ಭದ್ರಾವತಿ, ಡಿ. ೨೩ : ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಡಿ.೨೪ರ ಶನಿವಾರ ಬೆಳಿಗ್ಗೆ ತಾಲೂಕಿಗೆ ಆಗಮಿಸಲಿದೆ.
ಕನ್ನಡ ರಥದಲ್ಲಿ ಜಾಥಾ ಮೂಲಕ ಕನ್ನಡ ಜ್ಯೋತಿ ಶಿವಮೊಗ್ಗ ಜಿಲ್ಲೆಯಲ್ಲಿ ತಾಲೂಕಿಗೆ ಮಾತ್ರ ಆಗಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಜ್ಯೋತಿಯನ್ನು ಅದ್ದೂರಿಯಾಗಿ ಸ್ವಾಗತಿಸಲು ತಾಲೂಕು ಆಡಳಿತ ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿದೆ.
ಚಿಕ್ಕಮಗಳೂರು ಜಿಲ್ಲೆಯಿಂದ ಆಗಮಿಸಲಿರುವ ಜ್ಯೋತಿಯನ್ನು ನಗರದ ತರೀಕರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಸ್ವಾಗತಿಸಲಿದ್ದು, ನಂತರ ಕಾಲ್ನಡಿಗೆ ಜಾಥಾ ಮಾಧವಚಾರ್ ವೃತ್ತ ದಿಂದ ಕನಕಮಂಟ ಮೈದಾನದ ವರೆಗೂ ಸಾಗಲಿದೆ. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ ಹಾಗು ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಸೇರಿದಂತೆ ಸಮಸ್ತೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
ವೇದಿಕೆ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಜಾಥಾ ತಾಲೂಕು ಕಛೇರಿ ರಸ್ತೆ ಮೂಲಕ ರಂಗಪ್ಪವೃತ್ತ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿವರೆಗೂ ನಡೆಯಲಿದೆ. ನಂತರ ದಾವಣಗೆರೆ ಜಿಲ್ಲೆಗೆ ಬೀಳ್ಕೊಡುಗೆ ನೀಡಲಾಗುವುದು.
No comments:
Post a Comment