Thursday, February 13, 2025

ಶಾಸಕರ ಮೇಲಿನ ಆಪಾದನೆ ಸತ್ಯಕ್ಕೆ ದೂರವಾದದು : ಚನ್ನಪ್ಪ

ಚನ್ನಪ್ಪ 
    ಭದ್ರಾವತಿ :  ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನಬೆಂಬಲ ಸಹಿಸಿಕೊಳ್ಳಲು ಸಾಧ್ಯವಾಗದೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ವಿನಾಕಾರಣ ಮಾದ್ಯಮಗಳ ಮೂಲಕ ಅವರ ವಿರುದ್ಧ ತಪ್ಪು ಸಂದೇಶ ನೀಡುತ್ತಿದ್ದಾರೆಂದು ನಗರಸಭೆ ಸದಸ್ಯ ಚನ್ನಪ್ಪ ಆರೋಪಿಸಿದ್ದಾರೆ. 
    ಶಾಸಕರ ಅಭಿವೃದ್ಧಿಯನ್ನು ಗುರುತಿಸಿ ಕ್ಷೇತ್ರದ ಜನತೆ ಅವರನ್ನು ೪ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಸಜ್ಜನ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಪ್ರತಿ ದಿನ ಜನ ಸೇವೆ ಮಾಡುವುದರ ಜೊತೆಗೆ ಅವರ ಕುಟುಂಬದ ಎಲ್ಲಾ ಸದಸ್ಯರು ಸೇವೆ ಮಾಡುತ್ತಿದ್ದಾರೆ. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿಲ್ಲ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದು ತಿಳಿಸಿದ್ದಾರೆ. 
    ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಇಸ್ಪೀಟ್ ಜೂಜು ನಡೆಸಿದವರು ಯಾರು ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಜೆಡಿಎಸ್ ಶಾಸಕರು ಅಧಿಕಾರದಲ್ಲಿದ್ದಾಗ ಅತಿ ಹೆಚ್ಚು ಅಕ್ರಮ ಚಟುವಟಿಕೆ, ಮರಳು ದಂಧೆ, ಇಸ್ಪೀಟ್ ದಂಧೆ ನಡೆಯುತ್ತಿತ್ತು. ಅದು ಈಗಲೂ ಮುಂದುವರೆಯುವುದು ಬೇಡ ಎಂದು ಶಾಸಕರು ಪೊಲೀಸ್ ಇಲಾಖೆಗೆ ಸ್ಪಷ್ಟ ಸಂದೇಶವನ್ನು ನೀಡಿರುತ್ತಾರೆ. ಅಲ್ಲದೆ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚು ಅನುದಾನ ತರುವ ಮೂಲಕ ರಸ್ತೆ, ಚರಂಡಿ ಸಮುದಾಯ ಭವನಗಳ ನಿರ್ಮಾಣ ಹಾಗೂ ಎಲ್ಲಾ ದೇವಸ್ಥಾನದ ಅಭಿವೃದ್ಧಿಗೂ ಹಾಗು ಎಲ್ಲಾ ಸಮಾಜದ ಅಭಿವೃದ್ಧಿಗೂ ಶ್ರಮಿಸಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ .
    ಕೆಲವು ದಿನಗಳ ಹಿಂದೆ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಲು ದಾಳಿ ನಡೆಸಿದ ಸಂದರ್ಭದಲ್ಲಿ ಯಾರೋ ಶಾಸಕರ ಏಳಿಗೆಯನ್ನು ಸಹಿಸದ ರಾಜಕೀಯ ಶತೃಗಳು ಶಾಸಕರ ಪುತ್ರ  ಬಿ.ಎಸ್ ಬಸವೇಶ್‌ರವರ ಧ್ವನಿಯನ್ನು ತಿರುಚಿ ಮಹಿಳಾ ಅಧಿಕಾರಿಗೆ ಅವ್ಯಾಚ್ಯ ಶಬ್ದದಿಂದ ನಿಂದಿಸಿದ್ದು, ಇದು ಬಸವೇಶ್‌ರವರು ಎಂದು ಮಾದ್ಯಮದಲ್ಲಿ ಹೇಳಿರುವುದು ಸತ್ಯಕ್ಕೆ ದೂರವಾದ ವಿಚಾರ. ಸ್ವತಃ ಆ ಮಹಿಳಾ ಅಧಿಕಾರಿಯೇ ನನಗೆ ನಿಂದಿಸಿ ಮಾತನಾಡಿರುವುದು ಯಾರು ಎಂಬುದು ಗೊತ್ತಿಲ್ಲಾ ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ. ಶಾಸಕರ ಅವದಿಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ಇಸ್ಪೀಟ್, ಓ.ಸಿ ನಡೆದಿಲ್ಲ. ಇದು ಸುಳ್ಳು ಸುದ್ದಿಯನ್ನು ಹಬ್ಬಿಸಲು, ಶಾಸಕರಿಗೆ ಕೆಟ್ಟ ಹಸರು ಬರಲಿ ಎಂದು ಈ ರೀತಿಯ ಕೃತ್ಯ ನಡೆಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಬಿ. ಸಿದ್ದಬಸಪ್ಪ ಆಯ್ಕೆ : ಸನ್ಮಾನ

