನಾಡಿನ ಜೀವನದಿ ಕಾವೇರಿ ಮಾತೆ ವೇಷಭೂಷಣದಲ್ಲಿ ಕಂಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಳು
    ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ೭ ತಾಲೂಕುಗಳಿಂದ ಸುಮಾರು ೪೦೦ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು. ಒಟ್ಟು ೧೮ ವಿಭಾಗದಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ ಮತ್ತು ಉರ್ದು ಕಂಠಪಾಠ ಹಾಗು ಭಾಷಣ, ಗಝಲ್, ಕವಾಲಿ, ಜಾನಪದ ನೃತ್ಯ, ಮಿಮಿಕ್ರಿ, ಜಾನಪದ ಗೀತೆ ಮತ್ತು ಭಾವಗೀತೆ, ರಸಪ್ರಶ್ನೆ, ಸಂಸ್ಕೃತ ಧಾರ್ಮಿಕ ಪಠಣ, ಆಶುಭಾಷಣ ಸ್ಪರ್ಧೆ, ಅಭಿನಯಗೀತೆ & ಕಥೆ ಹೇಳುವುದು, ಅರೇಬಿಕ್ ಧಾರ್ಮಿಕ ಪಠಣ, ಭರತ್ಯನಾಟ್ಯ, ಹಾಸ್ಯ, ಲಘು ಸಂಗೀತ ಮತ್ತು ಭಕ್ತಿಗೀತೆ, ಚರ್ಚಾ ಸ್ಪರ್ಧೆ, ಚಿತ್ರಕಲೆ ಮತ್ತು ಬಣ್ಣ ಹಚ್ಚುವುದು ಹಾಗು ರಂಗೋಲಿ ಸೇರಿದಂತೆ ವೈಯಕ್ತಿಕ ಹಾಗು ಸಾಮೂಹಿಕ ಸ್ಪರ್ಧೆಗಳು ನಡೆದವು.
    ಕರಾವಳಿ ಜನರ ಬದುಕು ಅನಾವರಣ :
    ವಿಶೇಷ ಎಂದರೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಮಕ್ಕಳು ಕರಾವಳಿ ಬದುಕನ್ನು ಅನಾವರಣಗೊಳಿಸುವ ಮೂಲಕ ಗಮನ ಸೆಳೆದರು. ದೋಣಿ, ಜೇಡ, ಜ್ಞಾನ ಧೈಯ್ಯ ಫಲಕ ರಾರಾಜಿಸುತ್ತಿತ್ತು. ಇದರ ಜೊತೆಗೆ ಯಕ್ಷಗಾನ ಕಲೆ ಅನಾವರಣ ಸಹ ಕಂಡು ಬಂದಿತು.

    ಮಣ್ಣಿನಲ್ಲಿ ಅರಳಿದ ಪ್ರಾಣಿ, ಪಕ್ಷಿಗಳು:
ಈ ನಿಟ್ಟಿನಲ್ಲಿ  ಜಿಂಕೆ, ಮೊಸಳೆ, ಗೂಬೆ ಸೇರಿದಂತೆ ಇನ್ನಿತರ ಪ್ರಾಣಿ, ಪಕ್ಷಿಗಳು ಹಾಗು ಗೋಕುಲ ಕೃಷ್ಣ, ಗರುಡ ಲಾಂಛನ ಮಕ್ಕಳ ಕೈಚಳಕದಲ್ಲಿ ಮಣ್ಣಿನಲ್ಲಿ ಅರಳುವ ಮೂಲಕ ಗಮನ ಸೆಳೆದವು. ಮಕ್ಕಳಲ್ಲಿ ವಿಭಿನ್ನ ರೀತಿಯ ಕಲೆಗಳಿದ್ದು, ಅವುಗಳ ಅನಾವರಣಕ್ಕೆ ಸೂಕ್ತ ವೇದಿಕೆ ಅಗತ್ಯವಿರುತ್ತದೆ ಎಂಬುದು ಕಂಡು ಬಂದಿತು.


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಜಿಂಕೆ, ಮೊಸಳೆ, ಗೂಬೆ ಸೇರಿದಂತೆ ಇನ್ನಿತರ ಪ್ರಾಣಿ, ಪಕ್ಷಿಗಳು ಹಾಗು ಗೋಕುಲ ಕೃಷ್ಣ, ಗರುಡ ಲಾಂಛನ ಮಕ್ಕಳ ಕೈಚಳಕದಲ್ಲಿ ಮಣ್ಣಿನಲ್ಲಿ ಅರಳುವ ಮೂಲಕ ಗಮನ ಸೆಳೆದವು.
    ರಾರಾಜಿಸಿದ ಕಾವೇರಿ ಮಾತೆ :
    ತಾಲೂಕಿನ ಎಮ್ಮೆಹಟ್ಟಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕನ್ನಡ ನಾಡಿನ ಜೀವನದಿ ಕಾವೇರಿ ಮಾತೆ ವೇಷಭೂಷಣದಲ್ಲಿ ಕಂಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಳು. ಕನ್ನಡ ನೆಲ, ಜಲ, ಭಾಷೆ ಸಹ ಇದರೊಂದಿಗೆ ಅನಾವರಣಗೊಂಡಿತ್ತು. ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕರಾದ ಬಸವಂತರಾವ್ ದಾಳೆ, ಯು. ಮಹಾದೇವಪ್ಪ, ಶಿಕ್ಷಕರಾದ ಎಂ.ಆರ್ ರೇವಣಪ್ಪ, ಧನಂಜಯ ಸೇರಿದಂತೆ ಇನ್ನಿತರರು ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.
    ಉಳಿದಂತೆ ಬಾಲಕಿಯರ ವೀರಭದ್ರೇಶ್ವರ ನೃತ್ಯ, ಡೊಳ್ಳು ಕುಣಿತ, ಜಾನಪದ ನೃತ್ಯ, ಲಂಬಾಣಿ ನೃತ್ಯ ಸೇರಿದಂತೆ ಇನ್ನಿತರ ಕಲಾತಂಡಗಳ ನೃತ್ಯಗಳು ವೇದಿಕೆ ಮತ್ತಷ್ಟು ಮೆರಗು ತಂದುಕೊಟ್ಟವು.
    ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಂಪೂರ್ಣ ಯಶಸ್ವಿಗೆ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚಿನ ಶ್ರಮ ವಹಿಸಿತ್ತು.


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ವೀರಭದ್ರೇಶ್ವರ ನೃತ್ಯ