Saturday, October 22, 2022

ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್‌ಗೆ ಕರವೇ ಅಭಿನಂದನೆ

ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ನೂತನ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದಿಸಲಾಯಿತು.
    ಭದ್ರಾವತಿ, ಅ. ೨೨: ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ನೂತನ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದಿಸಲಾಯಿತು.
    ಜಿಲ್ಲೆಯ ಹಲವು ಸಮಸ್ಯೆಗಳ ಕುರಿತು ಚರ್ಚಿಸಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಲಾಯಿತು.  ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ, ರಾಜ್ಯ ಕಾರ್ಯದರ್ಶಿ ಮಂಜುನಾಥ್ ಕೋಟ್ಯಾನ್, ಯುವ ಘಟಕದ ಜಿಲ್ಲಾಧ್ಯಕ್ಷ ಧನಂಜಯ, ಜಿಲ್ಲಾ ಸಂಚಾಲಕ ಪಡುವಳ್ಳಿ ಹರ್ಷೇಂದ್ರ ಕುಮಾರ್, ಭದ್ರಾವತಿ ತಾಲ್ಲೂಕು ಅಧ್ಯಕ್ಷ ಎಂ. ಪರಮೇಶ್ವರ್. ಸಂಘಟನಾ ಕಾರ್ಯದರ್ಶಿ ಎಚ್. ರಾಮಕೃಷ್ಣ ಹಾಗೂ ಕುಮಾರ್, ಯುವ ಘಟಕದ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷ ಕೆ. ಮನು, ಗಾಜನೂರು ರಘು, ಖಾದರ್, ಸುನಿಲ್, ಚಂದ್ರಪ್ಪ, ದಿಲೀಪ್, ಗಂಗಾಧರ್ ಸೇರಿದಂತೆ ಜಿಲ್ಲಾ ಹಾಗು ತಾಲೂಕು ಘಟಕದ ಹಲವು ಮುಖಂಡರು ಉಪಸ್ಥಿತರಿದ್ದರು.

ಕಾರ್ಮಿಕ ಇಲಾಖೆಯಿಂದ ೬ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್

ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್‌ಪಾಸ್ ನೀಡಲಾಗುತ್ತಿದ್ದು, ಭದ್ರಾವತಿ ತಾಲೂಕಿನ ೬ ಮಂದಿ ಫಲಾನುಭವಿಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಬಸ್‌ಪಾಸ್ ವಿತರಿಸಿದರು.
    ಭದ್ರಾವತಿ, ಅ. ೨೨: ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್‌ಪಾಸ್ ನೀಡಲಾಗುತ್ತಿದ್ದು, ತಾಲೂಕಿನಲ್ಲಿ ೬ ಜನರಿಗೆ ಮೊದಲ ಬಾರಿಗೆ ಬಸ್‌ಪಾಸ್ ಲಭಿಸಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಫಲಾನುಭವಿಗಳಿಗೆ ಬಸ್‌ಪಾಸ್‌ಗಳನ್ನು ವಿತರಿಸಿದರು. ರಾಜ್ಯಾದ್ಯಂತ ಸುಮಾರು ೧ ಲಕ್ಷ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್ ನೀಡಲು ಸರ್ಕಾರ ಉದ್ದೇಶಿಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿಯೇ ೧.೨೫ ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಕಾರ್ಮಿಕರು ತಮ್ಮ ಗುರುತಿನ ಚೀಟಿ ಹಾಗು ಆಧಾರ್ ಕಾರ್ಡ್‌ನೊಂದಿಗೆ ಆನ್‌ಲೈನ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಿ ಬಸ್‌ಪಾಸ್ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ. ಇದೀಗ ತಾಲೂಕಿನಲ್ಲಿ ಕೇವಲ ೬ ಮಂದಿಗೆ ಮಾತ್ರ ಬಸ್‌ಪಾಸ್ ಲಭಿಸಿದೆ.
    ಕೆಎಸ್‌ಆರ್‌ಟಿಸಿ ಭದ್ರಾವತಿ ಘಟಕದ ವ್ಯವಸ್ಥಾಪಕಿ ಅಂಬಿಕಾ ಸುದೇಂದ್ರ, ಕಾಂಗ್ರೆಸ್ ಮುಖಂಡ ಅಮೀರ್‌ಜಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೧೫೦ಕ್ಕೂ ಹೆಚ್ಚು ಮಂದಿಗೆ ಉಚಿತ ಆರೋಗ್ಯ ತಪಾಸಣೆ

    ಭದ್ರಾವತಿ, ಅ. ೨೨ : ನಗರದ ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ಶಿವಮೊಗ್ಗ ನಂಜಪ್ಪ ಮಲ್ಟಿ ಸ್ಪೆಷಾಲಿಟಿ ಹಾಗು ನಂಜಪ್ಪ ಲೈಫ್‌ಕೇರ್ ಸಹಕಾರದೊಂದಿಗೆ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಹೃದ್ರೋಗ, ಮಧುಮೇಹ ಮತ್ತು ರಕ್ತದೊತ್ತಡ ಸಂಬಂಧಿಸಿದ ತಪಾಸಣಾ ಶಿಬಿರದಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಸದುಪಯೋಗಪಡೆದುಕೊಂಡರು.  
    ಉಂಬ್ಳೆಬೈಲು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಬಿರದಲ್ಲಿ ನುರಿತ ವೈದ್ಯರು, ಸಿಬ್ಬಂದಿಗಳನ್ನೊಳಗೊಂಡ ೨೩ ಜನರ ತಂಡ ತಪಾಸಣೆ ನಡೆಸಿತು. ಬೆಳಿಗ್ಗೆ ೯.೩೦ರಿಂದ ಆರಂಭಗೊಂಡ ಶಿಬಿರ ಸಂಜೆ ೪ರವರೆಗೂ ನಡೆಯಿತು.
    ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್, ಕಾರ್ಯದರ್ಶಿ ನಾಗರಾಜ್ ಎಂ. ಶೇಟ್, ಖಜಾಂಚಿ ದರ್ಶನ್, ಪ್ರಮುಖರಾದ ಶಿವರುದ್ರಯ್ಯ, ಹೆಬ್ಬಂಡಿ ನಾಗರಾಜ್, ಎಲ್. ದೇವರಾಜ್ ಸೇರಿದಂತೆ ಕ್ಲಬ್ ಪ್ರಮುಖರು ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ಶಿವಮೊಗ್ಗ ನಂಜಪ್ಪ ಮಲ್ಟಿ ಸ್ಪೆಷಾಲಿಟಿ ಹಾಗು ನಂಜಪ್ಪ ಲೈಫ್‌ಕೇರ್ ಸಹಕಾರದೊಂದಿಗೆ ಶನಿವಾರ ಉಚಿತ ಹೃದ್ರೋಗ, ಮಧುಮೇಹ ಮತ್ತು ರಕ್ತದೊತ್ತಡ ಸಂಬಂಧಿಸಿದ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