ಭದ್ರಾವತಿ ಹೊಸ ಸೇತುವೆ ರಸ್ತೆ, ಸಿದ್ದಾರೂಢನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅಧ್ಯಕ್ಷರಾದ ಬಿ. ಸಿದ್ದಬಸಪ್ಪ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
    ಭದ್ರಾವತಿ : ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅಧ್ಯಕ್ಷರಾದ ಬಿ. ಸಿದ್ದಬಸಪ್ಪ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
    ಸಿದ್ದಬಸಪ್ಪ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿದ್ದು, ಇದೀಗ ರಾಜ್ಯ ಉಪಾಧ್ಯಕ್ಷರಾಗಿ ಸಹ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಸಿದ್ದಬಸಪ್ಪರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್. ಕೆ ಮೋಹನ್, ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗು ಶಿಕ್ಷಕರು ಉಪಸ್ಥಿತರಿದ್ದರು. 

ಶಿಕ್ಷಣ ನಿಯಮ ಉಲ್ಲಂಘಿಸಿ ಕೆಲಸಕ್ಕೆ ನೇಮಿಸಿಕೊಂಡು ವಂಚನೆ

ಕ್ರಮಕ್ಕೆ ಆಗ್ರಹಿಸಿ ಫೆ.೧೭ರಂದು ಬಿಇಓ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ 

ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ಮಾತನಾಡಿದರು. 
    ಭದ್ರಾವತಿ : ನೆಪಮಾತ್ರಕ್ಕೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡು ನಂತರ ಅವರನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿರುವ ಜೊತೆಗೆ ಅವರಿಗೆ ನ್ಯಾಯ ಬದ್ಧವಾಗಿ ಸಿಗಬೇಕಾದ ಸೌಲಭ್ಯದಿಂದ ವಂಚಿಸುತ್ತಿರುವ ಘಟನೆ ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ನಡೆಯುತ್ತಿದ್ದು, ಇದನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿ ಫೆ.೧೭ರಂದು ಬೆಳಿಗ್ಗೆ ೧೧ ಗಂಟೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು. 
    ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಉಚಿತ ಶಿಕ್ಷಣ ಕಡ್ಡಾಯ ಮಾಡಿದ್ದರೂ ಸರ್ಕಾರಿ ಶಾಲಾ-ಕಾಲೇಜುಗಳು ದುಸ್ಥಿತಿಗೊಂಡು, ಖಾಸಗಿ ಶಾಲಾ-ಕಾಲೇಜುಗಳು ನಿಯಮ ಮೀರಿ ಕಾನೂನು ಉಲ್ಲಂಘನೆ ಮಾಡುತ್ತಿರುವ ಕ್ರಮ ಸಮಿತಿ ಖಂಡಿಸುತ್ತದೆ ಎಂದರು. 
    ದೇಶದಲ್ಲಿ ಶಿಕ್ಷಣ ವಂಚಿತರಿಗೆ ಕ್ರೈಸ್ತ ಸಮಾಜ ಶಿಕ್ಷಣದ ಸೇವೆ ಮಾಡಿರುವುದು ಅಪಾರವಾದದ್ದು. ದೀನ ದಲಿತರಿಗೆ ಸೇವೆ ಸಲ್ಲಿಸಿದ, ಕುಷ್ಠ ರೋಗಿಗಳ ಸೇವೆ ಮಾಡಿದ ಮದರ್ ತೆರೇಸಾರವರ ಮಾನವೀಯತೆ ಮರೆಯುವಂತದ್ದಲ್ಲ. ಆದರೆ ನಗರದ ಸೆಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ಶಿಕ್ಷಣ ನಿಯಮಗಳನ್ನು ಉಲ್ಲಂಘಸಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಅನ್ಯಾಯ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೈಸ್ಕೂಲ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದರು. 
    ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಸದಸ್ಯರಾದ ವಿನ್ನಿ ಡಿಸೋಜಾ ಕೋಂ ಲಿಗೋರಿಯಾ ಎಂಬುವರು ಕಳೆದ ೧೭ ವರ್ಷಗಳಿಂದ ಸೆಂಟ್ ಚಾರ್ಲ್ಸ್ ಹೈಸ್ಕೂಲ್ ಸಮ್ಮುಖದಲ್ಲಿರುವ ಕರುಣ ಸೇವಾ ಕೇಂದ್ರ ಮತ್ತು ಕರುಣ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಇವರ ಪಿ.ಎಫ್ ಹಣ ಹೈಸ್ಕೂಲ್ ಮತ್ತು ಸೊಸೈಟಿ ಆಫ್ ದ ಸಿಸ್ಟರ್ ಆಫ್ ಎಸ್.ಟಿ ಚಾರ್ಲ್ಸ್ ಹೆಸರಿನಲ್ಲಿ ಶಿವಮೊಗ್ಗದ ಪಿ.ಎಫ್ ಕಛೇರಿಯಲ್ಲಿರುವ ಖಾತೆಗೆ ಜಮಾ ಮಾಡಲಾಗಿದೆ. ಅಲ್ಲದೆ ಇವರ ವೇತನ ಪ್ರತಿ ತಿಂಗಳು ಇವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಕಳೆದ ೫ ವರ್ಷಗಳಿಂದ ಸಿಸ್ಟರ್ ಹೆಲೆನ್ ಮೊರಾಸ್‌ರವರು ಇವರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದು, ಮೂಡುಬಿದರೆಯಲ್ಲಿರುವ ಇವರ ಸ್ವಂತ ಮನೆಯಲ್ಲಿ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದು, ಇದಕ್ಕೆ ಒಪ್ಪದ ಹಿನ್ನಲೆಯಲ್ಲಿ ಇವರ ವಿರುದ್ಧ ಸ್ವಸಹಾಯ ಸಂಘಗಳ ಸದಸ್ಯರಿಗೆ ಸುಳ್ಳು ಸುದ್ದಿಗಳನ್ನು ಹರಡುವ ಜೊತೆಗೆ ೧೦ ವರ್ಷಗಳವರೆಗೆ ನಿರಂತರವಾಗಿ ಇವರ ಪಿ.ಎಫ್ ಹಣ ಪಾವತಿಸಿದರೆ ೬೦ ವರ್ಷಗಳ ನಂತರ ಪ್ರತಿ ತಿಂಗಳು ೨ ರಿಂದ ೩ ಸಾವಿರ ರು. ಪಿಂಚಣಿ ಬರುತ್ತದೆ ಎಂಬ ಸಂಕಟದಿಂದ ಇವರ ಜೊತೆಗೆ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೧೦ ರಿಂದ ೧೨ ಜನರನ್ನು ಸಹ ಅರ್ಧದಲ್ಲಿಯೇ ಕೆಲಸದಿಂದ ತೆಗೆದು ಹಾಕಿದ್ದಾರೆಂದು ಆರೋಪಿಸಿದರು. 
    ಈ ಸಂಬಂಧ ವಿನ್ನಿ ಡಿಸೋಜಾರವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಹೈಸ್ಕೂಲ್‌ಗೆ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್‌ಗೆ ಸುಳ್ಳು ಮಾಹಿತಿ ನೀಡಲಾಗಿದೆ. ವಿನ್ನಿ ಡಿಸೋಜಾರವರು ಸ್ಕೂಲ್ ಅಥವಾ ಸೇವಾ ಕೇಂದ್ರ ಅಥವಾ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ಯಾವುದೇ ಕೆಲಸ ನಿರ್ವಹಿಸಿರುವುದಿಲ್ಲ. ಈ ಹಿನ್ನಲೆಯಲ್ಲಿ ಇವರಿಗೆ ಯಾವುದೇ ವೇತನವಾಗಲಿ, ಪಿ.ಎಫ್ ಹಣವಾಗಲಿ ಪಾವತಿಸಿರುವುದಿಲ್ಲ ಎಂದು ತಿಳಿಸಿರುತ್ತಾರೆ ಸುಳ್ಳು ಮಾಹಿತಿ ನೀಡಿರುವುದನ್ನು ಸಮಿತಿ ಖಂಡಿಸುವ ಜೊತೆಗೆ ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕಾರ್ಮಿಕ ಇಲಾಖಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸ್ಕೂಲ್ ನೋಂದಣಿ ರದ್ದುಗೊಳಿಸಿ ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.   
    ಪತ್ರಿಕಾಗೋಷ್ಠಿಯಲ್ಲಿ ಟಿ.ಜಿ ಬಸವರಾಜಯ್ಯ, ಬ್ರಹ್ಮಲಿಂಗಯ್ಯ, ಎಂ.ವಿ ಚಂದ್ರಶೇಖರ್, ಸೀನಪ್ಪ, ವಿನ್ನಿ ಡಿಸೋಜಾ, ಮೇರಿಯಮ್ಮ ಮತ್ತು ಗ್ರೇಸಿ ಉಪಸ್ಥಿತರಿದ್ದರು.  

