Friday, July 21, 2023

ರೌಡಿಶೀಟರ್‌ ಮುಜ್ಜು ಹತ್ಯೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಹತ್ಯೆಯಾದ ರೌಡಿಶೀಟರ್‌ ಮುಜ್ಜು ಅಲಿಯಾಸ್‌ ಮುಜಾಯಿದ್ದೀನ್‌. 

    ಭದ್ರಾವತಿ, ಜು. ೨೧ : ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ರೌಡಿಶೀಟರ್‌ ಓರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 

ಮುಜ್ಜು ಅಲಿಯಾಸ್‌ ಮುಜಾಯಿದ್ದೀನ್(32)  ಹತ್ಯೆಯಾಗಿದ್ದು, ಈತನ ವಿರುದ್ಧ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು.   ಈತನಿಗೆ ಇಬ್ಬರು ಪತ್ನಿಯರಿದ್ದು, ಗುರುವಾರ ಮಧ್ಯ ರಾತ್ರಿ ಈತನ ಎರಡನೇ ಪತ್ನಿ ಮನೆ ಮುಂಭಾಗದಲ್ಲಿಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. 

ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್‌, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್‌ ಭೂಮರೆಡ್ಡಿ, ಹಿರಿಯ ಪೊಲೀಸ್‌ ಅಧೀಕ್ಷಕ ಜಿತೇಂದ್ರಕುಮಾರ್‌ ದಯಾಮ ಹಾಗು ಪೇಪರ್‌ಟೌನ್‌ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತದೇಹದ ಶವ ಪರೀಕ್ಷೆ ನಡೆಸಲಾಗಿದ್ದು, ಪೇಪರ್‌ಟೌನ್‌ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಹತ್ಯೆಗೊಳಗಾಗಿರುವ ಮುಜಾಯಿದ್ದೀನ್‌ ಸಹೋದರ(ತಮ್ಮ) ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈ ಗೊಂಡಿದ್ದಾರೆ. ಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. 


Thursday, July 20, 2023

೧೨೫ಕ್ಕೆ ೧೨೫ ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಅಭಿನಂದನೆ

ಜು.೨೪ರೊಳಗಾಗಿ ಮಾಹಿತಿ ನೀಡಲು ಕಸಾಪ ಮನವಿ 


    ಭದ್ರಾವತಿ, ಜು. ೨೦ : ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕನ್ನಡ ಪ್ರಥಮ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಲು ತೀರ್ಮಾನಿಸಲಾಗಿದೆ.
ಈ ಹಿನ್ನಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮಾಹಿತಿ ನೀಡುವಂತೆ ಕೋರಲಾಗಿದೆ.
    ಅಂಕಪಟ್ಟಿಯ ನಕಲು ಪ್ರತಿ ಹಾಗು ಒಂದು ಭಾವಚಿತ್ರ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳಾದ ಡಿ. ನಾಗೋಜಿರಾವ್‌, ಮೊ: ೯೪೪೮೩೩೭೪೨೨ ಮತ್ತು ಬಿ. ಪ್ರಕಾಶ್‌, ಮೊ: ೯೯೪೪೧೬೨೬೭೭ ಸಂಖ್ಯೆಗೆ ಜು.೨೪ರೊಳಗಾಗಿ ವ್ಯಾಟ್ಸಫ್‌ ಮಾಡಿ ಮಾಹಿತಿ ನೀಡುವಂತೆ ಕಾರ್ಯದರ್ಶಿ ಎಚ್. ತಿಮ್ಮಪ್ಪ ಮನವಿ ಮಾಡಿದ್ದಾರೆ. 

ಅಪ್ರಾಪ್ತ ವಯಸ್ಸಿನ ಪುತ್ರನಿಂದ ದ್ವಿಚಕ್ರ ವಾಹನ ಚಾಲನೆ

೨೫ ಸಾವಿರ ರು. ದಂಡ ಕಟ್ಟಿದ ತಂದೆ..!


