Saturday, April 30, 2022

ಸ್ವಾಭಿಮಾನದ ಬದುಕಿನ ಪರಿಕಲ್ಪನೆ ಹೊಂದಿದ್ದ ಪ್ರೊ. ಬಿ. ಕೃಷ್ಣಪ್ಪ : ಸತ್ಯ

ಭದ್ರಾವತಿ ರಂಗಪ್ಪ ವೃತ್ತದ ಜೈ ಭೀಮ್ ನಗರದಲ್ಲಿರುವ ದಲಿತ ಸಂಘರ್ಷ ಸಮಿತಿ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೨೫ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಿತಿ ರಾಜ್ಯ ಖಜಾಂಚಿ ಸತ್ಯ ಮಾತನಾಡಿದರು.
    ಭದ್ರಾವತಿ, ಏ. ೩೦: ರಾಜಕೀಯ ಪರಿಕಲ್ಪನೆ ಮೂಲಕ ರಾಜ್ಯದಲ್ಲಿ ಶೋಷಿತರು, ದಲಿತರಿಗೆ ಸ್ವಾಭಿಮಾನದ ಬದುಕು ರೂಪಿಸಿಕೊಡುವ ಚಿಂತನೆಯನ್ನು ಪ್ರೊ. ಬಿ. ಕೃಷ್ಣಪ್ಪ ಹೊಂದಿದ್ದರು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಹೇಳಿದರು.
    ಅವರು ಶನಿವಾರ ನಗರದ ರಂಗಪ್ಪ ವೃತ್ತದ ಜೈ ಭೀಮ್ ನಗರದಲ್ಲಿರುವ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೨೫ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಜೊತೆಗೆ ರಾಜ್ಯದಲ್ಲಿ ದಲಿತ ಚಳುವಳಿ ಹುಟ್ಟು ಹಾಕಿದ ಪ್ರೊ. ಬಿ. ಕೃಷ್ಣಪ್ಪನವರು ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದ್ದರು. ದಲಿತರು, ಶೋಷಿತರ ಪರವಾಗಿ ರಾಜ್ಯದೆಲ್ಲೆಡೆ ಹೋರಾಟ ನಡೆಸುವ ಜೊತೆಗೆ ಅವರಿಗೆ ಉತ್ತಮ ಭವಿಷ್ಯ ರೂಪಿಸಿಕೊಡುವ ಪರಿಕಲ್ಪನೆ ಹೊಂದಿದ್ದರು. ದಲಿತರು, ಶೋಷಿತರು ಸಹ ರಾಜಕೀಯ ಸ್ಥಾನಮಾನ ಹೊಂದಲು ರಾಜಕೀಯ ಪಕ್ಷದ ಅವಶ್ಯಕತೆ ಇದೆ ಎಂಬುದನ್ನು ಮನಗಂಡಿದ್ದರು ಎಂದರು.
    ಬಿ. ಕೃಷ್ಣಪ್ಪನವರು ಇಂದಿಗೂ ನಮ್ಮೆಲ್ಲರಿಗೂ ಹೋರಾಟದ ದಾರಿದೀಪವಾಗಿದ್ದಾರೆ. ಇವರ ಹೋರಾಟದ ಸ್ಪೂರ್ತಿಯಿಂದಾಗಿ ಹಲವು ಹೋರಾಟಗಳಲ್ಲಿ ನ್ಯಾಯ ಲಭಿಸಿದೆ. ಮುಂದಿನ ದಿನಗಳಲ್ಲೂ ಇವರ ಆಶಯದಂತೆ ನಾವೆಲ್ಲರೂ ನಡೆಯಬೇಕಾಗಿದೆ ಎಂದರು.
    ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಈಶ್ವರಪ್ಪ ಇನ್ನಿತರರು ಪಾಲ್ಗೊಂಡು ಮಾತನಾಡಿದರು. ಪ್ರಮುಖರಾದ ಸಿ. ಜಯಪ್ಪ, ಶಾಂತಿ, ಎನ್. ಗೋವಿಂದ, ವೆಂಕಟೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment