Saturday, April 30, 2022

ಸ್ವಾಭಿಮಾನದ ಬದುಕಿನ ಪರಿಕಲ್ಪನೆ ಹೊಂದಿದ್ದ ಪ್ರೊ. ಬಿ. ಕೃಷ್ಣಪ್ಪ : ಸತ್ಯ

ಭದ್ರಾವತಿ ರಂಗಪ್ಪ ವೃತ್ತದ ಜೈ ಭೀಮ್ ನಗರದಲ್ಲಿರುವ ದಲಿತ ಸಂಘರ್ಷ ಸಮಿತಿ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೨೫ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಿತಿ ರಾಜ್ಯ ಖಜಾಂಚಿ ಸತ್ಯ ಮಾತನಾಡಿದರು.
    ಭದ್ರಾವತಿ, ಏ. ೩೦: ರಾಜಕೀಯ ಪರಿಕಲ್ಪನೆ ಮೂಲಕ ರಾಜ್ಯದಲ್ಲಿ ಶೋಷಿತರು, ದಲಿತರಿಗೆ ಸ್ವಾಭಿಮಾನದ ಬದುಕು ರೂಪಿಸಿಕೊಡುವ ಚಿಂತನೆಯನ್ನು ಪ್ರೊ. ಬಿ. ಕೃಷ್ಣಪ್ಪ ಹೊಂದಿದ್ದರು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಹೇಳಿದರು.
    ಅವರು ಶನಿವಾರ ನಗರದ ರಂಗಪ್ಪ ವೃತ್ತದ ಜೈ ಭೀಮ್ ನಗರದಲ್ಲಿರುವ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೨೫ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಜೊತೆಗೆ ರಾಜ್ಯದಲ್ಲಿ ದಲಿತ ಚಳುವಳಿ ಹುಟ್ಟು ಹಾಕಿದ ಪ್ರೊ. ಬಿ. ಕೃಷ್ಣಪ್ಪನವರು ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದ್ದರು. ದಲಿತರು, ಶೋಷಿತರ ಪರವಾಗಿ ರಾಜ್ಯದೆಲ್ಲೆಡೆ ಹೋರಾಟ ನಡೆಸುವ ಜೊತೆಗೆ ಅವರಿಗೆ ಉತ್ತಮ ಭವಿಷ್ಯ ರೂಪಿಸಿಕೊಡುವ ಪರಿಕಲ್ಪನೆ ಹೊಂದಿದ್ದರು. ದಲಿತರು, ಶೋಷಿತರು ಸಹ ರಾಜಕೀಯ ಸ್ಥಾನಮಾನ ಹೊಂದಲು ರಾಜಕೀಯ ಪಕ್ಷದ ಅವಶ್ಯಕತೆ ಇದೆ ಎಂಬುದನ್ನು ಮನಗಂಡಿದ್ದರು ಎಂದರು.
    ಬಿ. ಕೃಷ್ಣಪ್ಪನವರು ಇಂದಿಗೂ ನಮ್ಮೆಲ್ಲರಿಗೂ ಹೋರಾಟದ ದಾರಿದೀಪವಾಗಿದ್ದಾರೆ. ಇವರ ಹೋರಾಟದ ಸ್ಪೂರ್ತಿಯಿಂದಾಗಿ ಹಲವು ಹೋರಾಟಗಳಲ್ಲಿ ನ್ಯಾಯ ಲಭಿಸಿದೆ. ಮುಂದಿನ ದಿನಗಳಲ್ಲೂ ಇವರ ಆಶಯದಂತೆ ನಾವೆಲ್ಲರೂ ನಡೆಯಬೇಕಾಗಿದೆ ಎಂದರು.
    ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಈಶ್ವರಪ್ಪ ಇನ್ನಿತರರು ಪಾಲ್ಗೊಂಡು ಮಾತನಾಡಿದರು. ಪ್ರಮುಖರಾದ ಸಿ. ಜಯಪ್ಪ, ಶಾಂತಿ, ಎನ್. ಗೋವಿಂದ, ವೆಂಕಟೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ನಗರ, ಗ್ರಾಮಾಂತರ ಭಾಗದ ಹಲವು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಭದ್ರಾವತಿ ತಾಲೂಕಿನ ಗ್ರಾಮಾಂತರ ಹಾಗು ನಗರ ಪ್ರದೇಶದ ಹಲವು ಮಂದಿ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಭದ್ರಾವತಿ, ಏ. ೩೦: ತಾಲೂಕಿನ ಗ್ರಾಮಾಂತರ ಹಾಗು ನಗರ ಪ್ರದೇಶದ ಹಲವು ಮಂದಿ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಬಿಳಿಕಿ, ಬಿಳಿಕಿ ತಾಂಡ, ಹೆಬ್ಬಂಡಿ, ಲಕ್ಷ್ಮೀಪುರ, ಜೇಡಿಕಟ್ಟೆ, ಬಾಳೆಮಾರನಹಳ್ಳಿ, ಗೊಂದಿ ಸೇರಿದಂತೆ ಇನ್ನಿತರ ಗ್ರಾಮಾಂತರ ಪ್ರದೇಶಗಳ ಹಾಗು ಹನುಮಂತನಗರ, ಹುತ್ತಾಕಾಲೋನಿ, ಲೋಯರ್ ಹುತ್ತಾ, ಅಪ್ಪರ್ ಹುತ್ತಾ ಮತ್ತು ಹೊಸಮನೆ ಸುಭಾಷ್ ನಗರ ಸೇರಿದಂತೆ ಇನ್ನಿತರ ನಗರ ಪ್ರದೇಶದ ಹಲವು ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡರು.
    ಪ್ರಮುಖರಾದ ಪದ್ದು, ಚಂದ್ರಿಕಾ, ಆಂಜನಪ್ಪ, ವೆಂಕಟೇಶ್, ಮುರಳಿ, ಕಲ್ಲೇಶಪ್ಪ, ರಂಗಪ್ಪ, ಮೈಲಾರಪ್ಪ, ರಾಮಾನಾಯ್ಕ, ಸುಶೀಲಮ್ಮ, ಮೂರ್ತಿ, ಶ್ರೀನಿವಾಸ್, ದಿನೇಶ್, ಸುರೇಶ್, ಕವಿತಾ, ವಿನಾಯಕ ಸೇರಿದಂತೆ ಹಲವು ಮಂದಿ ಸೇರ್ಪಡೆಗೊಂಡರು.
ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮುಖಂಡರಾದ ಬಿ.ಕೆ ಜಗನ್ನಾಥ್, ಬಿ.ಕೆ ಮೋಹನ್, ಬಿ.ಎಸ್ ಗಣೇಶ್, ಜಿಲ್ಲಾ ಎಸ್.ಸಿ ಘಟಕದ ಉಪಾಧ್ಯಕ್ಷ ಎಸ್.ಎನ್ ಶಿವಪ್ಪ, ತಾಲೂಕು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಲಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ವ್ಯವಸ್ಥೆಯಲ್ಲಿನ ಲೋಪದೋಷ ಸರಿಪಡಿಸಿಕೊಂಡು ಕರ್ತವ್ಯ ನಿರ್ವಹಿಸಿ : ಡಾ. ಡಿ.ಎಸ್ ಶಿವಪ್ರಕಾಶ್