    ಭದ್ರಾವತಿ, ಜು. ೨೦: ಅಪ್ರಾಪ್ತ ವಯಸ್ಸಿನ ಪುತ್ರನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ನೀಡಿದ್ದ  ತಂದೆಯೊಬ್ಬರಿಗೆ ಬರೋಬ್ಬರಿ ೨೫ ಸಾವಿರ ರು. ದಂಡ ವಿಧಿಸಿರುವ ಘಟನೆ ನಡೆದಿದೆ.
    ಜನ್ನಾಪುರ ನಿವಾಸಿ ಶ್ರೀಕಾಂತ್(೪೫) ಎಂಬುವರು ತಮ್ಮ ೧೬ ವರ್ಷದ ಪುತ್ರನಿಗೆ ದ್ವಿಚಕ್ರ ವಾಹನ ಚಾಲನೆ ಮಾಡಲು ನೀಡಿದ್ದರು. ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಹುತ್ತಾ ಕಾಲೋನಿ ಬಳಿ, ಠಾಣಾಧಿಕಾರಿ ರಮೇಶ್ ರವರು ವಾಹನ ತಪಾಸಣಾ ಕಾರ್ಯ ನಡೆಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದು,  ವಾಹನ ಚಾಲನಾ ಪರವಾನಿಗೆ ಇಲ್ಲದಿರುವುದು ಹಾಗು ಆತ ಅಪ್ರಾಪ್ತ ವಯಸ್ಸಿನವನಾಗಿರುವುದು ಬೆಳಕಿಗೆ ಬಂದಿದೆ.
    ಈ ಹಿನ್ನೆಲೆಯಲ್ಲಿ ಸಂಚಾರಿ ನಿಯಮಗಳಿಗೆ ವಿರುದ್ಧವಾಗಿ, ಅಪ್ರಾಪ್ತ ಪುತ್ರನಿಗೆ ಬೈಕ್ ಚಾಲನೆ ಮಾಡಲು ಅವಕಾಶ ನೀಡಿದ ತಂದೆಯ ವಿರುದ್ದ ನ್ಯೂಟೌನ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಲಾಗಿತ್ತು. ತದನಂತರ ಪ್ರಕರಣದ ಕುರಿತಂತೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
    ಪ್ರಕರಣದ ವಿಚಾರಣೆ ನಡೆಸಿದ ನಗರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಶ್ರೀಕಾಂತ್‌ರವರಿಗೆ ೨೫ ಸಾವಿರ ರೂ. ದಂಢ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆ : ೨೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ೧೫ ಕೇಂದ್ರಗಳು