Friday, October 21, 2022

ಅ.೨೩ರಂದು ಅಂಟಿಕೆ-ಪಂಟಿಕೆ ಕಾರ್ಯಕ್ರಮ

    ಭದ್ರಾವತಿ, ಅ. ೨೧: ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ವತಿಯಿಂದ ಈ ಬಾರಿ ಸಹ ಅ.೨೩ರಂದು ಅಂಟಿಕೆ-ಪಂಟಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
    ಕಣ್ಮರೆಯಾಗುತ್ತಿರುವ ಮಲೆನಾಡಿನ ಜಾನಪದ ಸಾಂಸ್ಕೃತಿಕ ಕಲೆ ಅಂಟಿಕೆ-ಪಂಟಿಕೆಯನ್ನು ರಕ್ಷಿಸಿ ಬೆಳೆಸುವ ಉದ್ದೇಶದಿಂದ ಮನೆ-ಮನೆಗೆ ಜ್ಯೋತಿ ಹೊತ್ತೊಯ್ಯುವ ಕಾರ್ಯಕ್ರಮ ನಡೆಯಲಿದೆ.
    ಅ.೨೩ರಂದು ಸಂಜೆ ೬ ಗಂಟೆಗೆ ತೀರ್ಥಹಳ್ಳಿ ತಾಲೂಕಿನ ಸುರೇಶ್ ಅಂಟಿಕೆ-ಪಂಟಿಕೆ ಕಲಾತಂಡದವರಿಂದ ನ್ಯೂಟೌನ್ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಜ್ಯೋತಿ ಆರಂಭಗೊಳ್ಳಲಿದ್ದು, ನ್ಯೂಟೌನ್, ಜನ್ನಾಪುರ, ಸಿದ್ದಾರೂಢ ನಗರ, ಹಳೇನಗರ, ಗಾಂಧಿನಗರ, ಬೊಮ್ಮನಕಟ್ಟೆ ಹಾಗು ಹಿರಿಯೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದ ಸುಮಾರು ೪೦ಕ್ಕೂ ಹೆಚ್ಚು ಮನೆಗಳಿಗೆ ತೆರಳಿಲಿದೆ.
    ಜ್ಯೋತಿ ಮನೆ ಬಾಗಿಲಿಗೆ ತೆರಳಿದ ಸಂದರ್ಭದಲ್ಲಿ ಧಾರ್ಮಿಕ ಭಕ್ತಿಭಾವದ ಜಾನಪದ ಗೀತೆಗಳ ಮೂಲಕ ಮನೆಯ ಕುಟುಂಬಸ್ಥರನ್ನು ಆಹ್ವಾನಿಸಲಾಗುವುದು. ನಂತರ ಕುಟುಂಬಸ್ಥರು ಜ್ಯೋತಿಯನ್ನು ಸ್ವಾಗತಿಸಿ ಜ್ಯೋತಿಗೆ ಎಣ್ಣೆ ಸುರಿದು ಧವನ-ಧಾನ್ಯ ನೀಡಿ ದೇವರನ್ನು ಬೇಡಿ ತಮ್ಮ ಮನೆಯ ಜ್ಯೋತಿಯನ್ನು ಹೊತ್ತಿಸಿ ಬೀಳ್ಕೊಡುತ್ತಾರೆ.
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಪರಿಷತ್ ಕಾರ್ಯದರ್ಶಿ ಬಿ.ಎಲ್ ಮೋಹನ್ ಕುಮಾರ್ ಕೋರಿದ್ದಾರೆ. 

೧೬೦೪ನೇ ಮದ್ಯವರ್ಜನ ಶಿಬಿರ : ನವಜೀವನಕ್ಕೆ ಕಾಲಿಟ್ಟ ೫೭ ಶಿಬಿರಾರ್ಥಿಗಳು

    ಭದ್ರಾವತಿ, ಅ. ೨೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಹಳೇನಗರ ವಲಯ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಆರಕ್ಷಕ ಠಾಣೆ, ಪತ್ರಕರ್ತರ ಸಂಘ ಹಾಗು ನವಜೀವನ ಸಮಿತಿ ಮತ್ತು ಇನ್ನಿತರ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಲೋಯರ್ ಹುತ್ತಾ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ಸುಮಾರು ಒಂದು ವಾರ ಕಾಲ ಹಮ್ಮಿಕೊಳ್ಳಲಾಗಿದ್ದ ೧೬೦೪ನೇ ಮದ್ಯವರ್ಜನ ಶಿಬಿರ ಶುಕ್ರವಾರ ಮುಕ್ತಾಯಗೊಂಡಿತು.
    ಸುಮಾರು ೫೭ ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಪ್ರತಿ ದಿನ ನವಜೀವನ ಸಮಿತಿ ಸದಸ್ಯರ ಅನಿಸಿಕೆ, ಗುಂಪು ಸಲಹೆ, ಕೌಟುಂಬಿಕ ಸಲಹೆ, ಮಾಹಿತಿ ಮಾಗದರ್ಶನ, ಸಾಂಸ್ಕೃತಿಕ ಹಾಗು ಭಜನಾ ಕಾರ್ಯಕ್ರಮಗಳು, ಧ್ಯಾನ, ಯೋಗ, ಆರೋಗ್ಯ ತಪಾಸಣೆ ಸೇರಿಂದತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.  ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶಿಬಿರದ ಆಯೋಜಕರಿಗೆ ಹಾಗು ಶಿಬಿರ ಯಶಸ್ವಿಗೊಳ್ಳಲು ಕಾರಣಕರ್ತರಾದವರಿಗೆ ಕೃತಜ್ಞತೆ ಸಲ್ಲಿಸಿದರು.
    ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಅನಂದಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಪೌರಾಯುಕ್ತ ಮನುಕುಮಾರ್, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಕೆ.ಎನ್ ಭೈರಪ್ಪಗೌಡ, ಅಧ್ಯಕ್ಷ ಆರ್. ಕರುಣಾಮೂರ್ತಿ, ನ್ಯಾಯವಾದಿ ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಪಾಲಾಕ್ಷಪ್ಪ ಮತ್ತು ಜಯರಾಂ ಗೊಂದಿ, ಕಾವೇರಮ್ಮ ಹಾಗು ಶಿಬಿರಾಧಿಕಾರಿಗಳು, ಮೇಲ್ವಿಚಾರಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಗರಸಭೆ ಮಾಜಿ ಉಪಾಧ್ಯಕ್ಷೆ ಮಹಾದೇವಿ ಸಂಗಡಿಗರು ಪ್ರಾರ್ಥಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಯೋಜನಾಧಿಕಾರಿ ವೈ. ಪ್ರಕಾಶ್ ನಾಯ್ಕ ಸ್ವಾಗತಿಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಭದ್ರಾವತಿ ಲೋಯರ್ ಹುತ್ತಾ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ಸುಮಾರು ಒಂದು ವಾರ ಕಾಲ ಹಮ್ಮಿಕೊಳ್ಳಲಾಗಿದ್ದ ೧೬೦೪ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

