Monday, April 14, 2025

ಹಿಂದೂ ಸಮಾಜದಲ್ಲಿ ಶೌರ್ಯಕ್ಕೆ ಮತ್ತೊಂದು ಹೆಸರು ಭಜರಂಗದಳ : ಪ್ರಭಂಜನ್

ಭದ್ರಾವತಿ ನಗರದ ತರೀಕೆರೆ ರಸ್ತೆ, ರೈಲ್ವೆ ಮೇಲ್ಸೇತುವೆ ಬಳಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಶೌರ್ಯ ಸಂಚಲನದ ಅಂಗವಾಗಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಬಜರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ: ಹಿಂದೂ ಸಮಾಜದಲ್ಲಿ ಶೌರ್ಯಕ್ಕೆ ಮತ್ತೊಂದು ಹೆಸರು ಭಜರಂಗದಳ. ಸಮಾಜದಲ್ಲಿನ ಸಂಘರ್ಷಕ್ಕಾಗಿ ಹಿಂದೂಗಳ ರಕ್ಷಣೆಗಾಗಿ, ಹಿಂದುತ್ವದ ಹೋರಾಟಕ್ಕಾಗಿ ಜನಿಸಿದ ಸಂಘಟನೆಯೇ ಬಜರಂಗದಳ ಎಂದು ಬಜರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್ ಹೇಳಿದರು
    ಅವರು ನಗರದ ತರೀಕೆರೆ ರಸ್ತೆ, ರೈಲ್ವೆ ಮೇಲ್ಸೇತುವೆ ಬಳಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಶೌರ್ಯ ಸಂಚಲನದ ಅಂಗವಾಗಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. 
    ಬಜರಂಗದಳ ಸಮಾಜದಲ್ಲಿ ರಾಷ್ಟ್ರ ಭಕ್ತಿ ಪ್ರೇರೇಪಿಸುತ್ತಾ, ರಾಷ್ಟ್ರಕ್ಕಾಗಿ ತನ್ನ ಸೇವೆಯನ್ನು ಸಮರ್ಪಿಸುತ್ತಿದೆ. ರಾಮನ ಕಾರ್ಯದ ಜೊತೆಗೆ ರಾಷ್ಟ್ರ ಕಾರ್ಯವನ್ನು ಮಾಡುತ್ತಿದೆ. ಗೋ ಹತ್ಯೆ, ದೇಶ ವಿಭಜನೆ, ಸ್ತ್ರೀಯರ ಮೇಲೆ ಹಲ್ಲೆ ಸೇರಿದಂತೆ ಇತ್ಯಾದಿ ಘಟನೆಗಳು ದೇಶ ವಿಭಜನೆಯಾಗಿ ಪ್ರತ್ಯೇಕ ರಾಷ್ಟ್ರ ನಿರ್ಮಾಣವಾಗಿ ಸ್ವಾತಂತ್ರ್ಯ ಬಂದರೂ ನಿರಂತರವಾಗಿ ನಡೆಯುತ್ತಿವೆ. ಇಂದಿಗೂ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಅಂದಿನ ಎಲ್ಲಾ ಸಮಸ್ಯೆಗಳು ಇಂದಿಗೂ ಮುಂದುವರೆಯುತ್ತಿದ್ದು, ಇದರಲ್ಲಿ ಸ್ವಲ್ಪವೂ ಬದಲಾವಣೆಯಾಗಿಲ್ಲ. ಇವೆಲ್ಲದರ ನಡುವೆ ಬಜರಂಗದಳ ಧೈರ್ಯವಾಗಿ ಹೋರಾಟ ನಡೆಸುವ ಮೂಲಕ ಸಂಘಟನೆ ಹೆಚ್ಚು ಬಲಿಷ್ಠಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. .
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಾಜಕೀಯ ಲಾಭಕ್ಕಾಗಿ ಮುಸ್ಲಿಂ ಸಮುದಾಯದವರ ಓಲೈಕೆಯಲ್ಲಿ ತೊಡಗಿದ್ದು, ಇದು ಮಿತಿ ಮೀರಿದೆ. ಮುಸ್ಲಿಂ ಸಮುದಾಯದವರು ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಅವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿರುವುದು ಸಂವಿಧಾನದ ಅಶಯಕ್ಕೆ ವಿರುದ್ಧವಾಗಿದೆ. ಇದು ಮುಂದಿನ ದಿನಗಳಲ್ಲಿ ದೇಶಕ್ಕೆ ಗಂಡಾಂತರ ತರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಎಚ್ಚರಿಸಿದರು.
    ಪ್ರಾಂತ ಕಾರ್ಯಕಾರಿಣಿ ಸದಸ್ಯ ಹಾ.ರಾಮಪ್ಪ, ಧರ್ಮ ಪ್ರಸಾರ ಪ್ರಮುಖ್ ನಾರಾಯಣ ವರ್ಣೇಕರ್, ವಿಭಾಗ ಕಾರ್ಯದರ್ಶಿ ಚಂದ್ರಶೇಖರ್ ಮತ್ತು ಜಿಲ್ಲಾ ಕಾರ್ಯದರ್ಶಿ ಆನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸುರೇಶ್ ಬಾಬು ಸ್ವಾಗತಿಸಿ, ಜಿಲ್ಲಾ ಸಂಯೋಜಕ ರಾಘವ ವಡಿವೇಲು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಭಿಷೇಕ ಕಾರ್ಯಕ್ರಮ ನಿರೂಪಿಸಿ, ಕೃಷ್ಣ ವಂದಿಸಿದರು. 
       ಇದಕ್ಕೂ ಮೊದಲು ಬಿ.ಎಚ್ ರಸ್ತೆ, ಲೋಯರ್ ಹುತ್ತಾ, ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ ಇದೇ ಮೊದಲ ಬಾರಿಗೆ ಸಮವಸ್ತ್ರಧಾರಿ ಕಾರ್ಯಕರ್ತರ ಸಂಗೀತಯುಕ್ತ ಪಥ ಸಂಚಲನ ನಡೆಯಿತು. 

ಸದೃಢ ಸಮಾಜಕ್ಕೆ ಅಂಬೇಡ್ಕರ್‌ರವರ ಸಂವಿಧಾನ ಅಗತ್ಯ : ನ ಬೌದ್ಧ ಭಿಕ್ಕು ನ್ಯಾನಲೋಕ ಬಂತೇಜಿ

ಭದ್ರಾವತಿಯಲ್ಲಿ ಸೋಮವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗು ವಿವಿಧ ಇಲಾಖೆಗಳು ಮತ್ತು ವಿವಿಧ ಸಂಘಟನೆಗಳ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೪ನೇ ಹಾಗು ಡಾ. ಬಾಬು ಜಗಜೀವನ್‌ರಾಮ್‌ರವರ ೧೧೮ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಪುಷ್ಪ ನಮನದೊಂದಿಗೆ ಇಬ್ಬರು ಮಹಾನ್ ಆದರ್ಶ ವ್ಯಕ್ತಿಗಳಿಗೆ ಗೌರವ ಸಲ್ಲಿಸಿದರು. 
    ಭದ್ರಾವತಿ: ಅಂಬೇಡ್ಕರ್‌ರವರು ಜಾತಿ ಬೇಧಭಾವವಿಲ್ಲದ, ಸಮಾನತೆಯಿಂದ ಕೂಡಿರುವ, ಸತ್ಯ, ನ್ಯಾಯ ಹಾಗು ಪ್ರಜ್ಞಾವಂತಿಕೆಯಿಂದ ಉತ್ತಮ ಬದುಕು ನಿರ್ಮಾಣಮಾಡಿಗೊಳ್ಳುವ ಆಶಯದೊಂದಿಗೆ ಸದೃಢ ಸಮಾಜಕ್ಕೆ ಅಗತ್ಯವಿರುವ ಸಂವಿಧಾನ ನೀಡಿದ್ದಾರೆ. ನಾವುಗಳು ಇದನ್ನು ಅರ್ಥಮಾಡಿಕೊಂಡಾಗ ಅಂಬೇಡ್ಕರ್ ಜಯಂತಿ ಆಚರಣೆ ಸಾರ್ಥವಾಗುತ್ತದೆ ಎಂದು ಬೆಂಗಳೂರಿನ ಬೌದ್ಧ ಭಿಕ್ಕು ನ್ಯಾನಲೋಕ ಬಂತೇಜಿ ಹೇಳಿದರು. 
    ಅವರು ಸೋಮವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗು ವಿವಿಧ ಇಲಾಖೆಗಳು ಮತ್ತು ವಿವಿಧ ಸಂಘಟನೆಗಳ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೪ನೇ ಹಾಗು ಡಾ. ಬಾಬು ಜಗಜೀವನ್‌ರಾಮ್‌ರವರ ೧೧೮ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಬೌದ್ಧ ಧರ್ಮ ಹಾಗು ಅಂಬೇಡ್ಕರ್ ಚಿಂತನೆಗಳು ಎರಡು ಒಂದೇ. ಮೌಡ್ಯಕ್ಕೆ ಒಳಗಾಗದೆ, ಶೋಷಣೆಗೆ ಒಳಗಾಗದೆ, ಸರ್ವ ಸಮಾನತೆಯಿಂದ ಜ್ಞಾನದೊಂದಿಗೆ, ವಿದ್ಯೆಯೊಂದಿಗೆ ಬದುಕುವುದು ಅಂಬೇಡ್ಕರ್‌ರವರ ಆಶಯವಾಗಿದೆ ಎಂದರು. ಅಲ್ಲದೆ ಈ ನಿಟ್ಟಿನಲ್ಲಿ ಪ್ರತಿಜ್ಞಾವಿಧಿ ಭೋಧಿಸಿದರು. 
    ತಾಲೂಕಿನ ದೇವರ ನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಡಿ.ಎಚ್ ನಾಗರಾಜ್ ಮಾತನಾಡಿ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್‌ರಾಮ್‌ರವರು ತಾವು ಅನುಭವಿಸಿದ ನೋವುಗಳನ್ನು ಭವಿಷ್ಯದಲ್ಲಿ ಶೋಷಿತ ಸಮುದಾಯದ ಯಾರು ಸಹ ಅನುಭವಿಸಬಾರದು ಎಂಬ ಆಶಯದೊಂದಿಗೆ ಅಸಮಾನತೆ ವಿರುದ್ಧ ಹೋರಾಟ ನಡೆಸಿದರು. ಅಲ್ಲದೆ ಒಬ್ಬ ಸಮರ್ಥ ಆಡಳಿತಗಾರನಾಗಿ ಹಲವು ಸುಧಾರಣೆಗಳನ್ನು ಜಾರಿಗೆ ತಂದರು. ಇಂತಹ ಮಹಾನ್ ವ್ಯಕ್ತಿ ಜಯಂತಿ ಆಚರಣೆ ಕೇವಲ ಆಚರಣೆಯಾಗಿ ಉಳಿಯಬಾರದು ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಈ ಬಾರಿ ಇಬ್ಬರು ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಯಶಸ್ವಿಯಾಗಿ ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಅವಮಾನಗೊಳಿಸುವ ರೀತಿಯಲ್ಲಿ ಆಚರಿಸಬಾರದು. ಜಯಂತಿ ಆಚರಣೆ ಮಹಾನ್ ವ್ಯಕ್ತಿಗಳಿಗೆ ಗೌರವ ತಂದುಕೊಡುವ ನಿಟ್ಟಿನಲ್ಲಿ ಹಾಗು ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಹಾಗು ಸಾರ್ಥಕಗೊಳ್ಳುವಂತೆ ಆಚರಿಸಬೇಕು ಎಂದರು. 
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಪರುಸಪ್ಪ ಕುರುಬರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಪೊಲೀಸ್ ಉಪ ಅಧೀಕ್ಷಕ ಕೆ.ಆರ್ ನಾಗರಾಜು, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸೇರಿದಂತೆ ನಗರಸಭೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಸಿದ್ದಾರ್ಥ ಅಂಧರ ಕೇಂದ್ರದ ಕಲಾವಿದರು ಪ್ರಾರ್ಥಿಸಿದರು. 
    ಅತಿಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗು ದಲಿತರ ಏಳಿಗೆಗಾಗಿ ಶ್ರಮಿಸುತ್ತಿರುವ ವಿವಿಧ ದಲಿತ ಸಂಘಟನೆಗಳ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂವಿಧಾನ ಪೀಠಿಕೆ ವಾಚಿಸಲಾಯಿತು. ಇದಕ್ಕೂ ಮೊದಲು ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್‌ರಾಮ್‌ರವರ ಭಾವಚಿತ್ರದೊಂದಿಗೆ ಕಲಾತಂಡಗಳೊಂದಿಗೆ ಕನಕಮಂಟಪ ಮೈದಾನದವರೆಗೂ ಮೆರವಣಿಗೆ ನಡೆಸಲಾಯಿತು. 

Sunday, April 13, 2025

ಗಾಯಕ ಮಂಜುನಾಥ್‌ಗೆ ಸನ್ಮಾನ

ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ, ಗಾಯಕ ಬಿ.ಎ ಮಂಜುನಾಥ್ ಅವರನ್ನು ಭದ್ರಾವತಿ ತಾಲೂಕಿ ಶ್ರೀ ರಾಮನಗರದ ಶ್ರೀ ಕಂಡ ಮುತ್ತನ್ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ, ಗಾಯಕ ಬಿ.ಎ ಮಂಜುನಾಥ್ ಅವರನ್ನು ತಾಲೂಕಿ ಶ್ರೀ ರಾಮನಗರದ ಶ್ರೀ ಕಂಡ ಮುತ್ತನ್ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
        ಮಂಜುನಾಥ್‌ರವರು ಕಳೆದ ಹಲವು ವರ್ಷಗಳಿಂದ ಗಾಯಕರಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಕಲಾ ಸೇವೆಯನ್ನು ಗುರುತಿಸಿ ೨೪ನೇ ವರ್ಷದ ಕಂಡಮುತ್ತನ್ ದೇವರ ಪೂಜಾ ಕಾರ್ಯಕ್ರಮದಲ್ಲಿ ಟ್ರಸ್ಟ್  ವತಿಯಿಂದ ಸನ್ಮಾನಿಸಲಾಯಿತು. 
    ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ವಾಸು ಹಾಗು ಪ್ರಮುಖರಾದ ರಾಜವಿಕ್ರಮ್ ಮತ್ತು ಶ್ರೀಧರ್ ಬಾಲಕೃಷ್ಣನ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ರಂಗಕರ್ಮಿ, ಚಲನಚಿತ್ರ ನಟ ಅರುಣ್ ಸಾಗರ್, ಚಲನಚಿತ್ರ ನಿರ್ದೇಶಕಿ ಸಿ.ಎಸ್ ಬಾಬಿ, ಗಂಗಾಧರ್, ಯಶೋದರಯ್ಯ, ಸ್ವಾತಿಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜೀವನದಲ್ಲಿ ಸಫಲತೆ ಕಾಣಬೇಕಾದರೆ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ : ಅರಳೇಹಳ್ಳಿ ಅಣ್ಣಪ್ಪ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಾ.ಬಿ. ಆರ್ ಅಂಬೇಡ್ಕರ್‌ರವರ ಜನ್ಮದಿನಾಚರಣೆ ಪ್ರಯುಕ್ತ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಬಿ.ಇಡಿ ಕಾಲೇಜುಗಳ ಡಾ.ಬಿ.ಆರ್ ಅಂಬೇಡ್ಕರ್‌ರವರ ವಿಚಾರಧಾರೆಗಳ ಕುರಿತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. 