    ಭದ್ರಾವತಿ, ಜು. ೨೦ : ನಗರಸಭೆ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳಲು ಒಟ್ಟು ೧೫ ಕೇಂದ್ರಗಳು ಹಾಗು ನೋಡಲ್ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.
ವಾರ್ಡ್ ನಂ.೧ರ ಹೆಬ್ಬಂಡಿ, ೨೫ರ ಹುಡ್ಕೋಕಾಲೋನಿ, ಹಳೇಬುಳ್ಳಾಪುರ, ೨೬ರ ಬಾಲಭಾರತಿ, ಬೆಣ್ಣೆಕೃಷ್ಣ ಸರ್ಕಲ್ ಮತ್ತು ೨೯ರ ಕಿತ್ತೂರು ರಾಣಿ ಚೆನ್ನಮ್ಮ ಲೇಔಟ್, ೩೦ರ ಸಿದ್ದಾಪುರ ಮತ್ತು ೩೧ರ ಜಿಂಕ್ ಲೈನ್ ನಿವಾಸಿಗಳಿಗೆ ಹೊಸ ಸಿದ್ದಾಪುರ ತಾಲೂಕು ಮಾಜಿ ಸೈನಿಕರ ಸಂಘ ಸಮುದಾಯ ಭವನದಲ್ಲಿ ಕೇಂದ್ರ ತೆರೆಯಲಾಗಿದೆ. ಸಮುದಾಯ ಸಂಘಟಕಿ ಸುಮಿತ್ರ ಹರಪ್ಪನಹಳ್ಳಿ, ಮೊ: ೭೦೧೯೫೬೭೫೨೩ ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.೧೯ರ ಎಂಪಿಎಂ ಆಸ್ಪತ್ರೆ, ೨೦ರ ಸುರಗಿತೋಪು, ೨೧ರ ಎಂಪಿಎಂ ೬ ಮತ್ತು ೮ನೇ ವಾರ್ಡ್, ೨೨ರ ಉಜ್ಜನಿಪುರ, ೨೩ರ ತಿಮ್ಲಾಪುರ ಮತ್ತು ದೊಡ್ಡಗೊಪ್ಪೇನ ಹಳ್ಳಿ (ಡಿ.ಜೆ ಹಳ್ಳಿ) ಹಾಗು ೨೪ರ ಬೊಮ್ಮನಕಟ್ಟೆ ನಿವಾಸಿಗಳಿಗೆ ಸುರಗಿತೋಪು ಸಮುದಾಯ ಭವನದಲ್ಲಿ  ಕೇಂದ್ರ ತೆರೆಯಲಾಗಿದೆ. ಸಮುದಾಯ ಸಂಘಟಕ ರವಿಕುಮಾರ್, ಮೊ: ೯೬೮೬೯೧೩೮೬೬ ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.೨ರ ಲೋಯರ್ ಹುತ್ತಾ, ೨೭ರ ಆಂಜನೇಯ ಆಗ್ರಹಾರ, ಕೂಲಿಬ್ಲಾಕ್ ಶೆಡ್, ೨೮ರ ಗಣೇಶ್ ಕಾಲೋನಿ, ೩೨ರ ಜನ್ನಾಪುರ, ೩೩ರ ಹುತ್ತಾ ಕಾಲೋನಿ, ೩೪ರ ಅಪ್ಪರ್ ಹುತ್ತಾ, ಸಂಜಯ್ ಕಾಲೋನಿ, ೩೫ರ ಭಂಡಾರಹಳ್ಳಿ ನಿವಾಸಿಗಳಿಗೆ ಜನ್ನಾಪುರ ಎನ್‌ಟಿಬಿ ಕಛೇರಿಯಲ್ಲಿ ಕೇಂದ್ರ ತೆರೆಯಲಾಗಿದೆ. ದ್ವಿತೀಯ ದರ್ಜೆ ಸಹಾಯಕ ವೆಂಕಟೇಶ್, ಮೊ: ೯೮೮೦೦೪೫೭೦೧ ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.೩ರ ಬಿ.ಎಚ್ ರಸ್ತೆ ಎಡ ಮತ್ತು ಬಲ, ೪ರ ಕನಕಮಂಟಪ ಪ್ರದೇಶ, ೫ರ ಕೋಟೆ ಏರಿಯಾ, ೬ರ ಸಿದ್ಧಾರೂಢ ನಗರ, ೭ರ ಅನ್ವರ್ ಕಾಲೋನಿ, ೮ರ ಸೀಗೆಬಾಗಿ, ೯ರ ಭದ್ರಾ ಕಾಲೋನಿ, ೧೭ರ ನೆಹರು ನಗರ ಮತ್ತು ೧೮ರ ಎಂ.