Saturday, December 24, 2022

ಪೊಲೀಸ್ ಉಮೇಶ್ ಹುಟ್ಟುಹಬ್ಬದ ಅಂಗವಾಗಿ ಡಿ.೨೫ರಂದು ಹಲವು ಸೇವಾ ಕಾರ್ಯಗಳು

    ಭದ್ರಾವತಿ, ಡಿ. ೨೪: ಸಮಾಜ ಸೇವಕ, ನಗರದ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್‌ರವರ ೪೯ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಡಿ.೨೫ರ ಭಾನುವಾರ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
    ಸ್ನೇಹ ಜೀವಿ ಬಳಗದ ವತಿಯಿಂದ ಹುತ್ತಾ ಕಾಲೋನಿ ಚಂದ್ರಾಲಯದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್, ಬರವಣಿಗೆ ಪುಸ್ತಕ ಮತ್ತು ಹಿರಿಯ ನಾಗರೀಕರಿಗೆ ಕನ್ನಡಕ ಹಾಗು ಮಹಿಳೆಯರಿಗೆ ಸ್ವೆಟರ್ ಮತ್ತು ನಿರಾಶ್ರಿತರಿಗೆ ಕಂಬಳಿ ವಿತರಣೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
    ಮಹಾಮಾರಿ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಕಡುಬಡವರಿಗೆ ದವಸ ಧಾನ್ಯ ವಿತರಣೆ, ಪ್ರತಿದಿನ ಆಹಾರ ಪೂರೈಕೆ, ದೇವಸ್ಥಾನಗಳ ಸಭೆ-ಸಮಾರಂಭಗಳಲ್ಲಿ ಉಚಿತ ಅನ್ನದಾಸೋಹ ಸೇರಿದಂತೆ ಇನ್ನಿತರ ಸೇವಾಕಾರ್ಯಗಳನ್ನು ಹಲವಾರು ವರ್ಷಗಳಿಂದ ಪೊಲೀಸ್ ಉಮೇಶ್‌ರವರು ಸ್ನೇಹ ಜೀವಿ ಬಳಗದ ಸಹಯೋಗದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ. ಡಿ.೨೬ರಂದು ಇವರ ೪೯ನೇ ಹುಟ್ಟುಹಬ್ಬ ನಡೆಯಲಿದೆ.

