Saturday, October 19, 2024

ಅ.೨೦, ೨೧ರಂದು ಶ್ರೀ ಅಂಗಾಳ ಪರಮೇಶ್ವರಿ, ಮುನೇಶ್ವರ ಸ್ವಾಮಿ ವಿಗ್ರಹಗಳ ಪ್ರತಿಷ್ಠಾಪನೆ



    ಭದ್ರಾವತಿ: ನಗರದ ಜನ್ನಾಪುರ ಗಣೇಶ್ ಕಾಲೋನಿ, ಹಾಲಪ್ಪ ಶೆಡ್‌ನಲ್ಲಿ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಅ.೨೦ ಮತ್ತು ೨೧ರಂದು ಅಮ್ಮನವರ ಹಾಗು ಮುನೇಶ್ವರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ ಜರುಗಲಿವೆ. 
    ಅ.೨೦ರಂದು ಸಂಜೆ ೫ ಗಂಟೆಗೆ ಮಂಗಳವಾದ್ಯದೊಂದಿಗೆ ಅಮ್ಮನವರ ಹಾಗು ಮುನೇಶ್ವರ ಸ್ವಾಮಿಯವರ ವಿಗ್ರಹಗಳನ್ನು ಹಾಲಪ್ಪಶೆಡ್ ಮುಖಾಂತರ ಸಾಗಿ ಮಲ್ಲೇಶ್ವರ ಸಭಾಭವನ, ಗಣಪತಿ ದೇವಸ್ಥಾನ, ಶ್ರೀರಾಮ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನ, ಕುರುಮಾರಿಯಮ್ಮ ದೇವಸ್ಥಾನ, ಕೂಲಿಬ್ಲಾಕ್ ಶೆಡ್, ಮಾರಿಯಮ್ಮ ದೇವಸ್ಥಾನ, ಬುಳ್ಳಾಪುರ ಮುನೇಶ್ವರ ದೇವಾಲಯ ಮತ್ತು ಸಿದ್ದಾಪುರ ಚೌಡೇಶ್ವರಿ ದೇವಾಲಯದ ಮುಖಾಂತರ ರಾಜಬೀದಿಗಳಲ್ಲಿ ಕರಿವಲಂ(ಗಡಿಪೂಜೆ) ಮಾಡಿ ಬಂದು ದೇವಸ್ಥಾನ ಸೇರುವ ಕಾರ್ಯಕ್ರಮ ಜರುಗಲಿದೆ.  
    ೨೧ರಂದು ಬೆಳಗಿನ ಜಾವ ಗಣಹೋಮ, ಆದಿವಾಸಿ ಹೋಮ, ಕಲಾ ಹೋಮ ನಡೆಯಲಿದ್ದು, ೭.೩೦ಕ್ಕೆ ಮಲ್ಲೇಶ್ವರ ಸಭಾಭವನ ಪಕ್ಕದ ಶ್ರೀ ಈಶ್ವರ ದೇವಾಲಯದಿಂದ ಗಂಗೆ ಪೂಜೆಯನ್ನು ೧೦೧ ಗಂಗೆ ತುಂಬಿದ ಕಲಶಗಳನ್ನು ಹೊತ್ತು ತಂದು ಅಮ್ಮನವರ ಹಾಗು ಮುನೇಶ್ವರ ಸ್ವಾಮಿಯವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ನಂತರ ಕಲಶದ ನೀರಿನಿಂದ ಅಭಿಷೇಕ ನಡೆಯಲಿದೆ. ಅಮ್ಮನವರಿಗೂ ಹಾಗು ಮುನೇಶ್ವರ ಸ್ವಾಮಿಯವರಿಗೂ ಅಲಂಕಾರ ಮಾಡಿ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಂದಿಗೆ ದೇವಾಲಯ ಲೋಕಾರ್ಪಣೆಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಆರ್‌ಎಸ್‌ಎಸ್ ವಿಜಯದಶಮಿ

    ಭದ್ರಾವತಿ: ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಅ.೨೦ರಂದು ಮಧ್ಯಾಹ್ನ ೩.೩೦ಕ್ಕೆ ಪಥಸಂಚಲನ ಹಮ್ಮಿಕೊಳ್ಳಲಾಗಿದೆ. 
    ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪಥಸಂಚಲನ ನಡೆಯಲಿದ್ದು, ಪೂರ್ಣ ಗಣವೇಶದೊಂದಿಗೆ ಸ್ವಯಂ ಸೇವಕರು ಪಾಲ್ಗೊಳ್ಳುವಂತೆ ಕೋರಲಾಗಿದೆ. 