Wednesday, February 12, 2025

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು

    ಭದ್ರಾವತಿ: ಸಂಬಂಧಿಕರ ಮದುವೆ ಕಾರ್ಯಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿ ನಗರಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ನಡೆದಿದೆ. 
    ಮೈಸೂರಿನ ಹುಣಸೂರು ನಿವಾಸಿ ಜಯಾಬಾಯಿ(೫೦) ಎಂಬುವರು ನಗರದ ಹುತ್ತಾ ಕಾಲೋನಿಯಲ್ಲಿರುವ ಒಕ್ಕಲಿಗರ ಸಭಾಭವನದಲ್ಲಿ ಸಂಬಂಧಿಕರ ಕಾರ್ಯಕ್ಕೆ ಫೆ.೯ರಂದು ಬೆಳಿಗ್ಗೆ ೧೦ ಗಂಟೆಗೆ ಹುಣಸೂರು ಗ್ರಾಮದಿಂದ ಪ್ರಯಾಣ ಬೆಳೆಸಿದ್ದು, ನಂತರ ಮೈಸೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಳಿದಿದ್ದಾರೆ.  ಮಧ್ಯಾಹ್ನ ೧೨ ಗಂಟೆಗೆ ಮೈಸೂರು-ಭದ್ರಾವತಿ ಬಸ್ ಪ್ರಯಾಣ ಬೆಳೆಸಿ ಸಂಜೆ ೭ ಗಂಟೆಗೆ ನಗರದ ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಳಿದಿದ್ದಾರೆ. 
    ಬಸ್ ನಿಲ್ದಾಣದಲ್ಲಿ ತಮ್ಮ ಬಳಿ ಇದ್ದ ವ್ಯಾನಿಟಿ ಬ್ಯಾಗ್ ನೋಡಿದಾಗ ವ್ಯಾನಿಟಿ ಬ್ಯಾಗ್ ಜಿಪ್ ತೆರೆದಿದ್ದು, ಬ್ಯಾಗ್‌ನಲ್ಲಿದ್ದ ಒಂದು ಜೊತೆ ಹಸಿರು ಮತ್ತು ಗುಲಾಬಿ ಬಣ್ಣದ ಹರಳಿನ ಆಂಟಿಕ್ ಮಣಿ ರೀತಿಯಲ್ಲಿರುವ ಜುಮುಕಿ ಮತ್ತು ಒಂದು ಸಾದಾ ಡಿಸೈನ್‌ನ ಮೆರೂನ್ ಬಣ್ಣದ ಚಿಕ್ಕ ಹರಳಿರುವ ನೆಕ್ಲೇಸ್ ಹಾಗು ಒಂದು ಕಪ್ಪು ಬಣ್ಣದ ನೆಕ್ಲೇಸ್ ಒಟ್ಟು ೩೦ ಗ್ರಾಂ ತೂಕದ ೧.೮೫ ಲಕ್ಷ ರು. ಮೌಲ್ಯದ ಬಂಗಾರದ ಆಭರಣಗಳು ಕಳುವಾಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಫೆ.೧೦ರಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಭದ್ರಾವತಿ ನಗರಸಭೆ : ೧.೩೧ ಕೋ. ಉಳಿತಾಯ ಬಜೆಟ್ ಮಂಡನೆ

