Wednesday, April 19, 2023

ಓಸಿ, ಮಟ್ಕಾ ಜೂಜಾಟ : ಪ್ರಕರಣ ದಾಖಲು


    ಭದ್ರಾವತಿ, ಏ. ೧೯: ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಮನೆಯೊಂದರ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಓಸಿ, ಮಟ್ಕಾ ಜೂಜಾಟ ಸಂಬಂಧ ಪ್ರಕರಣ ದಾಖಲಾಗಿದೆ.
    ಹಣ ಪಣವಾಗಿ ಕಟ್ಟಿಸಿಕೊಂಡು ಒಂದು ಚೀಟಿಯಲ್ಲಿ ಓ.ಸಿ ಅಂಕೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ವಾಹನ ಹಿಂದಿಕ್ಕಲು ಅಪಘಾತ : ದೂರು ದಾಖಲು

    ಭದ್ರಾವತಿ, ಏ. ೧೯ : ಟಾಟಾ ಯೋಧ ಗೂಡ್ಸ್ ವಾಹನ ಚಾಲಕ ಮುಂದೆ ಚಲಿಸುತಿದ್ದ ವಾಹನ ಹಿಂದಿಕ್ಕಲು(ಓವರ್‌ಟೇಕ್) ಹೋಗಿ ಮುಂದೆ ಬರುತ್ತಿದ್ದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವ ಘಟನೆ ನಡೆದಿದೆ.
    ನಗರದ ಬೈಪಾಸ್ ರಸ್ತೆಯಲ್ಲಿ ಏ.೧೫ರಂದು ಸಂಜೆ ೫ ಗಂಟೆ ಸಮಯದಲ್ಲಿ ಟಾಟಾ ಯೋಧ ಗೂಡ್ಸ್ ವಾಹನ ಚಾಲಕ ಗಿರೀಶ್ ಅಪಘಾತಪಡಿಸಿದ್ದು, ವಾಹನದಲ್ಲಿ ಉಳಿತುಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡಿದ್ದು, ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ವಾಹನಗಳು ಜಖಂಗೊಂಡಿವೆ. ಈ ಸಂಬಂಧ ವರಣ್ ಎಂಬುವರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Tuesday, April 18, 2023