ಡಾ. ಎಂ.ವಿ ಅಶೋಕ್ ಮತ್ತು ಡಾ. ಡಿ.ಎಸ್ ಶಿವಪ್ರಕಾಶ್‌ರವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವೋತ್ತಮ ಸೇವಾ ಪ್ರಶಸ್ತಿ ಲಭಿಸಿದ ಹಿನ್ನಲೆಯಲ್ಲಿ ಈ ಇಬ್ಬರು ವೈದ್ಯರನ್ನು ಭದ್ರಾವತಿಯಲ್ಲಿ ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಏ. ೩೦: ಸರ್ಕಾರಿ ಹುದ್ದೆಯಲ್ಲಿರುವವರು ವ್ಯವಸ್ಥೆಯಲ್ಲಿನ ಕೆಲವೊಂದು ಲೋಪದೋಷಗಳನ್ನು ಸರಿಪಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ಹಾಗು ಉದರ ದರ್ಶಕ ಹಿರಿಯ ತಜ್ಞ ವೈದ್ಯ ಡಾ. ಡಿ.ಎಸ್ ಶಿವಪ್ರಕಾಶ್ ಹೇಳಿದರು.
    ಅವರು ತಾಲೂಕು ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಕರ್ತವ್ಯ ಸ್ಥಳದಲ್ಲಿನ ಕೆಲವೊಂದು ವ್ಯವಸ್ಥೆಗಳನ್ನು ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಸಾಮಾಜಿಕ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಲೋಪದೋಷಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದರು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ನಮ್ಮ ಕರ್ತವ್ಯವನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.  
    ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಮಾತನಾಡಿ,  ಆಯಾ ಸಂದರ್ಭಗಳಿಗೆ ತಕ್ಕಂತೆ ನಾವು ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ನಾನು ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ ಹೊರತು ಯಾವುದೇ ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ. ಆದರೂ ನನ್ನ ಕರ್ತವ್ಯವನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸವನ್ನುಂಟು ಮಾಡಿದೆ ಎಂದರು.  
    ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಮಾತನಾಡಿ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಸಹಕಾರ ಲಭ್ಯವಾಗುತ್ತಿದೆ. ಉತ್ತಮವಾಗಿ ಕರ್ತವ್ಯ ನಿರ್ವಹಿಸುವಂತಹ ವಾತಾವರಣವನ್ನು ಇಲ್ಲಿನ ವೈದ್ಯರು, ಸಿಬ್ಬಂದಿಗಳು ಕಲ್ಪಿಸಿಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಅನುಷಾ, ಎಚ್. ರಘುರಾವ್, ಪಿ. ಕೃಷ್ಣಮೂರ್ತಿ ಸೇರಿದಂತೆ ವೈದ್ಯರು, ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯ ಗಣೇಶ್‌ರಾವ್ ನಿರೂಪಿಸಿದರು. ರಾಮ್‌ನಾಥ್ ಬರ್ಗೆ ವಂದಿಸಿದರು.
    ಡಾ. ಎಂ.ವಿ ಅಶೋಕ್ ಮತ್ತು ಡಾ. ಡಿ.ಎಸ್ ಶಿವಪ್ರಕಾಶ್‌ರವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವೋತ್ತಮ ಸೇವಾ ಪ್ರಶಸ್ತಿ ಲಭಿಸಿದ ಹಿನ್ನಲೆಯಲ್ಲಿ ಈ ಇಬ್ಬರು ವೈದ್ಯರನ್ನು ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.