ಭದ್ರಾವತಿ ನಗರಸಭೆ ವತಿಯಿಂದ ಈ ಬಾರಿ ಹಲವು ಹೊಸ ಯೋಜನೆಗಳೊಂದಿಗೆ ೧೩೧.೦೬ ಲಕ್ಷ ರು. ಉಳಿತಾಯ ಬಜೆಟ್ ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಎಂ. ಮಣಿ ಎ.ಎನ್.ಎಸ್ ಮಂಡಿಸಿದರು. 
    ಭದ್ರಾವತಿ : ನಗರಸಭೆ ವತಿಯಿಂದ ಈ ಬಾರಿ ಹಲವು ಹೊಸ ಯೋಜನೆಗಳೊಂದಿಗೆ ೧೩೧.೦೬ ಲಕ್ಷ ರು. ಉಳಿತಾಯ ಬಜೆಟ್ ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಎಂ. ಮಣಿ ಎ.ಎನ್.ಎಸ್ ಮಂಡಿಸಿದರು. 
    ಆಯ-ವ್ಯಯದ ಆರಂಭಿಕ ಶಿಲ್ಕು ೧,೦೦೧.೧೬ ಲಕ್ಷ ರು. ಸೇರಿದಂತೆ ಒಟ್ಟು ಸ್ವಿಕೃತಿ ೧೦,೩೯೧.೬೦ ಲಕ್ಷ ರು. ಗಳಾಗಿವೆ. ಇದರಲ್ಲಿ ರಾಜಸ್ವ ಸ್ವಿಕೃತಿಗಳು ೪,೦೫೦ ಲಕ್ಷ ರು., ಬಂಡವಾಳ ಸ್ವಿಕೃತಿಗಳು ೪,೨೬೨ ಲಕ್ಷ ರು. ಮತ್ತು ಅಸಾಧಾರಣ ಸ್ವಿಕೃತಿಗಳು ೨,೦೭೯.೬೦ ಲಕ್ಷ ರು. ಸೇರಿವೆ ಎಂದರು. 
    ಒಟ್ಟು ವೆಚ್ಚ ೧೦,೨೬೦.೫೪ ಲಕ್ಷ ರು. ಗಳಾಗಿದ್ದು, ಇದರಲ್ಲಿ ರಾಜಸ್ವ ಪಾವತಿಗಳು ೩,೯೫೧.೬೦ ಲಕ್ಷ ರು., ಬಂಡವಾಳ ಪಾವತಿಗಳು ೪,೨೨೯.೩೪ ಲಕ್ಷ ರು., ಅಸಾಧಾರಣ ಪಾವತಿಗಳು ೨,೦೭೯.೬೦ ಲಕ್ಷ ರು. ಮತ್ತು ಆಯ-ವ್ಯಯದ ಆಖೈರು ಶಿಲ್ಕು ೧,೧೩೨.೨೨ ಲಕ್ಷ ರು. ಸೇರಿವೆ. ಈ  ಒಟ್ಟು ೧೩೧.೦೬ ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಲಾಗುತ್ತಿದೆ.  ಈ ಮೂಲಕ ನಗರದ ಸರ್ವತೋಮುಖ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಎಲ್ಲರ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ಮೂಲಕ ನಗರದ ಸಮಗ್ರ ಅಭಿವೃದ್ಧಿಗೆ, ನಾಗರೀಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ  ೨೦೨೫-೨೬ ನೇ ಸಾಲಿನ ಬಜೆಟ್ ಮಂಡಿಸಲಾಗುತ್ತಿದೆ ಎಂದರು. 
    ಸ್ವಚ್ಚ-ಸುಂದರ ಭದ್ರಾವತಿಯನ್ನಾಗಿಸುವಲ್ಲಿ ಸರ್ಕಾರದ ಅನುದಾನ/ಯೋಜನೆಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಅನುಷ್ಠಾನಗೊಳಿಸಲು ಶಾಸಕರ ಬೆಂಬಲ ಮತ್ತು ನಗರಸಭೆಯ ಸರ್ವಸದಸ್ಯರ ಸಹಕಾರ ಕೋರುತ್ತಿದ್ದೇನೆ. ನಗರದ ನಾಗರೀಕರ ಪ್ರೋತ್ಸಾಹ ಸಹಾ ನಮಗೆ ಬಹಳ ಮುಖ್ಯವಾಗಿದೆ ಎಂದರು. 
    ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ಕಳೆದ ಸಾಲಿನ ವಾಸ್ತವ ಆದಾಯ ಮತ್ತು ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನ ಆದಾಯ ಮತ್ತು ವೆಚ್ಚದ ನಿರೀಕ್ಷೆ ಹೊಂದಿ ಈ ಬಾರಿ ಬಜೆಟ್ ಸಿದ್ದಪಡಿಸಲಾಗಿದೆ. ನಗರದ ಪ್ರಮುಖ ರಸ್ತೆಗಳು ಮತ್ತು ಒಳ ರಸ್ತೆಗಳನ್ನು ಕಸ ಮುಕ್ತ ರಸ್ತೆಗಳನ್ನಾಗಿ ಪರಿವರ್ತಿಸುವಲ್ಲಿ ಪ್ರತಿ ದಿನ ಮುಂಜಾನೆಯಲ್ಲಿ ತಪ್ಪದೇ ಮನೆ-ಮನೆ ಕಸ ಸಂಗ್ರಹಣೆ ಮಾಡು ಮೂಲಕ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಘನ ತ್ಯಾಜ ನಿರ್ವಹಣಾ ಘಟಕಕ್ಕೆ ಸಾಗಿಸಿ ಪರಿಷ್ಕರಿಸುವಂತಹ ಮಹತ್ಕಾರ್ಯ ನಿರ್ವಹಿಸುತ್ತಿರುವ, ನಗರವನ್ನು ಸುಂದರವನ್ನಾಗಿಸುವ ನಿಟ್ಟಿನಲ್ಲಿ ನಮ್ಮೊಂದಿಗೆ ಕೈ ಜೋಡಿಸಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಅಭಿಮಾನದ ಚಪ್ಪಾಳೆ ಮೂಲಕ ಅಭಿನಂದಿಸುತ್ತೇನೆ ಎಂದರು. 
    ಆಧುನಿಕ ಮನು, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೨ ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಗರದ ಬಿ.ಎಚ್ ರಸ್ತೆ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ನಿರ್ಮಿಸಲಾಗಿದ್ದು, ಜ.೨೬ರಂದು ಅನಾವರಣಗೊಳಿಸಲಾಗಿದೆ. ಇದೆ ದಿನ ನಗರಸಭೆ ವತಿಯಿಂದ ನಿರ್ಮಿಸಲಾಗಿರುವ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣಕ್ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣಗೊಳಿಸಲಾಗಿದೆ. ಅಲ್ಲದೆ ನಗರದ ರಂಗಪ್ಪ ವೃತ್ತ ಸಮೀಪದ ಜೈಭೀಮ್ ನಗರದಲ್ಲಿ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ನಿರ್ಮಿಸಲಾಗಿರುವ ಜಿ+೩ ಮಾದರಿಯ ಗುಂಪು ಮನೆಗಳ ವಸತಿ ಸಮುಚ್ಛಯಗಳನ್ನು ಉದ್ಘಾಟಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದರು. 