ಅಪ್ಪಾಜಿಯವರ ಅಭಿವೃದ್ಧಿ ಕಾರ್ಯಗಳ ಮುಂದುವರೆದ ಭಾಗ ನಾನು : ಶಾರದ ಅಪ್ಪಾಜಿ

ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದು, ಗೆಲುವು ಖಚಿತ

ಭದ್ರಾವತಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ ನಂತರ ಶಾರದ ಅಪ್ಪಾಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಏ. ೧೮ : ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿರುವ ಎಂ.ಜೆ ಅಪ್ಪಾಜಿಯವರ ದಾರಿಯಲ್ಲಿ ನಾನು ಸಹ ಮುನ್ನಡೆಯುತ್ತೇನೆ. ಅವರ ಅಭಿವೃದ್ಧಿ ಕಾರ್ಯಗಳ ಮುಂದುವರೆದ ಭಾಗವಾಗಿದ್ದೇನೆಂದು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಹೇಳಿದರು.
    ಅವರು ಮಂಗಳವಾರ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿದ ನಂತರ ಕ್ಷೇತ್ರದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಜಾರಿಗೆ ತಂದಿರುವ ಜನಪರ ಯೋಜನೆಗಳು ಹಾಗು ಕ್ಷೇತ್ರದಲ್ಲಿ ಎಂ.ಜೆ ಅಪ್ಪಾಜಿಯವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತಯಾಚನೆ ನಡೆಸಲಾಗುತ್ತಿದೆ. ಅಪ್ಪಾಜಿಯವರು ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿರದೆ ಎಲ್ಲರ ಪರವಾಗಿದ್ದರು. ಅವರ ದಾರಿಯಲ್ಲಿ ನಾನು ಸಹ ಸಾಗುತ್ತಿದ್ದೇನೆ ಎಂದರು.
    ಮುಂದಿನ ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ಜೊತೆಗೆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತ್ಯೇಕವಾಗಿ ಪ್ರಣಾಳಿಕೆ ಸಹ ಬಿಡುಗಡೆಗೊಳಿಸಲಾಗುವುದು. ಕ್ಷೇತ್ರದಲ್ಲಿ ಮುಖ್ಯವಾಗಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಉನ್ನತಮಟ್ಟದ ಚಿಕಿತ್ಸೆಗೆ ಅನುಕೂಲವಾಗುವಂತೆ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು. ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವುದು ಸೇರಿದಂತೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಭರವಸೆ ಹೊಂದಿದ್ದೇನೆ. ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದು, ನಾನು ಗೆಲ್ಲುವ ವಿಶ್ವಾಸ ಹೊಂದಿದ್ದೇನೆ ಎಂದರು.  
    ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಕ್ಷೇತ್ರದ ಮತದಾರರು ಅಪ್ಪಾಜಿಯವರನ್ನು ೩ ಬಾರಿ ಆಯ್ಕೆ ಮಾಡಿದ್ದಾರೆ. ಇದೀಗ ಶಾರದ ಅಪ್ಪಾಜಿಯವರನ್ನು ಸಹ ಬೆಂಬಲಿಸುವಂತೆ ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್, ಪ್ರಮುಖರಾದ ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಕರಿಯಪ್ಪ, ಡಿ.ಟಿ ಶ್ರೀಧರ್, ಮೈಲಾರಪ್ಪ, ನಂಜುಂಡೇಗೌಡ, ತಿಮ್ಮೇಗೌಡ, ಅಮೋಸ್, ಮಧುಸೂದನ್, ಮುರ್ತುಜಾಖಾನ್, ಲೋಕೇಶ್ವರ್‌ರಾವ್, ಎನ್. ರಾಮಕೃಷ್ಣ, ಧರ್ಮರಾಜ್, ಎನ್. ಕೃಷ್ಣಪ್ಪ, ನಗರಸಭಾ ಸದಸ್ಯರು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
    ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ :
    ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ನಿರ್ದೇಶಕ, ತರಳಬಾಳು ಯುವ ವೇದಿಕೆ ಅಧ್ಯಕ್ಷ ಎಚ್.ಎಸ್ ಸಂಜೀವಕುಮಾರ್, ಗ್ರಾಮಾಂತರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಝಡ್.ಪಿ ತಬ್ರೇಸ್ ಖಾನ್ ಶಾರದ ಅಪ್ಪಾಜಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಎಎಪಿ, ಆರ್‌ಪಿಐಕೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ :

ಸಂಗಮೇಶ್, ಶಾರದ, ರುದ್ರೇಶ್, ಆನಂದ್ ಸೇರಿದಂತೆ ಒಟ್ಟು ೭ ನಾಮಪತ್ರ ಸಲ್ಲಿಕೆ

ವಿಧಾನಸಭಾ ಚುನಾವಣೆಗೆ ಭದ್ರಾವತಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ೬ನೇ ಬಾರಿಗೆ ನಾಮಪತ್ರ ಸಲ್ಲಿಸಿದರು.
    ಭದ್ರಾವತಿ, ಏ. ೧೮ : ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮಂಗಳವಾರ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದರು.
    ನ್ಯಾಯವಾದಿ, ಯುವ ಮುಖಂಡ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ನಾಮಪತ್ರ ಸಲ್ಲಿಕೆಗೂ ಮೊದಲು ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಅಂಬೇಡ್ಕರ್ ವೃತ್ತದಿಂದ ಬೃಹತ್ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಪಕ್ಷದ ಪ್ರಮುಖರಾದ ಪವಿತ್ರ ರಾಮಯ್ಯ, ಡಾ. ಧನಂಜಯ ಸರ್ಜಿ, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಎಚ್.ಸಿ ರಮೇಶ್, ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಸತೀಶ್‌ಗೌಡ ಸೇರಿದಂತೆ ಸ್ಥಳೀಯ ಮುಖಂಡರು,  ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.