Thursday, October 20, 2022

ಹೆಣ್ಣು ಮಕ್ಕಳ ಸಬಲಿಕರಣಕ್ಕೆ ಎಲ್ಲರೂ ಕೈಜೋಡಿಸಿ : ಟಿ. ಮಲ್ಲಿಕಾರ್ಜುನ್

ಭದ್ರಾವತಿ ಸಮೀಪದ ನಿದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಮಾಚೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೩೫ನೇ ಶ್ರಮದಾನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಬಣ್ಣ ಬಳಿಯುವ ಮೂಲಕ ಚಾಲನೆ ನೀಡಿದರು.
    ಭದ್ರಾವತಿ, ಅ. ೨೦: ಹೆಣ್ಣು ಮಕ್ಕಳು ಈ ದೇಶದ ಸಂಸ್ಕೃತಿಯ ಪ್ರತೀಕ ಅವರನ್ನು ಸಬಲಿಕರಣಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ್ ಹೇಳಿದರು.
    ಅವರು ಇಲ್ಲಿಗೆ ಸಮೀಪದ ನಿದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಮಾಚೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೩೫ನೇ ಶ್ರಮದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಹೆಣ್ಣು ಮಕ್ಕಳ ಭವಿಷ್ಯ ಉಜ್ವಲಗೊಳ್ಳಬೇಕು. ಈ ಹಿನ್ನಲೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದರು.
    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಉತ್ತಮ ಪರಿಸರ ರೂಪಿಸಿಕೊಳ್ಳಬೇಕು. ಪರಿಸರ ಪ್ರೇಮ ತಂಡದ ವತಿಯಿಂದ ಈ ವ್ಯಾಪ್ತಿಯಲ್ಲಿ ಜನಿಸಿದ ಹೆಣ್ಣು ಮಕ್ಕಳ ಹೆಸರಿನಲ್ಲಿ ಶಾಲೆಗೆ ಸುಮಾರು ೨೫ ಸಸಿಗಳನ್ನು ನೀಡಲಾಗಿದೆ. ಪ್ರತಿಯೊಬ್ಬರು ಸರ್ಕಾರಿ ಶಾಲೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿಯೇ ತಮ್ಮ ವಿದ್ಯಾಭ್ಯಾಸ ಮುಂದುವರೆಸಬೇಕೆಂದರು.
    ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಶಾಲ ರಮೇಶ್, ಉಪಾಧ್ಯಕ್ಷೆ ರೀನಾ ಸನತ್, ಪರಿಸರ ಪ್ರೇಮ ತಂಡದ ಅಧ್ಯಕ್ಷ ಶಿವ್ಯಾನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರುದ್ರಮ್ಮ, ಪಿ.ಕೆ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅರಳಿಹಳ್ಳಿ ಅಣ್ಣಪ್ಪ ಉಪನ್ಯಾಸ ನಡೆಸಿಕೊಟ್ಟರು. ಶಾಲೆಯಲ್ಲಿ ಬಣ್ಣ ಬಳಿಯುವ ಹಾಗು ಸ್ವಚ್ಛತಾ ಕಾರ್ಯ ಕೈಗೊಳ್ಳುವ  ಮೂಲಕ ಶ್ರಮದಾನ ನಡೆಸಲಾಯಿತು.
 