ಹಣ ಸುಲಿಗೆಗಾಗಿ ಅಪ್ರಾಪ್ತ ಬಾಲಕನ ಅಪಹರಣ : ನಾಲ್ವರ ಸೆರೆ

೨೪ ಗಂಟೆಯಲ್ಲಿ ಪ್ರಕರಣ ಬೇಧಿಸಿದ ನ್ಯೂಟೌನ್ ಠಾಣೆ ಪೊಲೀಸರು

ಹಣ ಸುಲಿಗೆಗಾಗಿ ಅಪ್ರಾಪ್ತ ಬಾಲಕನೋರ್ವನನ್ನು ಅಪಹರಿಸಿದ ಪ್ರಕರಣವನ್ನು ೨೪ ಗಂಟೆಯಲ್ಲಿ ಬೇಧಿಸುವಲ್ಲಿ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
    ಭದ್ರಾವತಿ, ಡಿ. ೨೪ : ಹಣ ಸುಲಿಗೆಗಾಗಿ ಅಪ್ರಾಪ್ತ ಬಾಲಕನೋರ್ವನನ್ನು ಅಪಹರಿಸಿದ ಪ್ರಕರಣವನ್ನು ೨೪ ಗಂಟೆಯಲ್ಲಿ ಬೇಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರದ ಜಾಬೀರ್ ಬಾಷಾ ಅಲಿಯಾಸ್ ರಾಬರ್ಟ್(೨೨), ಅಬ್ದುಲ್ ಸಲಾಂ(೨೬) ಮತ್ತು ಇರ್ಫಾನ್(೩೧) ಹಾಗು ಶಿವಮೊಗ್ಗದ ಮುಸ್ತಫಾ(೨೬) ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಓರ್ವ ತಲೆ ಮರೆಸಿಕೊಂಡಿದ್ದು ಪತ್ತೆಗಾಗಿ ತೀವ್ರಶೋಧ ನಡೆದಿದೆ.
    ಘಟನೆ ವಿವರ:  ಗುರುವಾರ ರಾತ್ರಿ ನಗರದ ಅಂಡರ್‌ಬ್ರಿಡ್ಜ್ ಬಳಿ ಎಲ್‌ಐಸಿ ಕಚೇರಿ ಬಳಿ ಎಳನೀರು ಮಾರಾಟ ಮಾಡುತ್ತಿದ್ದ ಬೊಮ್ಮನಕಟ್ಟೆಯ ಅಪ್ರಾಪ್ತ ಬಾಲಕನ ಬಳಿ ಬಂದ ಅಪರಿಚತನೋರ್ವ ನಾಲ್ಕು ಎಳನೀರು ಖರೀದಿಸಿದ್ದು, ನಂತರ ಹಣ ನೀಡಲು ಸ್ವಲ್ಪ ದೂರದಲ್ಲಿ ನಿಲ್ಲಿಸಲಾಗಿದ್ದ ವಾಹನದ ಬಳಿ ಬರಲು ಹೇಳಿದ್ದು, ಈ ಸಂದರ್ಭದಲ್ಲಿ ಬಾಲಕನನ್ನು ಏಕಾಏಕಿ ಅಪಹರಿಸಲಾಗಿತ್ತು.
    ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಹಾಗೂ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆಯವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ರಂಗನಾಥ್ ಅಂತರಗಟ್ಟಿ ಹಾಗೂ ವೃತ್ತ ಕಛೇರಿಯ ಉಪ ಠಾಣಾಧಿಕಾರಿ ವೆಂಕಟೇಶ್, ಸಿಬ್ಬಂದಿಗಳಾದ ರೂಪೇಶ್, ಸುನಿಲ್ ಕುಮಾರ್, ರಾಘವೇಂದ್ರ, ತೀರ್ಥಲಿಂಗ, ಶ್ರೀಧರ್,  ಹಾಲಪ್ಪ ಮತ್ತು ಮೌನೇಶ್ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಶೃಂಗೇರಿ ಮೆಸ್ಕಾಂ ಕಛೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಪಂಜಿನ ಪ್ರತಿಭಟನೆ

ಶೃಂಗೇರಿ ಮೆಸ್ಕಾಂ ಕಛೇರಿಯಲ್ಲಿದ್ದ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಗೊಳಿಸಿರುವುದನ್ನು ಖಂಡಿಸಿ ಶನಿವಾರ ಛಲವಾದಿ ಮಹಾಸಭಾ ವತಿಯಿಂದ ಭದ್ರಾವತಿಯಲ್ಲಿ ಪಂಜಿನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
    ಭದ್ರಾವತಿ, ಡಿ. ೨೪ : ಶೃಂಗೇರಿ ಮೆಸ್ಕಾಂ ಕಛೇರಿಯಲ್ಲಿದ್ದ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಗೊಳಿಸಿರುವುದನ್ನು ಖಂಡಿಸಿ ಶನಿವಾರ ಛಲವಾದಿ ಮಹಾಸಭಾ ವತಿಯಿಂದ ಪಂಜಿನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
       ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಪಂಜಿನ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರಮುಖರು, ಮೆಸ್ಕಾಂ ಕಛೇರಿಯಲ್ಲಿ ಮಹಾನ್ ವ್ಯಕ್ತಿಗಳ ಭಾವಚಿತ್ರ ಅಳವಡಿಸಲಾಗಿದ್ದು, ಈ ಪೈಕಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಅವಮಾನಗೊಳಿಸಿರುವ ಕುರುಹು ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಮಹಾಸಭಾ ಪ್ರಮುಖರಾದ ಸುರೇಶ್, ಜಯರಾಜ್, ಲೋಕೇಶ್, ಮಹೇಶ್, ಗೋಪಾಲ್, ಜಗದೀಶ್, ನಾಗಣ್ಣ, ಪುಟ್ಟರಾಜ್, ಅನಿಲ್, ನಾಗರಾಜ್‌ಆಮ್ ಆದ್ಮಿ ಪಕ್ಷದ ಮುಖಂಡ ಎಚ್. ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಕಿರಣ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಭದ್ರಾವತಿಯಲ್ಲಿ ಕನ್ನಡ ಜ್ಯೋತಿಗೆ ಅದ್ದೂರಿ ಸ್ವಾಗತ


ಭದ್ರಾವತಿ, ಡಿ. 24 : ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಶನಿವಾರ ತಾಲೂಕಿಗೆ ಆಗಮಿಸಿತು.
ಚಿಕ್ಕಮಗಳೂರು ಜಿಲ್ಲೆಯಿಂದ  ನಗರದ ತರೀಕರೆ ರಸ್ತೆಯ ಮಹಾತ್ಮಗಾಂಧಿ ವೃತ್ತಕ್ಕೆ ಕನ್ನಡ ರಥದಲ್ಲಿ ಆಗಮಿಸಿದ ಜ್ಯೋತಿಯನ್ನು ಜಿಲ್ಲಾಡಳಿತ ಪರವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ್ ಹಾಗೂ ತಾಲೂಕು ಆಡಳಿತ, ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳೆಯರು, ವಿವಿಧ ಸಂಘ ಸಂಸ್ಥೆಗಳು, ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.
   ನಂತರ ಕಾಲ್ನಡಿಗೆ ಜಾಥಾ ಮಾಧವಚಾರ್ ವೃತ್ತದಿಂದ ಕನಕಮಂಟ ಮೈದಾನದ ವರೆಗೂ ಸಾಗಿತು.  ಶಾಸಕ ಬಿ.ಕೆ ಸಂಗಮೇಶ್ವರ್  ವೇದಿಕೆ ಕಾರ್ಯಕ್ರಮ  ಉಟ್ಕಾಟಿಸಿದರು ಡಿ. ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. 
ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್,  ಸದಸ್ಯ ಬಿ.ಕೆ ಮೋಹನ್, ತಹಸೀಲ್ದಾರ್  ಗ್ರೇಡ್-2  ರಂಗಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಎ.ಕೆ ನಾಗೇಂದ್ರಪ್ಪ, ಸಮನ್ವಯಾಧಿಕಾರಿ ಪಂಚಾಕ್ಷರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು ಕೋಗಲೂರು ತಿಪ್ಪೇಸ್ವಾಮಿ ಸ್ವಾಗತಿಸಿದರು, ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

Friday, December 23, 2022

ಡಿ.೨೪ರಂದು ಕನ್ನಡ ಜ್ಯೋತಿ ಆಗಮನ : ಅದ್ದೂರಿ ಸ್ವಾಗತಕ್ಕೆ ತಾಲೂಕು ಆಡಳಿತ ಸಿದ್ದತೆ

    ಭದ್ರಾವತಿ, ಡಿ. ೨೩ : ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಡಿ.೨೪ರ ಶನಿವಾರ ಬೆಳಿಗ್ಗೆ ತಾಲೂಕಿಗೆ ಆಗಮಿಸಲಿದೆ.
    ಕನ್ನಡ ರಥದಲ್ಲಿ ಜಾಥಾ ಮೂಲಕ ಕನ್ನಡ ಜ್ಯೋತಿ ಶಿವಮೊಗ್ಗ ಜಿಲ್ಲೆಯಲ್ಲಿ ತಾಲೂಕಿಗೆ ಮಾತ್ರ ಆಗಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಜ್ಯೋತಿಯನ್ನು ಅದ್ದೂರಿಯಾಗಿ ಸ್ವಾಗತಿಸಲು ತಾಲೂಕು ಆಡಳಿತ ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿದೆ.
    ಚಿಕ್ಕಮಗಳೂರು ಜಿಲ್ಲೆಯಿಂದ ಆಗಮಿಸಲಿರುವ ಜ್ಯೋತಿಯನ್ನು ನಗರದ ತರೀಕರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಸ್ವಾಗತಿಸಲಿದ್ದು, ನಂತರ ಕಾಲ್ನಡಿಗೆ ಜಾಥಾ ಮಾಧವಚಾರ್ ವೃತ್ತ ದಿಂದ ಕನಕಮಂಟ ಮೈದಾನದ ವರೆಗೂ ಸಾಗಲಿದೆ. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ.


    ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ ಹಾಗು ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಸೇರಿದಂತೆ ಸಮಸ್ತೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
    ವೇದಿಕೆ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಜಾಥಾ ತಾಲೂಕು ಕಛೇರಿ ರಸ್ತೆ ಮೂಲಕ ರಂಗಪ್ಪವೃತ್ತ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿವರೆಗೂ ನಡೆಯಲಿದೆ. ನಂತರ ದಾವಣಗೆರೆ ಜಿಲ್ಲೆಗೆ ಬೀಳ್ಕೊಡುಗೆ ನೀಡಲಾಗುವುದು.

ಸಂಚಾರದ ವೇಳೆ ರಸ್ತೆಗಳಲ್ಲಿ ಕಿರಿಕಿರಿ : ೧೩೩ ಸೈಲೆನ್ಸರ್‌ಗಳು ಧ್ವಂಸ

    ಭದ್ರಾವತಿ, ಡಿ. ೨೩ : ಸಂಚಾರದ ವೇಳೆ ರಸ್ತೆಗಳಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದ ಸುಮಾರು ೧೩೩ ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ಪೊಲೀಸ್ ಉಪವಿಭಾಗ ನಗರ ವೃತ್ತ ಮತ್ತು ಸಂಚಾರಿ ಠಾಣೆ ಸಿಬ್ಬಂದಿಗಳು ಪತ್ತೆ ಹಚ್ಚಿ ಶುಕ್ರವಾರ ಸೈಲೆನ್ಸರ್‌ಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿರುವ ಘಟನೆ ನಡೆದಿದೆ.
    ಈ ಹಿಂದೆ ದಂಡ ವಿಧಿಸಿ ಎಚ್ಚರಿಕೆ ನೀಡಿದರೂ ಸಹ ವಾಹನದ ಮಾಲೀಕರು ಬದಲಿಸಿಕೊಳ್ಳದ ಹಿನ್ನಲೆಯಲ್ಲಿ ಆ ವಾಹನಗಳನ್ನು ವಶಕ್ಕೆ ಪಡೆದು ಅವುಗಳ ಸೈಲೆನ್ಸರ್‌ಗಳನ್ನು ಬೇರ್ಪಡಿಸಿ ನಗರದ ಬಿ.ಎಚ್ ರಸ್ತೆ ,ಅಂಡರ್ ಬ್ರಿಡ್ಜ್, ಅಂಬೇಡ್ಕರ್ ವೃತ್ತದ ಬಳಿ ಸಾರ್ವಜನಿಕವಾಗಿ ಅವುಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸುವ ಮೂಲಕ ಅಪರಾಧ ತಡೆ ಮಾಸಚರಣೆ ನಡೆಸಿ ಜಾಗೃತಿ ಮೂಡಿಸಲಾಯಿತು.
     ವಾಹನ ಕಾಯ್ದೆಗಳ ಪ್ರಕಾರ ಕಿರಿಕಿರಿ ಉಂಟು ಮಾಡುವ ಸೈಲೆನ್ಸರ್‌ಗಳನ್ನು ಬಳಸುವುದು ಕಾನೂನು ಉಲ್ಲಂಘನೆಯಾಗಿದ್ದು, ಈ ಸಂಬಂಧ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಾದ್ಯಂತ ಅಭಿಯಾನ ಕೈಗೊಂಡು ಜಾಗೃತಿ ಮೂಡಿಸಲಾಗುತ್ತಿದೆ.
    ಈ ಸಂದರ್ಭದಲ್ಲಿ ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ, ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಸುರೇಶ್ ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.