ವಿಧಾನಸಭಾ ಚುನಾವಣೆಗೆ ಭದ್ರಾವತಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾರದ ಅಪ್ಪಾಜಿ ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದರು.
        ಬೆಳಿಗ್ಗೆ ಅಭ್ಯರ್ಥಿ ಮಂಗೋಟೆ ರುದ್ರೇಶ್ ತಮ್ಮ ನಿವಾಸದಲ್ಲಿ ತಾಯಿ ರತ್ನಮ್ಮ ಮಂಗೋಟೆ ಮುರಿಗೆಪ್ಪನವರ ಆಶೀರ್ವಾದ ಪಡೆದರು. ಮಧ್ಯಾಹ್ನ ಮಿನಿವಿಧಾನಸೌಧ ತಾಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಪಕ್ಷದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿ. ಆನಂದಕುಮಾರ್, ಪದ್ಮನಾಭ ಉಪಸ್ಥಿತರಿದ್ದರು.
    ಜೆಡಿಎಸ್ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ಸಹ  ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ತಾಲೂಕು ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಂತರ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.
    ಇದಕ್ಕೂ ಬೆಳಿಗ್ಗೆ ಗೋಣಿಬೀಡಿನಲ್ಲಿರುವ ಮಾಜಿ ಶಾಸಕ, ಪತಿ ಎಂ.ಜೆ ಅಪ್ಪಾಜಿಯವರ ಶಕ್ತಿಧಾಮಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ನಗರದ ಅಂಡರ್‌ಬ್ರಿಡ್ಜ್‌ನಲ್ಲಿ ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡಿದರು. ವಿವಿಧೆಡೆ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಿಗೆ ತೆರಳಿ ಪೂಜೆ ಸಲ್ಲಿಸಿದರು.  
    ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಗ್ರಾಮಾಂತರ ಧರ್ಮಕುಮಾರ್, ಅಲ್ಪಸಂಖ್ಯಾತರ ಮುಖಂಡ ಮುರ್ತುಜಾಖಾನ್ ಉಪಸ್ಥಿತರಿದ್ದರು.


ವಿಧಾನಸಭಾ ಚುನಾವಣೆಗೆ ಭದ್ರಾವತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಂಗೋಟೆ ರುದ್ರೇಶ್ ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದರು.
    ಉಳಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಈ ಬಾರಿ ಸರಳವಾಗಿ ನಾಮಪತ್ರ ಸಲ್ಲಿಸಿದರು. ಪಕ್ಷದ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ಪಕ್ಷದ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷೆ ಬಲ್ಕೀಶ್ ಬಾನು ಉಪಸ್ಥಿತರಿದ್ದರು.
    ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದ ಅಭ್ಯರ್ಥಿ ಆನಂದ್(ಮೆಡಿಕಲ್)ರವರು  ಸಹ ಹೆಚ್ಚಿನ ಪ್ರಚಾರವಿಲ್ಲದೆ ಸರಳವಾಗಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ತಾಲೂಕು ಕಛೇರಿಗೆ ಆಗಮಿಸಿದರು.


ವಿಧಾನಸಭಾ ಚುನಾವಣೆಗೆ ಭದ್ರಾವತಿ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆನಂದ್(ಮೆಡಿಕಲ್) ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದರು.
    ಉಳಿದಂತೆ ೨ನೇ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ(ಆರ್‌ಪಿಐಕೆ) ಪಕ್ಷದ ಅಭ್ಯರ್ಥಿಯಾಗಿ ಛಲವಾದಿ ಸಮಾಜದ ಮುಖಂಡ ಪಿ.ಇ ಬಸವರಾಜ ನಾಮಪತ್ರ ಸಲ್ಲಿಸಿದರು.  ಪಕ್ಷೇತರ ಅಭ್ಯರ್ಥಿಗಳಾಗಿ ಅಹಮದ್ ಆಲಿ ಮತ್ತು ನೀಲಂ ನಾಮಪತ್ರ ಸಲ್ಲಿಸಿದರು.

Monday, April 17, 2023

ಏ.೧೮ರಂದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಎಎಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ


    ಭದ್ರಾವತಿ, ಏ. ೧೭ : ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮಂಗಳವಾರ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ನಾಮಪತ್ರ ಸಲ್ಲಿಕೆಗೂ ಮೊದಲು ಬಿಜೆಪಿ ಪಕ್ಷದಿಂದ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
    ನ್ಯಾಯವಾದಿ, ಯುವ ಮುಖಂಡ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ನಾಮಪತ್ರ ಸಲ್ಲಿಕೆಗೂ ಮೊದಲು ಬೆಳಿಗ್ಗೆ ೧೦ ಗಂಟೆಗೆ ನಗರದ ಬಿ.ಎಚ್ ರಸ್ತೆ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
    ಜೆಡಿಎಸ್ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ಸಹ ಬೆಳಿಗ್ಗೆ ಸುಮಾರು ೧೧ ಗಂಟೆಗೆ ನಾಮಪತ್ರ ಸಲ್ಲಿಸಲಿದ್ದು, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
    ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದ ಅಭ್ಯರ್ಥಿ ಆನಂದ್(ಮೆಡಿಕಲ್)ರವರು ಮಧ್ಯಾಹ್ನ ೧೨ ಗಂಟೆ ನಂತರ ನಾಮಪತ್ರ ಸಲ್ಲಿಸಲು ಸಿದ್ದತೆಗಳನ್ನು ಕೈಗೊಂಡಿದ್ದಾರೆ. ಇದಕ್ಕೂ ಮೊದಲು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.
    ಉಳಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಈ ಬಾರಿ ಸರಳವಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದು, ನಾಮಪತ್ರ ಸಲ್ಲಿಸುವ ಸಂಬಂಧ ಹೆಚ್ಚಿನ ಪ್ರಚಾರ ಕೈಗೊಳ್ಳದಿದ್ದರೂ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲುವ ನಿರೀಕ್ಷೆ ಇದೆ.

ಪಕ್ಷೇತರ ಅಭ್ಯರ್ಥಿಯಾಗಿ ಬಿ.ಎನ್ ನಾಗರಾಜ ೨ನೇ ಬಾರಿಗೆ ನಾಮಪತ್ರ ಸಲ್ಲಿಕೆ

ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ೩ನೇ ದಿನವಾದ ಸೋಮವಾರ ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ನಾಗರಾಜ(ಬಿ.ಎನ್ ರಾಜು) ೨ನೇ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
    ಭದ್ರಾವತಿ, ಏ. ೧೭ : ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ೩ನೇ ದಿನವಾದ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ನಾಗರಾಜ(ಬಿ.ಎನ್ ರಾಜು) ೨ನೇ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
    ಮಧ್ಯಾಹ್ನ ಮಿನಿವಿಧಾನಸೌಧ ತಾಲೂಕು ಕಛೇರಿಯಲ್ಲಿ ಬಿ.ಎನ್ ನಾಗರಾಜ ತಾಯಿ ಸರೋಜಮ್ಮ ಹಾಗು ಸಮಿತಿ ಪ್ರಧಾನ ಕಾರ್ಯದರ್ಶಿ ಅಕ್ರಮ್ ಖಾನ್ ಅವರೊಂದಿಗೆ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ ಅವರಿಗೆ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸುರೇಶ್ ಆಚಾರ್ ಉಪಸ್ಥಿತರಿದ್ದರು.
    ಬಿ.ಎನ್ ನಾಗರಾಜ ಬಳಿ ೩೦ ಸಾವಿರ ನಗದು:
    ಸುಮಾರು ೩೦ ವರ್ಷಗಳಿಂದ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ೫೩ ವರ್ಷದ ಬಿ.ಎನ್ ನಾಗರಾಜ(ಬಿ.ಎನ್ ರಾಜು) ಅವರ ಬಳಿ ೩೦ ಸಾವಿರ ನಗದು ಇದ್ದು, ಬ್ಯಾಂಕ್ ಖಾತೆಯಲ್ಲಿ ೧ ಸಾವಿರ ಹಣವಿದೆ. ಯಾವುದೇ ಆಸ್ತಿ ಹೊಂದಿಲ್ಲ. ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದಾರೆ.

Sunday, April 16, 2023

ಹೋರಾಟಗಾರ ಬಿ.ಎನ್ ರಾಜು ಏ.೧೭ರಂದು ನಾಮಪತ್ರ ಸಲ್ಲಿಕೆ

ಬಿ.ಎನ್ ರಾಜು
    ಭದ್ರಾವತಿ, ಏ. ೧೬ : ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
    ಸುಮಾರು ೫೦ ವರ್ಷ ವಯಸ್ಸಿನ ವೇಲೂರು ಶೆಡ್ ನಿವಾಸಿಯಾಗಿರುವ ಬಿ.ಎನ್ ರಾಜು ೨ನೇ ಬಾರಿ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅನ್ಯಾಯದ ವಿರುದ್ಧ, ಶೋಷಿತರ ಪರವಾಗಿ ಸುಮಾರು ೩೦ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.
    ಕಳೆದ ಬಾರಿ ೨೦೧೮ರ ಚುನಾವಣೆಯಲ್ಲಿ ೧೨ನೇ ಸ್ಥಾನ ಕಾಯ್ದುಕೊಂಡಿದ್ದರು. ಇದೀಗ ೨ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಮಿನಿವಿಧಾನಸೌಧ ತಾಲೂಕು ಕಛೇರಿ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.