    ಈಗಾಗಲೇ ನಗರಸಭೆ ವತಿಯಿಂದ ನಗರ ಭೂ ಸಾರಿಗೆ ನಿರ್ದೇಶನಾಲಯ ಇಲಾಖೆ ವತಿಯಿಂದ ತರೀಕೆರೆ ರಸ್ತೆಯ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಹಿಂಬದಿಯಲ್ಲಿರುವ ಕನ್ಸರ್ವೆನ್ಸಿ ಜಾಗದಲ್ಲಿ ಸುಮಾರು ೪೪ ಲಕ್ಷ ರು. ಅನುದಾನದಲ್ಲಿ ಸುಸಜ್ಜಿತ ದ್ವಿಚಕ್ರ ವಾಹನ ನಿಲುಗಡೆ ತಾಣ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಉದ್ಘಾಟಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಲಾಗುವುದು. ಯುವ ಶಕ್ತಿಯನ್ನು ರಚನಾತ್ಮಕ ಮತ್ತು ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಲು ಅವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಹ ಫಲಾನುಭವಿಗಳಿಗೆ ಸಹಾಯಧನ ಬ್ಯಾಂಕ್ ಎಂಡ್ ಸಬ್ಸಿಡಿಯನ್ನಾಗಿ ಬ್ಯಾಂಕ್‌ಗಳ ಮುಖಾಂತರ ಸಾಲ ಸೌಲಭ್ಯ ನೀಡಲು ಕ್ರಮವಹಿಸಿ ಈ ಮೂಲಕ ಯುವ ಶಕ್ತಿಯನ್ನು ಸಬಲೀಕರಣಗೊಳಿಸಲಾಗುತ್ತಿದೆ. ಸರ್ವರಿಗೂ ಸೂರು ಪರಿಕಲ್ಪನೆಯಡಿ ವಸತಿ ರಹಿತ ನಿರಾಶ್ರಿತರಿಗೆ ಆಶ್ರಯ ತಂಗುದಾಣ ಪ್ರಾರಂಭಿಸಿದ್ದು, ಗುಣಮಟ್ಟದ ಜೀವನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ನಗರದ ಸ್ತ್ರೀ ಸಶಕ್ತಿಕರಣಗೊಳಿಸಲನುವಾಗುವಂತೆ ರಚಿಸಲಾದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ, ಮುಂತಾದ ಕಾರ್ಯಕ್ರಮಗಳನ್ನು ಒದಗಿಸುವ ಮೂಲಕ ಸರ್ಕಾರದ ಪ್ರೋತ್ಸಾಹ ಧನ ನೀಡಿ ಸಬಲೀಕರಣಗೊಳಿಸಲಾಗುತ್ತಿದೆ ಎಂದರು.  
    ನಗರದಲ್ಲಿ ಘನತಾಜ್ಯ ನಿರ್ವಹಣೆ ಮತ್ತಷ್ಟು ಪರಿಣಾಮಕಾರಿಯಾಗಿಸಲು ಹಾಗು ಸರ್ಕಾರದ ನಿರ್ದೇಶನದ ಮೇರೆಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಪರಿಷ್ಕೃತ ದರ ಜಾರಿಗೊಳಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿ ೧.೧೫ ಕೋ. ರು. ಹೆಚ್ಚುವರಿಯಾಗಿ ನಿರೀಕ್ಷಲಾಗಿದೆ. ಸ್ವಚ್ಛ ಭಾರತ್ ಮಿಷನ್-೨.೦ ಯೋಜನೆಯಡಿ ೫.೨೯ ಕೋ. ರು. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಮೆಟಿರಿಯಲ್ ರಿಕವರಿ ಫೆಸಿಲಿಟಿ ಸ್ಥಾಪಿಸಲು ಪ್ರಾಥಮಿಕ ಹಂತದ ಶೆಡ್ ನಿರ್ಮಾಣ ಹಾಗು ಯಂತ್ರೋಪಕರಣ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ೧೫ನೇ ಹಣಕಾಸು ಅನುದಾನದಲ್ಲಿ ಪೈಪ್ ಲೈನ್, ಮಳೆ ನೀರು ಚರಂಡಿ, ರಸ್ತೆ ಅಭಿವೃದ್ಧಿ, ವಿದ್ಯುತ್ ಸಂಬಂಧಿಸಿದ ಕಾಮಗಾರಿ ಹಾಗು ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಎಸ್‌ಎಫ್‌ಸಿ ವಿಶೇಷ ಅನುದಾನ ೧೫ ಕೋ. ರು. ಮಂಜೂರಾಗಿದ್ದು, ಈ ಅನುದಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿಗಳಿಂದ ಕ್ರಿಯಾಯೋಜನೆ ಮಂಜೂರಾಗಿದೆ. ಕೆಆರ್‌ಐಡಿಎಲ್ ಮುಖಾಂತರ ಕಾಮಗಾರಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. 