ಸಂಚಾರದ ವೇಳೆ ರಸ್ತೆಗಳಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದ ಸುಮಾರು ೧೩೩ ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ಭದ್ರಾವತಿ ಪೊಲೀಸ್ ಉಪವಿಭಾಗ ನಗರ ವೃತ್ತ ಮತ್ತು ಸಂಚಾರಿ ಠಾಣೆ ಸಿಬ್ಬಂದಿಗಳು ಪತ್ತೆ ಹಚ್ಚಿ ಶುಕ್ರವಾರ ಸೈಲೆನ್ಸರ್‌ಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿರುವ ಘಟನೆ ನಡೆದಿದೆ.

ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ, ವಿಧಾನಸಭಾ ಚುನಾವಣಾ ತಯಾರಿ ಸಭೆ

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಅವರ ನಿರ್ದೇಶನದಂತೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಹಾಗೂ ವಿಧಾನಸಭಾ ಚುನಾವಣಾ ತಯಾರಿ ಸಭೆ ಭದ್ರಾವತಿಯಲ್ಲಿ  ಶುಕ್ರವಾರ ನಡೆಯಿತು.
    ಭದ್ರಾವತಿ, ಡಿ. ೨೩ : ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಅವರ ನಿರ್ದೇಶನದಂತೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಹಾಗೂ ವಿಧಾನಸಭಾ ಚುನಾವಣಾ ತಯಾರಿ ಸಭೆ ನಗರದಲ್ಲಿ ಶುಕ್ರವಾರ ನಡೆಯಿತು.
    ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ .ಗಿರೀಶ್ ಸಭೆ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಮಹಿನ್ ಖಾನ್‌ರವರು, 'ಬದಲಾವಣೆಯ ಹಬ್ಬ'  ಹಾಗೂ 'ಯೂಥ್ ಜೋಡೋ, ಬೂತ್ ಜೋಡೋ' ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು.
    ಸಭೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ಯುವ ಮುಖಂಡ ಬಿ.ಎಸ್ ಗಣೇಶ್ , ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್ ಕುಮಾರ್, ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹಮದ್ , ಶಿವಮೊಗ್ಗ ಗ್ರಾಮಾಂತರ ಹೊಳೆ ಹೊನ್ನೂರು ಬ್ಲಾಕ್ ಅಧ್ಯಕ್ಷ ಇ.ಟಿ ನಿತಿನ್,  ಶಿವಮೊಗ್ಗ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್. ಕುಮಾರೇಶ್,  ಗ್ರಾಮಾಂತರ ಅಧ್ಯಕ್ಷ ಮನು , ಶಿಕಾರಿಪುರ ಬ್ಲಾಕ್ ಅಧ್ಯಕ್ಷ ಮಲ್ಲಿಕ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಚಿನ್ ಸಿಂದ್ಯಾ, ರೂಪನಾರಾಯಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ  ಗಗನ್ ಗೌಡ, ನಾಗರಾಜ್ ಕುರ್ವಳ್ಳಿ, ಶಿವರಾಜ್, ಇಮ್ರಾನ್ ಖಾನ್, ಸಂದೀಪ್, ಅಕ್ಬರ್ ಸಾಬ್,  ರಾಘು ಪುರದಾಳ್ , ಗ್ರಾಮಾಂತರ ಬ್ಲಾಕ್ ಉಪಾಧ್ಯಕ್ಷ ತಬ್ರೇಸ್ ಖಾನ್ ಹಾಗೂ ಜಿಲ್ಲಾ ಹಾಗು ಬ್ಲಾಕ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.