ಅಡಕೆ ಕಳವು

    ಭದ್ರಾವತಿ: ರಾತ್ರೋರಾತ್ರಿ ಮನೆ ಮುಂದೆ ಇಡಲಾಗಿದ್ದ ಸುಮಾರು ೨ ಕ್ವಿಂಟಾಲ್ ಅಡಕೆ ಕಳವು ಮಾಡಿರುವ ಘಟನೆ ತಾಲೂಕಿನ ಸಿದ್ಲಿಪುರ ಗ್ರಾಮದಲ್ಲಿ ನಡೆದಿದೆ. 
    ಅಮಿತ್ ಎಂಬುವವರು ತಮ್ಮ ತೋಟದಲ್ಲಿ ಬೆಳೆದ ಅಡಕೆ ಮಾರಾಟಕ್ಕೆ ಸಿದ್ದಗೊಳಿಸಿ ಒಟ್ಟು ೭ ಚೀಲಗಳಲ್ಲಿ ತುಂಬಿ ಇಡಲಾಗಿದ್ದು, ಈ ಪೈಕಿ ೩ ಚೀಲಗಳು ನಾಪತ್ತೆಯಾಗಿವೆ. ಸುಮಾರು ೨ ಕ್ವಿಂಟಾಲ್ ಅಡಕೆ ಕಳವು ಮಾಡಲಾಗಿದೆ ಎಂದು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  

ಶಾಲೆ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವೆನೆಗೆ ಅವಕಾಶ : ಪ್ರಕರಣ ದಾಖಲು

    ಭದ್ರಾವತಿ : ಶಾಲಾ ಆವರಣ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಕಿರಾಣಿ ಅಂಗಡಿ ವ್ಯಾಪಾರಸ್ಥರೊಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
    ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಹುತ್ತಾ ಕಾಲೋನಿ ಸಹ್ಯಾದ್ರಿ ಶಾಲೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಡಲಾಗಿದ್ದು, ಅ.೧೮ರ ಸಂಜೆ ೬.೧೫ರ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ಗಸ್ತು ಕರ್ತವ್ಯದಲ್ಲಿದ್ದ ನ್ಯೂಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಸಂತೋಷ್ ನಾಯ್ಕ ಸ್ಥಳಕ್ಕೆ ತೆರಳಿ ಪರಿಶೀಲಿಸಿ ನೀಡಿದ ದೂರಿನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಅ.೨೦ರಂದು ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ

    ಭದ್ರಾವತಿ: ತಾಲೂಕಿನ ಸಿರಿಯೂರು ವೀರಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಲಯನ್ಸ್ ಕ್ಲಬ್ ಶುಗರ್ ಟೌನ್ ಹಾಗು ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಅ.೨೦ರಂದು ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. 
    ಸಿರಿಯೂರು ವೀರಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ  ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಶಿಬಿರ ನಡೆಯಲಿದ್ದು, ಹೃದಯ ರೋಗ, ಸ್ತ್ರೀರೋಗ, ಕಿವಿ, ಮೂಗು, ಕಣ್ಣಿನ ತಜ್ಞರು, ಕೀಲು ಮತ್ತು ಮೂಳೆ ತಜ್ಞರು, ಮಕ್ಕಳ ತಜ್ಞರು, ಜನರಲ್ ಮೆಡಿಸನ್, ಜನರಲ್ ಸರ್ಜರಿ, ದಂತ ತಪಾಸಣೆ ಜೊತೆ ಬಿ.ಪಿ, ಡಯಾಬಿಟಿಸ್, ಇ.ಸಿ.ಜಿ ಆರೋಗ್ಯ ತಪಾಸಣೆ ಮಾಡಲಾಗುವುದು. 
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಉಮೇಶ್ ಮೊ:೯೪೪೮೨೧೮೭೦೬ ಅಥವಾ ಜೀವನ್ ಮೊ: ೭೮೪೮೮೫೮೫೪೬ ಅಥವಾ ದರ್ಶನ್ ಮೊ:೭೮೯೨೯೫೨೧೭೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

Friday, October 18, 2024

ಅರಳಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಾಲ್ಮೀಕಿ ಜಯಂತಿ

ಭದ್ರಾವತಿ ತಾಲೂಕಿನ ಅರಳಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಹಾಕವಿ, ರಾಮಾಯಣದ ಕರ್ತೃ, ಮಹಾಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. 
    ಭದ್ರಾವತಿ: ತಾಲೂಕಿನ ಅರಳಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಹಾಕವಿ, ರಾಮಾಯಣದ ಕರ್ತೃ, ಮಹಾಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. 
    ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಮಹಾಕಾವ್ಯ ರಾಮಾಯಣ ರಚಿಸಿ ಜಗತ್ತಿಗೆ ಹಲವು ಆದರ್ಶ ಮೌಲ್ಯಗಳನ್ನು ಸಾರಿದ ಮಹರ್ಷಿ ವಾಲ್ಮೀಕಿ ಅವರ ಸಮನ್ವಯತೆಯ ವಿಚಾರಗಳು ಸರ್ವಕಾಲಕ್ಕೂ ಸತ್ಯವಾದುದು.ಎಂದರು.
ಕಾರ್ಯಕ್ರಮದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಸರ್ಕಾರದ ಉಚಿತ ಲ್ಯಾಪ್‌ಟಾಪ್ ಯೋಜನೆಗೆ ಆಯ್ಕೆಯಾದ ಶಾಲೆಯ ೩ ವಿದ್ಯಾರ್ಥಿಗಳನ್ನು ಹಾಗು ಈ ಯೋಜನೆಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸಿದ ಶಿಕ್ಷಕರನ್ನು ಅಭಿನಂದಿಸಲಾಯಿತು.  
ಪ್ರಭಾರಿ ಮುಖ್ಯ ಶಿಕ್ಷಕ ಎಂ. ದಿವಾಕರ್ ಅಧ್ಯಕ್ಷತೆವಹಿಸಿದ್ದರು.   
     ಎಸ್‌ಡಿಎಂಸಿ ಉಪಾಧ್ಯಕ್ಷ ಸುರೇಶ್ ಹಾಗು ಸದಸ್ಯರು, ಶಿಕ್ಷಕಿ ಜಾನಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಶಿಕ್ಷಕಿಯರಾದ ಮಮತಾ ಸ್ವಾಗತಿಸಿ, ರೇಣುಕಾ ವಂದಿಸಿದರು. ಶಾಂತಪ್ಪ ಕಾರ್ಯಕ್ರಮ ನಿರೂಪಿಸಿದರು. 

ಅ.೧೯ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ: ಮೆಸ್ಕಾಂ ನಗರ ಮತ್ತು ಗ್ರಾಮೀಣ ಉಪವಿಭಾಗಗಳ ವಾಪ್ತಿಯ ಮಾರ್ಗಗಳ ತುರ್ತು ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಅ.೧೯ರ ಶನಿವಾರ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.  
    ಕಾಗದ ನಗರದ ೧ನೇ ವಾರ್ಡ್ ನಿಂದ ೧೦ನೇ ವಾರ್ಡ್‌ವರೆಗೆ ಎಂ.ಪಿ.ಎಂ. ವಸತಿ, ಎಂ.ಪಿ.ಎಂ ಬಡಾವಣೆ, ಆನೆಕೊಪ್ಪ, ಜೆಪಿಎಸ್ ಕಾಲೋನಿ, ಉಜ್ಜನಿಪುರ, ದೊಡ್ಡಗೊಪ್ಪೇನಹಳ್ಳಿ, ಬಾರಂದೂರು, ಮಸರಹಳ್ಳಿ, ಕಾರೇಹಳ್ಳಿ, ಹಡ್ಲಘಟ್ಟ, ಶಿವಪುರ, ಕೆಂಚೇನಹಳ್ಳಿ, ಮಾವಿನಕೆರೆ, ಮಾವಿನಿಕೆರೆ ಕಾಲೋನಿ, ಭೋವಿ ಕಾಲೋನಿ, ಗಂಗೂರು, ದೊಡ್ಡೇರಿ, ಉಕ್ಕುಂದ, ಕೆಂಚಮ್ಮನಹಳ್ಳಿ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.  ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.