ಭದ್ರಾವತಿ ಸಮೀಪದ ನಿದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಮಾಚೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೩೫ನೇ ಶ್ರಮದಾನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಚಾಲನೆ ನೀಡಿದರು.

ಮಡಿವಳ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿಸಿ ಸಾಮಾಜಿಕ ನ್ಯಾಯ ಒದಗಿಸಿ : ಪುರುಷೋತ್ತಮ್

ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರುವೀರ ಮಡಿವಳ ಮಾಚಿದೇವ ಸಂಘದ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿದರು. 
    ಭದ್ರಾವತಿ, ಅ. ೨೦: ಸಮಾಜದಲ್ಲಿ ಅತ್ಯಂತ ಕೆಳಸ್ಥರದಲ್ಲಿರುವ ಇಂದಿಗೂ ಶುಚಿಗೊಳಿಸುವ ಕಾಯಕನಿಷ್ಠೆಯಲ್ಲಿ ತೊಡಗಿರುವ ಮಡಿವಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡುವಂತೆ ಶ್ರೀ ಗುರುವೀರ ಮಡಿವಳ ಮಾಚಿದೇವ ಸಂಘದ ಅಧ್ಯಕ್ಷ ಪುರುಷೋತ್ತಮ್ ಆಗ್ರಹಿಸಿದರು.
  ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ದೇಶದ ೧೮ ರಾಜ್ಯಗಳಲ್ಲಿ ಪರಿಶಿಷ್ಟಜಾತಿಗೆ ಸೇರಿಸಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸದೆ ಕಡೆಗಣಿಸಲಾಗಿದೆ ಎಂದು ದೂರಿದರು.
    ಎಲ್ಲಾ ರಾಜಕೀಯ ಪಕ್ಷಗಳು, ಸರ್ಕಾರಗಳು ಈ ಸಮುದಾಯವನ್ನು ನಿರ್ಲಕ್ಷ್ಯತನದಿಂದ ಕಾಣುವ ಮೂಲಕ ಮಡಿವಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ದಲಿತರ ವಿರೋಧವಿದೆ ಎಂದು ಸಚಿವ ಕೋಟ ಶ್ರಿನಿವಾಸ ಪೂಜಾರಿಯವರು
    ಲಿಖಿತ ಉತ್ತರ ನೀಡುವ ಮೂಲಕ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಸಮಾಜವನ್ನು ಅವಹೇಳನ ಮಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈಗಾಗಲೇ ರಾಜ್ಯ ಸರ್ಕಾರ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿರುವುದನ್ನು ಸಮಾಜ ಸ್ವಾಗತಿಸುತ್ತದೆ. ನಾವು ಯಾವುದೇ ಜಾತಿಯ ವಿರೋಧಿಗಳಲ್ಲ, ಪರಿಶಿಷ್ಟಜಾತಿಗೆ ಒಳಪಡುವ ಎಲ್ಲಾ ಅರ್ಹತೆಗಳನ್ನು ಮಡಿವಳ ಸಮಾಜ ಹೊಂದಿದೆ ಎಂದು ಈ ಹಿಂದೆಯೇ ಅನ್ನಪೂರ್ಣಮ್ಮ ಆಯೋಗ ವರದಿ ನೀಡಿದ್ದರೂ ಜಾರಿಗೊಳಿಸುವಲ್ಲಿ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸರ್ಕಾರ ತಕ್ಷಣ ಜಾತಿವಾರು ಸಮೀಕ್ಷೆ ವರದಿ ಬಿಡುಗಡೆ ಮಾಡಬೇಕು. ಮುಂದಿನ ದಿನಗಳಲ್ಲಿ ಮೀಸಲಾತಿಗೆ ಒತ್ತಾಯಿಸಿ ಸಮುದಾಯದ ಶ್ರೀಗಳ ನೇತೃತ್ವದಲ್ಲಿ ಹೋರಾಟ ಆರಂಭಿಸಲಾಗುವುದು ಎಂದರು.
    ಉಪಾಧ್ಯಕ್ಷರಾದ ಎನ್.ಆರ್ ಮಂಜುನಾಥ್, ಸಿದ್ದಾಪುರ ಮಂಜಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ್, ಖಜಾಂಚಿ ದಿನೇಶ್, ಸಹಕಾರ್ಯದರ್ಶಿಗಳಾದ ಚಲುವಯ್ಯ, ತಿಪ್ಪೇಶ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು