ವಿವಿಧ ಕ್ಷೇತ್ರಗಳ ಗಣ್ಯರಿಗೆ, ದಾನಿಗಳಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು
ಭದ್ರಾವತಿ ಕಾಗದನಗರದ ಕಾರ್ಮಿಕ ಸಂತ ಜೋಸೆಫರ ದೇವಾಲಯದ ಸುವರ್ಣ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಭದ್ರಾವತಿ, ಏ. ೨೯: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಆರಂಭಗೊಂಡ ನಂತರ ಕಾಗದನಗರ ವ್ಯಾಪ್ತಿಯ ನಗರಾಡಳಿತ ಪ್ರದೇಶದಲ್ಲಿ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ನಿರ್ಮಿಸಿಕೊಂಡಿದ್ದ ಕಾರ್ಮಿಕ ಸಂತ ಜೋಸೆಫರ ದೇವಾಲಯ ಇದೀಗ ೫೦ ವರ್ಷಗಳನ್ನು ಪೂರೈಸಿದ್ದು, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.
ಕಾಗದನಗರ ವ್ಯಾಪ್ತಿಯ ಸುತ್ತಮುತ್ತಲಿನ ಹಾಗು ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ಈ ದೇವಾಲಯದಲ್ಲಿ ತಮ್ಮ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬರುತ್ತಿದ್ದರು. ಕಳೆದ ಸುಮಾರು ೭ ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿದ್ದು, ಕಾರ್ಮಿಕ ಕುಟುಂಬಗಳು ಬೇರೆಡೆಗೆ ಸ್ಥಳಾಂತರಗೊಂಡಿವೆ. ಈ ಹಿನ್ನಲೆಯಲ್ಲಿ ಈ ವ್ಯಾಪ್ತಿಯಲ್ಲಿ ಇದೀಗ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ಅಲ್ಪ ಪ್ರಮಾಣದಲ್ಲಿದ್ದು, ಆದರೂ ಸಹ ದೇವಾಲಯದ ಸುವರ್ಣ ಮಹೋತ್ಸವ ಅದ್ದೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಶುಕ್ರವಾರ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರಿಗೆ, ದಾನಿಗಳಿಗೆ ಸನ್ಮಾನ ಹಾಗು ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಹೋತ್ಸವ ೩ ದಿನಗಳ ಕಾಲ ಜರುಗಲಿದೆ. ಮೇ.೧ರಂದು ಕಾರ್ಮಿಕ ಸಂತ ಜೋಸೆಫರ ಉತ್ಸವ ಮೆರವಣಿಗೆಯೊಂದಿಗೆ ಮಹೋತ್ಸವ ಅಂತ್ಯಗೊಳ್ಳಲಿದೆ.
ದೇವಾಲಯದ ಧರ್ಮ ಗುರು ಫಾದರ್ ಡಾಮಿನಿಕ್ ಕ್ರಿಸ್ತುರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರೇಹಳ್ಳಿ ಸಂತ ಅಂತೋಣಿಯವರ ದೇವಾಲಯದ ಧರ್ಮ ಗುರು ಫಾದರ್ ರಿಚರ್ಡ್ ಅನಿಲ್ ಡಿಸೋಜಾ, ಉಜ್ಜನಿಪುರ ಡಾನ್ ಬೋಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ಆರೋಗ್ಯ ರಾಜ್ ಹಾಗು ಪ್ರಾಂಶುಪಾಲ ಫಾದರ್ ಜೋಮಿ, ಕ್ರೈಸ್ತ ಸಮುದಾಯದ ಮುಖಂಡ ಸೆಲ್ವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಚಿತ್ರ: ಡಿ೨೯-ಬಿಡಿವಿಟಿ೨
ಭದ್ರಾವತಿ ಕಾಗದನಗರದ ಕಾರ್ಮಿಕ ಸಂತ ಜೋಸೆಫರ ದೇವಾಲಯದ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಶುಕ್ರವಾರ ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
No comments:
Post a Comment