    ಎಸ್.ಎಫ್.ಸಿ ಪ್ರೋತ್ಸಾಹ ಅನುದಾನದಡಿಯಲ್ಲಿ ಕನಕ ಮಂಟಪ ಮೈದಾನದ ಹತ್ತಿರ ನಗರಸಭೆ ಅಧಿಕಾರಿಗಳು ಮತ್ತು ನೌಕರರಿಗೆ ಜಿ+೩ ಮಾದರಿಯ ವಸತಿ ಗೃಹಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಉಪಯೋಗಕ್ಕಾಗಿ ನೀಡಲಾಗುವುದು. ಪೌರಾಡಳಿತ ನಿರ್ದೇಶನಾಲಯದ ಅಧಿಸೂಚನೆಯಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ನೆರೆಹೊರೆ ಗುಂಪು ಹಾಗು ಪ್ರದೇಶ ಸಭಾ ಮತ್ತು ವಾರ್ಡ್ ಸಮಿತಿಗಳನ್ನು ರಚಿಸಲು ಈಗಾಗಲೇ ಕ್ರಮವಹಿಸಲಾಗಿದ್ದು, ಇದರಿಂದ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲುನುವಾಗುವಂತೆ ಕ್ರಮವಹಿಸಲು ಉದ್ದೇಶಿಸಲಾಗಿದೆ. ಸರ್ಕಾರದ ಆದೇಶದಂತೆ ನಗರ ವ್ಯಾಪ್ತಿಯಲ್ಲಿರುವ ಸುಮಾರು ೫ ಸಾವಿರ ಬೀದಿ ನಾಯಿಗಳ ನಿಯಂತ್ರಣಕ್ಕೆ  ಸೂಕ್ತ ಕ್ರಮವಹಿಸಲಾಗುವುದು. ಅಮೃತ್ ೨.೦ ಯೋಜನೆಯಡಿಯಲ್ಲಿ ಉಜ್ಜನಿಪುರ ಕೆರೆ ಅಭಿವೃದ್ಧಿ ಹಾಗು ಉದ್ಯಾನವನಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಮತ್ತು ನಗರದ ನ್ಯೂಟೌನ್ ಭಾಗದಲ್ಲಿ ಒಂದು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆಯಲು ಕ್ರಮವಹಿಸಲಾಗುವುದು ಎಂದರು. 
    ಹೊಸಮನೆ ಮುಖ್ಯರಸ್ತೆಯ ಸಂತೆ ಮೈದಾನದಲ್ಲಿ ನಡೆಯುವ ವಾರದ ಸಂತೆಯನ್ನು ಎಲ್ಲರ ಅಭಿಪ್ರಾಯ ಪಡೆದು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಿ ಈ ಜಾಗದಲ್ಲಿ ನಗರಸಭೆ ನೂತನ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈ ಸಂಬಂಧ ವಿಸ್ತೃತಾ ಯೋಜನಾ ವರದಿ(ಡಿಪಿಆರ್) ತಯಾರಿಸಲಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಹಳೇನಗರದ ಬಸವೇಶ್ವರ ವೃತ್ತದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈ ಸಂಬಂಧ ಡಿಪಿಆರ್ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು. ವಾರ್ಡ್ ನಂ.೮, ೯, ೧೦ ಮತ್ತು ೧೧ರಲ್ಲಿ ಪ್ರಾಯೋಗಿಕವಾಗಿ ೨೪*೭ ಕುಡಿಯುವ ನೀರಿಗೆ ಮೀಟರ್ ಅಳವಡಿಸಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಲಾಗುವುದು ಎಂದರು. 
    ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ನ್ಯೂಟೌನ್ ಭಾಗದಲ್ಲಿ ಹಾಗು ಹಳೇನಗರ ಬಸವೇಶ್ವರ ವೃತ್ತದಲ್ಲಿ ಸುಸಜ್ಜಿತವಾದ ಫುಡ್ ಕೋರ್ಟ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ನ್ಯೂಟೌನ್ ಭಾಗದ ನಾಗರಿಕರಿಗೆ ಅನುಕೂಲವಾಗುವಂತೆ ಜನ್ನಾಪುರ ಎನ್.ಟಿ.ಬಿ ಶಾಖಾ ಕಛೇರಿ ಕಟ್ಟಡದಲ್ಲಿ ಆಸ್ತಿ ತೆರಿಗೆ ಪಾವತಿ, ನೀರಿನ ಶುಲ್ಕ ಹಾಗು ಇತರೆ ಶುಲ್ಕಗಳ ಪಾವತಿಗೆ ಅನುಕೂಲವಾಗುವಂತೆ ಒಂದು ಬ್ಯಾಂಕ್ ಕೌಂಟರ್ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ನಗರಸಭೆ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಆಕರ್ಷಣಕಾರಿಯಾಗಿ ಕಾಣಲು ವಿದ್ಯುತ್ ಅಲಂಕೃತಗೊಂಡ ಕಾರಂಜಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಹಳೇನಗರ ನೀರು ಶುದ್ಧೀಕರಣ ಘಟಕದಲ್ಲಿ ಜಾಕ್ವೆಲ್ ಮತ್ತು ಇನ್ ಟೆಕ್ ವೆಲ್ ನಿರ್ಮಾಣ ಮಾಡಲು ಈಗಾಗಲೇ ೩.೨೩ ಕೋ. ರು. ಅನುದಾನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನಗರಸಭೆ ವಂತಿಕೆಯನ್ನು ವರ್ಗಾಯಿಸಿ ಇಲಾಖೆಯಿಂದ ಕಾಮಗಾರಿ ಅನುಷ್ಠಾನಗೊಳಿಸಲು ಕ್ರಮವಹಿಸಲು ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಮುಖ ೫ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು. 
    ಸಭೆಯಲ್ಲಿ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಸೈಯದ್ ರಿಯಾಜ್ ಉಪಸ್ಥಿತರಿದ್ದರು. ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗು ಚುನಾಯಿತ ಹಾಗು ನಾಮನಿರ್ದೇಶಿತ ಸದಸ್ಯರು ಪಾಲ್ಗೊಂಡಿದ್ದರು. ಬಜೆಟ್ ಮಂಡನೆಯಲ್ಲಿನ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು ೧ ಗಂಟೆಗೂ ಹೆಚ್ಚು  ಸಮಯ ಚರ್ಚೆ ನಡೆಯಿತು. 

