Friday, October 21, 2022

ಅ.೨೩ರಂದು ಅಂಟಿಕೆ-ಪಂಟಿಕೆ ಕಾರ್ಯಕ್ರಮ

    ಭದ್ರಾವತಿ, ಅ. ೨೧: ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ವತಿಯಿಂದ ಈ ಬಾರಿ ಸಹ ಅ.೨೩ರಂದು ಅಂಟಿಕೆ-ಪಂಟಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
    ಕಣ್ಮರೆಯಾಗುತ್ತಿರುವ ಮಲೆನಾಡಿನ ಜಾನಪದ ಸಾಂಸ್ಕೃತಿಕ ಕಲೆ ಅಂಟಿಕೆ-ಪಂಟಿಕೆಯನ್ನು ರಕ್ಷಿಸಿ ಬೆಳೆಸುವ ಉದ್ದೇಶದಿಂದ ಮನೆ-ಮನೆಗೆ ಜ್ಯೋತಿ ಹೊತ್ತೊಯ್ಯುವ ಕಾರ್ಯಕ್ರಮ ನಡೆಯಲಿದೆ.
    ಅ.೨೩ರಂದು ಸಂಜೆ ೬ ಗಂಟೆಗೆ ತೀರ್ಥಹಳ್ಳಿ ತಾಲೂಕಿನ ಸುರೇಶ್ ಅಂಟಿಕೆ-ಪಂಟಿಕೆ ಕಲಾತಂಡದವರಿಂದ ನ್ಯೂಟೌನ್ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಜ್ಯೋತಿ ಆರಂಭಗೊಳ್ಳಲಿದ್ದು, ನ್ಯೂಟೌನ್, ಜನ್ನಾಪುರ, ಸಿದ್ದಾರೂಢ ನಗರ, ಹಳೇನಗರ, ಗಾಂಧಿನಗರ, ಬೊಮ್ಮನಕಟ್ಟೆ ಹಾಗು ಹಿರಿಯೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದ ಸುಮಾರು ೪೦ಕ್ಕೂ ಹೆಚ್ಚು ಮನೆಗಳಿಗೆ ತೆರಳಿಲಿದೆ.
    ಜ್ಯೋತಿ ಮನೆ ಬಾಗಿಲಿಗೆ ತೆರಳಿದ ಸಂದರ್ಭದಲ್ಲಿ ಧಾರ್ಮಿಕ ಭಕ್ತಿಭಾವದ ಜಾನಪದ ಗೀತೆಗಳ ಮೂಲಕ ಮನೆಯ ಕುಟುಂಬಸ್ಥರನ್ನು ಆಹ್ವಾನಿಸಲಾಗುವುದು. ನಂತರ ಕುಟುಂಬಸ್ಥರು ಜ್ಯೋತಿಯನ್ನು ಸ್ವಾಗತಿಸಿ ಜ್ಯೋತಿಗೆ ಎಣ್ಣೆ ಸುರಿದು ಧವನ-ಧಾನ್ಯ ನೀಡಿ ದೇವರನ್ನು ಬೇಡಿ ತಮ್ಮ ಮನೆಯ ಜ್ಯೋತಿಯನ್ನು ಹೊತ್ತಿಸಿ ಬೀಳ್ಕೊಡುತ್ತಾರೆ.
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಪರಿಷತ್ ಕಾರ್ಯದರ್ಶಿ ಬಿ.ಎಲ್ ಮೋಹನ್ ಕುಮಾರ್ ಕೋರಿದ್ದಾರೆ. 

No comments:

Post a Comment