    ಭದ್ರಾವತಿ : ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲೂ ಪೈಪೋಟಿ ಏರ್ಪಟ್ಟಿದೆ. ಇಂತಹ ದಿನಗಳಲ್ಲಿ ಯುವಜನರು ಮೊಬೈಲ್‌ನಲ್ಲಿ ಸಮಯ ಕಾಲಹರಣ ಮಾಡುತ್ತಿದ್ದು, ಜೀವನದಲ್ಲಿ ಹಗಲುಗನಸು ಕಾಣುತ್ತಿದ್ದಾರೆ. ಜೀವನದಲ್ಲಿ ಸಫಲತೆ ಕಾಣಬೇಕಾದರೆ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು, ವ್ಯಕ್ತಿತ್ವ ನಿರ್ಮಾಣದೊಂದಿಗೆ ಇತರರಿಗೆ ಮಾದರಿಯಾಗಬೇಕೆಂದು ತಾಲೂಕಿನ ಅರಕೆರೆ ಸರ್ಕಾರಿ ಪ್ರೌಢಶಾಲೆಯ ಭಾಷಾ ಶಿಕ್ಷಕ, ಸಾಹಿತಿ ಅರಳೆಹಳ್ಳಿ ಅಣ್ಣಪ್ಪ ಹೇಳಿದರು.
    ಅವರು ನಗರಸಭೆ ವ್ಯಾಪ್ತಿಯ ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಾ.
    ಬಿ. ಆರ್ ಅಂಬೇಡ್ಕರ್‌ರವರ ಜನ್ಮದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಬಿ.ಇಡಿ ಕಾಲೇಜುಗಳ ಡಾ.ಬಿ.ಆರ್ ಅಂಬೇಡ್ಕರ್‌ರವರ ವಿಚಾರಧಾರೆಗಳ ಕುರಿತು ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. 
    ಅಂತರ ಬಿ.ಇಡಿ ಕಾಲೇಜುಗಳ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ. ಸ್ಪರ್ಧೆಗಳ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳುವುದರ ಜೊತೆಗೆ, ನಮ್ಮಲ್ಲಿರುವ ಸಾಮರ್ಥ್ಯ ನಮಗೆ ಅರಿವಾಗಲಿದೆ. ಬುದ್ಧ, ಬಸವಣ್ಣ, ಡಾ.ಬಿ.ಆರ್ ಅಂಬೇಡ್ಕರ್ ಸೇರಿದಂತೆ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು. 
    ಶಿಕ್ಷಕರಾದ ಸುಧೀಂದ್ರ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಜ್ಞಾನವನ್ನು ಗಳಿಸಿಕೊಳ್ಳುವುದರ ಜೊತೆಗೆ ಇಂದಿನ ಆಧುನಿಕ ಜಗತ್ತಿಗೆ ಅವಶ್ಯಕವಾದ ಸಂವಹನ ಕೌಶಲ್ಯಗಳನ್ನು ಕಲಿತು ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
    ಅಧ್ಯಕ್ಷತೆವಹಿಸಿ ಮಾತನಾಡಿದ ಡಾ. ಸಿದ್ದರಾಜು, ಇಂದಿನ ಜಗತ್ತಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರ ವಿಚಾರಧಾರೆಗಳು ಎಂದೆಂದಿಗೂ ಅತ್ಯವಶ್ಯಕ. ಡಾ ಬಿ.ಆರ್ ಅಂಬೇಡ್ಕರ್‌ರವರ ಚಿಂತನೆಗಳೇ ನಮಗೆ ದಾರಿದೀಪ, ಎಲ್ಲರ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು, ಆ ಹಿನ್ನಲೆಯಲ್ಲಿ ತಾವೆಲ್ಲರೂ ಜ್ಞಾನದ ಜೊತೆ ವೃತ್ತಿ ಕೌಶಲ್ಯಗಳಾದ ಸಂವಹನ, ಚಿತ್ರಕಲೆ, ಭಾಷಣ ಕಲೆಗಳನ್ನು ಕಲಿತು, ವಿವಿಧ ರಂಗಗಳಲ್ಲಿ ಸಾಧನೆ ಮಾಡುವ ಮೂಲಕ ಉತ್ತಮ ಶಿಕ್ಷಕರಾಗುವಂತೆ ಕರೆ ನೀಡಿದರು. 
    ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಬಿ.ಇಡಿ ಕಾಲೇಜುಗಳ ಪ್ರಶಿಕ್ಷಣಾರ್ಥಿಗಳು ಮತ್ತು ಉಪನ್ಯಾಸಕರು ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್ ನಿರ್ದೇಶಕರಾದ ನೇತ್ರಾವತಿ ಸುಭಾಷ್, ಸಾವಿತ್ರಿ ಗಣೇಶಪ್ಪ, ಎಸ್.  ಹನುಮಂತಪ್ಪ ಎಸ್, ಸಂಶೋಧಕರಾದ ಪವನ್‌ರಾಜ್, ಪ್ರಜ್ವಲ್ ಕುಮಾರ್, ತೀರ್ಪುಗಾರರಾಗಿ ಮುಖ್ಯ ಶಿಕ್ಷಕ ನಾಗೇಶ್, ಜಾನಪದ ಕಲಾವಿದ ತಮಟೆ ಜಗದೀಶ್, ಚಿತ್ರಕಲಾ ಶಿಕ್ಷಕ ಶಿವಕುಮಾರ್ ಮತ್ತು  ಹಿರಿಯ ರಂಗ ಕಲಾವಿದ ವೈ.ಕೆ. ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಸ್ಪರ್ಧಾ ವಿಜೇತರು :
  ಭಾಷಣ ಸ್ಪರ್ಧೆ : ವಿಸ್ಮಿತ್ .ವಿ, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ, ಪ್ರಥಮ ಸ್ಥಾನ, ಸಿಂಚನ ಯು ನಾಯ್ಕ್-ಡಿ.ಕೆ ಶಿವಕುಮಾರ್ ಶಿಕ್ಷಣ ಮಹಾವಿದ್ಯಾಲಯ, ದ್ವಿತೀಯ ಸ್ಥಾನ, ಕೋಮಲ-ಮೈತ್ರಿ ಶಿಕ್ಷಣ ಮಹಾವಿದ್ಯಾಲಯ, ತೃತೀಯ ಸ್ಥಾನ, ಶೀಲವಂತೆ ಬಿ ಪೂಜಾರಿ-ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ, ಸಮಾಧಾನಕರ ಸ್ಥಾನ.
    ಡಾ.ಬಿ.ಆರ್ ಅಂಬೇಡ್ಕರ್‌ರವರ ಕುರಿತು ರಸಪ್ರಶ್ನೆ ಸ್ಪರ್ಧೆ : ಮಲ್ಲಿಕಾರ್ಜುನ್ .ಎಂ ಮತ್ತು ಕಾರ್ತಿಕ್ .ಎ-ಮೈತ್ರಿ ಶಿಕ್ಷಣ ಮಹಾವಿದ್ಯಾಲಯ, ಪ್ರಥಮ ಸ್ಥಾನ, ರಂಜಿತಾ ಮತ್ತು ಸ್ಫೂರ್ತಿ-ವಿಶ್ವೇಶ್ವರಾಯ ಶಿಕ್ಷಣ ಮಹಾವಿದ್ಯಾಲಯ, ದ್ವಿತೀಯ ಸ್ಥಾನ, ವಿನೋದ ಮತ್ತು ಲಕ್ಷ್ಮಣ್-ಜ್ಞಾನಭಾರತೀ ಶಿಕ್ಷಣ ಮಹಾವಿದ್ಯಾಲಯ, ತೃತೀಯ ಸ್ಥಾನ, ಶ್ರೀಲಕ್ಷ್ಮೀ ವಿ.ಎ ಮತ್ತು ಭೂಮಿಕಾ .ಡಿ-ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ, ಸಮಾಧಾನಕರ ಸ್ಥಾನ.
    ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರ ಬರೆಯುವ ಸ್ಪರ್ಧೆ: 
    ಪ್ರತಿಭಾ ಜೆ.ಡಿ-ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ, ಪ್ರಥಮ ಸ್ಥಾನ, ಗಿರೀಶ ಕೆ ಎಂ-ಡಿ.ಕೆ ಶಿವಕುಮಾರ್ ಶಿಕ್ಷಣ ಮಹಾವಿದ್ಯಾಲಯ, ದ್ವಿತೀಯ ಸ್ಥಾನ, ಸಿಂದು .ಎಂ-ರಾಜೀವ್‌ಗಾಂಧಿ ಶಿಕ್ಷಣ ಮಹಾವಿದ್ಯಾಲಯ, ತೃತೀಯ ಸ್ಥಾನ, ಝೀಯಾನ ಸಾದತ್-ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ, ಸಮಾಧಾನಕರ ಸ್ಥಾನ.
    ಅಂಬೇಡ್ಕರ್ ಗೀತೆ/ಸಮೂಹ ಗಾಯನ ಸ್ಪರ್ಧೆ: ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ, ಪ್ರಥಮ ಸ್ಥಾನ, ಅಲ್ ಮಹಮ್ಮೂದ್ ಬಿ.ಇಡಿ ಕಾಲೇಜು, ದ್ವಿತೀಯ ಸ್ಥಾನ, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ, ತೃತೀಯ ಸ್ಥಾನ ಹಾಗು ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ, ಸಮಾಧಾನಕರ ಸ್ಥಾನ ಪಡೆದುಕೊಂಡಿವೆ. 

ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ `ಗರಿಗಳ ಭಾನುವಾರ'

ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ `ಗರಿಗಳ ಭಾನುವಾರ' ಆಚರಿಸಲಾಯಿತು. 
    ಭದ್ರಾವತಿ :  ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ `ಗರಿಗಳ ಭಾನುವಾರ' ಆಚರಿಸಲಾಯಿತು. 
    ಭಕ್ತಾದಿಗಳು ಗರಿಗಳನ್ನು ಹಿಡಿದು ಯೇಸುವಿಗೆ `ಹೊಸಾನ್ನ' ಎಂದು ಘೋಷಣೆ ಕೂಗುತ್ತಾ, ಜೈಕಾರ ಹಾಕುತ್ತಾ ದೇವಾಲಯದ ಸುತ್ತಲೂ ಮೆರವಣಿಗೆ ನಡೆಸಿದರು. 
    ಕ್ರೈಸ್ತ ಸಮುದಾಯದವರಿಗೆ ಪವಿತ್ರ ವಾರದ ಸಂಪ್ರದಾಯಿಕ ಆಚರಣೆಯ ವಿಧಿವಿಧಾನಗಳು ಇಂದಿನಿಂದ ಪ್ರಾರಂಭವಾಗಿದ್ದು, ಯೇಸುಕ್ರಿಸ್ತರು ತಮ್ಮ ಶಿಷ್ಯರಿಗೆ ಪಾದ ತೊಳೆದು ಎಲ್ಲರೂ ಸಮಾನರು ಎಂದು ತೋರಿಸಿಕೊಟ್ಟಿದ್ದರು. ಅದರ ಆಚರಣೆಯನ್ನು ಗುರುವಾರ ಗುರುಗಳು ಕೆಲವು ಆಯ್ದ ಭಕ್ತರ ಪಾದಗಳನ್ನು ತೊಳೆಯುವುದರ ಮೂಲಕ ಆಚರಿಸಲಾಗುವುದು. 
    ಶುಕ್ರವಾರ ಏಸುಕ್ರಿಸ್ತರ ಶಿಲುಬೆ ಯಾತನೆ ಮರಣದ ದಿನವಾಗಿದ್ದು, ಅಂದು ಕ್ರೈಸ್ತ ಭಕ್ತರು (ಗುಡ್ ಫ್ರೈಡೆ), ಉಪವಾಸ ಮತ್ತು ಪ್ರಾರ್ಥನಾ ದಿನವನ್ನಾಗಿ ಆಚರಿಸಲಾಗುವುದು. 
    ಶನಿವಾರ ಮಧ್ಯರಾತ್ರಿಯ ಜಾಗರಣ ಪೂಜಾ ವಿಧಿ-ವಿಧಾನಗಳು ದೇವಾಲಯಗಳಲ್ಲಿ ನೆರವೇರಲಿದ್ದು, ಅಂದು ಯೇಸು ಕ್ರಿಸ್ತನ ಪುನರುತ್ಥಾನದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಹೀಗೆ ಈ ಭಾನುವಾರದಿಂದ ಮುಂದಿನ ಭಾನುವಾರದವರೆಗೂ ಪವಿತ್ರ ದಿನಗಳನ್ನಾಗಿ ಕ್ರೈಸ್ತ ಭಕ್ತರು ಆಚರಿಸಲಿದ್ದಾರೆ. 
    ಗರಿಗಳ ಭಾನುವಾರದಂದು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ, ಧರ್ಮ ಭಗಿನಿಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.

ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪರಿಗೆ ಜಿಲ್ಲಾಡಳಿತ ಸನ್ಮಾನ

ಭದ್ರಾವತಿ ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಅಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಅಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಜರುಗಿದ ಡಾ.ಬಾಬು ಜಗಜೀವನ ರಾಮ್ ೧೧೮ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಶಿವಬಸಪ್ಪರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಮಾರು ೩ ದಶಕಗಳಿಂದಲೂ ಶಿವಬಸಪ್ಪರವರು ಸಿದ್ದಾರ್ಥ ಅಂಧರ ಕೇಂದ್ರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಲದೆ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಈ ನಡುವೆ ದಲಿತ ಸಂಘರ್ಷ ಸಮಿತಿ ನೌಕರರ ಒಕ್ಕೂಟದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದು, ಪ್ರಸ್ತುತ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ. 
    ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ೨೦೦೭ರಲ್ಲಿ ಡಾ. ಬಾಬು ಜಗಜೀವನ ರಾಮ್ ಶತಮಾನೋತ್ಸವ ಪ್ರಶಸ್ತಿ ಹಾಗು ೨೦೦೬ರಲ್ಲಿ ನವದೆಹಲಿ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಡಾ. ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ ನೀಡಲಾಗಿದೆ. ಇದೀಗ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ. ಪಡೆದಿರುವ ಭದ್ರಾವತಿಯ ನಿವೃತ್ತ ಪ್ರಾಚಾರ್ಯರು ಹಾಗೂ ಸಿದ್ಧಾರ್ಥ ಅಂಧರ ಕೇಂದ್ರದ ಅಧ್ಯಕ್ಷರಾದ ಶ್ರೀ ಶಿವಬಸಪ್ಪ ಅವರನ್ನು ಶಿವಮೊಗ್ಗ ಜಿಲ್ಲಾ ಆಡಳಿತದ 
    ಶಾಲಾ ಶಿಕ್ಷಣ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಶಿವಮೊಗ್ಗ ನಗರ ಶಾಸಕ  ಚನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್ ಹೇಮಂತ್,  ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲೇಶಪ್ಪ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ, ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್ ಚಂದ್ರಭೂಪಾಲ, ಮೈಸೂರಿನ ದಾಸನೂರು ಕೋಸಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Saturday, April 12, 2025

ಅಂಬೇಡ್ಕರ್ ಜಯಂತಿ : ಏ.೧೪ರಂದು ಉಚಿತ ಸಸಿಗಳ ವಿತರಣೆ

ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಈ ಬಾರಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೪ನೇ ಜನ್ಮದಿನಾಚರಣೆ ಅಂಗವಾಗಿ ವಿಶೇಷವಾಗಿ ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸುತ್ತಿದೆ. 
೭೫೦ ಹೈಬ್ರೀಡ್ ನುಗ್ಗೆ, ಪಪ್ಪಾಯಿ, ತುಳಸಿ ಮತ್ತು ಹೊಂಗೆ ಸಸಿಗಳನ್ನು ಸಾರ್ವಜನಿಕರಿಗೆ ಏ.೧೪ರಂದು ಕಾರ್ಖಾನೆಯ ಮುಖ್ಯದ್ವಾರದ ಬಳಿ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೫ ಗಂಟೆವರೆಗೆ ವಿತರಿಸಲಾಗುತ್ತಿದೆ. 
ಪ್ರತಿಯೊಬ್ಬರಿಗೂ ೨ ಸಸಿಗಳನ್ನು ಮಾತ್ರ ವಿತರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್ ಪ್ರವೀಣ್ ಕುಮಾರ್ ಕೋರಿದ್ದಾರೆ.