ಎಂ ಕಾಂಪೌಂಡ್ ನಿವಾಸಿಗಳಿಗೆ ಟಿ.ಕೆ ರಸ್ತೆ, ನಗರಸಭಾ ಕಾರ್ಯಾಲಯದಲ್ಲಿ ಕೇಂದ್ರ ತೆರೆಯಲಾಗಿದೆ. ದ್ವಿತೀಯ ದರ್ಜೆ ಸಹಾಯಕ ಸಾಗರ್ ಬಾಬು, ಮೊ: ೮೮೬೧೨೯೫೦೩೪ ನೋಡಲ್ ಅಧಿಕಾರಿಯಾಗಿದ್ದಾರೆ.
ವಾರ್ಡ್ ನಂ.೧೦ರ ಅಶ್ವಥ್ ನಗರ, ೧೧ರ ಸುಭಾಷ್ ನಗರ, ೧೨ರ ಅಣ್ಣಾನಗರ, ೧೩ರ ಭೂತನಗುಡಿ, ೧೪ರ ಹೊಸಭೋವಿ ಕಾಲೋನಿ, ೧೫ರ ಹೊಸಮನೆ ಬಲಭಾಗ ಮತ್ತು ೧೬ರ ಗಾಂಧಿನಗರ ನಿವಾಸಿಗಳಿಗೆ ಹೊಸಮನೆ ಹಿಂದೂ ಮಹಾಸಭಾ ಗಣಪತಿ ಸಮುದಾಯ ಭವನದಲ್ಲಿ ಕೇಂದ್ರ ತೆರೆಯಲಾಗಿದೆ.  ನೀರು ಸರಬರಾಜು ಸಹಾಯಕ ಮಹೇಶ್, ಮೊ: ೯೯೦೭೭೮೪೪೭೨ ನೋಡಲ್ ಅಧಿಕಾರಿಯಾಗಿದ್ದಾರೆ.
ಉಳಿದಂತೆ ಕರ್ನಾಟಕ ಒನ್ ಕೇಂದ್ರಗಳಾದ ಸಾಬ್‌ಜಾನ್ ಸ್ಟೋರ್ ಬಿಲ್ಡಿಂಗ್, ಬಿ.ಎಚ್ ರಸ್ತೆ, ಕರವಸೂಲಿಗಾರ ಜಯಂತಿ, ಮೊ: ೯೪೪೯೩೪೯೮೫೭ ನೋಡಲ್ ಅಧಿಕಾರಿಯಾಗಿದ್ದಾರೆ. ಐಜಾ ಡಿಜಿಟಲ್ ಸರ್ವಿಸ್, ತಾಲೂಕು ಕಛೇರಿ ಮುಂಭಾಗ, ಕರವಸೂಲಿಗಾರ ಡಿ.ಎಸ್ ಹೇಮಾಂತರ್, ಮೊ: ೯೬೨೦೪೭೮೬೮೯ ನೋಡಲ್ ಅಧಿಕಾರಿಯಾಗಿದ್ದಾರೆ. ಜೆಎಂಎಫ್‌ಸಿ ನ್ಯಾಯಾಲಯ ಮುಂಭಾಗ, ಕರವಸೂಲಿಗಾರ ಚೇತನ್‌ಕುಮಾರ್, ಮೊ: ೯೮೮೦೫೬೬೪೫೫ ನೋಡಲ್ ಅಧಿಕಾರಿಯಾಗಿದ್ದಾರೆ. ಮತ್ತು ಹೊಸಮನೆ ಮುಖ್ಯರಸ್ತೆ, ಶಿವಾಜಿ ಸರ್ಕಲ್ ಶ್ರೀ ವೆಂಕಟೇಶ್ವರ ಸೇವಾ ಕೇಂದ್ರ, ಕರವಸೂಲಿಗಾರ ರವಿಪ್ರಸಾದ್, ಮೊ: ೯೧೧೩೨೫೪೪೬೨ ನೋಡಲ್ ಅಧಿಕಾರಿಯಾಗಿದ್ದಾರೆ.
ಸಾರ್ವಜನಿಕರು ಸುಲಭವಾಗಿ ನೋಂದಾಯಿಸಿಕೊಳ್ಳುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಅರ್ಹ ಫಲಾನುಭವಿಗಳು ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗು ಸಂಪರ್ಕಗೊಂಡಿರುವ ಬ್ಯಾಂಕ್ ಖಾತೆ ವಿವರ ನೀಡುವ ಮೂಲಕ ಯಾವುದೇ ಶುಲ್ಕ ಭರಿಸದೆ ಯಾವುದೇ ಸಮಯದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.