ಫೆ.೧೪ರಂದು ಜೆಡಿಎಸ್ ಪ್ರತಿಭಟನೆ

ಶಾರದ ಅಪ್ಪಾಜಿ 
    ಭದ್ರಾವತಿ : ಮರಳು ಗಣಿಗಾರಿಕೆ ತಪಾಸಣೆಗೆ ತೆರಳಿದ ಮಹಿಳಾ ಅಧಿಕಾರಿಗೆ ಬಾಯಿಗೆ ಬಂದಂತೆ ಮೂರನೇ ದರ್ಜೆಯ ಅವಾಚ್ಯ ಶಬ್ದ ಬಳಸಿ ನಿಂದಿಸಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಬಸವೇಶ್ ಬಂಧನಕ್ಕೆ ಆಗ್ರಹಿಸಿ ಹಾಗು ಈ ಘಟನೆ ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ಸಂಗಮೇಶ್ವರ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ತಾಲೂಕು ಕಛೇರಿ ಮುಂಭಾಗ ಫೆ.೧೪ರ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 
    ಇದಕ್ಕೂ ಮೊದಲು ಬೆಳಿಗ್ಗೆ ೧೦ ಗಂಟೆಗೆ ಮಾಧವಚಾರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ರಸ್ತೆ ತಡೆ ಹಾಗು ೧೦.೩೦ಕ್ಕೆ ರಂಗಪ್ಪ ವೃತ್ತದಲ್ಲಿ ಪ್ರತಿಕೃತಿ ದಹನ ಕಾರ್ಯಕ್ರಮ ನಡೆಯಲಿದೆ. ಪ್ರತಿಭಟನೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಮನವಿ ಮಾಡಿದ್ದಾರೆ. 

ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ

ಸಂಗಮೇಶ್ವರ್ ರಾಜೀನಾಮೆ ನೀಡಲಿ, ಬಸವೇಶ್ ಬಂಧಿಸಿ : ಡಿ.ಎಸ್ ಅರುಣ್ 

ಭದ್ರಾವತಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್ ಮಾತನಾಡಿದರು. 
    ಭದ್ರಾವತಿ : ಅಕ್ರಮ ಮರಳುಗಾರಿಕೆ ದಂಧೆಗೆ ಕಡಿವಾಣ ಹಾಕಲು ಮುಂದಾದ ಮಹಿಳಾ ಅಧಿಕಾರಿಯೊಬ್ಬರನ್ನು ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಹಾಗು ಜೀವ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಆಕ್ರೋಶ ವ್ಯಕ್ತಪಡಿಸುವ ಮೂಲಕ ತಕ್ಷಣ ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಸ್ಥಾನ ರಾಜೀನಾಮೆ ನೀಡಬೇಕು ಹಾಗು ಅವರ ಪುತ್ರ ಬಸವೇಶ್‌ನನ್ನು ಬಂಧಿಸಬೇಕೆಂದು ಆಗ್ರಹಿಸಿದರು. 
    ಸಮಾಜದಲ್ಲಿ ಜನಪ್ರತಿನಿಧಿಗಳು ಹಾಗು ಅವರ ಕುಟುಂಬ ವರ್ಗದವರಲ್ಲಿ ಸಭ್ಯತೆ ಬಹಳ ಮುಖ್ಯ. ಎಲ್ಲರೊಂದಿಗೂ ಸಭ್ಯತೆಯಿಂದ ನಡೆದುಕೊಳ್ಳಬೇಕು. ಮಹಿಳಾ ಅಧಿಕಾರಿಯೊಂದಿಗೆ ದುರ್ನಡತೆಯಿಂದ ನಡೆದುಕೊಳ್ಳುವುದು ಸರಿಯಲ್ಲ. ಈ ಘಟನೆಯನ್ನು ಪ್ರತಿಯೊಬ್ಬರು ಖಂಡಿಸಬೇಕು ಎಂದರು. 
    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪೊಲೀಸರು ಈಗಾಗಲೇ ೩ ಜನರನ್ನು ಬಂಧಿಸಿದ್ದಾರೆ. ಆದರೆ ದೂರಿನಲ್ಲಿ ಬಸವೇಶ್ ಹೆಸರು ಇಲ್ಲ. ದೂರಿನಲ್ಲಿ ಬಸವೇಶ್ ಹೆಸರು ಸೇರಿಸಿ ತಕ್ಷಣ ಬಂಧಿಸಬೇಕು. ಅಲ್ಲದೆ ಸಂಗಮೇಶ್ವರ್‌ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.  
    ಈ ಕ್ಷೇತ್ರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಮಿತಿಮೀರಿವೆ. ಇದಕ್ಕೆ ಕಾರಣ ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ದುರಾಡಳಿ ಎಂದು ಆರೋಪಿಸಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನಿರೀಕ್ಷಿಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ವಿಧಾನಪರಿಷತ್‌ನಲ್ಲಿ ಪ್ರಸ್ತಾಪಿಸುತ್ತೇನೆ ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ. ಮಂಜುಳಾ, ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ಕಾ.ರಾ ನಾಗರಾಜ್, ಬಿ.ಜಿ ರಾಮಲಿಂಗಯ್ಯ, ಎಂ.ಎಸ್ ಸುರೇಶಪ್ಪ, ಚನ್ನೇಶ್, ಸುಲೋಚನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.