Friday, April 29, 2022

ವಿಐಎಸ್‌ಎಲ್ ಅಧಿಕಾರಿ ನಿತಿನ್ ಜೋಸ್‌ಗೆ ಸೈಲ್ ರೋಲ್ ಮಾಡೆಲ್ ಅವಾರ್ಡ್

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಹಿರಿಯ ವ್ಯವಸ್ಥಾಪಕ ನಿತಿನ್ ಜೋಸ್ ಕುಟುಂಬ ಸದಸ್ಯರೊಂದಿಗೆ ೨೦೨೦-೨೧ನೇ ಸಾಲಿನ ಪ್ರತಿಷ್ಠಿತ ಸೈಲ್ ಕಾರ್ಪೊರೇಟ್ ಅವಾರ್ಡ್ ಫಾರ್ ಎಕ್ಸಲೆನ್ಸ್-ರೋಲ್ ಮಾಡೆಲ್ ಅವಾರ್ಡ್ ಪ್ರಶಸ್ತಿ ಸ್ವೀಕರಿಸಿದರು.    
    ಭದ್ರಾವತಿ, ಏ. ೩೦: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಹಿರಿಯ ವ್ಯವಸ್ಥಾಪಕ ನಿತಿನ್ ಜೋಸ್ ಅವರಿಗೆ ೨೦೨೦-೨೧ನೇ ಸಾಲಿನ ಪ್ರತಿಷ್ಠಿತ ಸೈಲ್ ಕಾರ್ಪೊರೇಟ್ ಅವಾರ್ಡ್ ಫಾರ್ ಎಕ್ಸಲೆನ್ಸ್-ರೋಲ್ ಮಾಡೆಲ್ ಅವಾರ್ಡ್ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
     ನವದೆಹಲಿಯಲ್ಲಿ ಏ.೨೮ರಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ . ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷೆ ಸೋಮ ಮಂಡಲ್ ಪ್ರಶಸ್ತಿ ವಿತರಿಸಿದರು. ಪ್ರಶಸ್ತಿ ರು. ೫೦,೦೦೦ ನಗದು ಮತ್ತು ಪ್ರಮಾಣ ಪತ್ರ ಒಳಗೊಂಡಿದೆ.
    ಕಾರ್ಖಾನೆಯಲ್ಲಿ ನಿತಿನ್ ಜೋಸ್‌ರವರು ೨೦೦೮ರಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದು, ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರು ಬ್ಯಾಡ್ಮಿಂಟನ್ ಆಟಗಾರರು ಸಹ ಆಗಿದ್ದು, ಕಾರ್ಖಾನೆ ಆಡಳಿತ ಮಂಡಳಿ, ಅಧಿಕಾರಿಗಳು, ಕಾರ್ಮಿಕರು ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.




ಕಾರ್ಮಿಕ ಸಂತ ಜೋಸೆಫರ ದೇವಾಲಯದ ಸುವರ್ಣ ಮಹೋತ್ಸವಕ್ಕೆ ಚಾಲನೆ

ವಿವಿಧ ಕ್ಷೇತ್ರಗಳ ಗಣ್ಯರಿಗೆ, ದಾನಿಗಳಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು

ಭದ್ರಾವತಿ ಕಾಗದನಗರದ ಕಾರ್ಮಿಕ ಸಂತ ಜೋಸೆಫರ ದೇವಾಲಯದ ಸುವರ್ಣ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಏ. ೨೯: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಆರಂಭಗೊಂಡ ನಂತರ ಕಾಗದನಗರ ವ್ಯಾಪ್ತಿಯ ನಗರಾಡಳಿತ ಪ್ರದೇಶದಲ್ಲಿ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ನಿರ್ಮಿಸಿಕೊಂಡಿದ್ದ ಕಾರ್ಮಿಕ ಸಂತ ಜೋಸೆಫರ ದೇವಾಲಯ ಇದೀಗ ೫೦ ವರ್ಷಗಳನ್ನು ಪೂರೈಸಿದ್ದು, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.
    ಕಾಗದನಗರ ವ್ಯಾಪ್ತಿಯ ಸುತ್ತಮುತ್ತಲಿನ ಹಾಗು ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ಈ ದೇವಾಲಯದಲ್ಲಿ ತಮ್ಮ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬರುತ್ತಿದ್ದರು. ಕಳೆದ ಸುಮಾರು ೭ ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿದ್ದು, ಕಾರ್ಮಿಕ ಕುಟುಂಬಗಳು ಬೇರೆಡೆಗೆ ಸ್ಥಳಾಂತರಗೊಂಡಿವೆ. ಈ ಹಿನ್ನಲೆಯಲ್ಲಿ ಈ ವ್ಯಾಪ್ತಿಯಲ್ಲಿ ಇದೀಗ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ಅಲ್ಪ ಪ್ರಮಾಣದಲ್ಲಿದ್ದು, ಆದರೂ ಸಹ ದೇವಾಲಯದ ಸುವರ್ಣ ಮಹೋತ್ಸವ ಅದ್ದೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
    ಶುಕ್ರವಾರ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರಿಗೆ, ದಾನಿಗಳಿಗೆ ಸನ್ಮಾನ ಹಾಗು ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಹೋತ್ಸವ ೩ ದಿನಗಳ ಕಾಲ ಜರುಗಲಿದೆ. ಮೇ.೧ರಂದು ಕಾರ್ಮಿಕ ಸಂತ ಜೋಸೆಫರ ಉತ್ಸವ ಮೆರವಣಿಗೆಯೊಂದಿಗೆ ಮಹೋತ್ಸವ ಅಂತ್ಯಗೊಳ್ಳಲಿದೆ.
    ದೇವಾಲಯದ ಧರ್ಮ ಗುರು ಫಾದರ್ ಡಾಮಿನಿಕ್ ಕ್ರಿಸ್ತುರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರೇಹಳ್ಳಿ ಸಂತ ಅಂತೋಣಿಯವರ ದೇವಾಲಯದ ಧರ್ಮ ಗುರು ಫಾದರ್ ರಿಚರ್ಡ್ ಅನಿಲ್ ಡಿಸೋಜಾ, ಉಜ್ಜನಿಪುರ ಡಾನ್ ಬೋಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ಆರೋಗ್ಯ ರಾಜ್ ಹಾಗು ಪ್ರಾಂಶುಪಾಲ ಫಾದರ್ ಜೋಮಿ, ಕ್ರೈಸ್ತ ಸಮುದಾಯದ ಮುಖಂಡ ಸೆಲ್ವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಚಿತ್ರ: ಡಿ೨೯-ಬಿಡಿವಿಟಿ೨


ಭದ್ರಾವತಿ ಕಾಗದನಗರದ ಕಾರ್ಮಿಕ ಸಂತ ಜೋಸೆಫರ ದೇವಾಲಯದ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಶುಕ್ರವಾರ ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಟಿ.ವಿ ಕೇಬಲ್‌ನಲ್ಲಿ ವಿದ್ಯುತ್ ಹರಿದು ೪ ವರ್ಷದ ಬಾಲಕಿ ಸಾವು


    ಭದ್ರಾವತಿ, ಏ. ೨೯: ಟಿ.ವಿ ಕೇಬಲ್‌ನಲ್ಲಿ ವಿದ್ಯುತ್ ಹರಿದ ಪರಿಣಾಮ ೪ ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಘಟನೆ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
    ಇಂಚರ(೪) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ಈಕೆ ಗ್ರಾಮದ ನಿವಾಸಿ ಸಂತೋಷ್ ಮತ್ತು ಪೂಜಾ ದಂಪತಿ ಪುತ್ರಿಯಾಗಿದ್ದು, ವಿದ್ಯುತ್ ತಂತಿಗೆ ಸಂಪರ್ಕಗೊಂಡಿದ್ದ ಟಿವಿ ಕೇಬಲ್ ಕತ್ತರಿಸಿಕೊಂಡು ಕೆಳಗೆ ತಂತಿ ಬೇಲಿ ಮೇಲೆ ಬಿದ್ದಿದೆ. ಈ ಕೇಬಲನ್ನು ಆಟವಾಡುವಾಗ ಬಾಲಕಿ ಮುಟ್ಟಿದ್ದು, ಇದರಿಂದಾಗಿ ವಿದ್ಯುತ್ ತಗುಲಿ ಮೃತಪಟ್ಟಿದೆ ಎನ್ನಲಾಗಿದೆ.
    ಘಟನೆ ಬೆಳಿಗ್ಗೆ ಸುಮಾರು ೯.೩೦ರ ಸಮಯದಲ್ಲಿ ನಡೆದಿದ್ದು, ವಿದ್ಯುತ್ ತಗುಲಿ ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕಿ ಮೃತಪಟ್ಟಿದ್ದು, ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋವಿಡ್ ೪ನೇ ಅಲೆ : ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಆರೋಗ್ಯದ ಬಗ್ಗೆ ಮುನ್ನಚ್ಚರಿಕೆ ವಹಿಸಿ

ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾನವಾಡಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಭೇಟಿ ನೀಡಿ ಕೂಲಿ ಕಾರ್ಮಿಕರೊಂದಿಗೆ  ದುಡಿಯೋಣ ಬಾ...! ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
    ಭದ್ರಾವತಿ, ಏ. ೨೯: ಕೋವಿಡ್ ೪ನೇ ಅಲೆ ಹಿನ್ನಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿವಹಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸಲಹೆ ನೀಡಿದರು.
    ಅವರು ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾನವಾಡಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕಾರ್ಮಿಕರೊಂದಿಗೆ  ದುಡಿಯೋಣ ಬಾ...! ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೂಲಿ ಕಾರ್ಮಿಕರು ಕೋವಿಡ್ ೪ನೇ ಅಲೆ ಹಿನ್ನಲೆಯಲ್ಲಿ ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಮುನ್ನಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪಿ.ಎಂ ಕಿಸಾನ್ ಯೋಜನಾ ಕ್ರೆಡಿಟ್ ಕಾರ್ಡ್ ಕುರಿತು ಮಾಹಿತಿ ನೀಡಿ ಸ್ಥಳದಲ್ಲಿಯೇ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಉದ್ಯೋಗ ಖಾತ್ರಿ ಚೀಟಿಯನ್ನು ವಿತರಿಸಿದರು.
    ದನದ ಕೊಟ್ಟಿಗೆ,  ಕುರಿ ಶೆಡ್, ಅಡಕೆ ಸಸಿ ನೆಡುವುದು, ಬಚ್ಚಲು ಗುಂಡಿ ನಿರ್ಮಾಣ ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಸಲಹೆ ವ್ಯಕ್ತಪಡಿಸಿದರು.
  ತಾಲೂಕು ಪಂಚಾಯಿತಿ ತಾಂತ್ರಿಕ ಸಹಾಯಕಿ ಆಶಾ, ಗ್ರಾಮ ಪಂಚಾಯಿತಿ ಗಣಕಯಂತ್ರ ನಿರ್ವಾಹಕ  ಆಲಿ, ಎಸ್‌ಡಿಎ ಬಾಸ್ಕರ್, ಡಿಇಓ ಬೈರೇಶ್ ಕುಮಾರ್ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.