Wednesday, July 19, 2023

ಕಾಂಗ್ರೆಸ್‌ ಸರ್ಕಾರ ಎಂದಿಗೂ ಮಹಿಳೆಯರ ಪರ : ಶೃತಿ ವಸಂತಕುಮಾರ್‌

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತೆರೆಯಲಾಗಿರುವ ಕೇಂದ್ರಗಳಿಗೆ ಅಧ್ಯಕ್ಷೆ ಶೃತಿ ವಸಂತಕುಮಾರ್‌ ಚಾಲನೆ ನೀಡಿದರು.
    ಭದ್ರಾವತಿ, ಜು. ೧೯ : ಕಾಂಗ್ರೆಸ್‌ ಸರ್ಕಾರ ಎಂದಿಗೂ ಮಹಿಳೆಯರ ಪರವಾಗಿದ್ದು, ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಪ್ರಶಂಸೆಗೆ ಪಾತ್ರವಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಹೇಳಿದರು.
    ಅವರು ಗುರುವಾರ ನಗರಸಭೆ ಸಭಾಂಗಣದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತೆರೆಯಲಾಗಿರುವ ಕೇಂದ್ರಗಳಿಗೆ ಚಾಲನೆ ನೀಡಿದರು.
    ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗಾಗಿ ವಿಶೇಷವಾಗಿ ೨ ಯೋಜನೆಗಳನ್ನು ಜಾರಿಗೊಳಿಸಿದೆ. ಉಚಿತ ಬಸ್‌ ಪ್ರಯಾಣ ಸೇವೆ  ಶಕ್ತಿ ಯೋಜನೆ ಹಾಗು ಪ್ರತಿ ಕುಟುಂಬದ ಯಜಮಾನಿಗೆ ರು. ೨೦೦೦ ನೀಡುವ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಜನತೆ ಪರವಾಗಿ ಕಾಂಗ್ರೆಸ್‌ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆಯುತ್ತಿರುವ ಸರ್ಕಾರವಾಗಿದೆ. ಅತಿ ಕಡಿಮೆ ಅವಧಿಯಲ್ಲಿ ನಾಡಿನ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರುಸುತ್ತಿದೆ. ಜಾತಿ, ಧರ್ಮ, ಪಂಥ ಎಲ್ಲವನ್ನು ಮೀರಿದ ಯೋಜನೆಗಳಾಗಿವೆ. ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದರು.
    ಪೌರಾಯುಕ್ತ ಮನುಕುಮಾರ್‌ ಮಾತನಾಡಿ, ಸರ್ಕಾರದ ಸೂಚನೆ ಮೇರೆಗೆ ಗೃಹಲಕ್ಷ್ಮಿ ಯೋಜನೆಯಡಿ ನಗರಸಭೆ ವ್ಯಾಪ್ತಿಯಲ್ಲಿ ಅರ್ಜಿ  ಸಲ್ಲಿಸುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರಗಳನ್ನು ನಗರಸಭೆ ಕಛೇರಿ ಆವರಣದಲ್ಲಿ ಹಾಗು ಇತರೆಡೆ ತೆರೆಯಲಾಗಿದೆ. ಇದರ ಸದುಪಯೋಗ ಅರ್ಹರು ಪಡೆದುಕೊಳ್ಳುವಂತೆ ಕೋರಲಾಗಿದೆ.
    ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ ಕುಮಾರ್‌, ಮಾಜಿ ಅಧ್ಯಕ್ಷರಾದ ಗೀತಾ ರಾಜ್‌ಕುಮಾರ್‌, ಅನುಸುಧಾ ಮೋಹನ್‌ ಪಳನಿ, ಸದಸ್ಯರಾದ ಆರ್. ಮೋಹನ್‌ ಕುಮಾರ್‌, ಜಾರ್ಜ್, ಬಸವರಾಜ್‌ ಬಿ. ಆನೆಕೊಪ್ಪ, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕೃ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.  

ಡಾ. ವಿಜಯದೇವಿಗೆ ಕಲೇಸಂ ದತ್ತಿನಿಧ ಪ್ರಶಸ್ತಿ

ಡಾ. ವಿಜಯದೇವಿ
    ಭದ್ರಾವತಿ, ಜು. ೧೯ :  ನಗರದ ನಿವಾಸಿ, ವಿಜಯಪುರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ, ಎಮೆರಿಟಸ್ ಪ್ರೊಫೆಸರ್  ಡಾ. ವಿಜಯದೇವಿ ಅವರ  ಅಲ್ಲಮ ಪ್ರಭುದೇವರು : ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು ಕೃತಿಗೆ ಕಲೇಸಂ ದತ್ತಿನಿಧಿ ಪ್ರಶಸ್ತಿ ಲಭಿಸಿದೆ.
    ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ನೀಡಲಾಗುವ ೨೦೨೧ನೇ ಸಾಲಿನ ಶ್ರೀಮತಿ ಜಯಮ್ಮ ಕರಿಯಣ್ಣ(ಸಂಶೋಧನೆ) ದತ್ತಿನಿಧಿ ಪ್ರಶಸ್ತಿಗೆ ಅಲ್ಲಮ ಪ್ರಭುದೇವರು : ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು ಕೃತಿ ಆಯ್ಕೆಯಾಗಿದೆ.
    ಜು.೨೩ರಂದು ಬೆಂಗಳೂರಿನ ಜೆ.ಸಿ ರಸ್ತೆ, ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ೪೪ನೇ ವರ್ಷದ ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕೋತ್ಸವ, ವಿವಿಧ ಪ್ರಕಾರಗಳ ಕೃತಿ/ಸಾಧಕರ ಹೆಸರಿನ ದತ್ತಿಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ವಿಜಯದೇವಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಜು.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ

    ಭದ್ರಾವತಿ, ಜು. ೧೯ : ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ಆಶ್ರಮದ ವತಿಯಿಂದ ತಮಿಳುನಾಡು ದಿಂಡಿಕಲ್‌ನ ವಂಶಪಾರಂಪರೆ ಸಿದ್ದ ವೈದ್ಯರಾದ ಕೆ. ಮುತ್ತುಕೃಷ್ಣನ್ ಅವರಿಂದ ಜು.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಕಾರ್ಯಕ್ರಮ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧.೩೦ರವರೆಗೆ ನಡೆಯಲಿದ್ದು, ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು ಹಾಗು ದೂರ ದೃಷ್ಠಿ ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೮೩೦೩೦ ಅಥವಾ ೯೪೪೮೨೫೫೫೪೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ.